ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿನೋದ್ ಖನ್ನಾ

 

ವಿನೋದ್ ಖನ್ನಾ 

ವಿನೋದ್ ಖನ್ನಾ ಭಾರತೀಯ ಚಲನಚಿತ್ರರಂಗದ ಅತ್ಯುತ್ತಮ ನಟರಲ್ಲೊಬ್ಬರು.

ವಿನೋದ್ ಖನ್ನಾ 1946ರ ಅಕ್ಟೋಬರ್ 6ರಂದು ಪೇಶಾವರ್‍ನಲ್ಲಿ ಪಂಜಾಬಿ ಕುಟುಂದಲ್ಲಿ ಜನಿಸಿದರು. ತಂದೆ ಕೃಷ್ಣಚಂದ್ ಖನ್ನಾ. ತಾಯಿ ಕಮಲ.  ದೇಶ ವಿಭಜನೆಯ ಸಂದರ್ಭದಲ್ಲಿ ಈ ಕುಟುಂಬದವರು ಮುಂಬೈಗೆ ವಲಸೆ ಬಂದರು. ಮುಂಬೈ, ದೆಹಲಿ ಮತ್ತು ನಾಸಿಕ್ ಮುಂತಾದೆಡೆ ವಿನೋದ್ ಖನ್ನಾ ಅವರ  ವಿದ್ಯಾಭ್ಯಾಸ ನಡೆಯಿತು.  ಓದುವ ದಿನಗಳಲ್ಲಿ 'ಸೊಲ್ವ ಸಾಲ್' ಮತ್ತು 'ಮುಘಲ್-ಎ-ಅಜಮ್' ಚಿತ್ರಗಳನ್ನು ನೋಡಿದಾಗ ಅವರು ಚಿತ್ರರಂಗದೆಡೆಗೆ ಆಕರ್ಷಿತರಾದರು.  ಓದುವ ದಿನಗಳಲ್ಲಿ ಅವರು ಉತ್ತಮ ಕ್ರಿಕೆಟ್ ಪಟುವಾಗಿದ್ದು ಬೂದಿ ಕುಂದರನ್, ಏಕನಾಥ ಸೋಲ್ಕರ್ ಮುಂತಾದವರೊಡನೆ ಕ್ರಿಕೆಟ್ ಆಡಿದ್ದರು.  "ನನಗೆ ಕ್ರಿಕೆಟ್ ಬಗ್ಗೆಯೂ ಪ್ರೀತಿಯಿತ್ತು.  ನಾಲ್ಕನೆಯ ಸ್ಥಾನದಲ್ಲಿ ಬ್ಯಾಟು ಮಾಡುವ ಗಣನೀಯ ಮಟ್ಟದ ಆಟಗಾರನೇ ಆಗಿದ್ದೆ. ಯಾವಾಗ ನನಗೆ ವಿಶ್ವನಾಥ್ ಆಗಲು ಸಾಧ್ಯವಿಲ್ಲ ಎಂದು ಅರಿವಾಯ್ತೊ ಆಗ ನನ್ನ ಮೊದಲ ಪ್ರೀತಿಯಾದ ಚಿತ್ರರಂಗಕ್ಕೆ ಹೊರಳಿದೆ" ಎಂದು ಅವರು ನುಡಿದಿದ್ದರು.

1968ರಲ್ಲಿ ಚಿತ್ರರಂಗಕ್ಕೆ ಬಂದ ವಿನೋದ್‍ ಖನ್ನಾ  ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿ ಖಳನಾಯಕ ಮತ್ತು ಎರಡನೆ ನಾಯಕನ ಪಾತ್ರದಲ್ಲಿ ಮಿಂಚಿದರು. ಮೇರೇ ಅಪ್ನೇ ಚಿತ್ರದ 'ಕೋಪಿಷ್ಟ ಯುವಕ', 'ಮೇರಾ ಗಾಂವ್-ಮೇರಾ ದೇಶ್'ನ  ಖಳನಾಯಕ ಮತ್ತು ಮಿಲಿಟರಿ ಯೋಧನಾಗಿ ನಟಿಸಿದ 'ಅಚಾನಕ್' ಚಿತ್ರಗಳಲ್ಲಿನ ಅವರ ಪಾತ್ರ ನಿರ್ವಹಣೆಗಳು ಜನಪ್ರಿಯಗೊಂಡು ನಾಯಕ ಪಾತ್ರಗಳು ಅವರನ್ನರಸಿ ಬಂದವು.

ಆರು ಅಡಿ ಎತ್ತರದ ಸ್ಫೂರದ್ರೂಪಿ ವಿನೋದ್ ಖನ್ನಾ ಮುಂದೆ ಗದ್ದಾರ್, ಜೇಯ್ಲ್ ಯಾತ್ರಾ, ಇಮ್ತಿಹಾನ್, ಮುಕದ್ದರ್ ಕಾ ಸಿಕಂದರ್, ಇನ್ಕಾರ್, ಕಚ್ಚೆ ಧಾಗೆ, ಅಮರ್ ಅಕ್ಬರ್ ಆ್ಯಂಥನಿ, ರಾಜ್‍ಪುತ್, ಕುರ್ಬಾನಿ, ಕುದ್ರತ್, ದಯಾವಾನ್, ಕಾರ್‍ನಾಮಾ, ಜುರ್ಮ್ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು.

ವಿನೋದ್ ಖನ್ನಾ ಅಪಾರ ಪ್ರಸಿದ್ಧಿ ತನ್ನೊಡನಿದ್ದಾಗ ಅವೆಲ್ಲವ ಬಿಟ್ಟು 1982ರಲ್ಲಿ

ಓಶೋ ರಜನೀಶ್ ಅನುಯಾಯಿಯಾಗಿ 5 ವರ್ಷ ಚಿತ್ರರಂಗದಿಂದ ಹೊರನಡೆದುಬಿಟ್ಟರು. ನಂತರ ಬಂದು ಇನ್ಸಾಫ಼್ ಮತ್ತು ಸತ್ಯಮೇವ್ ಜಯತೆ ಎಂಬ ಯಶಸ್ವಿ ಚಿತ್ರಗಳಲ್ಲಿ  ನಟಿಸಿದರು.

ವಿನೋದ್ ಖನ್ನಾ  ಅವರಿಗೆ ಎರಡು ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕಲಾಕಾರ್ ಪ್ರಶಸ್ತಿ ಹಾಗೂ ಮರಣೋತ್ತರವಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿತು.

1997ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ವಿನೋದ್ ಖನ್ನಾ ಪಂಜಾಬ್‍ನ ಗುರುದಾಸ್‍ಪುರದಿಂದ ಸಂಸದರಾಗಿ ಚುನಾಯಿತರಾಗಿದ್ದರು. 1999ರಲ್ಲಿ ಇದೇ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆಯಾದರು. 2002ರಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. 2004ರಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 2009ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಅವರು ಪರಾಭವಗೊಂಡರು. ಮತ್ತೆ 2014ರ ಚುನಾವಣೆಯಲ್ಲಿ ಗುರುದಾಸ್‍ಪುರ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದರು.

ವಿನೋದ್ ಖನ್ನಾ 2017ರ ಎಪ್ರಿಲ್ 27ರಂದು ನಿಧನರಾದರು.

On the birth anniversary of actor Vinod Khanna 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ