ಬಿಂದೂರಾಯರು
ಸಂ. ಗೋ. ಬಿಂದೂರಾಯರು
ಕರ್ನಾಟಕದ ಪ್ರಸಿದ್ಧ ಗಮಕಿಗಳಾದ ಸಂ. ಗೋ. ಬಿಂದೂರಾಯರು ಭಾರತದ ಬಿಂದೂರಾಯರೆಂದೇ ಪ್ರಸಿದ್ಧರು. ಕುಮಾರವ್ಯಾಸ ಭಾರತವನ್ನು ಅವರು ಅಷ್ಟೊಂದು ಸುಶ್ರಾವ್ಯವಾಗಿ ಹಾಡುತ್ತಿದ್ದರು.
ಬಿಂದೂರಾಯರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರಿನಲ್ಲಿ 1877ರ ಜನವರಿ 24ರಂದು ಜನಿಸಿದರು. ಇವರ ತಂದೆ ಗೋವಿಂದರಾಯರು ಮತ್ತು ತಾಯಿ ರಮಾಬಾಯಿ ಅವರು.
ಬಿಂದೂರಾಯರು ಹೊಸದುರ್ಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಇವರಿಗೆ ಜೋಡಿದಾರ್ ಶಾಮಾಚಾರ್ಯರ ಪರಿಚಯವಾಯಿತು. ಶಾಮಾಚಾರ್ಯರು ಬಿಂದೂರಾಯರಿಗಿಂತ ಬಹಳ ಹಿರಿಯರು. ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ರಾಜಶೇಖರ ವಿಲಾಸಗಳನ್ನು ವಾಚನ ಮಾಡುವುದರಲ್ಲಿ ನಿಷ್ಣಾತರಾಗಿದ್ದರು.
ಶಾಮಾಚಾರ್ಯರು ಬಿಂದೂರಾಯರ ಕಾವ್ಯವಾಚನವನ್ನು ಮೂದಲಿಸಿದ್ದರಂತೆ. ಇದರಿಂದ ಬಿಂದೂರಾಯರು ಗಮಕವಾಚನವನ್ನು ಸವಾಲಾಗಿ ತೆಗೆದುಕೊಂಡು ಸ್ವಂತ ಪರಿಶ್ರಮದಿಂದ ಆ ಕಲೆಯನ್ನು ಕರಗತ ಮಾಡಿಕೊಂಡರು. ಮುಂದೊಂದು ದಿನ ಸ್ವತಃ ಶಾಮಾಚಾರ್ಯರಿಂದಲೇ ಶಹಭಾಸಗಿರಿ ಪಡೆದು ತಮ್ಮ ಜೀವನದುದ್ದಕ್ಕೂ ಗಮಕ ಕಲೆಯನ್ನು ಪೋಷಿಸಿಕೊಂಡು ಬಂದರು.
ಬಿಂದೂರಾಯರು ಹೆಚ್ಚಿನ ಸಂಗೀತಗಾರರಲ್ಲದಿದ್ದರೂ ರಸಭಾವಗಳನ್ನು ಹೊರಹೊಮ್ಮಿಸಲು ಬೇಕಾದಷ್ಟು ವಿವಿಧರಾಗಗಳನ್ನು ಸಂದರ್ಭೋಚಿತವಾಗಿ ಅಳವಡಿಸಿ ವಾಚನ ಮಾಡಲು ಅಭ್ಯಾಸ ಮಾಡಿಕೊಂಡಿದ್ದರು. ಕವಿ ಹೃದಯ ಸಹೃದಯರಿಗೆ ಮನದಟ್ಟಾಗುವಂತೆ, ಅವರ ಮನಮಿಡಿದು ಆನಂದಬಾಷ್ಪ ತುಳುಕುವಂತೆ, ಮೈಪುಳಕಿತವಾಗುವಂತೆ ವಾಚಿಸುವ ಕಲೆ ಇವರಿಗೆ ಸಿದ್ಧಿಸಿತ್ತು. ಇವರ ವಾಚನ ಶೈಲಿಯನ್ನು ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿವಿಜಿ ಮುಂತಾದ ಸಾಹಿತ್ಯ ವಿದ್ವಾಂಸರು ಬಲುವಾಗಿ ಮೆಚ್ಚಿಕೊಂಡಿದ್ದರು.
ಸುಮಾರು 1935 ವರ್ಷದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಪರ್ಕ ರಾಯರಿಗೆ ದೊರಕಿದ ಮೇಲೆ ಇವರ ವಾಚನಕ್ಕೆ ಆಖಿಲ ಕರ್ನಾಟಕ ಮಟ್ಟದ ಖ್ಯಾತಿ ದೊರೆಯಿತು. ಕೆಲಕಾಲ ಇವರು ಪರಿಷತ್ತಿನಲ್ಲಿ ಗಮಕ ಕಲೆಯ ಬೋಧಕರಾಗಿ ಕೆಲಸ ಮಾಡಿದರು. ಅಂದು ಬಿಂದೂರಾಯರ ಶಿಷ್ಯರಾಗಿದ್ದ ಅನೇಕರು ತರುವಾಯದ ದಿನಗಳಲ್ಲಿ ಉಚ್ಚಮಟ್ಟದ ಗಮಕಿಗಳಾಗಿ ಪ್ರಸಿದ್ಧರಾಗಿದ್ದಾರೆ. ಅವರುಗಳಲ್ಲಿ ಶಕುಂತಳಾಬಾಯಿ ಪಾಂಡುರಂಗರಾಯ, ದಿವಂಗತ ಎಂ.ಎನ್.ಚಂದ್ರ ಶೇಖರಯ್ಯ, ಎನ್. ಶ್ರೀನಿವಾಸರಾಯ, ಎಸ್. ನಾಗೇಶರಾಯ, ಎಂ. ಹರಿನಾರಾಯಣ, ಗವಾಯ್ ಗುರುರಾವ್ ದೇಶಪಾಂಡೆ ಮುಂತಾದವರು ಪ್ರಮುಖರು.
ಬಿಂದೂರಾಯರು 1950ರಲ್ಲಿ ಮುಂಬಯಿಯಲ್ಲಿ ನಡೆದ 34ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಮಕ ಗೋಷ್ಠಿಯ ಅಧ್ಯಕ್ಷರಾಗಿದ್ದರು. 1967ರ ದಸರಾ ವಸ್ತುಪ್ರದರ್ಶನದಲ್ಲಿ ರಾಜ್ಯ ಸರ್ಕಾರ ಇವರಿಗೆ ಗಮಕ ಪ್ರಶಸ್ತಿ ನೀಡಿ ಗೌರವಿಸಿತು.
ಗಂಧದ ಇಲಾಖೆ ಮತ್ತು ಕೃಷ್ಣರಾಜೇಂದ್ರ ಗಿರಣಿಯಲ್ಲಿ ಉದ್ಯೋಗಿಯಾಗಿದ್ದು ಮೈಸೂರಿನಲ್ಲಿ ನೆಲೆಸಿದ್ದ ರಾಯರು 1969ರ ಸೆಪ್ಟೆಂಬರ್ 6ರಂದು ಈ ಲೋಕವನ್ನಗಲಿದರು.
On the birth anniversary of great Gamaka Scholar S. G. Bindooraya
ಕಾಮೆಂಟ್‌ಗಳು