ಕೆ. ಸತ್ಯನಾರಾಯಣ
ಕೆ. ಸತ್ಯನಾರಾಯಣ
ಕನ್ನಡದ ಕಥೆ, ಕಾದಂಬರಿ, ಚಿಂತನೆ ಮತ್ತು ವಿಮರ್ಶೆಗಳಲ್ಲಿ ಡಾ. ಕೆ. ಸತ್ಯನಾರಾಯಣ ಗಣ್ಯ ಹೆಸರು. ಕನ್ನಡ ಸಾಹಿತ್ಯ ಲೋಕಕ್ಕೆ ಇದುವರೆಗೆ ವಿವಿಧ ಪ್ರಕಾರಗಳ 36 ಕೃತಿಗಳನ್ನು ನೀಡಿ ಹಲವು ಮಹತ್ವದ ಗೌರವಗಳಿಗೆ ಪಾತ್ರರಾಗಿದ್ದಾರೆ.
ಸತ್ಯನಾರಾಯಣ ಅವರು 1954ರ ಏಪ್ರಿಲ್ 21ರಂದು ಮಂಡ್ಯ ಜಿಲ್ಲಾ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಜನಿಸಿದರು. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ ಹಾಗೂ ತದನಂತರದಲ್ಲಿ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳಲ್ಲಿ ಸುವರ್ಣಪದಕ ಗಳಿಕೆಯೊಂದಿಗಿನ ಸ್ನಾತಕೋತ್ತರ ಪದವಿ ಗಳಿಸಿದರು. ಐ.ಎಮ್.ಎಫ್ ನ ಪ್ರಾದೇಶಿಕ ತರಬೇತಿ ಸಂಸ್ಥೆಯಲ್ಲಿ ವಿಶಿಷ್ಟ ತರಬೇತಿಯನ್ನು ಸಹಾ ಅವರು ಪಡೆದಿದ್ದಾರೆ.
1978ರಲ್ಲಿ ಭಾರತದ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆಗೆ ಸೇರಿದ ಸತ್ಯನಾರಾಯಣ ಅವರು ದೇಶದ ನಾನಾ ಭಾಗಗಳಲ್ಲಿ ಕಾರ್ಯ ನಿರ್ವಹಿಸಿ, 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಆಯುಕ್ತರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು.
ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ ಹೀಗೆ ಬಹುಮುಖಿಯಾಗಿ ಕೆ.ಸತ್ಯನಾರಾಯಣ ಅವರ ಸಾಹಿತ್ಯ ಸೇವೆ ಸಲ್ಲುತ್ತಾ ಸಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಬಂಧ, ಕಾದಂಬರಿ ಹಾಗೂ ಸಣ್ಣ ಕಥೆಗಳಿಗೆ 1988, 1992 ಮತ್ತು 2012 ವರ್ಷಗಳಲ್ಲಿ ಪುರಸ್ಕಾರ; 2010 ವರ್ಷದಲ್ಲಿ ‘ನಕ್ಸಲ್ ವರಸೆ’ ಕೃತಿಗೆ ಮಾಸ್ತಿ ಕಥಾ ಪುರಸ್ಕಾರ, ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಒಟ್ಟು ಸಾಹಿತ್ಯ ಸಾಧನೆಗೆ ಬಿ.ಎಂ.ಶ್ರೀ. ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, 2013 ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸಾವಿನ ದಶಾವತಾರ ಕಾದಂಬರಿಗೆ ಸೂರ್ಯನಾರಾಯಣ ಚಡಗ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಕೆ. ಸತ್ಯನಾರಾಯಣ ಅವರನ್ನು ಅರಸಿ ಬಂದಿವೆ.
ಕೆ. ಸತ್ಯನಾರಾಯಣ ಅವರ ಕಾದಂಬರಿಗಳಲ್ಲಿ ಒಂದು ಕಥಾನಕದ ಮೂಲಕ, ರಾಜಧಾನಿಯಲ್ಲಿ ಶ್ರೀಮತಿಯರು, ಗೌರಿ, ಸನ್ನಿಧಾನ, ಕಾಲಜಿಂಕೆ, ವಿಚ್ಛೇದನಾ ಪರಿಣಯ, ವಿಕಲ್ಪ, ಸಾವಿನ ದಶಾವತಾರ, ಲೈಂಗಿಕ ಜಾತಕ ಸೇರಿವೆ.
ನಿಮ್ಮ ಮೊದಲ ಕಥೆ, ವಿಕ್ಟೋರಿಯಾ ಮಗ ದೇವಲಿಂಗಂ, ಹಳೆಯ ಕಾಲದ ಹೊಸ ಕತೆ, ಈತನಕದ ಕಥೆಗಳು, ನಕ್ಸಲ್ ವರಸೆ, ಹೆಗ್ಗುರುತು, ಪ್ರಸಿದ್ಧನಾಮಾ, ಭಾವ ಕಲ್ಲೋಲ, ದಲಿತರ ನಮ್ಮ ಕಥೆಗಳು, ಹನ್ನೊಂದನೆಯ ಇಂದ್ರಿಯ, ನಾಳೆ ಬರೆದ ಕಥೆಗಳು, ಚಿತ್ರಗುಪ್ತನ ಕಥೆಗಳು, ಅಮೆರಿಕನ್ ಮನೆ, ನಿಜವಾದ ಸೋದರಮಾವ ಅಥವಾ... ಮುಂತಾದವು ಸತ್ಯನಾರಾಯಣ ಅವರ ಪ್ರಸಿದ್ಧ ಕಥಾ ಸಂಕಲನಗಳು.
ನಮ್ಮ ಪ್ರೀತಿಯ ಕ್ರಿಕೆಟ್, ದಾಂಪತ್ಯಕ್ಕೊಂದು ಶೀಲ, ನಿಂತ ಬಂಡಿಯ ದೇಶಾಂತರ, ಲೋಕಪ್ರಬಂಧ, ನಮ್ಮಮಕ್ಕಳೇ ಚರಿತ್ರೆ ಬರೆದರೆ, ಸ್ಕೂಲು ಬಿಡುವ ಸಮಯ ಮತ್ತು ಇತರ ಪ್ರಬಂಧಗಳು, ಇಂಗ್ಲಿಷ್ ಸ್ವರ್ಗಕ್ಕೆ ದಾರಿಯಲ್ಲ ಮುಂತಾದವು ಸತ್ಯನಾರಾಯಣ ಅವರ ಪ್ರಬಂಧ ಸಂಗ್ರಹಗಳು.
ಮಾನ್ಯ ಸಾಮಾನ್ಯರ ಪ್ರಸಂಗಗಳು ಎಂಬುದು ಪ್ರಸಂಗಳನ್ನೊಳಗೊಂಡದ್ದು.
ಕೆ. ಸತ್ಯನಾರಾಯಣ ಅವರು ಮಹತ್ವದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಮರ್ಶಕರೂ ಹೌದು. ಆಸಕ್ತಿ, ಮನೋಧರ್ಮ, ಖಾಸಗಿ ವಿಮರ್ಶೆ, ಸುಮ್ಮನೆ ಓದೋಣ, ವೈವಿಧ್ಯ, ಮರುಕಳಿಸಿದ ಮಾರ್ದವತೆ, ಕಾರಂತರ ಕಾದಂಬರಿಗಳಲ್ಲಿ 'ದುಡಿ'ಮೆ, ಅವವರ ಭವಕ್ಕೆ ಓದುಗರ ಭಕುತಿಗೆ ನಿಟ್ಟಿನಲ್ಲಿ ಅವರ ಮಹತ್ವದ ಸಂಗ್ರಹಗಳು.
ಕೆ.ಸತ್ಯನಾರಾಯಣ ಅವರ ಅಂಕಣ ಬರಹಗಳು ಕುಶಲೋಪರಿ, ಮುಂದಣ ಅನಂತ, ಒತ್ತಾಸೆ, ಒಳಕಥನ, ಕೋವಿಡ್ ದಿನಚರಿ ಎಂಬ ಸಂಗ್ರಹಗಳಾಗಿ ಪ್ರಕಟಗೊಂಡಿವೆ.
ಎಚ್. ವೈ. ಶಾರದಾಪ್ರಸಾದ್ ಅವರ ವ್ಯಕ್ತಿಚಿತ್ರಣ ಸತ್ಯನಾರಾಯಣ ಅವರ ಬರಹ ವೈವಿಧ್ಯಗಳಲ್ಲಿ ಸೇರಿದೆ.
ನಾವೇನು ಬಡವರಲ್ಲ, ಸಣ್ಣಪುಟ್ಟ ಆಸೆಗಳ ಆತ್ಮಚರಿತ್ರೆ ಮತ್ತು ವೃತ್ತಿ ವಿಲಾಸ ಕೃತಿಗಳು ಕೆ. ಸತ್ಯನಾರಾಯಣ ಅವರ ಆತ್ಮಚರಿತ್ರೆಯ ಸ್ವರೂಪದ್ದು.
ಪ್ರಬಂಧ, ಡಾ. ಬೆಸಗರಹಳ್ಳಿ ರಾಮಣ್ಣ, ಜಾರ್ಜ್ ಆರ್ವೆಲ್ ಮುಂತಾದವು ಕೆ. ಸತ್ಯನಾರಾಯಣ ಅವರ ಸಂಪಾದನೆಗಳು.
ಇದಲ್ಲದೆ ಬಿ.ಆರ್. ಸುಮಿತ್ರ ಅವರು ಕೆ. ಸತ್ಯನಾರಾಯಣ ಅವರ ಸಾಹಿತ್ಯದ ಕುರಿತ ಬರಹಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ.
ಆದಾಯ ತೆರಿಗೆ ಇಲಾಖೆಯಲ್ಲಿ ಹಿರಿತನದ ಜವಾಬ್ಧಾರಿ ನಿರ್ವಹಿಸಿದ ಕೆ. ಸತ್ಯನಾರಾಯಣ ಅವರು ನಿರಂತರವಾಗಿ ಸಲ್ಲಿಸುತ್ತಿರುವ ಬೃಹತ್ ಸಾಹಿತ್ಯಕ ಸೇವೆ ಬೆರಗು ಹುಟ್ಟಿಸುವವಂತದ್ದು.
ಸತ್ಯನಾರಾಯಣ ಅವರು ಮಾನಸ ಸರೋವರ ಮತ್ತು ಥಾರ್ ಮರುಭೂಮಿ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ಕೂಡಾ ಮಾಡಿದ್ದಾರೆ.
ಕೆ. ಸತ್ಯನಾರಾಯಣ ಅವರ ಬೃಹತ್ ಸೇವೆ ನಮ್ಮ ಯುವಜನತೆಗೆ ಪ್ರೇರಕವಾಗಿರಲಿ ಅವರ ವಸ್ತು ವೈವಿಧ್ಯ, ಚಿಂತನ ಕ್ರಮ, ಆಳ ಅಧ್ಯಯನ, ಸೂಕ್ಷ್ಮಗ್ರಹಣೆ, ಆಕರ್ಷಕ ಮತ್ತು ಪಾಂಡಿತ್ಯ ಪೂರ್ಣ ಪ್ರಸ್ತುತಿ ಮತ್ತು ಇವೆಲ್ಲವನ್ನೂ ಮೀರಿದ ಸರಳ ಸಜ್ಜನಿಕೆ ನಮ್ಮೊಡನೆ ಬಹುಕಾಲ ಜೊತೆಗೂಡಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.
On the birth day writer Satyanarayana Krishnamurthy Sir
ಕಾಮೆಂಟ್‌ಗಳು