ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಲ್ಲೆಲ್ಲು ಸಂಗೀತವೆ

ಎಲ್ಲೆಲ್ಲು ಸಂಗೀತವೇ
ಎಲ್ಲೆಲ್ಲು ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲು ಸಂಗೀತವೇ

ಸಂಧ್ಯೆಯು ಬಂದಾಗ ಆಗಸ ಅಂದ
ಆ ಉಷೆ ನಗುವಾಗ ಲೋಕವೇ ಚಂದ
ಬಳುಕುವ ಲತೆಯಿಂದ ಅರಳಿದ ಹೂವಿಂದ
ಆ ಸುಮ ಚೆಲ್ಲುವ ಪರಿಮಳದಿಂದ
ಎಲ್ಲೆಲ್ಲು ಸೌಂದರ್ಯವೇ

ಹರಿಯುವ ನೀರಲಿ
 ಕಲ ಕಲರವವು
ಕೋಗಿಲೆ ಕೊರಳಿನ ಸುಮಧುರ ಸ್ವರವು
ಭ್ರಮರದ ಝೇಂಕಾರ ಮುನಿಗಳ ಓಂಕಾರ
ಈ ಜಗ ತುಂಬಿದೆ ಮಾಧುರ್ಯದಿಂದ
ಎಲ್ಲೆಲ್ಲು ಸಂಗೀತವೇ

ಸಂಗೀತ ಎಂದಿಗು ಸುರಗಂಗೆಯಂತೆ
ಸಂಗೀತ ಎಂದಿಗು ರವಿಕಾಂತಿಯಂತೆ
ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ
ಆ ದೈವ ಸುಧೆಯಿಂದ ಪರಮಾತ್ಮವಂತೆ

ಎಲ್ಲೆಲ್ಲು ಸಂಗೀತವೇ
ಎಲ್ಲೆಲ್ಲು ಸೌಂದರ್ಯವೇ
ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು
ಎಲ್ಲೆಲ್ಲು ಸಂಗೀತವೇ

ಚಿತ್ರ: ಮಲಯಮಾರುತ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ವಿಜಯಭಾಸ್ಕರ್
ಗಾಯನ: ಕೆ. ಜೆ. ಏಸುದಾಸ್




Tag: Ellellu sangeetave, ellellu soundaryave

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ