ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಂಗಗಳ ಉಪವಾಸ

ಮಂಗಗಳ ಉಪವಾಸ

ಬಾಳೆಯ ತೋಟದ ಪಕ್ಕದ ಕಾಡೊಳು
ವಾಸಿಸುತಿದ್ದವು ಮಂಗಗಳು 
ಮಂಗಗಳೆಲ್ಲವು ಒಟ್ಟಿಗೆ ಸೇರುತ 
ಒಂದುಪವಾಸವ ಮಾಡಿದವು

ಏನೂ ತಿನ್ನದೆ ಮಟ ಮಟ ನೋಡುತ 
ಇದ್ದವು ಮರದಲಿ ಕುಳಿತಲ್ಲೇ 
"ನಾಳೆಗೆ ತಿಂಡಿಯ ಈಗಲೇ ಹುಡುಕುವ 
ಬನ್ನಿರಿ " ಎಂದಿತು ಕಪಿಯೊಂದು 

"ಹೌದೌದಣ್ಣಾ" ಎಂದೆನ್ನುತ ಎಲ್ಲವು 
ಬಾಳೆಯ ತೋಟಕೆ ಹಾರಿದವು 
ತೋಟದಿ ಬಾಳೆಯ ಹಣ್ಣನು ನೋಡಲು 
ಆಶೆಯು ಹೆಚ್ಚಿತು ನೀರೂರಿ 

"ಸುಲಿದೇ ಇಡುವ ಆಗದೆ" ಎಂದಿತು 
ಆಶೆಯ ಮರಿಕಪಿಯೊಂದಾಗ 
"ಹೌದೌದೆನ್ನುತ" ಹಣ್ಣನು ಸುಲಿದವು
ಕೈಯೊಳೆ ಹಿಡಿದು ಕುಳಿತಿರಲು 

"ಕೈಯ್ಯಲ್ಲೇತಕೆ ಬಾಯೊಳಗಿಟ್ಟರೆ
ಆಗದೆ? " ಎಂದಿತು ಇನ್ನೊಂದು 
ಹಣ್ಣನು ಬಾಯಲಿ ಇಟ್ಟವು 
"ಜಗಿದೇ ಇಡುವೆವು" ಎಂದಿತು 
ಕಪಿ ಮತ್ತೊಂದು 
ಜಗಿದೂ ಜಗಿದೂ ನುಂಗಿದವೆಲ್ಲವು
ಆಗಲೇ ಮುಗಿಯಿತು ಉಪವಾಸ.

ಸಾಹಿತ್ಯ: ಮಚ್ಚಿಮಲೆ ಶಂಕರನಾರಾಯಣ ರಾವ್

Tag: Mangagala Upavasa, Baleya totada pakkada kadolu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ