ಆಲ್‍ಫ್ರೆಡ್ ಹಿಚ್‍ಕಾಕ್
ಆಲ್‍ಫ್ರೆಡ್ ಹಿಚ್‍ಕಾಕ್
ಚಲನಚಿತ್ರ ಲೋಕದಲ್ಲಿ ಆಲ್‍ಫ್ರೆಡ್ ಜೊಸೆಫ್ ಹಿಚ್‍ಕಾಕ್ ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿ, ಕಲಾನಿರ್ದೇಶಕರಾಗಿ, ಚಿತ್ರಸಾಹಿತಿಯಾಗಿ... ಹೀಗೆ ಬಹುಮುಖಿ ಪ್ರತಿಭೆಯಾಗಿ ಪ್ರಸಿದ್ಧರು. ಪತ್ತೇದಾರಿ ಮಾದರಿ ನಿಗೂಢ ಕಥಾ ವಸ್ತುಗಳನ್ನುಳ್ಳ ಚಲನಚಿತ್ರ ಸರಣಿಗಳಿಗೆ ಅವರದು ಯಶಸ್ಸಿನ ದೊಡ್ಡ ಮಾದರಿ.
ಆಲ್‍ಫ್ರೆಡ್ ಜೊಸೆಫ್ ಹಿಚ್‍ಕಾಕ್ 1899ರ ಆಗಸ್ಟ್ 13ರಂದು ಲಂಡನ್‍ನಲ್ಲಿ ಜನಿಸಿದರು.
ಲಂಡನ್ನಿನ ಕುಕ್ಕುಟ ವ್ಯಾಪಾರಿಯ ಮಗನಾದ ಈತ, ಸೇಂಟ್ ಇಗ್ನಟಸ್ ಕಾಲೇಜ್, ಜೆಸ್ಯೂಟ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಲಂಡನ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು 1920ರಿಂದ ಸಿನಿಮಾಗಳಲ್ಲಿ, ಮೂಕಿ ಚಿತ್ರಗಳಿಗೆ ಶೀರ್ಷಿಕಾ ಫಲಕ ರಚಿಸುವ ಕೆಲಸದಲ್ಲಿ ತೊಡಗಿಸಿಕೊಂಡರು.
ಆಲ್‍ಫ್ರೆಡ್ ಹಿಚ್‍ಕಾಕ್ 1925ರಲ್ಲಿ ತಮ್ಮ ಮೊದಲ ಚಿತ್ರ ನಿರ್ಮಿಸಿದರು. ಅನಂತರ 1926ರಲ್ಲಿ “ಲಾಡ್ಜರ್” ಸಿನಿಮಾದಲ್ಲಿ “ಥ್ರಿಲ್ಲರ್ಸ್” ಮೂಲಕ ಗುರುತಿಸಲ್ಪಟ್ಟರು. ಇವರು ನಿರ್ದೇಶಿಸಿದ ಬ್ಲಾಕ್ಮೇಲ್ (1929). ಮೊದಲ ವಾಕಿ-ಟಾಕಿ ಚಿತ್ರ. ಮುಂದೆ ಶಾಸ್ತ್ರೀಯ ಚಿತ್ರಗಳಾದ ಥರ್ಟಿನೈನ್ ಸ್ಟೆಪ್ಸ್ (1935) ಹಾಗೂ ಲೇಡಿ ವ್ಯಾನಿಷಸ್ (1938) ಅನ್ನು ನಿರ್ದೇಶಿಸಿದರು. ಈ ಚಿತ್ರಗಳು ಕಳೆದ ಶತಮಾನದ ಶ್ರೇಷ್ಠ ಚಿತ್ರಗಳೆಂದು ಪರಿಗಣಿತವಾಗಿವೆ.
ಮುಂದೆ ಆಲ್‍ಫ್ರೆಡ್ ಹಿಚ್‍ಕಾಕ್ ಇಂಗ್ಲೆಂಡ್ ಬಿಟ್ಟು ಹಾಲಿವುಡ್‍ಗೆ ಬಂದು ರಬೆಕ್ಕಾ (1940) ಚಿತ್ರವನ್ನು ನಿರ್ದೇಶಿಸಿದರು. ಇದು “ದ ಅಕಾಡೆಮಿ” ಪ್ರಶಸ್ತಿಯನ್ನು ಗಳಿಸಿತು. ಮುಂದಿನ ಮೂವತ್ತು ವರ್ಷಗಳಲ್ಲಿ ಇವರು ನಿರಂತರವಾಗಿ ಚಿತ್ರ ನಿರ್ಮಿಸಿದರು. ನಿಗೂಢತೆಯನ್ನು ಕಟ್ಟುವ ಇವರ ಉತ್ಕೃಷ್ಟ ತಾಂತ್ರಿಕ ಪರಿಣತಿಗೆ “ಫ್ಲಾಮ್ ಬೊಯಿನಪ್ಲಿ” ಸಾಕ್ಷಿಯಾಯಿತು. 1950ರ ಸಿನಿಮಾಗಳಾದ ಸ್ಟ್ರೇಂಜರ್ಸ್ ಆನ್ ಎ ಟ್ರೈನ್ (1951), ರಿಯರ್‍ವಿಂಡೋ (1954) ಹಾಗೂ ವರ್ಟಿಗೋ (1958) ಬಹಳ ಹೆಸರು ಮಾಡಿದುವು.
ಹಿಚ್‍ಕಾಕ್ ಸಾಂಪ್ರದಾಯಿಕ ಪತ್ತೇದಾರಿ ತಾಂತ್ರಿಕತೆಯಲ್ಲಿ ಪರಿಣತೆ ಸಾಧಿಸಿದ್ದರು. ಅನಂತರ ಥ್ರಿಲ್ಲರ್ ಚಿತ್ರಗಳನ್ನು ಹೊಸ ಶೈಲಿಯಲ್ಲಿ ತೋರಿಸುವತ್ತ ಗಮನಹರಿಸಿದರು. ಇದು ಸೈಕೋ (1960) ಸಿನಿಮಾದಲ್ಲಿ ಕಂಡುಬರುತ್ತದೆ. ಒಬ್ಬ ಪ್ರಮುಖ ಹೆಂಗಸು ಕೊಲೆಯಾದುದನ್ನು ಹೇಳಲು ಸಿನಿಮಾದ ಮೂರನೇ ಒಂದು ಭಾಗವನ್ನು ಬಳಸಿದ್ದರು. ಟೋರ್ನ್ ಕರ್ಟೈನ್ (1966) ಹಾಗೂ ಟೋಪಾಸ್ (1969) ಚಿತ್ರಗಳಲ್ಲಿ ಇವರು ಸಾಂಪ್ರದಾಯಿಕ ಪತ್ತೇದಾರಿ ಕಥೆಗಳನ್ನು ಕ್ರೋಡೀಕರಿಸಿ ಪ್ರದರ್ಶಿಸಿದ್ದಾರೆ. ಸಮಾಜ ಬಾಹಿರ ಚಟುವಟಿಕೆಗಳಿಂದ ಕೂಡಿದ ಈ ಕಥಾವಸ್ತುಗಳು ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮಗಳನ್ನುಂಟು ಮಾಡುತ್ತವೆಂಬುದನ್ನು ಪ್ರೇಕ್ಷಕರಿಗೆ ತಿಳಿಸುವುದು ಅವರ ಉದ್ದೇಶವಾಗಿದ್ದಿತು. ಈ ಕಾಲದಲ್ಲಿ ಅವರು ತೆಗೆದ ರೇರ್ ವಿಡೊ, ವರ್ಟಿಗೊ, ನಾರ್ಥ್ ಬೈ ನಾರ್ಥ್‍ವೆಸ್ಟ್ ಮತ್ತು ಸೈಕೊ ಚಿತ್ರಗಳು ಸಾರ್ವಕಾಲಿಕವಾದ ಶ್ರೇಷ್ಠ ಚಿತ್ರಗಳೆಂದು ಪರಿಗಣಿತವಾಗಿವೆ.
ಹಿಚ್‍ಕಾಕ್ ಮುಂದೆ ಫ್ರಾಂಜಿ ಚಿತ್ರದಲ್ಲಿ (1972) ತಮ್ಮ ಹಳೆಯ ಶೈಲಿಯನ್ನು ಪುನಶ್ಚೇತನಗೊಳಿಸಿದ್ದರು. ಹೀಗೆ ತಮ್ಮ ಚಲನಚಿತ್ರಗಳಲ್ಲಿ ಅನೇಕ ನೂತನ ಪ್ರಯೋಗಗಳನ್ನು ಮಾಡಿದ ಹಿಚ್‍ಕಾಕ್ 1950-60ರ ದಶಕಗಳಲ್ಲಿ ಹಲವಾರು ಪ್ರಖ್ಯಾತ ಟಿ.ವಿ. ಧಾರಾವಾಹಿಗಳನ್ನು ನಿರ್ಮಿಸಿ ಅಧಿಕ ಕೀರ್ತಿಗೆ ಪಾತ್ರರಾದರು. ಇವರು ತಮ್ಮ ಕೃತಿಗಳನ್ನು ಪರಿಚಯಿಸುವ ಪ್ರಚಾರ ಚಿತ್ರಗಳನ್ನೂ ನಿರ್ಮಿಸಿದರು.
ಹಿಚ್‍ಕಾಕ್ ಅವರ ಚಿತ್ರಗಳು ಇನ್ನಿತರ ಚಿತ್ರಗಳು ಬರೀ ಮನರಂಜನೆ ಮಾತ್ರವಲ್ಲದೆ ಅನೇಕ ಪ್ರಸಿದ್ಧ ಹಾಲಿವುಡ್ ನಿರ್ದೇಶಕರ ಚಿತ್ರಗಳಿಗಿಂತಲೂ ಗಂಭೀರವಾಗಿರುತ್ತಿದ್ದವು ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ತಮ್ಮ ಚಿತ್ರಗಳಲ್ಲಿ ತಾತ್ತ್ವಿಕ ಭಾವನೆಗಳು ಒಡಮೂಡಿದ್ದರೂ ಮನರಂಜನೆಗಿಂತ ಆಚೆ ಯಾವುದೇ ಅಭಿಪ್ರಾಯ ತಮ್ಮದಲ್ಲ ಎಂಬುದು ಅವರ ನಿಲುವಾಗಿತ್ತು.
ಮುಂದಿನ ತಲೆಮಾರಿನ ಅನೇಕ ಚಿತ್ರ ನಿರ್ಮಾಪಕರ ಮೇಲೆ ಹಿಚ್‍ಕಾಕ್ ಪ್ರಭಾವ ಅಪಾರವಾಗಿತ್ತು. ಫ್ರಾನ್‍ಕೋಸ್ ಟ್ರುಫಾಟ್, ಕ್ಲಾಂಡೆ ಜಾಬ್ರೊಲ್ ಹಾಗೂ ಎರ್ರಿಕ್ ರೋಹಮರ್, ಲಿಂಟ್ಸೆ ಆ್ಯಂಡರ್‍ಸನ್, ಅಮೆರಿಕದ ಪೀಟರ್ ಬೊಗ್ಡಾನೊವಿಚ್ ಇವರು ಈ ಬಗ್ಗೆ ವ್ಯಾಪಕವಾಗಿ ಬರೆದು, ತಮ್ಮ ಶೈಲಿಗಳ ಮೇಲೆ ಆಲ್‍ಫ್ರೆಡ್ ಹಿಚ್‍ಕಾಕ್ ಅವರ ಪ್ರಭಾವವನ್ನು ಸ್ಮರಿಸಿದ್ದಾರೆ.
ಆಲ್‍ಫ್ರೆಡ್ ಹಿಚ್‍ಕಾಕ್ 1980ರ ಏಪ್ರಿಲ್ 29ರಂದು ನಿಧನರಾದರು.
On the birth anniversary of great film director, producer and screenwriter Sir Alfred Joseph Hitchcock
ಕಾಮೆಂಟ್‌ಗಳು