ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿವೇಕಾನಂದ ಕಾಮತ್



ವಿವೇಕಾನಂದ ಕಾಮತ್

ಆತ್ಮೀಯರಾದ ವಿವೇಕಾನಂದ ಕಾಮತ್ ಕತೆ ಕಾದಂಬರಿಗಳ ಲೋಕದಲ್ಲಿ ಅಗಾಧ ಕೆಲಸ ಮಾಡುತ್ತಾ ಬಂದಿದ್ದಾರೆ.  

ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಕಾಮತ್ 1976ರ ಜನವರಿ 21ರಂದು ಜನಿಸಿದರು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮ ಪದವಿ ಪಡೆದ ಕಾಮತ್ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ.

1994ರಲ್ಲಿ ಬರವಣಿಗೆ ಆರಂಭಿಸಿದ ವಿವೇಕಾನಂದ ಕಾಮತ್ 150ಕ್ಕೂ ಹೆಚ್ಚು ಕತೆ ಹಾಗೂ 58 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಪ್ರಕಟಿಸಿದ್ದಾರೆ.  'ಸುಧಾ' ವಾರಪತ್ರಿಕೆಯಲ್ಲಿ ಇವರ ’ಅತಿಕ್ರಮಣ’ ’ನೆಲಮುಗಿಲು’, ‘ಅಜ್ಞಾತ', ಸ್ವೀಕಾರ', ‘ಪದರುಗಳು'. ಕಾದಂಬರಿಗಳು ಪ್ರಕಟವಾಗಿವೆ. ಸುಧಾದಲ್ಲಿ ಇವರ ಎರಡು ಫೋಟೊ ಕಾಮಿಕ್ಸ್ ಮತ್ತು ಅನೇಕ ಕಥೆಗಳೂ ಪ್ರಕಟವಾಗಿವೆ. 'ತರಂಗ'ದಲ್ಲಿ ಯಾವ ಮೋಹನ ಮುರಳಿ ಕರೆಯಿತೋ, ಆವಂತಿಕಾ, ಸುಪ್ತಸ್ವರ, ವ್ಯತಿರಿಕ್ತ  ಕಾದಂಬರಿಗಳು ಪ್ರಕಟವಾಗಿವೆ. 'ಕರ್ಮವೀರ'ದಲ್ಲಿ ಸಿಕ್ಕು, ಋತುಗಾನ, ಆಸರೆ, ಮಹಾನದಿ ಕಾದಂಬರಿಗಳು ಪ್ರಕಟವಾಗಿವೆ.  'ಮಂಗಳ'ದಲ್ಲಿ ಅಂಕಿತಾ, ಕಾಗದದ ಹೂ, ಅನಾವರಣ, ಅನುಬಂಧ, ದೂರದಾರಿಯತೀರ,  ಮರಳಿನ ಮನೆ, ಪುತ್ರಿ ಕಾಮೇಷ್ಟಿ ಪ್ರಕಟಗೊಂಡಿವೆ. ಇದಲ್ಲದೆ ‘ಕನ್ನಡ ಪ್ರೌ', 'ಉದಯವಾಣಿ', 'ಮಲ್ಲಿಗೆ', 'ಹಂಸರಾಗ', 'ವಾರಪತ್ರಿಕೆ', 'ವಿಜಯವಾಣಿ', 'ಪ್ರಿಯಾಂಕ', 'ರಾಗಸಂಗಮ' ಸೇರಿದಂತೆ  ಇನ್ನಿತರ ಪ್ರಮುಖ ನಿಯತಕಾಲಿಕಗಳಲ್ಲೂ ಇವರ ಕತೆ, ಕಾದಂಬರಿಗಳು ಮೂಡಿಬಂದಿವೆ. 

ಕಾಗದದ ಹೂ, ಪುತ್ರಿ ಕಾಮೇಷ್ಟಿ, ಅಜ್ಞಾತ, ಪದರುಗಳು ಮುಂತಾದವು ವಿವೇಕಾನಂದ ಕಾಮತ್ ಅವರ ಇತ್ತೀಚಿನ ಜನಪ್ರಿಯ ಕಾದಂಬರಿಗಳಲ್ಲಿ ಸೇರಿವೆ. ಇವರ ಸ್ವೀಕಾರ ಕಾದಂಬರಿ ಸಂಸ್ಕೃತ ಭಾಷೆಗೆ ಅನುವಾದವಾಗಿ ಸಂಭಾಷಣಾ ಸಂದೇಶ ಮಾಸಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗಿದೆ.  ಕನ್ನಡ ಮಕ್ಕಳ ಚಲನಚಿತ್ರ“ಅಪ್ಸರಧಾರ” ಗೆ ಸಂಭಾಷಣೆಯನ್ನು ಬರೆದಿದ್ದಾರೆ. ಇವರ ಫೇರಿಟೇಲ್‍ ಕತೆ ಚಲನಚಿತ್ರವಾಗಿದೆ. ಕಿರುಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಕೆಲವು ಕತೆಗಳು ಬೇರೆ ಭಾಷೆಗೆ ಅನುವಾದಗೊಂಡಿವೆ.

ವಿವೇಕಾನಂದ ಕಾಮತ್ ಅವರ 'ಬೇಟೆ' ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾರಿಗೆ ಸಂಸ್ಥೆ ನೀಡುವ ಅರಳು ಪ್ರಶಸ್ತಿ(2010),  'ದೂರ ದಾರಿಯ ತೀರ' ಕಾದಂಬರಿಗೆ ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆ ನೀಡುವ 'ಲೇಖಿಕಾಶ್ರೀ' ಪ್ರಶಸ್ತಿ (2011), ಕಾದಂಬರಿ ಕ್ಷೇತ್ರದಲ್ಲಿನ ಕೊಡುಗೆಗಾಗಿ ಕಾಂತಾವರ ಪ್ರಶಸ್ತಿ  (2023) ಸೇರಿದಂತೆ ಅನೇಕ ಗೌರವಗಳು ಸಂದಿವೆ.

ನಿರಂತರ ಉತ್ತಮ ಬರವಣಿಗೆ ಮಾಡುತ್ತಾ ಬಂದಿರುವ ಆತ್ಮೀಯರಾದ ವಿವೇಕಾನಂದ ಕಾಮತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಅವರಿಗೆ ಎಲ್ಲ ರೀತಿಯ ಯಶಸ್ಸು, ಸಂತೋಷ ಮತ್ತು ಸಂತೃಪ್ತಿ ಸದಾ ಜೊತೆಗೂಡಿರಲಿ.


Happy birthday Vivekananda Kamath 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ