ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೆನಗಲ್ ನರಸಿಂಗರಾವ್


 ಸರ್ ಬೆನಗಲ್ ನರಸಿಂಗ ರಾವ್


ಸರ್ ಬೆನಗಲ್ ನರಸಿಂಗ ರಾವ್ ಅವರು ಅಂತರರಾಷ್ಟ್ರೀಯ ಮಟ್ಟದ ಪ್ರಖ್ಯಾತ ಕಾನೂನು ತಜ್ಞರಾಗಿ, ವಿಶ್ವಸಂಸ್ಥೆಯನ್ನು ಪ್ರತಿನಿಧಿಸಿದವರಾಗಿ, ಭಾರತದ ಸಂವಿಧಾನದ ಕರಡು ಪ್ರತಿ ತಯಾರಿಸಿದವರಾಗಿ, ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶ ಸ್ಥಾನದವರೆಗೆ ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದವರಾಗಿ ಸ್ಮರಣೀಯರು.   

ಭಾರತದ ಹೆಮ್ಮೆಯ ಪುತ್ರರಾದ ಸರ್ ಬೆನಗಲ್ ನರಸಿಂಗ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಚಿತ್ರಾಪುರ ಸಾರಸ್ವತ ಕುಟುಂಬಗಳಲ್ಲಿ ಒಂದಾದ ಬೆನೆಗಲ್ ಮನೆತನದಲ್ಲಿ 1887ರ ಫೆಬ್ರುವರಿ 26ರಂದು ಜನಿಸಿದರು.   ನರಸಿಂಗ ರಾವ್ ಅವರ  ತಂದೆ ಬಿ. ರಾಘವೇಂದ್ರರಾವ್ ಮದರಾಸು ಪ್ರೆಸಿಡೆನ್ಸಿಯಲ್ಲಿ ಸರ್ಕಾರಿ ವೈದ್ಯರು. ತಾಯಿ ರಾಧಾಬಾಯಿ. 1905ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಬಿ.ಎ. ಪದವಿ ಪಡೆದ ರಾಯರು,  ಭಾರತ ಸರ್ಕಾರದ ಶಿಷ್ಯವೇತನದಿಂದ ಇಂಗ್ಲೆಂಡಿನಲ್ಲಿ ಐ.ಸಿ.ಎಸ್. ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರು. ಮುಂದೆ ಭಾರತಕ್ಕೆ ಹಿಂದಿರುಗಿ ಬಂಗಾಳದಲ್ಲಿ 14 ವರ್ಷಗಳ ಕಾಲ  ಜಿಲ್ಲಾಧಿಕಾರಿ, ನ್ಯಾಯಾಧೀಶರಾಗಿ ಸೇವೆ,  1919-20ರಲ್ಲಿ ಮುರ್ಷಿದಾಬಾದ್‌ನಲ್ಲಿ ಸೆಷನ್ ಜಡ್ಜ್; 1920-25ರಲ್ಲಿ ಸಿಲ್ಹೆಟ್ ಹಾಗೂ ಕಾತಾರ್‌ನಲ್ಲಿ ಡಿಸ್ಟ್ರಿಕ್ಟ್ ಹಾಗೂ ಸೆಷನ್ ಜಡ್ಜ್ ; 1925ರಲ್ಲಿ ಅಸ್ಸಾಂ ಪ್ರಾಂತ್ಯದ ವಿಧಾನ ಪರಿಷತ್ತಿನ ಕಾರ್ಯದರ್ಶಿ ಹೀಗೆ ಪ್ರತಿಷ್ಠಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು.   ಲಂಡನ್ನಿನ ದುಂಡುಮೇಜಿನ ಪರಿಷತ್ತಿನಲ್ಲಿ  ಅಸ್ಸಾಂ ಪ್ರತಿನಿಧಿಯಾಗಿ ಭಾಗವಹಿಸಿದ್ದರು. 1934-35ರಲ್ಲಿ ಭಾರತ ಸರಕಾರದ ಲೆಜಿಸ್ಲೆಟಿವ್ ವಿಭಾಗದ ಕಾರ್ಯದರ್ಶಿಗಳಾಗಿ,  1935ರಲ್ಲಿ ಕೊಲ್ಕತ್ತಾದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ರಾವ್ 1938ರಲ್ಲಿ ಸುಧಾರಣಾ ಆಯೋಗದ ಕೆಲಸ ನಿರ್ವಹಿಸಿದರು.  1941ರಲ್ಲಿ ಹಿಂದೂ ನ್ಯಾಯ ಪರಿಷ್ಕರಣೆಗಾಗಿ ಕೇಂದ್ರ ಸರಕಾರ ರಚಿಸಿದ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. 1939ರಲ್ಲಿ ಕೇಂದ್ರ ಸಂಶೋಧನ ಸಂಸ್ಥೆಗಾಗಿ ವೈದ್ಯವಿಜ್ಞಾನ, ಶಸ್ತ್ರ ಚಿಕಿತ್ಸೆ ವಿಭಾಗಗಳ ಯೋಜನೆಯನ್ನು ಸಿದ್ಧಪಡಿಸಿದರು. ಸಿಂಧೂ ಆಯೋಗದ  ಕಾರ್ಯಕಾರಿಣಿಯಲ್ಲೂ ಭಾಗಿಯಾಗಿದ್ದರು. 1944ರಲ್ಲಿ ಭಾರತ ಸರ್ಕಾರದ ಸೇವೆಯಿಂದ ನಿವೃತ್ತಿ ಹೊಂದಿದರು.

ನಿವೃತ್ತಿಯ ನಂತರವೂ ಹಲವಾರು ಪ್ರತಿಷ್ಠಿತ ಹುದ್ದೆಗಳನ್ನು ನಿರ್ವಹಿಸಿದ ನರಸಿಂಗ ರಾವ್ ಅವರು 1944ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಗಳಾಗಿ ಸಂದಿಗ್ಧ ಕಾಲದಲ್ಲಿ 18 ತಿಂಗಳುಗಳ ಕಾಲ ಸೇವೆ ಸಲ್ಲಿಸಿದರು. 1946ರ ಜುಲೈನಲ್ಲಿ ಭಾರತ ಸಂವಿಧಾನ ರಚನೆಗೆ, ಸಂವಿಧಾನ ಸಲಹೆಗಾರರಾಗಿ ನೇಮಕಗೊಂಡರು. ಹೊಸ ಸಂವಿಧಾನದ ರೂಪುರೇಷೆ ಕುರಿತ ಹಲವಾರು ಲೇಖನಗಳನ್ನು  ಮಂಡಿಸಿದರು. ಭಾರತ ಸರ್ಕಾರದ ಸಂವಿಧಾನದ ಕರಡುಪ್ರತಿ ಸಿದ್ಧಪಡಿಸಿದ ಖ್ಯಾತಿ ಬೆನಗಲ್ ನರಸಿಂಗರಾಯರದು. ಅದರಲ್ಲೂ ಕನ್ನಡಿಗರೊಬ್ಬರಿಂದ ಎಂದ ಮೇಲೆ ಅದು ಕರ್ನಾಟಕಕ್ಕೆ ಸಂದ ಕಿರೀಟ.

ವಿಶ್ವ ಸಂಸ್ಥೆಯ ಕಾನೂನು ಆಯೋಗದಲ್ಲಿ ಖಾಯಂ ಪ್ರತಿನಿಧಿಯಾಗಿ ಪ್ರತಿಷ್ಟಿತ ಸ್ಥಾನ ಪಡೆದ ಹಿರಿಮೆ ನರಸಿಂಗ ರಾವ್ ಅವರದ್ದು. ಅವರು ಕಾಶ್ಮೀರ ಸಮಸ್ಯೆ, ಪರಮಾಣು ಶಕ್ತಿ, ಆಫ್ರಿಕಾದಲ್ಲಿ ಇಟಲಿಯ ವಸಾಹತು ಮುಂತಾದ ಪ್ರಮುಖ ವಿಷಯಗಳ ಬಗ್ಗೆ ವಿಶ್ವಸಂಸ್ಥೆಯಲ್ಲಿ ವಾದ ಮಂಡಿಸಿದರು.  1951ರ  ವರ್ಷದಲ್ಲಿ ಅವರು  ಹೇಗ್‌ನ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಗೊಂಡರು. 

ನರಸಿಂಗ ರಾವ್ ಹುದ್ದೆಯಲ್ಲಿದ್ದಾಗಲೇ 1953ರ ನವೆಂಬರ್ 30ರಂದು ನಿಧನರಾದರು.  ನರಸಿಂಗ ರಾವ್ ಅವರು ಉತ್ತಮ ಬರಹಗಾರರಾದರೂ ಅವರ ಜೀವಿತ ಕಾಲದಲ್ಲಿ ಅವರ ಗ್ರಂಥ ಪ್ರಕಟವಾಗಲಿಲ್ಲ. ಇವರ ಸಹೋದರರೂ ಪ್ರಖ್ಯಾತರೇ. ಬೆನಗಲ್ ಸಂಜೀವರಾವ್ ಖ್ಯಾತ ಶಿಕ್ಷಣ ತಜ್ಞರು. ಬೆನಗಲ್ ರಾಮರಾವ್ ರಿಸರ್ವ್ ಬ್ಯಾಂಕಿನ ಗರ್ವನರ್ ಆಗಿದ್ದರು. ಬೆನಗಲ್ ಶಿವರಾಮ್ ಖ್ಯಾತ ಪತ್ರಿಕೋದ್ಯಮಿಗಳು ಮತ್ತು ಗ್ರಂಥಕರ್ತರು. ಇವರು, ಬೆನಗಲ್ ನರಸಿಂಗರಾಯರ ಬರಹಗಳನ್ನೆಲ್ಲಾ INDIA’S CONSTITUTION IN THE MAKING ಎಂಬ ಹೆಸರಿನಡಿ ಸಂಪಾದಿಸಿ ಪ್ರಕಟಿಸಿದ್ದಾರೆ.

Benegal Narasing Rau, B. N. Rau

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ