ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಾಸಂತಿ ಪಡುಕೋಣೆ


 ವಾಸಂತಿ ಪಡುಕೋಣೆ


ವಾಸಂತಿ ಪಡುಕೋಣೆ ಬಹುಭಾಷಾ ಪ್ರತಿಭಾವಂತೆ, ಕನ್ನಡದ ಬರಹಗಾರ್ತಿ ಮತ್ತು ಮಹಾನ್ ಚಲನಚಿತ್ರ ಕಲಾವಿದ ಗುರುದತ್ ಅವರ ತಾಯಿ.

ವಾಸಂತಿ ಪಡುಕೋಣೆ ಅವರು ದೂರದ ಬರ್ಮಾದೇಶದ ಮಿಥಿಲದಲ್ಲಿ 1908ರ ಮೇ 25ರಂದು ಜನಿಸಿದರು. ತಂದೆ ಅಣ್ಣಾಜಿರಾವ್ ತಾಯಿ ರಾಧಾಬಾಯಿ.  ಇವರ ಮನೆಮಾತು ಕೊಂಕಣಿ. ಅವರು ಸಾಂಪ್ರದಾಯಿಕವಾಗಿ ಶಾಲೆಗೆ ಹೋಗಿ ಕಲಿತದ್ದು ಪ್ರಾಥಮಿಕ ಶಾಲೆಯವರೆಗೆ ಮಾತ್ರ. ಓದಬೇಕೆಂಬ ಹಂಬಲವಿದ್ದರೂ, ಹೆಣ್ಣುಮಕ್ಕಳ ಓದಿಗೆ ಸೌಕರ್ಯ ಕಡಿಮೆಯಿದ್ದು ಬಾಲ್ಯ ವಿವಾಹ ಪದ್ಧತಿಗೆ ಹೆಚ್ಚು ಪ್ರಾಶಸ್ತ್ಯವಿದ್ದ ಕಾಲದಲ್ಲಿ  ಪಡುಕೋಣೆ ಶಂಕರರಾಯರೊಡನೆ ಅವರ ಮದುವೆ ನಡೆಯಿತು. 

ಪಣಂಬೂರಿನಲ್ಲಿ ಜೀವನ ಪ್ರಾರಂಭಿಸಿದ ವಾಸಂತಿ ದೇವಿಯವರದು ಕಷ್ಟದ ಜೀವನವಾಗಿತ್ತು. ಆದರೂ ಸಮಾಜ ಹಾಗೂ ಸುತ್ತಮುತ್ತಲ ಘಟನೆಗಳು ವಾಸಂತಿದೇವಿಯವರನ್ನು ಕಷ್ಟಗಳನ್ನೆದುರಿಸಲು ಛಲಗಾರ್ತಿಯನ್ನಾಗಿ ಮಾಡಿತು. ಸದಾ ಸಂಬಂಧಗಳ ಆಶ್ರಯದ ಬದುಕು ಅವರದಾಗಿತ್ತು. ಆಶ್ರಯದಾತರಿಂದ ಕೇಳುತ್ತಿದ್ದ ಬಿರುನುಡಿಗಳ ನಡುವೆ ಬದುಕುವುದರ ಜೊತೆಗೆ ಮಕ್ಕಳಿಗೆ ವಿದ್ಯೆ ಕಲಿಸಿ ಮುಂದೆ ತರಬೇಕೆಂಬ ಛಲ ಅವರಲ್ಲಿತ್ತು. ಮಗ ಗುರುದತ್ತನೊಡನೆ ತಾನೂ ಮೆಟ್ರಿಕ್ ಪರೀಕ್ಷೆ ಪಾಸು ಮಾಡಿದ ಛಲಗಾರ್ತಿ ಆಕೆ. ಹೊಲಿಗೆ ಕಸೂತಿಯಲ್ಲಿ ಪರಿಣತಿ ಪಡೆದರು. ಮಕ್ಕಳಾದ ಗುರುದತ್ತ, ಆತ್ಮಾರಾಮ, ವಿಜಯ ಹಾಗೂ ಲಲಿತಾಲಾಜ್ಮಿ  ಅವರುಗಳಿಗೆ ಬರೇ ತಾಯಿಯಾಗದೆ ಗೆಳತಿ, ಗುರು, ಮಾರ್ಗದರ್ಶಿ ಎಲ್ಲವೂ ಆದರು. 

ಕನ್ನಡದಲ್ಲಿ ಬರವಣಿಗೆ ಪ್ರಾರಂಭಿಸಿದ ವಾಸಂತಿ ದೇವಿಯವರು ಮೊದಲು ಬರೆದದ್ದು ಆರ್.ಕಲ್ಯಾಣಮ್ಮನವರ ‘ಸರಸ್ವತಿ’ ಪತ್ರಿಕೆಗೆ. ಕೆಲಕಾಲ ಕಡೆಂಗೋಡ್ಲು ಶಂಕರಭಟ್ಟರ ಪತ್ರಿಕೆ ರಾಷ್ಟ್ರಬಂಧುವಿನಲ್ಲಿ ಕರಡು ತಿದ್ದುವ ಕೆಲಸ ಮಾಡಿದ್ದರು. ಬೆಂಗಳೂರಿನಲ್ಲಿದ್ದಾಗ ಹಿಂದಿ ಕಲಿತು, ಹಿಂದಿ ಪ್ರವೇಶ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿ ಮಹಾತ್ಮಾಗಾಂಧೀಜಿಯವರಿಂದ ಪ್ರಶಸ್ತಿ ಸ್ವೀಕರಿಸಿದ ಅಸಾಮಾನ್ಯ ಮಹಿಳೆಯಾದರು. 

ವಾಸಂತಿ ದೇವಿ ಅವರು ಗಾಂಧೀಜಿಯವರಿಂದ ಪ್ರಭಾವಿತರಾಗಿ ಚಳವಳಿಯಲ್ಲೂ ಭಾಗಿ ಆದರು. ಮರಾಠಿ, ಹಿಂದಿ, ಬಂಗಾಲಿ, ತೆಲುಗು, ತಮಿಳು, ಇಂಗ್ಲಿಷ್, ಕನ್ನಡ - ಹೀಗೆ ಏಳು ಭಾಷೆಗಳಲ್ಲಿ ಓದುವ, ಬರೆಯುವ ಪಾಂಡಿತ್ಯ ಅವರಿಗಿತ್ತು. ವಾಸಂತಿ ದೇವಿಯವರು ಬದುಕಿನ ಹಲವಾರು ವರ್ಷವನ್ನು ಮುಂಬಯಿಯಲ್ಲೇ ಕಳೆದರು. ರಾಷ್ಟ್ರೀಯ ಶಿಕ್ಷಣ ಶಾಲೆಯಲ್ಲಿ ಕೆಲಕಾಲ ಶಿಕ್ಷಕಿಯಾಗಿ ಕೆಲಸ ಮಾಡಿದರು. ಬಡಮಕ್ಕಳಿಗೆ ಪ್ರೀತಿಯಿಂದ ಕಲಿಸುವ ಕಾಯಕ ಮಾಡಿದರು. ಕನ್ನಡದಲ್ಲಿ ಮಿಥುನ ಲಗ್ನ, ಕರ‍್ಮಾಚಾರಿ, ಜೀವನ ಹೋರಾಟ ಅವರ ಪ್ರಮುಖ ಕೃತಿಗಳು. ಜೊತೆಗೆ ‘ನನ್ನ ಮಗ ಗುರುದತ್ತ’ ಎಂಬುದು ಗುರುದತ್ತನ ಬದುಕಿನ ಏರಿಳಿತಗಳನ್ನು ತಿಳಿಸುವುದಲ್ಲದೆ ಸಾರಸ್ವತ ಸಮಾಜದ ವಿಶಿಷ್ಟ ಚಿತ್ರಣದ ಕೃತಿ. ನಾಗವೇಣಿ, ಆಸೆಯ ಕಣ್ಣು ಮುಂತಾದವು ಅನುವಾದಿತ ಕೃತಿಗಳು.

ವಾಸಂತಿ ಪಡುಕೋಣೆ ಅವರು 1995ರ ಏಪ್ರಿಲ್ 1ರಂದು ಈ ಲೋಕವನ್ನಗಲಿದರು.

On the birth anniversary of writer Vasanthi Padukone

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ