ನಿಸಾರ್ ಅಹಮದ್
ನಿಸಾರ್ ಅಹಮದ್
ನಿಸಾರ್ ಅಹಮದ್ ಅಂದರೆ ಅದೆಂತದ್ದೋ ಹಲವು ಸುಮಧುರ ಭಾವಗಳು ತುಳುಕುತ್ತವೆ. ಜೋಗದ ಸಿರಿಬೆಳಕಿನಲ್ಲಿ ಹಾಡನ್ನು ಹಾಡಿಕೊಂಡಾಗಲೆಲ್ಲಾ ಅದೇನೋ ತುಂಬು ಆನಂದ ಸಿಗುತ್ತದೆ. ಬೆಣ್ಣೆ ಕದ್ದ ನಮ್ಮ ಕೃಷ್ಣ ನೆನೆದಾಗಲೆಲ್ಲ ಆ ಕೃಷ್ಣ ನಮ್ಮ ಕಣ್ಣ ಮುಂದೆಯೇ ಇಲ್ಲೇ ಎಲ್ಲೋ ಆಡುತ್ತಿರುವಂತೆ ಭಾಸವಾಗುತ್ತದೆ. ಅವರು ಮಾಸ್ತಿಯವರನ್ನು ವರ್ಣಿಸುವಾಗ ಗಾಂಧೀ ಬಜಾರಿನಲ್ಲಿ ಅಂದು ಹೋದಾಗಲೆಲ್ಲಾ ಕಣ್ಣಿಗೆ ಬೀಳುತ್ತಿದ್ದ ಮಾಸ್ತಿಯವರ ಚಿತ್ರ ಕಣ್ಣ ಮುಂದೆ ಬಂದು ನಿಂತಂತಾಗುತ್ತದೆ. ನನ್ನ ಪುಟ್ಟ ಕ್ಯಾಮರಾಗೆ ಸೊಗಸಾಗಿ ಸೆರೆ ಸಿಕ್ಕ ಗುಲ್ ಮೊಹರ್ ಚಿತ್ರ ಆಗಾಗ ನೋಡಿಕೊಳ್ಳುವ ಅಭ್ಯಾಸ ನನಗಿದೆ. ಅದನ್ನು ನೋಡಿದಾಗಲೆಲ್ಲ ನಿಸಾರರ ಗುಲ್ ಮೊಹರು ಕವಿತೆಯ ವರ್ಣನೆ ಕಣ್ಣ ಮುಂದೆ ಬಂದು ನಮ್ಮ ಮೈಸೂರು – ಬೆಂಗಳೂರುಗಳಲ್ಲಿರುವ ಆ ಸುಂದರ ಮರಗಳೆಡೆಗೆ ಓಡಬೇಕು ಎನಿಸುತ್ತದೆ.
ಅವರ ‘ನಗ್ತೀರ ನನ್ ಹಿಂದೆ ನಗ್ರಯ್ಯ ನಗ್ರಿ’ ಕವಿತೆ ನೆನೆದಾಗಲೆಲ್ಲ ನಮ್ಮ ಕಾಲದಲ್ಲಿ ಕೂಡ ಮೇಷ್ಟರ ಮನೆಗೆ ಪಾಠಕ್ಕೆ ಹೋಗಿ ಅವರಿಂದ ಹೆಚ್ಚಿಗೆ ಮಾರ್ಕು ಪಡೆಯುತ್ತಿದ್ದ ಹಲವಾರು ಗೆಳೆಯರ ಕತೆಯನ್ನು ಬೇಡ ಬೇಡವೆಂದರೂ ನೆನಪಿಸುತ್ತದೆ. ಅಯ್ಯೋ ನಾನೂ ಪಾಠಕ್ಕೆ ಹೋಗಿ ಅವರಂತೆ ಹೆಚ್ಚು ಮಾರ್ಕು ಬರುತ್ತಿತ್ತೇನೋ ಎಂದು ಒಮ್ಮೊಮ್ಮೆ ಅನಿಸಿದರೆ, ನಿಸಾರರು ಹೇಳುವ ‘ಕೊಳೆ ಬಟ್ಟೆ ಹೊತ್ತಂಗೆ ದೋಬಿಯ ಕತ್ತೆ’ ನೆನಪಿಗೆ ಬಂದು ಪುಣ್ಯ ಹಾಗಾಗಲಿಲ್ಲವಲ್ಲ ಎಂದು ನಿಟ್ಟುಸಿರು ಬಿಡುವಂತಾಗುತ್ತದೆ. ಈ ಕವಿತೆ ಪೂರ್ಣ ಹಾಸ್ಯದ ಜೊತೆಜೊತೆಗೆ ಶಿಕ್ಷಣ ಕ್ಷೇತ್ರದ ವಿಡಂಭನೆಯನ್ನು ನೀಡುವ ರೀತಿ ಅಚ್ಚು ಮೆಚ್ಚಿನದು.
'ಕುರಿಗಳು ಸಾರ್ ಕುರಿಗಳು' ಕೇಳಿದಾಗ ನಾವೂ ಈ ಮಂದೆಯಲ್ಲಿ ಒಂದು ಎಂದು ಯಾರಿಗಾದರೂ ಅನ್ನಿಸುತ್ತದೆ.
ನಿಸಾರರನ್ನು ಒಮ್ಮೆ ನಮ್ಮ ಸಂಸ್ಥೆಯಲ್ಲಿದ್ದ ‘ಕನ್ನಡ ಸಂಪದ’ದಲ್ಲಿ ಭಾಷಣ ಮಾಡಲು ಬನ್ನಿ ಎಂದು ಕರೆಯಲು ಅವರು ಕೆಲಸ ಮಾಡುತ್ತಿದ್ದ ಕೆಂಪೇಗೌಡ ರಸ್ತೆ ಬಳಿ ಇದ್ದ ಸರ್ಕಾರಿ ಕಾಲೇಜಿಗೆ ಹೋಗಿದ್ದೆ. ಅದನ್ನು GAS ಕಾಲೇಜು ಎಂದು ಕರೆಯುವುದು ವಾಡಿಕೆ ಇತ್ತು (Government Arts and Science College ಎಂಬುದರ ಕಿರು ರೂಪ). ನಾವು ಕನ್ನಡ ಸಂಘದವರು ಎಂದ ತಕ್ಷಣವೇ, ನೋಡಿ ನಾನು ಯಾವ ಭಾಷಣಕ್ಕೂ ಬರೋಲ್ಲ ಎಂದು ಸಿಡುಕಿದ್ದು ನಿರಾಸೆ ಮೂಡಿಸಿದ್ದರೂ, ಹಲವಾರು ಕನ್ನಡ ಸಂಘಗಳು ಸಾಹಿತಿಗಳನ್ನು ಹೇಗೆ ನಡೆಸಿಕೊಳ್ಳುತ್ತವೆ ಎಂಬುದನ್ನು ಜೀವನದಲ್ಲಿ ನೋಡಿದ್ದ ನನಗೆ ಅವರ ಸಿಟ್ಟಿನಲ್ಲಿ ತಪ್ಪೇನೂ ಇಲ್ಲ ಎಂಬುದನ್ನು ಅರ್ಥೈಸುವಂತೆ ಮಾಡಿದ್ದವು.
ನನಗೆ ನಿಸಾರ್ ಅಹಮದ್ ಅವರು ಯಾರು ಅಂತ ಗೊತ್ತಾಗಿದ್ದುದು ಸ್ವಾಮಿ ವಿವೇಕಾನಂದರ ಕಥೆಯಿಂದ! ಬೆಂಗಳೂರಿನಲ್ಲಿ ಆ ದಿನಗಳಲ್ಲಿ ರಾಮಕೃಷ್ಣಾಶ್ರಮಕ್ಕೆ ಹೋಗುತ್ತಿದ್ದೆ. ನಾನು ಅಲ್ಲಿಗೆ ಹೋದ ಒಂದು ದಿನ ಸ್ವಾಮಿ ಪುರುಷೋತ್ತಮಾನಂದಜೀ ಅವರ ಸ್ವಾಮಿ ವಿವೇಕಾನಂದರ ಕುರಿತ ಉಪನ್ಯಾಸ ನಡೆಯುತ್ತಿತ್ತು. ಅದನ್ನು ಕೇಳುತ್ತ ಅದರೆಡೆಗೆ ಆಕರ್ಷಿತನಾದ ನಾನು ಪ್ರತೀ ಶನಿವಾರ ಆ ಉಪನ್ಯಾಸಕ್ಕೆ ಹೋಗುತ್ತಿದ್ದೆ. ಒಂದು ಉಪನ್ಯಾಸದಲ್ಲಿ “ಸ್ವಾಮಿ ವಿವೇಕಾನಂದರು ಫ್ರೆಂಚ್ ಭಾಷೆಯನ್ನು ಅಪ್ರತಿಮವಾಗಿ ಕಲಿತು ಫ್ರೆಂಚರಿಗೇ ಅಚ್ಚರಿ ಮೂಡಿಸಿದ್ದ ಅವರ ಭಾಷಾ ಕಲಿಕೆಯ ಪ್ರೌಢಿಮೆಯ ಬಗ್ಗೆ ಹೇಳಿದ ಪುರುಷೋತ್ತಮಾನಂದರು, ಅದನ್ನು ಕೆ. ಎಸ್. ನಿಸಾರ್ ಅಹಮದ್ ಅವರ ಕನ್ನಡ ಕಲಿಕೆಗೆ ಹೋಲಿಸಿದರು.” ಇದರ ಬಗ್ಗೆ ವಿವರಿಸಿದ ಸ್ವಾಮಿ ಪುರುಷೋತ್ತಮಾನಂದಜೀ ಅವರು ನಿಸಾರರ ಒಂದು ಮಾತನ್ನು ನೆನಪಿಸಿದರು. “ನಾನು ಕನ್ನಡದ ಒಂದೊಂದು ಅಕ್ಷರವನ್ನೂ ಬೆವರು ಹರಿಸಿ ಕಲಿತಿದ್ದೇನೆ" ಎನ್ನುತ್ತಾರೆ ಕನ್ನಡದ ಕವಿ ಕೆ. ಎಸ್ ನಿಸಾರ್ ಅಹಮದ್ ಅವರು. "ಸ್ವಾಮಿ ವಿವೇಕಾನಂದರೂ ಬಹುಶಃ ಫ್ರೆಂಚ್ ಭಾಷೆಯನ್ನು ಹಾಗೆಯೇ ಕಲಿತಿದ್ದಿರಬೇಕು ಎಂದು ನನ್ನ ಅನಿಸಿಕೆ" ಎಂದು ಪುರುಷೋತ್ತಮಾನಂದಜೀ ಅವರು ವ್ಯಾಖ್ಯಾನ ನೀಡಿದ್ದರು. ಆ ಮಾತು ಕೇಳಿ ಸುಮಾರು 42 ವರ್ಷ ಕಳೆದಿದ್ದರೂ ಆ ಮಾತು ಮರೆತಿಲ್ಲ.
ಮುಂದೆ ಹಲವು ಬಾರಿ ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಸಂದರ್ಭದಲ್ಲಿ ಉಪನ್ಯಾಸ ನೀಡಿರುವುದನ್ನು ಕೇಳುವ ಸೌಭಾಗ್ಯ ನನ್ನದಾಗಿತ್ತು. ಹಾಗೆಯೇ ಅಲ್ಲಿನ ನನ್ನ ಗೆಳೆಯರ ಮೂಲಕ ಕೆ.ಎಸ್. ನಿಸಾರ್ ಅಹಮದ್ ಅವರೊಡನೆ ಪ್ರೀತಿಯ ಸನಿಹ ಕೂಡಾ ನನಗೆ ದೊರೆತಿತ್ತು.
ನಿಸಾರ್ ಅಹಮದ್ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1936ರಫೆಬ್ರುವರಿ 5ರಂದು ಜನಿಸಿದರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.
ಕನ್ನಡದಲ್ಲಿ ಧ್ವನಿಸುರಳಿಗಳ ಯುಗ ಪ್ರಾರಂಭವಾದದ್ದೇ ನಿತ್ಯೋತ್ಸವದ ಮೂಲಕ. ನನ್ನ ಬಳಿ ಇರುವ 2007ರಲ್ಲಿ ಮುದ್ರಿತವಾದ ‘ನಿತ್ಯೋತ್ಸವ’ ಕವನ ಪುಸ್ತಕ ಅದರ ಹದಿನೆಂಟನೆಯ ಪುನರಾವೃತ್ತಿ. ಈಗ ಅದು 30-40 ಆಗಿದ್ದರೂ ಅಚ್ಚರಿಯಿಲ್ಲ. ಅಷ್ಟೊಂದು ಜನಪ್ರಿಯ ಅವರ ಈ ಕೃತಿ ಮತ್ತು ಆ ಧ್ವನಿಸುರುಳಿ. ಆ ನಂತರದಲ್ಲಿ ಸುಗಮ ಸಂಗೀತದಲ್ಲಿ ಕನ್ನಡದ ಧ್ವನಿಸುರಳಿಗಳು ನಡೆಸಿದ ಕ್ರಾಂತಿ ಅಪಾರವಾದದ್ದು ಎಂಬುದು ನಮಗೆ ತಿಳಿದ ವಿಚಾರ.
ಕವಿಯಾಗಿ ನಿಸಾರರು ‘ಮನಸ್ಸು ಗಾಂಧಿಬಜಾರು’, ‘ನಿತ್ಯೋತ್ಸವ’, ‘ನೆನೆದವರ ಮನದಲ್ಲಿ’, ‘ನಾನೆಂಬ ಪರಕೀಯ’, ‘ಅನಾಮಿಕ ಆಂಗ್ಲರು’, ‘ಸುಮಹೂರ್ತ’, ‘ಸಂಜೆ ಐದರ ಮಳೆ’, ‘ಸ್ವಯಂ ಸೇವೆಯ ಗಿಳಿಗಳು’ ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಗದ್ಯ ಸಾಹಿತ್ಯದಲ್ಲಿ ‘ಅಚ್ಚುಮೆಚ್ಚು’, ‘ಇದು ಬರಿ ಬೆಡಗಲ್ಲೋ ಅಣ್ಣ’ ಮುಂತಾದವು ಅವರ ಪ್ರಮುಖ ಕೃತಿಗಳು. ಷೇಕ್ಸ್ ಪಿಯರನ 'ಒಥೆಲ್ಲೊ' ಹಾಗೂ 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ಕೃತಿಗಳನ್ನು ಕೂಡಾ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಚಿಲಿ ದೇಶದ ಕವಿ ಪಾಬ್ಲೋ ನೆರುಡಾ ಅವರ ಕವನವನ್ನು ‘ಬರೀ ಮರ್ಯಾದಸ್ತರೆ’ ಎಂಬ ಹೆಸರಿನಲ್ಲಿ ರೂಪಾಂತರಿಸಿದ್ದಾರೆ. ಕವಿ ಇಕ್ಬಾಲ್ ಅವರ ಕೃತಿ ‘ಸಾರೇ ಜಹಾಂಸೆ ಅಚ್ಚ’ ಕೃತಿಯನ್ನು ಕೂಡ ಕನ್ನಡಕ್ಕೆ ತಂದಿದ್ದಾರೆ.
ಪದ್ಮಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿಯವರೆಗೆ ಹಲವಾರು ಪ್ರಶಸ್ತಿ ಗೌರವಗಳು ನಿಸಾರರನ್ನು ಅಲಂಕರಿಸಿದ್ದವು. ನಮ್ಮ ಪುಣ್ಯಫಲವಾಗಿ ನಮ್ಮ ದೇಶದಲ್ಲಿ ಉತ್ತಮ ಬಾಂಧವ್ಯ ಬೆಸೆದು ನಮ್ಮನ್ನೆಲ್ಲ ಉಳಿಸಲು ನಿಸಾರ್ ಅಹಮದ್ ಅಂತಹ ಹೃದಯವಂತ ಪ್ರತಿಭಾವಂತರು ನಮ್ಮ ಕಾಲದಲ್ಲಿ ಅವತರಿಸಿದ್ದರು. ಇಂತಹ ಭಾಗ್ಯವೂ ಮರೆಯಾಯಿತಲ್ಲ ಎಂದು ಯಾರಿಗೆ ಹೇಳುವುದು?
ಈ ಸಂದರ್ಭದಲ್ಲಿ ಅವರ ಕವನ ‘ರಾಮನ್ ಸತ್ತ ಸುದ್ಧಿ’ ನೆನಪಾಗುತ್ತಿದೆ. ಆ ಕವನದಲ್ಲಿ ವಿಜ್ಞಾನದ ಚಿಂತನೆಯ ನಿಸಾರ್ ಅವರು ಡಾ. ಸಿ.ವಿ. ರಾಮನ್ ಹೋಗಿಬಿಟ್ಟರು ಎಂಬ ನೋವಿನ ಸುದ್ಧಿಯನ್ನು ಯಾರ ಬಳಿಯಲ್ಲಿ ಹೇಳಿಕೊಳ್ಳಬೇಕು ಎಂದೆನಿಸಿದಾಗ ಊರಿನ ಹಲವು ತೋಟಗಳಲ್ಲಿನ ಕೆಲಸದಾಳು ಹನುಮ ಎದುರಾಗುತ್ತಾನೆ. ಅವನ ಬಳಿ 'ರಾಮನ್ ಹೋಗಿ ಬಿಟ್ಟರೋ ಹನುಮ' ಎಂದು ಹೇಳಬೇಕೆನಿಸಿದಾಗ, ತನ್ನದೇ ಆದ ಸೀಮಿತ ಪ್ರಪಂಚದಲ್ಲಿ ಮುಳುಗಿರುವ ಆತನ ಬಳಿ ಹೇಳಲಾರದೆ ಬಾಯಿ ಕಟ್ಟುತ್ತದೆ. ಒಂದು ಕಡೆ ರಾಮನ್, ಮತ್ತೊಂದು ಕಡೆ ಹನುಮ, ಮತ್ತೊಂದು ಕಡೆ ಸ್ವಯಂ ಕವಿ. ತನ್ನದೇ ಆದ ಸೀಮಿತ ಪ್ರಪಂಚದಲ್ಲಿ ಬದುಕುವ ಹನುಮನಿಗೆ ರಾಮನ್ ವಿಚಾರ ನಿಲುಕುವಂತದ್ದಲ್ಲ. ಆತ ಕವಿಯಂತೆ ಪದ್ಯ ಬರೆಯಲಾರ.......
ಲೋಕದ ಪ್ರತಿನಿತ್ಯದ ಆಗು-ಹೋಗುಗಳಿಗೆ ಪ್ರತಿಕ್ರಿಯಿಸುವ
ಸೂಕ್ಷ್ಮತೆ ಕಂಡಿಲ್ಲ; ಅನೇಕ ಮಟ್ಟದಲ್ಲಿ ಬಾಳುವ ಪ್ರಶ್ನೆಯೇ
ಉದ್ಭವಿಸಿಲ್ಲ-ಆದರೂ ತೃಪ್ತ...
ಗದ್ದೆ, ಧಣಿ, ಹ್ಯಾಪ ಮೊಲೆಯ ಹೆಂಡಿರು, ಸಿಂಬಳಸುರುಕ ಮಕ್ಕಳು,
ದೇವರ ಗ್ರಾಮ್ಯ ಕಲ್ಪನೆ, ಊರಿನ ಪುಢಾರಿ-ಇಷ್ಟೇ ಜಗತ್ತು-ಆದರೂ ತೃಪ್ತ...
ಹೀಗೆ ಸಾಗುವ ಚಿಂತನೆ ಕೊನೆಗೆ ಎಲ್ಲರೂ ಒಂದು ದಿನ ಸಾಯುತ್ತೇವೆ. ನಮ್ಮದು ಮತ್ತೊಬ್ಬನದು ಎಂಬ ಜಗತ್ತು ಇವೆಲ್ಲವುಗಳ ನಶ್ವರತೆ ಅರಿವಾಗುತ್ತಾ ಹೋದಂತೆ “..ಕೊರಲು ಬಿಗಿದು ಒಬ್ಬಂಟಿ ನಿಧಾನ ನಡೆದಂತೆ ರಾಮನ್ ಸತ್ತ ತೀವ್ರತೆ, ಕಳವಳ ತಣ್ಣಗಾಯಿತು...” ಎಂಬ ಮಾತುಗಳಲ್ಲಿ ಓದುಗನನ್ನು ವಿಶಿಷ್ಟ ಲೋಕಕ್ಕೆ ಕೊಂಡೊಯ್ಯುತ್ತವೆ.
ಹೀಗೆ ಬರೆದ ನಿಸಾರ್ ಅಹಮದ್ ಕೂಡಾ ಹೋಗಿಬಿಡಬಹುದು ಎಂಬ ಸತ್ಯ ಅರಿವಾಗಿದ್ದು ಅವರು 2020ರ ಮೇ 3ರಂದು ಹೋದರು ಎಂಬ ಸುದ್ಧಿ ಓದಿದಾಗಲೇ! 😢. ಇಂತಹ ಮಹನೀಯರನ್ನು ನೆನೆಯವುದೇ ನಿಜಕ್ಕೂ ನಮ್ಮ ಬದುಕಿನ ನಿತ್ಯೋತ್ಸವ 🌷🙏🌷
On Rememberance day of Dr.K.S. Nissar Ahmed
ಕಾಮೆಂಟ್‌ಗಳು