ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಂದ್ರಾ ನೂಯಿ


 ಇಂದ್ರಾ  ನೂಯಿ


ಇಂದ್ರಾ ಕೃಷ್ಣಮೂರ್ತಿ ನೂಯಿ ಇಂದು ಜಾಗತಿಕ ವಾಣಿಜ್ಯವಲಯದಲ್ಲಿ ಪ್ರಖ್ಯಾತ ಹೆಸರು.  ಭಾರತೀಯ ಮೂಲ ಸಂಜಾತರಾದ ಇವರು ವಿಶ್ವದ ಎರಡನೇ ದೊಡ್ಡ  ತಂಪು ಪಾನೀಯ ಸಂಸ್ಥೆಯಾದ ‘ಪೆಪ್ಸಿಕೋ’ದ  ಮುಖ್ಯಸ್ಥರಾಗಿ 2018ರವರೆಗೆ ಸೇವೆ ಸಲ್ಲಿಸಿದರು.   ಫೋರ್ಬ್ಸ್ ಹೆಸರಿಸಿರುವ  ವಿಶ್ವದ ಪ್ರಭಾವೀ ಮಹಿಳೆಯರ ಪಟ್ಟಿಯಲ್ಲಿ ನಿರಂತರವಾಗಿ ಹೆಸರಿಸಲ್ಪಡುತ್ತಿರುವ,  ಇವರು 2013 ವರ್ಷದಲ್ಲಿ ಫೋರ್ಬ್ಸ್ ಪತ್ರಿಕೆ ಪಟ್ಟಿಯಲ್ಲಿ ವಿಶ್ವದ  ಪ್ರಭಾವೀ  ಮಹಿಳೆಯರ ಪಟ್ಟಿಯಲ್ಲಿ ಹದಿಮೂರನೆಯ ಸ್ಥಾನ, ಹಾಗೂ 2016 ವರ್ಷದ ಫಾರ್ಚೂನ್ಸ್  ವಿಶ್ವ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಮೂರನೆಯ ಸ್ಥಾನ್ನವನ್ನಲಂಕರಿಸಿದ್ದಾರು.

ಇಂದ್ರಾ ಕೃಷ್ಣಮೂರ್ತಿ ನೂಯಿ ಅವರು 1955ರ ಅಕ್ಟೋಬರ್ 28ರಂದು ಚೆನ್ನೈನಲ್ಲಿ ಜನಿಸಿದರು.  ಶಾಲೆಯಿಂದ ವಿಜ್ಞಾನ ಪದವಿಯವರೆಗಿನ ಶಿಕ್ಷಣವನ್ನು ಚೆನ್ನೈನಲ್ಲಿ ಪಡೆದ ಇಂದಿರಾ ನೂಯಿ 1976ರಲ್ಲಿ ಕೊಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಎಂ.ಬಿ.ಎ ಪದವಿ ಗಳಿಸಿದರು.  

ಜಾನ್ಸನ್ ಅಂಡ್ ಜಾನ್ಸನ್, ಮೆಟ್ಟೂರ್ ಬೇರ್ಡ್ಸೆಲ್ ಮುಂತಾದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ನಂತರದಲ್ಲಿ ಇಂದ್ರಾ ನೂಯಿ ಅವರು 1978ರ ವರ್ಷದಿಂದ 1980ರ ವರೆಗೆ ಏಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಿಂದ ಸಾರ್ವಜನಿಕ ಮತ್ತು ಖಾಸಗಿ ಆಡಳಿತ ನಿರ್ವಹಣೆಯ ಕುರಿತಾದ ಮತ್ತೊಂದು ಸ್ನಾತಕೋತ್ತರ ಪದವಿಗಳಿಸಿದರು.  'ಏಲ್ ವಿಶ್ವವಿದ್ಯಾಲಯದ'  ವಿದ್ಯಾಭ್ಯಾಸದ ಸಮಯದಲ್ಲಿ ಅವರು  ಬೂಸ್ ಅಲ್ಲೆನ್ ಹ್ಯಾಮಿಲ್ಟನ್ ಸಂಸ್ಥೆಯಲ್ಲಿ ಪ್ರಾಯೋಗಿಕ ಕಲಿಕೆ ಅವಶ್ಯಕತೆಯನ್ನು ಪೂರೈಸಿದರು. ಮುಂದೆ ಅವರು  ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ನಲ್ಲಿ ಕೆಲಕಾಲ ಕೆಲಸ ಮಾಡಿ, ಮೋಟರಾಲ, ಏಷಿಯಾ ಬ್ರೌನ್ ಬೊವೇರಿ ಸಂಸ್ಥೆಗಳಲ್ಲಿ ನಿರ್ಣಾಯಕ ಹುದ್ದೆಗಳನ್ನಲಂಕರಿಸಿದ್ದರು. 

ನೂಯಿ ಅವರು 1994ರ ವರ್ಷದಲ್ಲಿ ‘ಪೆಪ್ಸಿಕೋ’ ಸೇರಿದರು. ಆ ಸಂಸ್ಥೆಯ ಪ್ರಗತಿಯಲ್ಲಿ ತೋರಿದ ಅಸಾಮಾನ್ಯ ಪ್ರಗತಿಯ ದೆಸೆಯಿಂದ  ಶೀಘ್ರಗತಿಯಲ್ಲಿ ಉನ್ನತಿಗೇರಿದ ಅವರು 2001ರ ವರ್ಷದಿಂದ ಅಧ್ಯಕ್ಷರು ಮತ್ತು ಪ್ರಧಾನ  ಹಣಕಾಸು ವ್ಯವಸ್ಥಾಪಕ ಹುದ್ಧೆಯನ್ನು ನಿರ್ವಹಿಸಿದರಲ್ಲದೆ, 2006ರ ವರ್ಷದಲ್ಲಿ ಆ ಸಂಸ್ಥೆಯ ಮುಖ್ಯಸ್ಥ ಸ್ಥಾನವಾದ ಸಿ.ಇ.ಓ ಜವಾಬ್ಧಾರಿಯನ್ನಲಂಕರಿಸಿ 2018ರವರೆಗೆ ಆ ಸ್ಥಾನದಲ್ಲಿದ್ದರು.    ಬ್ಯುಸಿನೆಸ್ ವೀಕ್ ವರದಿಯ ಪ್ರಕಾರ ಆವರು ಅಧಿಕಾರ ವಹಿಸಿಕೊಂಡ ಮೊದಲ ವರ್ಷದಲ್ಲೇ ಸಂಸ್ಥೆಯ ಆದಾಯ ಶೇಕಡಾ 72ರಷ್ಟು ಹೆಚ್ಚಿ ಲಾಭಗಳಿಕೆ ದ್ವಿಗುಣಗೊಂಡಿತು.

ಮುಂದೆ ವಿಶ್ವದ ಪ್ರಮುಖ ಪ್ರತಿಷ್ಠಿತ ವಾಣಿಜ್ಯ ಸಾಧಕರ ಪಟ್ಟಿಯಲ್ಲಿ ನಿರಂತರ ಕಂಗೊಳಿಸುತ್ತಾ ಬಂದಿರುವ ನೂಯಿ ಅವರು ವಿಶ್ವದಲ್ಲೇ ಅತ್ಯಧಿಕ ಸಂಭಳ ಪಡೆಯುತ್ತಿರುವ ಪಟ್ಟಿಯಲ್ಲೂ ವಿರಾಜಮಾನರಾಗಿದ್ದವರು. 2008ರ ವರ್ಷದಲ್ಲಿ ನೂಯಿ ಅವರನ್ನು  ಯು.ಎಸ್ ನ್ಯೂಸ್ ಅಂಡ್ ವರ್ಲ್ಡ್ ರಿಪೋರ್ಟ್ ಶ್ರೇಷ್ಠ  ನಾಯಕರೆಂದು ಕೊಂಡಾಡಿತು.  ಅದೇ ವರ್ಷ ಅವರು ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ಗೆ ಫೆಲೋ ಆಗಿ ಮತ್ತು ಯು.ಎಸ್.-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ಲಿನ ಅಧ್ಯಕ್ಷರಾಗಿ ಆಯ್ಕೆಗೊಂಡರು.  2009ರ ವರ್ಷದಲ್ಲಿ ಗ್ಲೋಬಲ್ ಸಪ್ಲೈ ಚೈನ್ ಲೀಡರ್ಸ್ ಗ್ರೂಪ್ನಿಂದ ಸಿ.ಇ.ಓ ಆಫ್ ದಿ ಇಯರ್ ಗೌರವಕ್ಕೆ ಪಾತ್ರರಾದರು.  2008-11ರ ಅವಧಿಗೆ ಇನ್ಸ್ಟಿಟ್ಯೂಶನಲ್ ಇನ್ವೆಸ್ಟರ್ಸ್ ಬೆಸ್ಟ್ ಸಿ.ಇ.ಓ ಪಟ್ಟಿಯಲ್ಲಿ ಸ್ಥಾನಗಳಿಸಿದರು.  

ಏಲ್  ಕಾರ್ಪೋರೇಶನ್ನಿನ ಸಕ್ಸೆಸರ್ ಫೆಲೋ ಎಂದು ಹೆಸರಾಗಿರುವ ನೂಯಿ ಅವರು ವರ್ಲ್ಡ್ ಎಕನಾಮಿಕ್ ಫೋರಮ್, ಇಂಟರ್ ನ್ಯಾಷನಲ್ ರೆಸ್ಕ್ಯೂ ಕಮಿಟಿ, ಕ್ಯಾಟಲಿಸ್ಟ್, ಲಿಂಕನ್ ಸೆಂಟರ್ ಫಾರ್ ದಿ ಪರ್ಫಾರ್ಮಿಂಗ್ ಆರ್ಟ್ಸ್, ಇಂಟರ್ ನ್ಯಾಷನಲ್ ಕ್ರಿಕೆಟ್ ಔನ್ಸಿಲ್, ಕನೆಕ್ಟಿಕಟ್ ಎಕನಸಮಿಕ್ ರಿಸೋರ್ಸ್ ಸೆಂಟರ್ ಮುಂತಾದ ಪ್ರತಿಷ್ಠಿತ ಸಂಘಟನೆಗಳ ಆಡಳಿತ ಮಂಡಲಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಅವರು  ಯು.ಎಸ್ – ಇಂಡಿಯಾ ಬ್ಯುಸಿನೆಸ್ ಸ್ಕೂಲಿನ ಚೇರ್ ಪರ್ಸನ್ ಗೌರವಕ್ಕೂ ಪಾತ್ರರಾಗಿದ್ದು, ವರ್ಲ್ಡ್ ಜಸ್ಟಿಸ್ ಪ್ರಾಜೆಕ್ಟಿನ ಗೌರವಾನ್ವಿತ ಕೋ-ಚೇರ್ ಆಗಿದ್ದಾರೆ.  ಅಮೆಜಾನ್, ಫಿಲಿಪ್ಸ್ ಮುಂತಾದ ಸಂಸ್ಥೆಗಳ ನಿರ್ದೇಶಕರ ಮಂಡಲಿಯಲ್ಲೂ ಇದ್ದಾರೆ.

ಇಂದ್ರಾ ನೂಯಿ ಅವರ ಪತಿ ರಾಜ್ ಕೆ. ನೂಯಿ.  ಈ ದಂಪತಿಗಳಿಗೆ ಇಬ್ಬರು ಪುತ್ರಿಯರಿದ್ದು ಗ್ರೀನ್ ವಿಚ್ ಕನೆಕ್ಟಿಕಟ್ ಪ್ರದೇಶದ ನಿವಾಸಿಗಳಾಗಿದ್ದಾರೆ.  ಅವರ ಒಬ್ಬ ಪುತ್ರಿ ಚಂದ್ರಿಕಾ ಕೃಷ್ಣಮೂರ್ತಿ ಟಾಂಡನ್ ಅವರು ಪ್ರಖ್ಯಾತ ಗಾಯಕಿಯಾಗಿದ್ದಾರೆ.  ಮತ್ತೊಬ್ಬರು ಪುತ್ರಿ ಏಲ್ಸ್ ನೂಯಿ ಅಲ್ಮಾ ಮ್ಯಾಟರಿನಲ್ಲಿ ಆಡಳಿತ ಅಭ್ಯರ್ಥಿಯಾಗಿದ್ದಾರೆ.

ಇಂದ್ರಾ ನೂಯಿ ಅವರಿಗೆ ಸಂದಿರುವ ವಿಶ್ವದ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳ ಗೌರವಗಳ ಜೊತೆಗೆ ಭಾರತ ಸರ್ಕಾರದ ಪದ್ಮಭೂಷಣ ಗೌರವವೂ ಸಂದಿದೆ.  

ಈ ಮಹಾನ್ ಸಾಧಕರಿಗೆ ಜನ್ಮದಿನದ ಸಂದರ್ಭದಲ್ಲಿ ಗೌರವಯುತ ಶುಭಹಾರೈಕೆಗಳು.

On the birth day great Indian name in corporate world Indra Krishnamurthy Nooyi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ