ಮೀರಾ ಜಾಸ್ಮಿನ್
ಮೀರಾ ಜಾಸ್ಮಿನ್
ಸೌಂದರ್ಯ ಅಂದರೆ ಏನು ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ಆದರೆ ಕೆಲವೊಬ್ಬರನ್ನು,ಅವರ ಅಭಿವ್ಯಕ್ತಿಗಳನ್ನು ಕಂಡಾಗ 'ಇಲ್ಲಿದೆ ಸೌಂದರ್ಯ'ಅನಿಸುತ್ತದೆ. ಅದು ಕೇವಲ ರೂಪಕ್ಕೆ ಮಾತ್ರಾ ಸಂಬಂಧಿಸಿದ್ದಲ್ಲ. ಅದೊಂದು ವಿಶಿಷ್ಟತೆ. ಮೀರಾ ಜಾಸ್ಮಿನ್ ಅವರಲ್ಲಿ ಅಂತಹ ಸೌಂದರ್ಯವಿದೆ.
ಮೀರಾ ಜಾಸ್ಮಿನ್ 1982ರ ಫೆಬ್ರವರಿ 15ರಂದು ಕೇರಳದ ತಿರುವಳ್ಳದಲ್ಲಿ ಜನಿಸಿದರು. ಮೀರಾ ತಾನೊಬ್ಬ ಸಾಧಾರಣೆಯಾಗಿದ್ದು, ನನ್ನಲ್ಲಿ ಸೌಂದರ್ಯವಿದೆ ಎಂದು ಕೂಡಾ ಭಾವನೆ ಹೊಂದಿಲ್ಲದೆ, ಶಾಲೆಯ ನಾಟಕದಲ್ಲೂ ನಟಿಸದೆ, ನೃತ್ಯದತ್ತ ಕೂಡಾ ಮುಖ ಮಾಡದೆ, ತನಗೂ ಕಲೆಗೂ ಸಂಬಂಧವೇ ಇಲ್ಲ ಎಂದುಕೊಂಡು ಬಿ.ಎಸ್ಸಿ ಸೇರಿ, ಮುಂದೆ ನಾನು ವೈದ್ಯೆ ಆದರೆ ಹೇಗೆ ಎಂದು ಕನಸುತ್ತಿದ್ದರಂತೆ. 2000ದ ವರ್ಷದಲ್ಲಿ ಬಿ.ಎಸ್ಸಿ ಸೇರಿ ಇನ್ನೂ ಮೂರು ತಿಂಗಳಾಗಿರುವಾಗ ಲೋಹಿತದಾಸ್ ಎಂಬ ನಿರ್ದೇಶಕರ ಸಹಾಯಕರಾಗಿದ್ದಪ ಬ್ಲೆಸ್ಸಿ ಎಂಬುವರು ಈಕೆಯನ್ನು 'ಸೂತ್ರಧಾರನ್' ಎಂಬ ಮಲಯಾಳಂ ಚಿತ್ರಕ್ಕೆ ಕರೆತಂದರು.
ಮೀರಾ ಜಾಸ್ಮಿನ್ 2004ರಲ್ಲಿ ‘ಪಾಡಂ ಒನ್ನು: ಒರು ವಿಲಾಪಂ’ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದರು. ಅದೇ ವರ್ಷ ಪುನೀತ್ ರಾಜ್‍ಕುಮಾರ್ ಜೊತೆ ‘ಮೌರ್ಯ’ ಕನ್ನಡ ಚಿತ್ರದಲ್ಲಿ ನಟಿಸಿದರು. ಮತ್ತೊಮ್ಮೆ 'ಅರಸು' ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ಅವರ ಅಭಿನಯ ತುಂಬಾ ಚೆನ್ನಾಗಿತ್ತು.
'ದೇವರು ಕೊಟ್ಟ ತಂಗಿ' ಚಿತ್ರದಲ್ಲೂ ನಟಿಸಿದ್ದರು.
ದಕ್ಷಿಣ ಭಾರತದ ಎಲ್ಲ ಭಾಷಾಚಿತ್ರಗಳಲ್ಲೂ ನಟಿಸಿದ ಮೀರಾ ಜಾಸ್ಮಿನ್ ಅವರಿಗೆ ರಾಷ್ಟ್ರಪ್ರಶಸ್ತಿ ಮಾತ್ರವಲ್ಲದೆ, ಕೇರಳ ರಾಜ್ಯ ಸರ್ಕಾರದ ಮೂರು ಪ್ರಶಸ್ತಿಗಳು, ತಮಿಳುನಾಡು ರಾಜ್ಯ ಸರ್ಕಾರದ ಒಂದು ಚಲನಚಿತ್ರ ಪ್ರಶಸ್ತಿ, ಕಲೈಮಾಮಣಿ ಪ್ರಶಸ್ತಿ, ಅನೇಕ ಫಿಲಂಫೇರ್ ಮತ್ತು ಇತರ ಪ್ರಶಸ್ತಿಗಳು ಸಂದಿವೆ. ಅತೀ ಕಡಿಮೆ ಮೇಕಪ್ ಬಳಸಿ ಪಕ್ಕದ ಮನೆಯ ಸಹಜ ಹುಡುಗಿಯಂತೆಯೇ ಸಿನಿಮಾಗಳಲ್ಲಿ ಕಾಣುವ ಆಕೆಯ ಅಭಿವ್ಯಕ್ತಿ ಸಹಜವಾಗಿಯೇ ಮೆಚ್ಚುಗೆ ಹುಟ್ಟಿಸುವಂತಿದೆ.
ಮೀರಾ ಜಾಸ್ಮಿನ್ ಅವರಿಗೆ ಸೌಂದರ್ಯ, ಪ್ರತಿಭೆ, ಪ್ರಶಸ್ತಿ, ಯಶಸ್ಸುಗಳು ದೊರೆತ ಹಾಗೆ ವಿವಾಹದ ವಿಷಯ ಸುಖ ತರಲಿಲ್ಲ. ಮ್ಯಾಂಡೊಲಿನ್ ಶ್ರೀನಿವಾಸ್ ಸಹೋದರ ಮ್ಯಾಂಡೊಲಿನ್ ರಾಜೇಶ್ ಜೊತೆ ಅವರು ಬಯಸಿದ್ದ ವಿವಾಹ ಹಲವು ವಿರೋಧಗಳ ನಡುವೆ ನಡೆಯಲಿಲ್ಲ. ಮತ್ತೊಬ್ಬರೊಂದಿಗೆ 2014ರಲ್ಲಿ ನಡೆದ ಅವರ ವಿವಾಹ 2016ರಲ್ಲಿ ಕೊನೆಗೊಂಡಿತು.
ಮುಂದೆಯೂ ನಟನೆಯಲ್ಲಿ ತೊಡಗಿದ್ದ ಮೀರಾ ಜಾಸ್ಮಿನ್ 2018ರ ನಂತರ ನಟಿಸಿದ ಹಾಗಿಲ್ಲ.
ಈ ಸುಂದರ ಹುಡುಗಿ ಮೀರಾ ಜಾಸ್ಮಿನ್ ಮಲ್ಲಿಗೆಯಂತಹ ತನ್ನ ನಗುವಿನಂತೆಯೇ ಸಂತಸದಿಂದಿರಲಿ.
On the birthday of actress Meera Jasmine
ಕಾಮೆಂಟ್‌ಗಳು