ಬಿ. ಆರ್. ಪಂತುಲು
ಬಿ.ಆರ್. ಪಂತುಲು
ಬಿ.ಆರ್. ಪಂತುಲು "ಸ್ವಾಮಿ ದೇವನೆ ಲೋಕಪಾಲನೆ ತೇನಮೋಸ್ತು ನಮೋಸ್ತುತೆ” ಎಂದು ಮಕ್ಕಳಿಗೆ ಪಾಠ ಹೇಳಿಕೊಟ್ಟು ‘ಸ್ಕೂಲ್ ಮಾಸ್ಟರ್’ ಎಂದೇ ನಮಗೆ ಪ್ರಿಯರಾದವರು. ಬಿ.ಆರ್. ಪಂತುಲು ಅವರು ಕನ್ನಡಿಗರಿಗೆ ಮಾತ್ರವಲ್ಲ, ದಕ್ಷಿಣ ಭಾರತ ಚಿತ್ರರಂಗಕ್ಕೇ ಒಂದು ಅವಿಸ್ಮರಣೀಯ ನೆನಪು. ಅವರು ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ಮಂತ್ರಿ ತಿಮ್ಮರಸುವಾಗಿ ಕಂಗೊಳಿಸಿದ ರೀತಿ ಅವಿಸ್ಮರಣೀಯವಾದುದು. “ಒಂದರಿಂದ ಇಪ್ಪತ್ತೊಂದರವರೆಗೆ ಜಂಜಾಟ, ಬಂಡಾಟ” ಎಂದು ‘ಮೊದಲ ತೇದಿ' ಚಿತ್ರದಲ್ಲಿ ಮೂಡಿಸಿದ್ದ ಹಾಡು, ಅಂದಿನ ಎಲ್ಲಾ ಮಧ್ಯಮ ಮತ್ತು ಕೆಳವರ್ಗದ ಜನಕ್ಕೆ, ಇದು ನಮ್ಮ ಜೀವನವೇ ಎಂದು ಅನ್ವಯಿಸಿಕೊಳ್ಳುವಷ್ಟು ಪ್ರಖ್ಯಾತವಾಗಿತ್ತು. ತಮಿಳು ಗೊತ್ತಿದ್ದು ಅಂದಿನ ಕರ್ಣ ಚಿತ್ರದ ‘ಉಳ್ಳತ್ತಿಲ್ ನಲ್ಲ ಉಳ್ಳಂ ಉರಂಗಾದು ಎನ್ಬದು ... ವಲ್ಲವನ್ ವಗುತ್ತದಡ’ ಹಾಡು ಕೇಳಿದ್ದರೆ, ಕರ್ಣನಂತಹವನಿಗೇ ಹೀಗಾಯಿತಲ್ಲಾ ಎಂದು ಸ್ವಯಂ ಕೃಷ್ಣನೇ ಶೋಕಿಸುವ ಪರಿ ಮನಮುಟ್ಟುವಂತಿತ್ತು. ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರ, ಬೆಳ್ಳಿತೆರೆಯ ಗಾರುಡಿಗರೆಂದೇ ಅವರು ಪ್ರಸಿದ್ಧಿ.
ರಾಜ್‍ಕುಮಾರ್ ಅವರು ಕೃಷ್ಣದೇವರಾಯನಾಗಿ ಪ್ರಸಿದ್ಧಿ ಪಡೆದುದು ಮಾತ್ರವಲ್ಲ ಅವರ ಹಲವಾರು ಮನೋಜ್ಞ ಚಿತ್ರಗಳನ್ನು ನಿರ್ಮಿಸಿದವರು ಪಂತುಲು ಅವರೇ. ನರಸಿಂಹರಾಜು ಅವರ ಸುಂದರ ಅಭಿನಯವನ್ನು ಕನ್ನಡ ಚಿತ್ರಗಳಲ್ಲಿ ಪ್ರಧಾನ ಅಂಶವಾಗಿ ರೂಪಿಸಿ ಮೆರೆಸಿದವರು ಕೂಡಾ ಪಂತುಲು ಅವರೇ. ಸ್ಕೂಲ್ ಮಾಸ್ಟರ್ ಚಿತ್ರದಲ್ಲಿ ಅವರ ವಿದ್ಯಾರ್ಥಿಯಾಗಿ ರೂಪಿತನಾದ ಶಿವಾಜಿ ಗಣೇಶನ್ ಅವರನ್ನು ವೀರಪಾಂಡ್ಯ ಕಟ್ಟಬೊಮ್ಮನ್, ಕರ್ಣ ಅಂತಹ ಪಾತ್ರಗಳಿಂದ ರೂಪಿಸಿದವರು ಪಂತುಲು ಅವರೇ. ಕಿತ್ತೂರುರಾಣಿ ಚೆನ್ನಮ್ಮನನ್ನು ಸುಂದರ ಅಭಿನೇತ್ರಿಯಾದ ಬಿ. ಸರೋಜಾದೇವಿಯವರಲ್ಲಿ ಮರೆಯಲಾಗದಂತೆ ಮೂಡಿಸಿದವರು ಕೂಡಾ ಪಂತುಲು ಅವರೇ. ಚಿತ್ರರಂಗಕ್ಕೆ ಕಲ್ಪನಾ ಅವರು ಬಂದದ್ದು ಪಂತುಲು ಅವರ ಸಾಕುಮಗಳು ಚಿತ್ರದಿಂದ. ಕನ್ನಡದ ಪ್ರಸಿದ್ಧ ದಿಗ್ದರ್ಶಕ ಪುಟ್ಟಣ್ಣ ಕಣಗಾಲ್, ಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ, ಸಂಗೀತ ನಿರ್ದೇಶಕ ಟಿ.ಜಿ. ಲಿಂಗಪ್ಪ, ಎಂ.ವಿ.ರಾಜಮ್ಮ ಇವರುಗಳೆಲ್ಲಾ ಶ್ರೇಷ್ಠರಾಗಿ ಹೊರಹೊಮ್ಮಿದ್ದು ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಗರಡಿಯಲ್ಲೇ.
ಬಡಗೂರು ರಾಮಕೃಷ್ಣ ಪಂತುಲು ಅವರು 1910ರ ಜುಲೈ 26ರಂದು ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿನ ಬಂಗಾರ ಪೇಟೆಯ ಬಳಿಯಿರುವ ಕುಪ್ಪಂನಿಂದ ಹನ್ನೊಂದು ಕಿಲೋಮೀಟರ್ ದೂರದ ಕುಗ್ರಾಮ ಬಡಗೂರಿನಲ್ಲಿ ಜನಿಸಿದರು. ಗಡಿ ಪ್ರದೇಶದಲ್ಲಿರುವ ಈ ಊರಿನಲ್ಲಿ ಕನ್ನಡದಂತೆ ತೆಲುಗು, ತಮಿಳು ಕೂಡ ಮುಖ್ಯ ಭಾಷೆಗಳಾಗಿದ್ದವು. ಹೀಗಾಗಿ ಬಾಲ್ಯದಿಂದಲೇ ಪಂತುಲು ಅವರಿಗೆ ಮೂರು ಭಾಷೆಗಳ ಒಡನಾಟ ಬರಲು ಕಾರಣವಾಯಿತು. ಪಂತುಲು ಅವರ ತಂದೆ ವೆಂಕಟಾಚಲಯ್ಯನವರಿಗೆ ಕಿರಿಯವರಾದ ಪಂತುಲು ಸೇರಿದಂತೆ ಐವರು ಮಕ್ಕಳು. ಪಂತುಲು ಅವರ ತಂದೆ ಸಂಗೀತ, ಸಾಹಿತ್ಯ ಮತ್ತು ನೃತ್ಯಗಳಲ್ಲಿ ಉತ್ತಮ ಅಭಿರುಚಿ ಪಡೆದಿದ್ದರು. ಆಗಾಗ ಊರಿನಲ್ಲಿ ನಾಟಕಗಳನ್ನು ಆಡಿಸುತಿದ್ದರು. ತಂದೆಯ ಜೊತೆ ಮಗನೂ ಆಗಾಗ ರಂಗ ತರಬೇತಿ ನೋಡಲು ಹೋಗುತ್ತಿದ್ದನು. ಚಂದ್ರಹಾಸನ ಪಾತ್ರ ನೀಡುವ ಮೂಲಕ ತಂದೆಯೇ ಆತನ ರಂಗ ಪ್ರವೇಶಕ್ಕೆ ಕಾರಣಕರ್ತರಾದರು.
ರಾಮಕೃಷ್ಣರ ಪ್ರಾಥಮಿಕ ಶಿಕ್ಷಣ ಬಡಗೂರಿನಲ್ಲಿಯೇ ನಡೆದರೂ ಮುಂದಿನ ಶಿಕ್ಷಣಕ್ಕೆ ಅಲ್ಲಿ ಅವಕಾಶ ಇರದ ಕಾರಣ ತಮ್ಮ ತಾತನ ಮನೆಯಾದ ಕೊಲಾರದಲ್ಲಿದ್ದು ಎಸ್.ಎಸ್.ಎಲ್.ಸಿ.ವರೆಗಿನ ಶಿಕ್ಷಣ ಪಡೆದರು. ಶಾಲಾ ಜೀವನದಲ್ಲಿಯೂ ಅವರು ನಾಟಕದ ಅಭಿನಯದಲ್ಲಿ ಪ್ರಸಿದ್ದಿ ಪಡೆದಿದ್ದರು. ಪಂತುಲು ಮುಂದೆ ಪ್ರಾಥಮಿಕ ಶಿಕ್ಷಕರಾಗಿ ನೇಮಕಗೊಂಡರು. ಕಲಾವಿದರಾದ ಅವರು ಶಾಲೆಯಲ್ಲಿ ಪಾಠ ಮಾಡಿದ್ದಕ್ಕಿಂತ ಮಕ್ಕಳಿಗೆ ನಾಟಕ ಕಲಿಸಿದ್ದೇ ಹೆಚ್ಹು. ಒಂದುದಿನ ವಿದ್ಯಾ ಇಲಾಖೆಯ ಇನ್ಸ್ಪೆಕ್ಟರ್ ಶಾಲೆಗೆ ಬಂದಾಗ, ಪಾಠ ಮಾಡುವ ಬದಲು ಮಕ್ಕಳಿಗಾಗಿ ನಾಟಕ ಕಲಿಸುತ್ತಿದ್ದ ಪಂತುಲು ಅವರನ್ನು ಕಂಡು ಕೆಂಡಾಮಂಡಲವಾದರು. ಇನ್ನೊಮ್ಮೆ ಹೀಗಾದರೆ ವಜಾಮಾಡುವೆನೆಂದು ನೋಟೀಸ್ ಜಾರಿ ಮಾಡಿದರು. ಇದರಿಂದ ನೊಂದ ಪಂತುಲು ಶಿಕ್ಷಕ ವ್ರತ್ತಿಗೆ ರಾಜೀನಾಮೆ ನೀಡಿ ಕಲೆಯಲ್ಲಿಯೇ ಬದುಕನ್ನು ಅರಸುತ್ತ ಬೆಂಗಳೂರಿಗೆ ಬಂದು ಅವರ ಹಿರಿಯರಾದ ಪಾಪಯ್ಯನವರಿದ್ದ ಮಹಮ್ಮದ್ ಪೀರ್ ಅವರ ‘ಚಂದ್ರಕಲಾ ನಾಟಕ ಮಂಡಳಿ’ಗೆ ಸೇರಿದರು. ಮುಂದೆ ಇವರಿಗೆ ದಕ್ಕಿದ ಹೆಚ್.ಎಲ್.ಎನ್. ಸಿಂಹ ಮತ್ತು ಮಹಮದ್ ಪೀರ್ ಅವರ ಗೆಳೆತನ ಬಣ್ಣದಲೋಕದ ನಂಟನ್ನು ತಂದಿತು. ಪಂತುಲು ಅವರ ಮಗ ರವಿಶಂಕರ್ ಕೆಲ ಕಾಲ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು. ಮಗಳು ಬಿ.ಆರ್.ವಿಜಯಲಕ್ಷ್ಮಿ ಛಾಯಾಗ್ರಾಹಕಿಯಾಗಿ ಹೆಸರು ಮಾಡಿದ್ದರು.
ಪಂತುಲು ಅವರು 1936ರಲ್ಲಿ ‘ಸಂಸಾರ ನೌಕೆ’ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ‘ರಾಧಾ ರಮಣ’ ಚಲನಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದರು.
1955ರಲ್ಲಿ ಪಂತುಲು ಅವರು ಪ. ನೀಲಕಂಠನ್ ಸಹಯೋಗದೊಂದಿಗೆ ಪದ್ಮಿನಿ ಪಿಕ್ಚರ್ಸ್ ಸಂಸ್ಥೆ ಸ್ಥಾಪಿಸಿ ‘ಮೊದಲ ತೇದಿ’ ಎಂಬ ಚಿತ್ರ ನಿರ್ಮಿಸಿದರು. ಎರಡನೆ ಚಿತ್ರ ‘ಶಿವಶರಣೆ ನಂಬೆಕ್ಕ’. 1957ರಲ್ಲಿ ಕುತೂಹಲಭರಿತ ‘ರತ್ನಗಿರಿ ರಹಸ್ಯ’ ಎಂಬ ಚಿತ್ರವನ್ನು ನಿರ್ಮಿಸಿದರು. ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಸಾಹಿತ್ಯ, ಟಿ ಜಿ ಲಿಂಗಪ್ಪ ಅವರ ಸಂಗೀತ ಈ ಚಿತ್ರಕ್ಕೆ ಅಪಾರ ಯಶಸ್ಸನ್ನು ತಂದುಕೊಡುವಲ್ಲಿ ನೆರವಾದವು. ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ರಜತೋತ್ಸವ ಆಚರಿಸಿದ ಸಾಮಾಜಿಕ ಚಿತ್ರವೆಂದು ಖ್ಯಾತಿ ಪಡೆದ ‘ಸ್ಕೂಲ್ ಮಾಸ್ಟರ್’ ಚಿತ್ರವನ್ನು 1958ರಲ್ಲಿ ನಿರ್ಮಿಸಿದರು. ಅನಂತರ ಅವರ ಪದ್ಮಿನಿ ಪಿಕ್ಚರ್ಸ್ ಮೂಲಕ ಕಿತ್ತೂರು ಚೆನ್ನಮ್ಮ, ಮಕ್ಕಳ ರಾಜ್ಯ, ಗಾಳಿ ಗೋಪುರ, ಚಿನ್ನದ ಗೊಂಬೆ, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಶ್ರೀ ಕೃಷ್ಣದೇವರಾಯ, ಮಾಲತಿ ಮಾಧವ, ಒಂದು ಹೆಣ್ಣಿನ ಕಥೆ ಮುಂತಾದ ಅಮೋಘ ಚಿತ್ರಗಳು ನಿರ್ಮಾಣವಾದವು. ಇವುಗಳಲ್ಲಿ ‘ಸ್ಕೂಲ್ ಮಾಸ್ಟರ್’ ಮತ್ತು ‘ಕಿತ್ತೂರು ಚೆನ್ನಮ್ಮ’ ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದವು."ಶ್ರೀ ಕೃಷ್ಣದೇವರಾಯ" ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ದೊರಕಿತು. ಇದೇ ಚಿತ್ರದಲ್ಲಿ ಬಿ.ಆರ್.ಪಂತುಲು ಅವರು ನಿರ್ವಹಿಸಿದ ‘ತಿಮ್ಮರಸು’ ಪಾತ್ರಕ್ಕೆ ಶ್ರೇಷ್ಥ ನಟ ಪ್ರಶಸ್ತಿ ದೊರೆಯಿತು. ಶ್ರೀ ಕೃಷ್ಣದೇವರಾಯ ಚಿತ್ರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಬಿ.ಆರ್. ಪಂತುಲು ನಿರಾಕರಿಸಿದರು. ಆ ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ ರಾಜ್‌ಕುಮಾರ್ ಅವರಿಗೆ ಪ್ರಶಸ್ತಿ ನೀಡಬೇಕಿತ್ತು ಎನ್ನುವುದು ಅವರ ವಾದವಾಗಿತ್ತು.
ಬಿ.ಆರ್.ಪಂತುಲು ಸುಮಾರು ಇಪ್ಪತ್ತೈದು ವರ್ಷಗಳ ಕಾಲ, ನಾಲ್ಕು ಭಾಷೆಗಳಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, ಚಿತ್ರೋದ್ಯಮಕ್ಕಾಗಿ ತಮ್ಮನ್ನೇ ತಾವು ತೇದುಕೊಂಡ ಮಹಾಪುರುಷ. ಇವರು ಉದ್ಯಮಕ್ಕೆ ಕಾಲಿಟ್ಟಾಗ ಕನ್ನಡ ಚಿತ್ರರಂಗವಿನ್ನೂ ಕುಂಟುತ್ತಿತ್ತು. ಮದ್ರಾಸಿನಿಂದ ತಯಾರಾಗುತ್ತಿದ್ದ ಕನ್ನಡ ಚಿತ್ರಗಳಲ್ಲಿ ಕನ್ನಡತನವನ್ನು ಹುಡುಕಬೇಕಾಗಿತ್ತು. ಇದನ್ನ ಮನಗಂಡ ಪಂತುಲು ತಮಿಳರೊಂದಿಗೆ ಕಲೆತು ಮೊಟ್ಟಮೊದಲಿಗೆ 'ಮೊದಲ ತೇದಿ' ಚಿತ್ರ ನಿರ್ಮಿಸಿದರು. ಇದು ಸರ್ಕಾರಿ ನೌಕರನ ಬದುಕಿನ ಬವಣೆಯ ಸುತ್ತಲಿನದು. ಅಂದಿನ ಸಾಮಾಜಿಕ ಸ್ಥಿತಿಗತಿಯನ್ನು ಪ್ರತಿಬಿಂಬಿಸುವಂಥಾದ್ದು. ಚಿತ್ರ ಯಶಸ್ವಿಯಾಗಿ ಧೈರ್ಯ ಬಂತು. ತಮಿಳಿನ ಒಡನಾಟದಲ್ಲಿದ್ದುಕೊಂಡೇ ಕನ್ನಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದರು. ರಾಜ್‍ಕುಮಾರ್, ನರಸಿಂಹರಾಜು, ಚಿ.ಉದಯಶಂಕರ್, ಪುಟ್ಟಣ್ಣ ಕಣಗಾಲರಂತಹ ಪ್ರತಿಭಾವಂತರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟರು. ರಾಜ್‍ಕುಮಾರ್ ಅವರ ಅಭಿನಯದಲ್ಲಿ ಗಾಳಿಗೋಪುರ, ಸಾಕುಮಗಳು, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಗಂಡೊಂದು ಹೆಣ್ಣಾರು ಚಿತ್ರಗಳನ್ನು ಮಾಡಿದ ಪಂತುಲು, ನರಸಿಂಹರಾಜು ಅವರಿಗಾಗಿಯೇ ಪ್ರತ್ಯೇಕ ಹಾದಿ ಸೃಷ್ಟಿಸಿ ಹಾಸ್ಯದ ಸನ್ನಿವೇಶಗಳು ಚಿತ್ರಗಳನ್ನು ಜನಪ್ರಿಯವಾಗುವಂತೆ ಮಾಡಿದರು. ಹಾಗೆಯೇ ಇವರ ಸರಿಸುಮಾರು ಎಲ್ಲಾ ಚಿತ್ರಗಳಿಗೂ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶಕರಾಗಿದ್ದುದು ಒಂದು ವಿಶೇಷ.
ಪಂತುಲು ಅವರು ‘ಕಾಲೇಜು ರಂಗ’ ಚಿತ್ರದ ಸಿದ್ಧತೆಯಲ್ಲಿದ್ದಾಗ, 1974ರ ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರ ಪಟ್ಟ ಶಿಷ್ಯ ಪುಟ್ಟಣ್ಣ ಕಣಗಾಲರು ಈ ಚಿತ್ರವನ್ನು ಪೂರ್ತಿ ಮಾಡಿ, ಗುರುಕಾಣಿಕೆಯಾಗಿ ಅರ್ಪಿಸಿದರು. ಇದು ಪದ್ಮಿನಿ ಪಿಕ್ಚರ್ಸ್ ಅವರ ಕೊನೆಯ ಚಿತ್ರವಾಯಿತು. ಆ ಮೂಲಕ ಭಾರತೀಯ ಚಿತ್ರರಂಗದ ಸುವರ್ಣ ಅಧ್ಯಾಯವೊಂದು ಕೊನೆಗೊಂಡಿತು.
ಪುಟ್ಟಣ್ಣ ಕಣಗಾಲರ ಪ್ರಕಾರ ಜನಸಾಮಾನ್ಯರನ್ನು ಚಿತ್ರಮಂದಿರಗಳತ್ತ ತರುವಂತೆ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ್ದು ಬಿ.ಆರ್. ಪಂತುಲು. ಅವರು ಅಭಿನಯ-ನಿರ್ದೇಶನ-ನಿರ್ಮಾಣ, ಈ ಮೂರೂ ಕಲೆಗಳನ್ನು ಕರಗತ ಮಾಡಿಕೊಂಡು ಕನ್ನಡ ಚಿತ್ರರಂಗವನ್ನು ಅತ್ಯುತ್ತಮ ಗುಣಮಟ್ಟದ ಚಿತ್ರಗಳಿಂದ ಶ್ರೀಮಂತಗೊಳಿಸಿದವರು. 1957ರಿಂದ 1972ರವರೆಗೆ ಅವರು ಕನ್ನಡದಲ್ಲಿ ನಿರ್ಮಿಸಿದ ಚಿತ್ರಗಳು, ಕನ್ನಡ ಚಿತ್ರರಂಗದತ್ತ ಇಡೀ ಭಾರತೀಯ ಚಿತ್ರರಂಗವೇ ನೋಡುವಂಥ ಇತಿಹಾಸವನ್ನು ನಿರ್ಮಿಸಿತ್ತು. ಅವರ ಶೇಕಡಾ 90ರಷ್ಟು ಚಿತ್ರಗಳಲ್ಲಿ ಡಾ. ರಾಜ್‌ಕುಮಾರ್ ನಾಯಕನಟರಾಗಿ ಅಭಿನಯಿಸಿರುವುದೊಂದು ವಿಶೇಷ. ಜೊತೆಗೆ ಸ್ವತಃ ಬಿ. ಆರ್. ಪಂತುಲುರವರೂ ಒಂದು ಮುಖ್ಯ ಪೋಷಕ ಪಾತ್ರದಲ್ಲಿದ್ದು ತಂದೆಯಂತೆ ಆ ಇಡೀ ಚಿತ್ರದ ಏಳಿಗೆಗೆ ಕಾರಣವಾಗುತ್ತಿದ್ದುದು ಆ ಚಿತ್ರಗಳ ಮತ್ತೊಂದು ಸುವಿಶೇಷ.
1955ರಲ್ಲಿ ಪದ್ಮಿನಿ ಪಿಕ್ಚರ್ಸ್ ಲಾಂಛನದಡಿಯಲ್ಲಿ ಪಂತುಲುರವರು ತಮ್ಮ ಚಿತ್ರ ನಿರ್ಮಾಣವನ್ನು ಆರಂಭಿಸಿದರಾದರೂ, ಅವರ ಚಿತ್ರಗಳನ್ನು "ಪಂತುಲು ಚಿತ್ರಗಳು" ಎಂದು ಕರೆಯುವುದೇ ವಾಡಿಕೆ. ‘ಸ್ಕೂಲ್ ಮಾಸ್ಟರ್’ ಚಿತ್ರದ ಧ್ಯಾನದ ಆರಂಭವಾದ "ಸ್ವಾಮಿ ದೇವನೆ" ಎಂಬ ಒಂದು ಹಾಡು ಸಾಕು, ಪಂತುಲು ಅವರು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರಾತಃ ಸ್ಮರಣೀಯರಾಗಲು. ಸೋಸಲೆ ಅಯ್ಯಾ ಶಾಸ್ತ್ರಿಗಳ ಈ ಗೀತೆಯನ್ನು ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ಒಂದಷ್ಟು ಬದಲಾವಣೆಯಿಂದ ಚಿತ್ರಗೀತೆಯಾಗಿ ಅಳವಡಿಸಿದ್ದರು. ಈ ಹಾಡು ನಮ್ಮ ನಿಮ್ಮೆಲ್ಲರ ಪ್ರೈಮರಿ ಶಾಲೆಯ ಮಗ್ಗಿ ಪುಸ್ತಕದ ಮೊದಲ ಪುಟದ ಪ್ರಾರ್ಥನಾ ಗೀತೆಯಾಗಿ ಸೇರಿಕೊಂಡು ಸಿನಿಮಾ ಹಾಡೆಂಬ ಪ್ರತ್ಯೇಕತೆಯ ರಿಯಾಯಿತಿಯಿಲ್ಲದಂತೆ ನಮ್ಮಲ್ಲಿ ಉತ್ಸಾಹ ತರುವ ಪ್ರಾರ್ಥನೆಯೇ ಆಗಿ ಹೋಗಿತ್ತು. ಇಂದೂ ಬಹಳಷ್ಟು ಶಾಲೆಗಳು ಇದನ್ನು ಪ್ರಾರ್ಥನೆಯಾಗಿ ಬಳಸುತ್ತಿವೆ. ‘ಸ್ಕೂಲ್‌ಮಾಸ್ಟರ್’ ಚಿತ್ರದಲ್ಲಿ ಮೇಷ್ಟ್ರರಾಗಿ ಸ್ವತಃ ಪಂತುಲುರವರ ಮನೋಜ್ಞ ಅಭಿನಯ-ಹಾವಭಾವ ಅಪ್ರತಿಮವಾದದ್ದು. ಮೇಷ್ಟ್ರರ ಹೆಂಡತಿಯಾಗಿ ಎಂ.ವಿ. ರಾಜಮ್ಮನವರು ಪಂತುಲು ಅವರಿಗೆ ತಕ್ಕಂತೆ ಅಭಿನಯಿಸಿದ್ದರು.
ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ಮಕ್ಕಳ ರಾಜ್ಯ, ಕಿತ್ತೂರು ಚೆನ್ನಮ್ಮ, ಗಾಳಿಗೋಪುರ, ಸಾಕು ಮಗಳು, ಚಿನ್ನದ ಗೊಂಬೆ, ದುಡ್ಡೇ ದೊಡ್ಡಪ್ಪ, ಎಮ್ಮೆ ತಮ್ಮಣ್ಣ, ಗಂಗೆ ಗೌರಿ, ಬೀದಿ ಬಸವಣ್ಣ, ಚಿನ್ನಾರಿ ಪುಟ್ಟಣ್ಣ, ಅಮ್ಮ, ಗಂಡೊಂದು ಹೆಣ್ಣಾರು, ಶ್ರೀ ಕೃಷ್ಣದೇವರಾಯ, ಅಳಿಯ ಗೆಳೆಯ, ಮಾಲತಿ ಮಾಧವ, ಒಂದು ಹೆಣ್ಣಿನ ಕಥೆ ಮುಂತಾದವು ಪಂತುಲು ಅವರ ಕನ್ನಡ ಚಿತ್ರಗಳಾದರೆ, ಕರ್ಣ, ಅಮರ್ ಶಹೀದ್, ವೀರ ಪಾಂಡ್ಯ ಕಟ್ಟಬೊಮ್ಮನ್, ದಶಾವತಾರ ಪಂತುಲು ಅವರು ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ನಿರ್ಮಿಸಿ ನಿರ್ದೇಶಿಸಿದ ಕೆಲವು ಚಿತ್ರಗಳು.
ಈ ಮಹಾನ್ ಚೇತನಕ್ಕೆ ನಮ್ಮ ಹೃತ್ಪೂರ್ವಕ ನಮನಗಳು.
On the birth anniversary of great film personality B. R. Panthulu
ಕಾಮೆಂಟ್‌ಗಳು