ಎಮರ್ಸನ್
ರಾಲ್ಫ್ ವಾಲ್ಡೊ ಎಮರ್ಸನ್
ರಾಲ್ಫ್ ವಾಲ್ಡೊ ಎಮರ್ಸನ್ ಪ್ರಸಿದ್ಧ ಕವಿ, ಪ್ರಬಂಧಕಾರ ಮತ್ತು ತತ್ತ್ವಬೋಧಕಕರು. ಭಗವದ್ಗೀತೆ, ಉಪನಿಷತ್ತುಗಳು, ಮೊದಲಾದ ಭಾರತೀಯ ಧಾರ್ಮಿಕಗ್ರಂಥಗಳ ಪ್ರಭಾವವನ್ನು ಅವರ ಕೃತಿಗಳಲ್ಲಿ ಕಾಣಬಹುದು.
ರಾಲ್ಫ್ ವಾಲ್ಡೊ ಎಮರ್ಸನ್ 1803ರ ಮೇ 25ರಂದು ಅಮೆರಿಕದ ಮಸಾಚುಸೆಟ್ಸ್ ಪ್ರದೇಶದ ಬಾಸ್ಟನ್ ನಗರದಲ್ಲಿ ಜನಿಸಿದರು. 1817ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿ ಕಾಯಕದಿಂದ ಹಣ ಸಂಪಾದಿಸಿ ವಿದ್ಯಾವಂತರಾದರು. 1828ರಲ್ಲಿ ಪಾದ್ರಿಯಾದರು. ಆದರೆ ಸಂಪ್ರದಾಯಬದ್ಧವಾದ ಮತಬೋಧನೆಯಲ್ಲಿ ಅವರಿಗೆ ನಂಬಿಕೆಯಾಗಲಿ ಸಂತೋಷವಾಗಲಿ ಇಲ್ಲದ್ದರಿಂದ ಮೂರು ವರ್ಷಗಳ ಅನಂತರ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಇಂಗ್ಲೆಂಡಿಗೆ ಭೇಟಿ ಕೊಟ್ಟರು. ಅಲ್ಲಿ ಅವರಿಗೆ ಕೋಲ್‍ರಿಜ್, ವರ್ಡ್ಸ್ ವರ್ತ್, ಕಾರ್ಲೈಲ್ ಮೊದಲಾದ ಇಂಗ್ಲಿಷ್ ಸಾಹಿತಿಗಳ ಪರಿಚಯವಾಯಿತು. ಅವರ ಅನೇಕ ಭಾವಗಳು ಇವರ ಮೇಲೆ ಪ್ರಭಾವ ಬೀರಿದವು.
ಎಮರ್ಸನ್ ಅವರ ನೇಚರ್ (ನಿಸರ್ಗ) ಎಂಬ ಅವನ ಮೊದಲ ಪುಸ್ತಕ ಪ್ರಕಟವಾದುದು 1836ರಲ್ಲಿ. ಮಾರನೆಯ ವರ್ಷ ಅವರ ಇನ್ನೊಂದು ಖ್ಯಾತ ಪ್ರಬಂಧ ಅಮೆರಿಕನ್ ಸ್ಕಾಲರ್ (ಅಮೆರಿಕದ ವಿದ್ವಾಂಸ) ಪ್ರಕಟವಾಯಿತು. ಆಗಿಂದಾಗ್ಗೆ ಹೀಗೆ ರಚಿತವಾದ ಪ್ರಬಂಧಗಳ ಸಂಕಲನವೊಂದು 1841ರಲ್ಲೂ ಇನ್ನೊಂದು 1844ರಲ್ಲೂ ಹೊರಬಿದ್ದವು. 1847ರಲ್ಲೂ 1848ರಲ್ಲೂ ಮತ್ತೆ ಇಂಗ್ಲೆಂಡಿಗೆ ಹೋಗಿ ಬಂದು ಅಲ್ಲಿ ತಾನು ಕಂಡ ಜನರ ಮತ್ತು ತನಗಾದ ಅನುಭವಗಳ ಆಧಾರದ ಮೇಲೆ ಇಂಗ್ಲಿಷ್ ಜನರ ಗುಣಾವಗುಣಗಳನ್ನು ವಿವರಿಸುವ ಇಂಗ್ಲಿಷ್ ಟ್ರೇಟ್ಸ್ ಎಂಬ ಗ್ರಂಥವನ್ನು 1856ರಲ್ಲಿ ಪ್ರಕಟಿಸಿದರು. ಅವರ ಮತ್ತೊಂದು ಪ್ರಸಿದ್ಧ ಕೃತಿ ರೆಪ್ರೆಸೆಂಟಿವ್ ಮೆನ್ (ಪ್ರಾತಿನಿಧಿಕ ವ್ಯಕ್ತಿಗಳು) 1862ರಲ್ಲಿ ಬಂತು. ಈ ಮಧ್ಯೆ 1860ರಲ್ಲಿ ದಿ ಕಂಡಕ್ಟ್ ಆಫ್ ಲೈಪ್ (ಜೀವನದ ನಿರ್ವಹಣೆ) ಎಂಬ ಬರಹವೂ ಬೆಳಕನ್ನು ಕಂಡಿತ್ತು. ನೇಚರ್, ಸೆಲ್ಫ್ ರಿಲಯನ್ಸ್ (ಸ್ವಾವಲಂಬನೆ), ಹಿಸ್ಟರಿ (ಚರಿತ್ರೆ), ಅಮೆರಿಕನ್ ಸ್ಕಾಲರ್, ಓವರ್ ಸೋಲ್ (ಅಂತರಾತ್ಮ) ಎಂಬುವು ಅವರ ಅತ್ಯಂತ ಪ್ರಸಿದ್ಧ ಪ್ರಬಂಧಗಳು.
ಎಮರ್ಸನ್ ಹತ್ತೊಂಬತ್ತನೆ ಶತಮಾನದ ಅಮೆರಿಕದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ ಬೌದ್ಧಿಕ ಮತ್ತು ಆಧ್ಯಾತ್ಮಿಕ ಚಳವಳಿಯೊಂದರ ಜೀವಜ್ಯೋತಿಗಳಲ್ಲಿ ಒಬ್ಬರಾಗಿದ್ದರು.
ಸ್ವತಂತ್ರ ವಿಚಾರಪರತೆಯನ್ನೂ ಆತ್ಮಸಾಕ್ಷಿಯ, ಆಧ್ಯಾತ್ಮಿಕ ಜೀವನದ ಔನ್ನತ್ಯವನ್ನೂ ಎತ್ತಿಹಿಡಿದ ಟ್ರಾನ್ಸೆಂಡೆಂಟಲಿಸ್ಟ್ ಪಂಥದ ಪ್ರೇರಕ ಶಕ್ತಿಯೂ ಆಧಾರಸ್ತಂಭವೂ ಆಗಿದ್ದರು. ಮನುಷ್ಯನ ಹಿರಿಮೆ ಇರುವುದು ಬುದ್ಧಿ ಶಕ್ತಿ, ವಿವೇಕ ಮತ್ತು ವೈಯಕ್ತಿಕತೆಗಳಲ್ಲೇ ಹೊರತು ಪ್ರಾಪಂಚಿಕ ಐಶ್ವರ್ಯ, ಭೋಗಾನುಭವಗಳಲ್ಲಲ್ಲ - ಎಂಬುದು ಅವರ ಬೋಧನೆಯಾಗಿತ್ತು. ಪ್ರತಿವ್ಯಕ್ತಿಯೂ ತನ್ನ ಅಂತರಾತ್ಮದ ಪ್ರೇರಣೆಯಂತೆ ನಡೆಯಬೇಕೆಂದೂ ಅದರ ಫಲವಾಗಿ ಸಮಾಜವನ್ನು ಎದುರಿಸಬೇಕಾಗಿ, ಜಗತ್ತಿನ ಸಂಪ್ರದಾಯಗಳನ್ನು ಮುರಿಯಬೇಕಾಗಿ ಬಂದರೆ ಹಿಂಜರಿಯಬಾರದೆಂದೂ ಅವರ ವಾದ. ದೈವವಾಣಿಯ ಪ್ರತೀಕದಂತಿರುವ
ಅಂತರ್ವಾಣಿಯ ಅನುಸರಣೆ ನಮ್ಮ ಆದ್ಯಕರ್ತವ್ಯವೆಂಬುದು ಅವರ ಪ್ರಮುಖ ತತ್ತ್ವ. ಸ್ವಾತಂತ್ರ್ಯ ಮತ್ತು ವೈಯಕ್ತಿಕತೆಗಳ ಶ್ಲಾಘನೆ ಅವರ ಜೀವಿತೋದ್ಯೋಗವಾಗಿತ್ತು.
ಸಹಜವಾಗಿಯೇ ರಾಜಕೀಯ ವಿಚಾರಗಳಲ್ಲೂ ಎಮರ್ಸನ್ ಸ್ವಾತಂತ್ರ್ಯ ಪ್ರೇಮಿಯಾಗಿದ್ದು, ನೀಗ್ರೊಗಳನ್ನು ಗುಲಾಮರಾಗಿಟ್ಟಿರುವ ಪದ್ಧತಿಯನ್ನು ವಿರೋಧಿಸಿದರು. ಜಾನ್ ರಸ್ಕಿನ್‍ನಂತೆ ಎಮರ್‍ಸನ್ ಕೂಡ ಗಾಂಧೀಜಿಯವರ ಧೋರಣೆಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು.
ಎಮರ್ಸನ್ ಕವಿಯೂ ಆಗಿದ್ದರು.
ಪೊಯಮ್ಸ್ (1867), ಮೇ ಡೇ ಅಂಡ್ ಅದರ್ ಪೀಸಸ್ (1867)-ಎಂಬುವು ಅವರ ಎರಡು ಕವನ ಸಂಕಲನಗಳು. ಪ್ರಕೃತಿಪ್ರೇಮ, ಸ್ವಾತಂತ್ರ್ಯಪ್ರೇಮ, ಆಧ್ಯಾತ್ಮಿಕತೆಗಳು ಅವರ ಕಾವ್ಯದಲ್ಲಿ ಎದ್ದು ಕಾಣುವ ಗುಣಗಳು. ಭಗವದ್ಗೀತೆ, ಉಪನಿಷತ್ತುಗಳು, ಮೊದಲಾದ ಭಾರತೀಯ ಧಾರ್ಮಿಕಗ್ರಂಥಗಳ ಪ್ರಭಾವವನ್ನು ಅವರ ಕೃತಿಗಳಲ್ಲಿ ಕಾಣಬಹುದು. ಅವುಗಳಿಂದ ಅವರು ಅನೇಕ ವಾಕ್ಯಗಳನ್ನೂ ಶ್ಲೋಕಗಳನ್ನು ಉಲ್ಲೇಖಿಸುತ್ತಾರೆ. ಗೀತೆಯ ಸಾರದಂತಿರುವ ಅವರ ಬ್ರಹ್ಮ ಎಂಬ ಕವನ ಪ್ರಸಿದ್ಧವಾಗಿದೆ.
ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತರಾಗಿದ್ದ, ಆಗುತ್ತಿದ್ದ, ಅವರ ಕಾಲದ ಜನಕ್ಕೆ ಎಮರ್ಸನ್ನರ ಬೋಧನೆ ಮಾರ್ಗದರ್ಶಕವಾಯಿತು; ಶುದ್ಧ ಆದರ್ಶಗಳ ಆವಶ್ಯಕತೆಯನ್ನೂ ಹಿರಿಮೆಯನ್ನೂ ಅದು ಅವರ ಅರಿವಿಗೆ ತಂದಿತು. ಈ ಕಾರಣದಿಂದ ಎಮರ್ಸನ್‍ರ ಬರಹ ಸಮಕಾಲೀನ ಅಮೆರಿಕದವರಿಗೆ ಮಾತ್ರವಲ್ಲದೆ ಇತರರಿಗೂ ಮಾನ್ಯವಾಗಿವೆ.
ಎಮರ್ಸನ್ನರ ಬರಹಗಳು ಬಹುಮಟ್ಟಿಗೆ ಪ್ರಬಂಧಗಳ ರೂಪದಲ್ಲಿವೆ. ಈ ಪ್ರಬಂಧಗಳಲ್ಲಿ ಅನೇಕವು ಅವರು ನಾನಾ ಕಡೆ ಮಾಡಿದ ಭಾಷಣಗಳು. ನಾಡು ನುಡಿಗಳಂಥ ವಾಕ್ಯಗಳಿಗೂ ಮನಮುಟ್ಟುವ ತರ್ಕಸರಣಿಗೂ ಅವುಗಳಲ್ಲಿ ವ್ಯಕ್ತವಾಗಿರುವ ಆತ್ಮವಿಶ್ವಾಸ ಆಶಾವಾದಿತ್ವಗಳಿಗೂ ಅವು ಹೆಸರಾದಂತಿವೆ.
ರಾಲ್ಭ್ ವಾಲ್ಡೊ ಎಮರ್ಸನ್ ಅಮೆರಿಕದ ಮಸಾಚುಸೆಟ್ಸ್ ಪ್ರದೇಶದ
ಕಾನ್ಕರ್ಡ್ ಗ್ರಾಮದಲ್ಲಿ 1882ರ ಏಪ್ರಿಲ್ 27ರಂದು ನಿಧನರಾದರು.
ಅವರ ಬ್ರಹ್ಮ ಕವನದ ಓದು ಇಂತಿದೆ:
If the red slayer think he slays,
Or if the slain think he is slain,
They know not well the subtle ways
I keep, and pass, and turn again.
Far or forgot to me is near;
Shadow and sunlight are the same;
The vanished gods to me appear;
And one to me are shame and fame.
They reckon ill who leave me out;
When me they fly, I am the wings;
I am the doubter and the doubt,
I am the hymn the Brahmin sings.
The strong gods pine for my abode,
And pine in vain the sacred Seven;
But thou, meek lover of the good!
Find me, and turn thy back on heaven.
On the birth anniversary of great writer Ralph Waldo Emerson
ಕಾಮೆಂಟ್‌ಗಳು