ಗಾಯತ್ರಿ ವಿಶ್ವನಾಥ್
ಗಾಯತ್ರಿ ವಿಶ್ವನಾಥ್
ಇಂದು ಗಾಯತ್ರಿ ವಿಶ್ವನಾಥ್ ಅಮ್ಮನ ಹುಟ್ಟುಹಬ್ಬ.
ಗಾಯತ್ರಿ ಅವರು 1946ರ ಆಗಸ್ಟ್ 13ರಂದು ಬೆಂಗಳೂರಿನಲ್ಲಿ ಜನಿಸಿದರು. ಮುಂದೆ ಮೈಸೂರಿನ ಬಳಿ ಕಪಿನೀ ತೀರದ ಕಿತ್ತೂರು ಎಂಬ ಹಳ್ಳಿಯಲ್ಲಿ ನೆಲೆಸಿದ್ದರು. 12 ವಯಸ್ಸಿನ ತನಕ ಅಲ್ಲೇ ಇದ್ದು ವಿದ್ಯಾಭ್ಯಾಸಕ್ಕೆ ಬೆಂಗಳೂರಿನಲ್ಲಿ 'ತಾಯಿನಾಡು' ಪತ್ರಿಕೆಯ ಖ್ಯಾತರಾದ ಪಿ. ಆರ್. ರಾಮಯ್ಯನವರ ಮನೆಗೆ ಬಂದರು. ಗಾಯತ್ರಿ ಅವರ ಅಜ್ಜಿ ಮತ್ತು ರಾಮಯ್ಯನವರು ಒಡಹುಟ್ಟಿದವರು. ಬೆಂಗಳೂರಿಗೆ ಬಂದಮೇಲೆ ರಾಮಯ್ಯನವರಿಗೆ ಹತ್ತಿರವಾಗಿದ್ದರು. ಅವರ ಬರಹ ಕಾರ್ಯ ಗಳಲ್ಲಿ ಸಹಾಯ ಮಾಡುತ್ತಿದ್ದರು. ರಾಮಯ್ಯನವರ ಮನೆ ಸದಾ ಸಾಹಿತ್ಯ ಕ್ಷೇತ್ರದ, ಸಾಂಸ್ಕೃತಿಕ ಕ್ಷೇತ್ರದ ಮತ್ತು ದೇಶಭಕ್ತ ಮಹನೀಯರ ಆಗಮನದಿಂದ ತುಂಬಿ ತುಳುಕುತ್ತಿತ್ತು. ಮುಂದೆ ಗಾಯತ್ರಿ ಅವರು 1982ರಲ್ಲಿ ರಾಮಯ್ಯನವರ ಪುತ್ರ ಡಾ. ಪಾಲಹಳ್ಳಿ ವಿಶ್ವನಾಥ್ ಅವರನ್ನು ವರಿಸಿದರು.
ಗಾಯತ್ರಿ ಅವರ ಪತಿ ಡಾ. ಪಾಲಹಳ್ಳಿ ವಿಶ್ವನಾಥ್ ಅವರು ವಿಜ್ಞಾನಿಗಳಾಗಿ, ವಿಜ್ಞಾನ ಸಂವಹನಕಾರಾಗಿ, ಲೇಖಕರಾಗಿ ಮತ್ತು ಅಂಕಣಕಾರರಾಗಿ ಹೆಸರಾದವರು. ಈಗಾಗಲೇ ಹೇಳಿದಂತೆ ವಿಶ್ವನಾಥರ ತಂದೆ ಪಿ. ಆರ್. ರಾಮಯ್ಯನವರು 'ತಾಯಿನಾಡು' ಪತ್ರಿಕೆ ಸ್ಥಾಪಿಸಿ ನಡೆಸಿದ ಧೀರರು. ತಾಯಿ ಜಯಲಕ್ಷಮ್ಮ ಸಾರ್ವಜನಿಕ ಸೇವೆಯಲ್ಲಿ ಪ್ರಸಿದ್ಧರು. ಸಹೋದರ ಪಿ. ಆರ್. ಬ್ರಹ್ಮಾನಂದ ವಿಶ್ವಪ್ರಸಿದ್ಧ ಅರ್ಥಶಾಸ್ತ್ರಜ್ಞರು. ಸಹೋದರಿ ರಾಮೇಶ್ವರಿ ವರ್ಮ ಮೈಸೂರು ವಿಶ್ವವಿದ್ಯಾಲಯದಲ್ಲಿ ನಿರ್ದೇಶಕಿಯಾಗಿ ದುಡಿದವರು. ಅವರು ರಂಗಲೋಕ ಮತ್ತು ಸಿನಿಮಾ ಲೋಕದಲ್ಲೂ ಹೆಸರು.
ಗಾಯತ್ರಿ ವಿಶ್ವನಾಥ್ ಅವರು ಶಿಕ್ಷಕಿಯಾಗಿದ್ದರು. ತಾವೇ ಶಾಲೆ ನಡೆಸಿದ್ದರು. ಸಮಾಜ ಸೇವೆಯಲ್ಲಿ ತೊಡಗಿದ್ದರು. ಇಷ್ಟಲ್ಲದೆ ಡಿವಿಜಿ ಅವರ ಮುಂದೆ ಕುಳಿತು ಆಡಿ, ಹಾಡಿ, ಅವರು ಹೆಳಿದ್ದು ಬರೆದು ಅವರ ಅಕ್ಕರೆ ಗಳಿಸಿದ ಧನ್ಯರಾಗಿದ್ದರು.
ವಿಶ್ವನಾಥ್ ಸಾರ್ ತಮ್ಮ ಕುಟುಂಬದ ಬಗ್ಗೆ ಬರೆದಿರುವ 'ಹೀಗೊಂದು ಕುಟುಂಬದ ಕಥೆ' ಅಪಾರ ಜನಪ್ರಿಯ. ಈ ಕುರಿತು ಹೇಳುವಾಗ ಗಾಯತ್ರಿ ವಿಶ್ವನಾಥ್ ಅವರು ಕುಟುಂಬಕ್ಕೆ ಸೇರಿದ ಪತ್ರಗಳು, ಲೇಖನಗಳು, ಫೋಟೋಗಳು ಮುಂತಾದ ದಾಖಲೆಗಳನ್ನು ಎಷ್ಟು ಅಚ್ಚುಕಟ್ಟಾಗಿ ಕಾಪಾಡಿದ್ದಾರೆ ಮತ್ತು ಅದು ತಮಗೆ ಮತ್ತು ತಮ್ಮ ಅಣ್ಣ ಬ್ರಹ್ಮಾನಂದ ಅವರ ಬರಹಗಳಿಗೆ ಎಷ್ಟು ಸಹಾಯಕವಾಗಿದೆ ಎಂಬುದರ ಕುರಿತು ಬರೆದಿದ್ದಾರೆ.
ಗಾಯತ್ರಿ ವಿಶ್ವನಾಥ್ ಅಮ್ಮ, ಡಿವಿಜಿ ಅವರೊಂದಿಗಿನ ಅನುಭವ, ಶಿಕ್ಷಕಿಯಾಗಿ ತಾವು ಗಳಿಸಿದ ಅನುಭವ ಮತ್ತು ತಾವು ಕಂಡ ಅಂದಿನ ಸಾಂಸ್ಕೃತಿಕ ಲೋಕದ ಬಾಂಧವ್ಯದ ಕುರಿತು ಮನಮುಟ್ಟುವಂತೆ ಹೇಳುತ್ತಾರೆ. ಅವರ ಮನೆಗೆ ಹೋದಾಗ ತಮ್ಮ ಮನೆಯಲ್ಲಿ ದೇವರಗುಡಿಗೆ ಕರೆದೊಯ್ದು ಹಲವು ಶತಮಾನಗಳ ತಲೆಮಾರಿನಿಂದ ಪೂಜೆ ಸ್ವೀಕರಿಸುತ್ತಿರುವ ಗಣಪನ ದರ್ಶನ ಭಾಗ್ಯವನ್ನೂ ನನಗೆ ಕರುಣಿಸಿದರು. ಹಿರಿಯ ದಂಪತಿಗಳಿರುವ ಈ ಮನೆ ಎಷ್ಟು ಅಚ್ಚುಕಟ್ಟು ಎಂದು ಅಚ್ಚರಿ ಮೂಡುತ್ತದೆ. ನಾನು ಬರೆದ ಲೇಖನಗಳನ್ನು ಎಷ್ಟು ಸುದೀರ್ಘವಾಗಿ ಓದಿರುತ್ತಾರೆಂದರೆ, ಅವರು ಹೇಳುತ್ತಿದ್ದರೆ ನನಗೇ ಅಚ್ಚರಿ ಎನಿಸುವಷ್ಟು. ಅವರ ಮಾತು ಸತ್ಕಾರ ಮತ್ತು ಅಕ್ಕರೆಯ ಮಾತುಗಳ ನಡುವೆ ಗಂಟೆಗಳು ಉರುಳುವುದೇ ಗೊತ್ತಾಗುವುದಿಲ್ಲ.
ಗಾಯತ್ರಿ - ಪಾಲಹಳ್ಳಿ ವಿಶ್ವನಾಥ್ ಅವರ ಮನೆಗೆ ಹೋಗಿ ಬಂದ ಸಂದರ್ಭದಲ್ಲಿ ಬರೆದಿದ್ದೆ: "ಓ ಬದುಕೇ, ಓ ಕಾಲವೇ ಇಂಥ ಮಹಾನುಭಾವರುಗಳ ಸನ್ನಿಧಿಯಲ್ಲಿ ನೀನೆಷ್ಟು ಸುಂದರ" ಅಂತ.
ನಿರಂತರ ಉತ್ಸಾಹಿಗಳೂ, ನಮ್ಮೆಲ್ಲರಿಗೂ ಪ್ರೋತ್ಸಾಹಿಗಳೂ - ಸ್ಪೂರ್ತಿದಾಯಕರೂ ಆದ ಅಕ್ಕರೆಯ ಗಾಯತ್ರಿ ವಿಶ್ವನಾಥ್ ಅಮ್ಮನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Gayatri Vishwanath Amma 🌷🙏🌷
ಕಾಮೆಂಟ್ಗಳು