ಎಂ. ಕೃಷ್ಣೇಗೌಡರು
ಎಂ. ಕೃಷ್ಣೇಗೌಡರು
ಹಳ್ಳಿಯಾಗಿರಲಿ, ಪಟ್ಟಣವಾಗಿರಲಿ, ನಗರವಾಗಿರಲಿ, ಈಗ ಕರ್ನಾಟಕದಲ್ಲಿ ಯಾರ ಭಾಷಣವೆಂದರೆ ಜನ ದೂರದೂರದಿಂದ ಬಂದು, ಸಭೆ ಆರಂಭವಾಗುವ ಮೊದಲೇ ಬಂದು ನೆರೆದು, ಸಭಾಂಗಣ ತುಂಬಿ ತುಳುಕಾಡುತ್ತಾ ಇರುತ್ತದೋ ಅಲ್ಲಿ ಪ್ರೊ. ಎಂ. ಕೃಷ್ಣೇಗೌಡರು ಇರಲೇಬೇಕು.
ಪಂಡಿತರನ್ನೂ ಪಾಮರರನ್ನೂ ಸಮಾನವಾಗಿ ಉಲ್ಲಾಸಮಯ ವಾತಾವರಣದಲ್ಲಿ ತಿಳಿಹಾಸ್ಯದ ಹೊನಲಿನಲ್ಲಿ, ಜೊತೆಗೆ ಜಾನಪದದ ಸೊಗಡಿನಲ್ಲಿ ಈಜಾಡಿಸುವ ಕೃಷ್ಣೇಗೌಡರು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕ್ಕಿನ ‘ಕನಗನ ಮರಡಿ’ ಎಂಬ ಗ್ರಾಮದಲ್ಲಿ 1958ರ ಡಿಸೆಂಬರ್ 18ರಂದು ಜನಿಸಿದರು. ಅವರ ತಂದೆ, ಮರೀಗೌಡರು ಮತ್ತು ತಾಯಿ ದೇವಮ್ಮನವರು.
ಕೃಷ್ಣೇಗೌಡರ ಬಾಲ್ಯದ ವಿದ್ಯಾಭ್ಯಾಸ ಅವರ ಸ್ವಗ್ರಾಮದಲ್ಲೇ ನೆರವೇರಿತು. ಆಮೇಲೆ ಪಾಂಡವಪುರದ ವಿಜಯ ಪ್ರೌಢಶಾಲೆಯಲ್ಲಿ, ನಂತರ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಮತ್ತು ಯುವರಾಜ ಕಾಲೇಜಿನಲ್ಲಿ ವ್ಯಾಸಂಗ ನಡೆಯಿತು. ಮೊದಲು ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಅವರು ಆನಂತರ ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಆರಿಸಿಕೊಂಡು, ಎಂ.ಎ ಪದವಿಯನ್ನು ಪ್ರಪ್ರಥಮ ಶ್ರೇಣಿ ಮತ್ತು ಚಿನ್ನದ ಪದಕಗಳೊಂದಿಗೆ ಪಡೆದರು.
ಕೃಷ್ಣೇಗೌಡರು 1983ರಲ್ಲಿ ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿ ನಿವೃತ್ತಿಯವರೆಗೂ ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೆಚ್ಚಿನ ಕನ್ನಡ ಪ್ರಾಧ್ಯಾಪಕರಾಗಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ಚರ್ಚಾಪಟುವಾಗಿ, ಹಾಡುಗಾರನಾಗಿ, ನಟನಾಗಿ ರಾಜ್ಯ, ರಾಷ್ಟ್ರಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ, ನೂರಾರು ಬಹುಮಾನಗಳ ವಿಜೇತರಾದರು. 1979ರಲ್ಲಿ ಮಂಡ್ಯ ಜಿಲ್ಲಾ ವಿದ್ಯಾರ್ಥಿ ಬಳಗದಿಂದ ‘ಪ್ರತಿಭಾ ವೀರ’ ಪ್ರಶಸ್ತಿ ಪಡೆದರು. ಮಾನಸ ಗೊಂಗೊತ್ರಿಯಲ್ಲಿ ಅತಿ ಹೆಚ್ಚು ಸ್ಪರ್ಧೆಗಳ ವಿಜೇತರಿಗೆ ಚಾಂಪಿಯನ್ಷಿಪ್ ನೀಡುತ್ತಿದ್ದರು. ಅವರು ಅಲ್ಲಿದ್ದ ಅವಧಿಯಲ್ಲಿ ಪ್ರತಿಬಾರುಯೂ ಈ ಚಾಂಪಿಯನ್ ಕೃಷ್ಣೇಗೌಡರೇ! 1983ರಲ್ಲಿ ನವದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ರೂರಲ್ ಕಲ್ಚರಲ್ ಸೆಂಟರ್‌ನವರು ಏರ್ಪಡಿಸಿದ್ದ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾನಿಲಯ ಪ್ರತಿಭಾ ಪ್ರದರ್ಶನದಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಪ್ರೇಕ್ಷಕರಿಂದ ವಿಶೇಷ ಮೆಚ್ಚುಗೆಯ ಪುರಸ್ಕಾರವನ್ನು ಪಡೆದರು.
ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದಾಗ ಕೃಷ್ಣೇಗೌಡರು ಮೈಸೂರಿನ ‘ಹೊನ್ನಾರು ಜನಪದ ಗಾಯನ ವೃಂದ’ದ ಪ್ರಧಾನ ಗಾಯಕರಾಗಿ ರಾಜ್ಯಾದ್ಯಂತ ಮೂಲಧಾಟಿಯಲ್ಲಿ ಜನಪದಗೀತೆಗಳ ಪ್ರಸಾರ ಕೈಗೊಂಡಿದ್ದರು. 1982ರಿಂದ 1986 ರವರೆಗೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು. 1996-97ರಲ್ಲಿ ಕರ್ನಾಟಕ ಸರ್ಕಾರದ ನಿಯೋಜನೆ ಮೇರೆಗೆ ಮೈಸೂರು ಜಿಲ್ಲಾ ಸಾಕ್ಷರತಾ ಆಂದೋಲನದ ಮುಖ್ಯ ಸಂಯೋಜನಾಧಿಕಾರಿಯಾಗಿ ಸಾಕ್ಷರತಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದರು. 1999ರಲ್ಲಿ ತಮಿಳುನಾಡಿನ ತಿರುಚಿರಪ್ಪಳ್ಳಿಯಲ್ಲಿ ‘ಕಾವೇರಿ-ಎ ಲಿವಿಂಗ್ ಮ್ಯೂಸಿಯಂ’ ಎಂಬ ವಿಷಯದ ಬಗ್ಗೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ಮುಖ್ಯ ಭಾಷಣಕಾರರಾಗಿ ಮಂಡಿಸಿದ ಇವರ ಪ್ರಬಂಧ ವಿಶೇಷ ಮೆಚ್ಚುಗೆ ಪಡೆಯಿತು.
ಕೃಷ್ಣೇಗೌಡರು ಒಳ್ಳೆಯ ಮಾತುಗಾರರು, ಮೇಲಾಗಿ ಆಶುಭಾಷಣಕಾರರು; ಹಾಗಾಗಿ, ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಹಲವಾರು ಬಾರಿ ಭಾಷಣಗಳ ಆಹ್ವಾನ ಪಡೆದರು. ಮೈಸೂರು ದಸರಾ ಮೆರವಣಿಗೆಯ ವೀಕ್ಷಕ ವಿವರಣೆಗೆ ಇವರೇ ನೇಮಕಗೊಳ್ಳುತ್ತಿದ್ದರು. ಆಕಾಶವಾಣಿಯಲ್ಲಿ ಗಾಯನ, ಭಾಷಣ, ಹರಟೆ, ನಾಟಕ ಮುಂತಾದ ಕಾರ್ಯಕ್ರಮಗಳಲ್ಲದೆ ದೂರದರ್ಶನದ ಹಲವಾರು ಕಾರ್ಯಕ್ರಮಗಳಲ್ಲಿ ಇವರು ಪಾಲ್ಗೊಂಡಿದ್ದಾರೆ. ಉದಯ ಟಿ. ವಿ. ಯ ‘ಚಿಂತಕರ ಚಾವಡಿ’ ಯಲ್ಲಿ ಹಲವು ಬಾರಿ ಸಾಹಿತ್ಯಕ ಹರಟೆ ನಡೆಸಿದ್ದಾರೆ. ಈ-ಟಿವಿ ದೂರದರ್ಶನದ ‘ಅಣ್ಣ ಬಸವಣ್ಣ’ ಮೆಗಾ ಧಾರವಾಹಿಯಲ್ಲಿ ‘ಬಿಜ್ಜಳ’ನ ಪಾತ್ರ ವಹಿಸಿದ್ದರು. ಅದೇ ದೂರದರ್ಶನ ವಾಹಿನಿಯ ‘ಪಾ. ಪ. ಪಾಂಡು’ ಮತ್ತು ಇತರ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು.
ಭಾಷಣಕಾರರಾಗಿ ರಾಜ್ಯದ ಎಲ್ಲಾ ಊರುಗಳನ್ನು ಕೃಷ್ಣೇಗೌಡರು ಸುತ್ತಿಬಂದಿದ್ದಾರೆ; ಅಲ್ಲೆಲ್ಲಾ ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ಜಾನಪದ, ಸಾಂಸ್ಕೃತಿಕ ಮತ್ತು ಹಾಸ್ಯ ವಿಷಯಗಳಲ್ಲಿ ಸಾವಿರಾರು ವೇದಿಕೆಗಳಿಂದ ಭಾಷಣ ಮಾಡಿದ್ದಾರೆ. ಲಕ್ಷಾಂತರ ಜನ ಪಾಲ್ಗೊಳ್ಳುವ ‘ತರಳಬಾಳು ಹುಣ್ಣಿಮೆ’ ಮತ್ತು ‘ಶಿವರಾತ್ರಿಶ್ವರ ಜಯಂತಿ’ ಕಾರ್ಯಕ್ರಮದಲ್ಲಿ ಬಹಳಷ್ಟು ವರ್ಷಗಳಿಂದ ಪ್ರತೀ ವರ್ಷ ನಿರಂತರ ಭಾಷಣ ಮಾಡುತ್ತಿರುವುದು ಕೃಷ್ಣೇಗೌಡರು ನಿರ್ಮಿಸಿರುವ ಒಂದು ದಾಖಲೆಯಾಗಿದೆ!
ಮೈಸೂರಿನಿಂದ ಪ್ರಕಟವಾಗುವ ‘ಮೈಸೂರು ದಿಗಂತ’ ಪತ್ರಿಕೆಯಲ್ಲಿ ಸತತವಾಗಿ ಹಲವು ವರ್ಷಗಳಿಂದ ದಿನಕ್ಕೊಂದು ‘ಕವಣೆಕಲ್ಲು’ (ಹನಿ ಗವನ); ವಾರಕ್ಕೊಂದು ‘ಬೆಳಕಂಚು’ (ವ್ಯಕ್ತಿ ಚಿತ್ರ) ಮತ್ತು ‘ಚಿಟುಕುಮುಳ್ಳು’ (ಸಂಕೀರ್ಣ ಬರಹಗಳು), ‘ಜಲದ ಕಣ್ಣು’ ಎಂಬ ಅಂಕಣಗಳಲ್ಲಿ ಇವರು ಬರೆಯುತ್ತಿದ್ದರು.
ಇವರ ಹಲವಾರು ಕತೆ, ಕವಿತೆ, ವಿಮರ್ಶೆ, ಹಾಸ್ಯ ಹಾಗೂ ಚಿಂತನ ಬರಹಗಳು ವಿವಿಧ ಪತ್ರಿಕೆಗಳಲ್ಲಿ, ಗ್ರಂಥಗಳಲ್ಲಿ ಪ್ರಕಟವಾಗಿದೆ. ಅಲ್ಲದೆ ಹಲವಾರು ಸಾಹಿತ್ಯಕ ಕೃತಿಗಳ ಮತ್ತು ಸಂಸ್ಮರಣಾ ಗ್ರಂಥಗಳ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಕೃಷ್ಣೇಗೌಡರ ‘ಕವಣೆ ಕಲ್ಲು’ ಹನಿಗವನಗಳ ಸಂಕಲನ ಪ್ರಕಟವಾಗಿದೆ.
ಮೈಸೂರಿನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ‘ಜ್ಞಾನಬುತ್ತಿ’ ಎಂಬ ಒಂದು ಅಪರೂಪದ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಪ್ರಸಾರದ ಸಂಸ್ಥೆ ತುಂಬಾ ಸ್ತುತ್ಯರ್ಹ ಕೆಲಸ ಮಾಡುತ್ತಿದೆ. ಅದರ ಸ್ಥಾಪಕರಲ್ಲೊಬ್ಬರಾಗಿ ಕೃಷ್ಣೇಗೌಡರು 1986ರಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಎಂ. ಎ. ಮತ್ತು ಸಂಸ್ಥೆಯ ಇನ್ನಿತರ ಬೋಧಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
ಕೃಷ್ಣೇಗೌಡರ ಇವೆಲ್ಲ ಸಾಧನೆಗಳನ್ನ ಗುರುತಿಸಿ, ವಿವಿಧ ಕನ್ನಡ ಸಂಘಗಳು, ರೋಟರಿ, ಲಯನ್ಸ್ ಮುಂತಾದ ಸೇವಾ ಸಂಸ್ಥೆಗಳು, ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಕೃಷ್ಣೇಗೌಡರನ್ನು ಸನ್ಮಾನಿಸಿ, ಗೌರವಿಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.
ಹಾಸ್ಯೋತ್ಸವ ಮತ್ತು ಕಿರುತೆರೆಯ ಹಾಸ್ಯ ಕಾರ್ಯಕ್ರಮಗಳು ಇವರ ಪ್ರಖ್ಯಾತಿಯನ್ನು ವಿಶ್ವದ ನಾನಾ ಕಡೆಗಳಲ್ಲಿ ಬೆಳಗಿ ದಿನೇ ದಿನೇ ಅವರ ಪ್ರಖ್ಯಾತಿ ಬೆಳಗುತ್ತಿದೆ. ಅವರ ಹಲವಾರು ಹಾಸ್ಯ ಸಂಕಲನಗಳು, ಕವನ ಸಂಕಲನಗಳು ಅಭಿಮಾನಿಗಳ ಮನೆ ಮನಗಳನ್ನು ತುಂಬುತ್ತಿವೆ. ಜೊತೆಗೆ ಕೃಷ್ಣೇಗೌಡರ ಧ್ವನಿಸುರಳಿಗಳಾದ ‘ಮಲೆಮಾದೇಶ್ವರ’, ‘ಹಾಡೋ ಮುತ್ತಿನರಗಿಣಿ’, ‘ಹಾಲರವಿ ಬಂದೋ’ (ಜನಪದ ಗೀತೆ) ಮತ್ತು ‘ಕಾಮೆಂಟ್ರಿ ಕೆಂಪಣ್ಣ’, ‘ಚಿಂತೆ ಬಿಡಿ ನಕ್ಕು ಬಿಡಿ’ ಮುಂತಾದವು ಬಹು ಜನಪ್ರಿಯವಾಗಿವೆ.
ಅರಳುಹುರಿದಂತೆ ನಿರರ್ಗಳವಾಗಿ ಮಾತನಾಡುತ್ತಾ ಜಗವೆಲ್ಲಾ ನಗು ಹರಡುತ್ತಿರುವ ಪ್ರೊ. ಎಂ. ಕೃಷ್ಣೇಗೌಡ ಅವರ ಬದುಕು ಸುಖ ಸಂತಸದಿಂದ ನಳನಳಿಸುತ್ತಿರಲಿ ಎಂದು ಹಾರೈಸೋಣ.
On the birthday of popular humorist Prof. M. Krishne Gowda
ಕಾಮೆಂಟ್‌ಗಳು