ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರಿಗೆ ವಧುವಾದೆ ಅಂಬುಜಾಕ್ಷಿ


ಆರಿಗೆ ವಧುವಾದೆ ಅಂಬುಜಾಕ್ಷಿ
ಕ್ಷೀರಾಬ್ಧಿಕನ್ನಿಕೆ ಶ್ರೀಮಹಾಲಕುಮಿ 

ಶರಧಿಬಂಧನ ರಾಮಚಂದ್ರಮೂರುತಿಗೋ
ಪರಮಾತ್ಮ ಶ್ರೀ ಅನಂತಪದ್ಮನಾಭನಿಗೋ
ಸರಸಿಜನಾಭ ಜನಾರ್ಧನಮೂರುತಿಗೋ
ಎರಡು ಹೊಳೆಯ ರಂಗಪಟ್ಟಣವಾಸಗೋ

ಚೆಲುವ ಬೇಲೂರ ಚೆನ್ನಿಗರಾಯನಿಗೋ
ಕೆಳದಿ ಹೇಳುಡುಪಿಯ ಕೃಷ್ಣರಾಯನಿಗೋ
ಇಳೆಯೊಳು ಪಂಢರೀಪುರನಿಲಯ ವಿಠಲೇಶಗೋ
ನಳಿನಾಕ್ಷಿ ಹೇಳು ಬದರೀನಾರಾಯಣನಿಗೋ

ಮಲಯಜಗಂಧಿ ಬಿಂದುಮಾಧವರಾಯಗೋ
ಸುಲಭದೇವರ ಪುರುಷೋತ್ತಮನಿಗೋ
ಫಲದಾಯಕ ನಿತ್ಯಮಂಗಳನಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ

ವಾಸವಾರ್ಚಿತ ಕಂಚಿ ವರದರಾಜಮೂರುತಿಗೋ
ಅಸುರಾರಿ ಶ್ರೀಮುಷ್ಣದಾದಿವರಾಹನಿಗೋ
ಶೇಷಶಾಯಿಯಾದ ಶ್ರೀರಂಗನಾಯಕಗೋ
ಸಾಸಿರನಾಮದೊಡೆಯ ಅಳಗಿರೀಶಗೋ 

ಶರಣಾಗತರ ಪೊರೆವ ಶಾರ್ಙ್ಗಪಾಣಿಗೋ
ವರಗಳೀವ ಶ್ರೀನಿವಾಸಮೂರುತಿಗೋ
ಕುರುಕುಲಾಂತಕ ರಾಜಗೋಪಾಲಮೂರುತಿಗೋ
ಸ್ಥಿರವಾದ ಪುರಂದರವಿಠಲರಾಯನಿಗೋ

ಸಾಹಿತ್ಯ: ಪುರಂದರದಾಸರು


Tag: Arige Vadhuvade, Aarige Vadhuvaadhe, Yaarige vadhuvaade

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ