ಅಹೋಬಲ ಶಂಕರ
ಅಹೋಬಲ ಶಂಕರ
ರಬೀಂದ್ರನಾಥ ಠಾಗೂರರಂತಹ ಮಹನೀಯರ ಕೃತಿಗಳನ್ನು ಸುಂದರವಾಗಿ ಕನ್ನಡಿಗರಿಗೆ ತಂದುಕೊಟ್ಟ ಮಹನೀಯರು ಅಹೋಬಲ ಶಂಕರರು.
ಅಹೋಬಲ ಶಂಕರ 1913ರ ಮೇ 15ರಂದು ಬೆಂಗಳೂರಿನ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದರು. ನ್ಯಾಶನಲ್ ಹೈಸ್ಕೂಲ್ ಮತ್ತು ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಅವರ ತಂದೆಗೆ ಹನ್ನೆರಡು ಮಕ್ಕಳು. ಓದಿದವರು ಇವರೊಬ್ಬರೇ. ಮೈಸೂರಿಗೆ ಹೋಗಿ ಸಾಹಿತ್ಯವನ್ನು ಓದಬೇಕೆಂಬ ಆಸೆ ಇತ್ತಾದರೂ ಹಣಕಾಸಿನ ಪರಿಸ್ಥಿತಿಯಿಂದ ಸಾಧ್ಯವಾಗದೆ ಬೆಂಗಳೂರಿನಲ್ಲೇ ಬಿ.ಎಸ್ಸಿ ಓದಿದರು.
ಚಿಕ್ಕವಯಸ್ಸಿನಿಂದಲೇ ಅಹೋಬಲ ಶಂಕರರಿಗೆ ಓದುವ ಹುಚ್ಚು. ಇಂಗ್ಲೀಷ್ ಸಾಹಿತ್ಯದಲ್ಲೂ ಅಪಾರ ಅಭಿರುಚಿ. ಕನ್ನಡ, ಇಂಗ್ಲಿಷ್ ಅಲ್ಲದೆ ಜರ್ಮನ್, ಫ್ರೆಂಚ್ ಮತ್ತು ನಾರ್ವೇಜಿಯನ್ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದರು. ಹರೆಯದಲ್ಲಿ ಸಾಹಿತ್ಯಕ್ಕಿಂತ ಹೆಚ್ಚು ರಾಜಕೀಯ ಚಳವಳಿಗಳ ಪ್ರಭಾವ ಅವರ ಮೇಲುಂಟಾಯಿತು. ಹೀಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಮಹಾತ್ಮಗಾಂಧಿಯವರು ನಡೆಸಿದ್ದ ಬ್ರಟಿಷ್ ಸರ್ಕಾರದ ವಿರುದ್ಧದ ಪ್ರಚಾರ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು.
ಜೀವನೋಪಾಯಕ್ಕಾಗಿ ಮುಂಬೈಗೆ ಹೋದ ಶಂಕರರು ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಪತ್ರಿಕೋದ್ಯೋಗಿಯ ಕೆಲಸ ನಿರ್ವಹಿಸ ತೊಡಗಿದರು. ಎರಡನೇ ಮಹಾಯುದ್ಧಕಾಲದಲ್ಲಿ ಬರ್ಮಾ ಮುಂತಾದೆಡೆಗಳಿಂದ ಬಂದ ನಿರಾಶ್ರಿತರ ಶಿಬಿರಗಳಲ್ಲಿ ಸೇವೆ ಸಲ್ಲಿಸಿದರು.
ಮುಂಬೈನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್, ಫ್ರೀ ಪ್ರೆಸ್ ಜರ್ನಲ್ ಗಳಲ್ಲಿ ಕೆಲಸ ಮಾಡುತ್ತಿದ್ದಾಗ ಅಹೋಬಲ ಶಂಕರರು ಬರೆಯುತ್ತಿದ್ದ ಅಂಕಣ ‘ಫ್ರಮ್ ದ ಈಸೀ ಚೇರ್’ ಮತ್ತು ಸಂಪಾದಕೀಯಗಳು ಅವುಗಳ ನೇರ, ದಿಟ್ಟ ನಿಲುವುಗಳಿಗಾಗಿ ಮತ್ತು ಸ್ವಾರಸ್ಯಕರ ಶೈಲಿಗಾಗಿ ಅಪಾರ ಜನಪ್ರಿಯತೆ ಪಡೆದಿದ್ದುವು. ಚಿಕ್ಕವಯಸ್ಸಿನಿಂದಲೇ ಓದುವ ಹುಚ್ಚು ಹಿಡಿಸಿಕೊಂಡಿದ್ದ ಅವರು ಮೊದಲಿಂದ ಎಡಪಂಥೀಯರು.
ಕನ್ನಡ ಓದುಗರಿಗೆ ವಿಶ್ವಕವಿ ರವೀಂದ್ರನಾಥ ಠಾಗೂರರ ಸಾಹಿತ್ಯವನ್ನು ಪರಿಚಯಿಸಿದವರು ಅಹೋಬಲ ಶಂಕರರು. ರವೀಂದ್ರನಾಥ ಠಾಗೂರರ ಸುಮಾರು ಮೂರುಸಾವಿರ ಪುಟಗಳಿಗೂ ಹೆಚ್ಚು ಸಾಹಿತ್ಯ ಅಹೋಬಲ ಶಂಕರ ಅವರಿಂದ ಕನ್ನಡಿಗರಿಗೆ ಲಭ್ಯವಾಗಿವೆ. ಇವುಗಳಲ್ಲಿ ಸಣ್ಣ ಕಥೆಗಳು (ರವೀಂದ್ರ ಕಥಾಮಂಜರಿ- 1, 1962, ರವೀಂದ್ರ ಕಥಾಮಂಜರಿ-2, 1963, ರವೀಂದ್ರ ಕಥಾಮಂಜರಿ-3, 1969ರಲ್ಲಿ ಪ್ರಕಟವಾಗಿವೆ) ನಾಟಕಗಳು, ಆತ್ಮವೃತ್ತ, ಕಾದಂಬರಿಗಳು ಅನುವಾದವಾಗಿವೆ. ಇವಲ್ಲದೆ ಬಂಗಾಲಿಯ ಬೇರೆ ಪ್ರಮುಖ ಲೇಖಕರಾದ ವಿಭೂತಿಭೂಷಣ ವಂದೋಪಾಧ್ಯಾಯರ "ಪಥೇರ ಪಾಂಚಾಲಿ (ಮಹಾಯಾತ್ರಿಕ), ವಿಮಲಮಿತ್ರರ "ಸಾಹೇಬ ಬೀಬಿ ಗುಲಾಮ", ಮಣಿಕ್ ಬ್ಯಾನರ್ಜಿಯವರ ಬೊಂಬೆ ಕುಣಿತದ ಕಥಾಪ್ರಸಂಗ", ಬಿರೇನ್ ದಾಸರ "ಆರ್ ದೂರ್ ಪಾಥ"(ಇನ್ನೂ ದೂರದ ದಾರಿ), ಬಂಕಿಮಚಂದ್ರ ಮತ್ತು ಶರಶ್ಚಂದ್ರರ ತಲಾ ಎರಡು ಕಾದಂಬರಿಗಳು ಹೀಗೆ ಅವರು ಅನುವಾದಿಸಿದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೆಲವನ್ನು ಇಂಗ್ಲಿಷಿಗೂ ಅನುವಾದಿಸಿದ್ದಾರೆ.
"ಜಗತ್ತಿನ ಎಲ್ಲ ಶ್ರೇಷ್ಠ ಕೃತಿಗಳು ಕನ್ನಡಕ್ಕೆ ಬರಬೇಕು, ಕನ್ನಡ ಸಾಹಿತ್ಯ ಬೆಳೆಯಬೇಕು, ಪಂಪ, ರನ್ನ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ, ಬೇಂದ್ರೆಯವರ ಕೃತಿಗಳಂತೆ ಇತರ ಭಾಷೆಯ ಕೃತಿಗಳನ್ನು ಕನ್ನಡದವರು ಓದಬೇಕು" ಎಂಬ ಪ್ರಾಮಾಣಿಕ ತುಡಿತ ಅವರಲ್ಲಿತ್ತು. ಹೀಗಾಗಿ ಮುಂಬಯಿಯ ಯಾಂತ್ರೀಕೃತ ಜೀವನದಲ್ಲಿ, ಆ ಗಡಿಬಿಡಿ, ಗೌಜು ಗದ್ದಲದ ಮಧ್ಯೆಯೂ ಅವರ ಅನುವಾದ ಕಾರ್ಯ ನಿರಾತಂಕವಾಗಿ ನಡೆಯಿತು. ಸೃಜನಶೀಲ ಸಾಹಿತಿಯಷ್ಟೇ ಚೆನ್ನಾಗಿ ಬರೆಯಬಲ್ಲ ಸಾಮರ್ಥ್ಯವಿದ್ದ ಶಂಕರರು ತಮ್ಮನ್ನು ತೊಡಗಿಸಿಕೊಂಡದ್ದು ಅನುವಾದದ ಕಾರ್ಯದಲ್ಲಿ. ಸಾಹಿತ್ಯ ಬರವಣಿಗೆಗೆ ಯಾವ ಸ್ಥಾನವಾದರೇನು? ಒಂದು ಉತ್ತಮ ಕೃತಿ ಓದುಗರನ್ನು ತಲುಪಬೇಕು. ಅವರೂ ಜ್ಞಾನಾರ್ಜನೆಯ ರಸಾನುಭವ ಪಡೆಯಬೇಕು ಎಂದಷ್ಟೇ ಅವರ ಆಶಯವಾಗಿತ್ತು. ಅಹೋಬಲ ಶಂಕರರಿಗೆ ಬರವಣಿಗೆಯಷ್ಟೇ ಪ್ರಿಯವಾಗಿದ್ದುದು ಓದು-ಅಧ್ಯಯನ, ಸಿನಿಮಾ ವೀಕ್ಷಣೆ, ಸಮುದ್ರ ತೀರದ ತಿರುಗಾಟ,
‘ರವೀಂದ್ರ ಕಥಾಮಂಜರಿ-3’ ಪುಸ್ತಕದ ಮುನ್ನುಡಿಯಲ್ಲಿ ಅಹೋಬಲ ಶಂಕರರು ಹೀಗೆ ಬರೆಯುತ್ತಾರೆ: "ಕಥೆಗಳನ್ನು, ಸಾಹಿತ್ಯವನ್ನು ಓದುವ ಹುಚ್ಚು ಇರುವ ನನಗೆ ಅಸಾಧಾರಣ ಕೃತಿಗಳನ್ನು ಓದಿದಾಗಲೆಲ್ಲ ಒಂದು ಹೊಸ ಜನ್ಮ ಪಡೆದ ದಿವ್ಯಾನುಭವ ಆಗುತ್ತದೆ. ತೃಪ್ತಿ, ಆನಂದದಿಂದ ಹೃದಯ ಉಕ್ಕಿ ಬಂದು ಕೃತಿಗಳನ್ನು ಎದೆಗೆ ತಬ್ಬಿಕೊಳ್ಳಬೇಕೆಂಬ ಹಂಬಲವಾಗುತ್ತದೆ.” ಇದೇ ಹಂಬಲ, ದಿವ್ಯಾನುಭವ ನಮಗೆ ಅಹೋಬಲ ಶಂಕರರ ಅನುವಾದಿತ ಕೃತಿ ಓದುವಾಗಲೂ ಆಗುತ್ತದೆ. ಮೂಲ ಕೃತಿಗೆ ಲೋಪ ಬರದಂತೆ ಅನುವಾದಿಸುವುದು ತೀರಾ ಪ್ರಯಾಸದ ಕೆಲಸ. ಅಹೋಬಲ ಶಂಕರರ ಅನುವಾದ ಓದುತ್ತಿದ್ದರೆ ಅದು ಅನುವಾದ ಎನಿಸುವುದೇ ಇಲ್ಲ. ಆ ಬಂಗಾಲಿ ಭಾಷೆಯ ಸತ್ವ, ಜನಜೀವನದ ಸೊಗಸು ನಮ್ಮನ್ನು ಸೆರೆಹಿಡಿಯುತ್ತವೆ.
ಅಹೋಬಲ ಶಂಕರರು ಸೆಪ್ಟೆಂಬರ್ 1997ರಲ್ಲಿ ಈ ಲೋಕವನ್ನಗಲಿದರು. ಅವರು ನಮಗೆ ಕೊಡುಗೆಯಾಗಿ ಕೊಟ್ಟ ಸಾಹಿತ್ಯದ ಸಿರಿ ಅತ್ಯಮೂಲ್ಯವಾದದ್ದು.
ಕೃತಜ್ಞತೆ: ಉಮಾರಾವ್ ಮತ್ತು ಎ ಪಿ ಮಾಲತಿಯವರ ಕೆಂಡ ಸಂಪಿಗೆಯ ಬರಹಗಳು ನನ್ನ ಈ ಲೇಖನಕ್ಕೆ ನೆರವಾಗಿವೆ. ಈ ಹಿರಿಯರಿಗೆ ನಾನು ಋಣಿಯಾಗಿದ್ದೇನೆ.
On the birth anniversary of great name in translations to Kannada Ahobala Shankara
ಕಾಮೆಂಟ್‌ಗಳು