ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅತ್ತಿತ್ತ ನೋಡದಿರು


ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೇ
ಜೋ ಜೋ ಜೋ ಜೋ...

ಸುತ್ತಿ ಹೊರಳಾಡದಿರು ಮತ್ತೆ ಹಟ ಹೂಡದಿರು
ನಿದ್ದೆ ಬರುವಳು ಕದ್ದು ಮಲಗು ಮಗುವೇ
ಜೋ ಜೋ ಜೋ ಜೋ..

ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸಿರಿಯೆ
ಮಲಗು ತೊಟ್ಟಿಲ ಸಿರಿಯೆ ದೇವರಂತೆ
ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಹೋಗುವೆಯಂತೆ 

ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು
ಹೂವ ಮುಡಿಸುವರಂತೆ ಹಾಲ ಕುಡಿಸುವರಂತೆ
ವೀಣೆ ನುಡಿಸುವರಂತೆ ಸುತ್ತ ನೆರೆದು

ಬಣ್ಣ ಬಣ್ಣದ ಕನಸು ಕರಗುವುದು ಬಲು ಬೇಗ
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ
ಚಿನ್ನದಂಬಾರಿಯಲಿ ನಿನ್ನ ಕಳಹುವರಾಗ
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ

ಸಾಹಿತ್ಯ: ಕೆ. ಎಸ್. ನರಸಿಂಹ ಸ್ವಾಮಿ
ಚಿತ್ರ ಕೃಪೆ:  ಎನ್. ಎಸ್. ಬೇಂದ್ರೆ ಅವರ 'ತಾಯಿ ಮಗು'


Tag: Attitta nodadiru attu horaladadiru

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ