ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಸವಪ್ಪ ಶಾಸ್ತ್ರಿ


 ಬಸವಪ್ಪ  ಶಾಸ್ತ್ರಿ


ಕನ್ನಡ  ಸಾಹಿತ್ಯಲೋಕದಲ್ಲಿ  ಬಸವಪ್ಪ ಶಾಸ್ತ್ರಿಗಳದು  ಪ್ರಧಾನ  ಹೆಸರು. ಬಸವಪ್ಪ ಶಾಸ್ತ್ರಿಗಳ  ತಂದೆ   ಮಹದೇವ ಶಾಸ್ತ್ರಿಗಳು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು.  

ಬಸವಪ್ಪ  ಶಾಸ್ತ್ರಿಗಳು 1843ರ ಮೇ 2ರಂದು ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಬಸವಪ್ಪ ಶಾಸ್ತ್ರಿಗಳಿಗೆ ಮುಮ್ಮಡಿ ಕೃಷ್ಣರಾಜ ಒಡೆಯರು ಆಶ್ರಯ ಕೊಟ್ಟರು. ಬಸವಪ್ಪ ಶಾಸ್ತ್ರಿಗಳು ಸಂಸ್ಕೃತ, ಕನ್ನಡಗಳೆರಡರಲ್ಲೂ ಪಾಂಡಿತ್ಯವನ್ನು ಪಡೆದುಕೊಂಡು ತಮ್ಮ 18ನೇ ವಯಸ್ಸಿನಲ್ಲೇ ಒಡೆಯರ ಆಸ್ಥಾನದ ಕವಿಗಳಾಗಿ ನೇಮಕಗೊಂಡರು.

ಹೊಸಗನ್ನಡ ಕಾಲದ ನವೋದಯ ಕಾಲದಲ್ಲಿ ಬಸವಪ್ಪಶಾಸ್ತ್ರಿಗಳು ದೊರೆ ಮತ್ತು ಮಂತ್ರಿಗಳಿಂದ ಪ್ರೋತ್ಸಾಹಗೊಂಡು ಕಾಳಿದಾಸನ ಶಾಕುಂತಳ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ‘ಅಭಿನವ ಕಾಳಿದಾಸ’ರೆಂದು  ಬಿರುದಾಂಕಿತರಾಗಿ  ಪ್ರಸಿದ್ಧರಾದವರು. ಬಸವಪ್ಪ  ಶಾಸ್ತ್ರಿಗಳ  ಈ ಅನುವಾದಕ್ಕೆ  ಬಳಸಿರುವ  ಭಾಷೆ  ಅತ್ಯಂತ  ಸರಳವಾಗಿದ್ದು,  ಶಾಕುಂತಳ  ನಾಟಕದ  ಶ್ರೇಷ್ಠ  ಅನುವಾದಗಳಲ್ಲೊಂದು  ಎಂದು  ವಿದ್ವಾಂಸರ ಅಭಿಪ್ರಾಯವಾಗಿದೆ. ಶಾಸ್ತ್ರಿಗಳ ಪದ ಸಂಯೋಜನೆ ಸಹೃದಯರ ಮನ ಮಟ್ಟುವಂತಿದ್ದು,  ಈ ನಾಟಕದಲ್ಲಿ ಅವರು ಬಳಸಿರುವ ಕಂದಪದ್ಯಗಳು  ನಾಟಕಕ್ಕೆ ಒಂದು ವಿಶಿಷ್ಟ ಮೆರುಗನ್ನು ತಂದು ಕೊಟ್ಟಿದೆ. ಬಸವಪ್ಪಶಾಸ್ತ್ರಿಗಳು ತಮ್ಮ ಈ ನಾಟಕದ ಆರಂಭದಲ್ಲಿ ಕಾಳಿದಾಸನಿಗಿಂತ ಭಿನ್ನವಾಗಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಅವರು ನಾಟಕದ ಆರಂಭದಲ್ಲಿ ಸೂತ್ರಧಾರನನ್ನು ತರುವುದರ ಮೂಲಕ ವೀಕ್ಷಕರ ಮನವನ್ನು ವಿಶಿಷ್ಟರೀತಿಯಲ್ಲಿ ಸೂರೆಗೊಳ್ಳುತ್ತಾರೆ. 

ಅನುವಾದ ಕ್ಷೇತ್ರದಲ್ಲಿ ಬಸವಪ್ಪಶಾಸ್ತ್ರಿಗಳ ಸ್ಥಾನ ವಿಶಿಷ್ಟವಾದದ್ದು. ಬಸವಪ್ಪಶಾಸ್ತ್ರಿಗಳು ಶಾಕುಂತಳ ನಾಟಕವನ್ನಷ್ಟೇ ಅಲ್ಲದೆ ಕಾಳಿದಾಸನ ‘ವಿಕ್ರಮೋರ್ವಶೀಯ’, ಶ್ರೀಹರ್ಷನ ‘ರತ್ನಾವಳಿ’, ಕ್ಷೇಮೀಶ್ವರನ ‘ಚಂಡ ಕೌಶಿಕ’  (ಅಳಸಿಂಗಾಚಾರ್ಯರು ಇದನ್ನು ಪೂರ್ಣಗೊಳಿಸಿದರು) ನಾಟಕಗಳನ್ನೂ, ಭರ್ತೃಹರಿಯ ಶತಕತ್ರಯಗಳನ್ನೂ ಅನುವಾದ ಮಾಡಿದ್ದಾರೆ. 

ಸಂಸ್ಕೃತ ಅನುವಾದಗಳ  ಪರಿದಿಯಾಚೆಗೆ ಸಹಾ  ಮಹತ್ವದ  ಸಾಹಿತ್ಯ  ಸೃಷ್ಟಿ ಮಾಡಿರುವ ಬಸವಪ್ಪಶಾಸ್ತ್ರಿಗಳು ಚಂಪೂಕಾವ್ಯವಾದ ‘ದಮಯಂತಿಯ ಚರಿತ್ರೆ’ ಎಂಬ ಕೃತಿಯನ್ನು ರಚಿಸಿದ್ದಾರೆ.  ಸಂಸ್ಕೃತದಲ್ಲಿಯೂ ಕೃತಿ ರಚನೆ ಮಾಡಿದ್ದಾರೆ.  ಇಂಗ್ಲಿಷ್ ವಿದ್ವಾಂಸರೊಬ್ಬರ   ಸಹಕಾರ ಪಡೆದು  ಶೇಕ್ಸ್ಪಿಯರ್ ಮಹಾಕವಿಯ ‘ಒಥೆಲೊ’ ನಾಟಕವನ್ನು ‘ಶೂರಸೇನ ಚರಿತ್ರೆ’ ಎಂಬ ಹೆಸರಿನಿಂದ ರೂಪಾಂತರಿಸಿದ್ದಾರೆ.  ‘ಕಾಯೋ ಶ್ರೀ ಗೌರಿ’ ಎಂಬ  ಬಸವಪ್ಪ  ಶಾಸ್ತ್ರಿಗಳ  ವಿರಚಿತ  ಗೀತೆಯನ್ನು  ಒಡೆಯರ  ಆಡಳಿತದ  ಸಂಸ್ಥಾನ  ಗೀತೆಯನ್ನಾಗಿ  ಪಾಲಿಸಲಾಗುತ್ತಿತ್ತು.  

ಶಾಸ್ತ್ರಿಗಳು ಸರಸ ಕವಿತೆಯನ್ನು ರಚಿಸಿ, ಸ್ವಂತ ಕೃತಿಗಳಿಂದ ಮತ್ತು  ಅನುವಾದಗಳಿಂದ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದವರು. ಶಾಸ್ತ್ರಿಗಳು ಕನ್ನಡವನ್ನುದ್ದರಿಸಿದ ಪುಣ್ಯ ಪುರುಷರಲ್ಲಿ ಒಬ್ಬರು.  ಶಾಸ್ತ್ರಿಗಳು ಅಲ್ಪಾಯುಷಿಗಳಾಗಿದ್ದು  1891ನೇ ಇಸವಿಯಲ್ಲಿ  ತಮ್ಮ 48ನೇ ವಯಸ್ಸಿನಲ್ಲಿ ಅಂದರೆ 1891ರ ಫೆಬ್ರವರಿಯಲ್ಲಿ ಅಪಘಾತಕ್ಕೆ ತುತ್ತಾಗಿ ತಮ್ಮ ಕೊನೆಯುಸಿರೆಳೆದರು. ಈ  ಮಹಾನ್ ಚೇತನಕ್ಕೆ  ನಮ್ಮ  ನಮನ.

Great scholar Basavappa Shastri 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ