ಬಿ. ವಿ. ವೈಕುಂಠರಾಜು
ಬಿ. ವಿ. ವೈಕುಂಠರಾಜು
ಬಿ. ವಿ. ವೈಕುಂಠರಾಜು ಪತ್ರಿಕೋದ್ಯಮ, ಸಾಹಿತ್ಯ, ವೈಚಾರಿಕತೆಗಳಲ್ಲಿ ಮಹಾನ್ ಪ್ರತಿಭೆ ಎನಿಸಿದ್ದವರು.
ಬಿ. ವಿ. ವೈಕುಂಠರಾಜು 1936ರ ಮೇ 15 ರಂದು ಚಿತ್ರದುರ್ಗ ಜಿಲ್ಲೆಯ ಗುಡ್ಡದ ರಂಗವ್ವನಹಳ್ಳಿಯಲ್ಲಿ ಜನಿಸಿದರು. ನಂತರದ ದಿನಗಳಲ್ಲಿ ಅವರ ಕುಟುಂಬವು ಚಿತ್ರದುರ್ಗದ ದೊಡ್ಡ ಪೇಟೆಗೆ ಸ್ಥಳಾಂತರಿಸಿತು. ವೈಕುಂಠರಾಜು ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟಗಳಲ್ಲಿ ಬೆಳೆದು ಬಂದ ಪ್ರತಿಭಾನ್ವಿತರು.
ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ನಾಡು ಕಂಡ ಪ್ರಖರ ಪ್ರತಿಭೆಗಳಲ್ಲಿ ವೈಕುಂಠರಾಜು ಕೂಡ ಒಬ್ಬರು. ‘ತಾಯಿನಾಡು’ ಮೂಲಕ ಪತ್ರಿಕಾರಂಗಕ್ಕೆ ಧುಮುಕಿದ ವೈಕುಂಠರಾಜು, ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು. ಆ ಪತ್ರಿಕೆಯ ಪ್ರಖ್ಯಾತ ‘ಸಾಪ್ತಾಹಿಕ ಪುರವಣಿ’ಯನ್ನು ರೂಪಿಸುವಲ್ಲಿ ವೈಕುಂಠರಾಜು ಅವರ ಪಾತ್ರ ಹಿರಿದಾದುದು. ಪತ್ರಕರ್ತರಾಗಿ, ಸಾಹಿತಿಯಾಗಿ ಸಾಗಿಬಂದ ಅವರ ದಾರಿಯೇ ಭಿನ್ನವಾದುದು. ಅಪಾರ ಅನುಭವಗಳನ್ನು ಬೆನ್ನಿಗಿಟ್ಟುಕೊಂಡು ತಮ್ಮದೇ ಆದ 'ವಾರಪತ್ರಿಕೆ’, ‘ರಾಜು ಪತ್ರಿಕೆ’, ‘ಗೋಧೂಳಿ' ಮುಂತಾದ ಪತ್ರಿಕೆಗಳನ್ನು ಆರಂಭಿಸಿದ ವೈಕುಂಠರಾಜು, ನಾಡಿನ ಜನರ ದನಿಯಾಗಿ, ಮೆಚ್ಚಿನ ಪತ್ರಿಕೆಗಳನ್ನಾಗಿ ರೂಪಿಸುವಲ್ಲಿ ಸಾಕಷ್ಟು ಶ್ರಮ ಸುರಿದಿದ್ದರು. ಹಾಗೆಯೇ ಆರ್ಥಿಕವಾಗಿ, ದೈಹಿಕವಾಗಿ ದಣಿದಿದ್ದರು. ಕಂಡದ್ದು ಕಂಡ ಹಾಗೆ ಹೇಳುವ ಗುಣದಿಂದಾಗಿ ಟಿಪಿಕಲ್ ಎಂಬ ಖ್ಯಾತಿ ಗಳಿಸಿದ್ದರು. ವೈಕುಂಠರಾಜು ಅವರ ‘ಸಂಪಾದಕರ ಡೈರಿ’ ಅಂಕಣ ಪ್ರಖ್ಯಾತವಾಗಿತ್ತು. ಈ ಅಂಕಣ ಬರಹ ಪುಸ್ತಕ ರೂಪದಲ್ಲಿಯೂ ಮೂಡಿಬಂದಿದೆ. ನಂತರದ ದಿನಗಳಲ್ಲಿ ರಾಜು ‘ವಿಜಯ ಕರ್ನಾಟಕ’ದ ‘ಸಾಂಸ್ಕೃತಿಕ ಲೋಕ’ ಅಂಕಣ ಮೂಡಿಸುತ್ತಿದ್ದರು.
ಕಥೆ, ಕಾದಂಬರಿ, ನಾಟಕ, ಚಿಂತನೆ ಹೀಗೆ ವಿವಿಧ ರೀತಿಯ ಸಾಧನೆ ಮಾಡಿದ ವೈಕುಂಠರಾಜು ಮೂವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಅವುಗಳಲ್ಲಿ ‘ಉದ್ಭವ’ ಮತ್ತು ‘ಆಕ್ರಮಣ’ ಚಲನಚಿತ್ರಗಳಾಗಿ ಜನಪ್ರಿಯಗೊಂಡಿವೆ. 'ಆಕ್ರಮಣ' ಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದರೆ, ‘ಉದ್ಭವ’ ಚಿತ್ರವನ್ನು ಕೋಡ್ಲು ರಾಮಕೃಷ್ಣ ನಿರ್ದೇಶನ ಮಾಡಿದ್ದಾರೆ. ‘ಸನ್ನಿವೇಶ’ ‘ಕಾನನದೇವಿ’ ಅವರ ಹೆಸರಾಂತ ನಾಟಕಗಳು. ತಮ್ಮ ಅನಾರೋಗ್ಯದ ದಿನಗಳಲ್ಲಿ ಸಹಾ ‘ವಾರ್ಡ್ ನಂಬರ್ 220’ ಎಂಬ ಕಾದಂಬರಿ ಬರೆದರು. ‘ತಹ ತಹ’ ಅವರ ಆತ್ಮಚರಿತ್ರೆಯಾಗಿದೆ. ಈ ಕೃತಿಯಲ್ಲಿ ಕರ್ನಾಟಕದ ಸಾಹಿತ್ಯ, ಸಾಂಸ್ಕೃತಿಕ, ಕಲೆ, ಜನಜೀವನ, ರಾಜಕೀಯದ ಒಳಸುಳಿಗಳು, ಪತ್ರಿಕೋದ್ಯಮದ ಒಳ-ಹೊರಗುಗಳು ಅನಾವರಣಗೊಂಡಿವೆ. 'ಆಧುನಿಕ ನೀತಿ ಕತೆಗಳು', 'ಸಿನಿಮಾತು' ಮುಂತಾದವು ಅವರ ಇನ್ನಿತರ ಜನಪ್ರಿಯ ಕೃತಿಗಳಾಗಿವೆ.
ಹಲವಾರು ನಿಟ್ಟಿನಲ್ಲಿ ಸೇವೆ ಸಲ್ಲಿಸಿದ್ದ ವೈಕುಂಠರಾಜು ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ವೈಕುಂಠರಾಜು ಅವರಿಗೆ ರಾಜ್ಯ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ವರ್ಧಮಾನ, ತರಂಗಿಣಿ ಪ್ರಶಸ್ತಿ ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳು ಸಂದಿದ್ದವು. ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಗೌರವವನ್ನು ಸಲ್ಲಿಸಿತ್ತು.
ವೈಕುಂಠರಾಜು 2010ರ ಜನವರಿ 30ರಂದು ಈ ಲೋಕವನ್ನಗಲಿದರು. ತಮ್ಮ ದೇಹವನ್ನು ಕೂಡಾ ವೈದ್ಯಕೀಯ ಉದ್ದೇಶಗಳಿಗಾಗಿ ಬಳಕೆಯಾಗುವಂತೆ ಬದುಕಿದ ಹಿರಿಯ ಜೀವ ಅವರದು. ನಾಡಿನ ಕಳಕಳಿಯ ಧ್ವನಿಯಾಗಿ ವೈಕುಂಠರಾಜು ಅವರು ಭಿತ್ತಿಹೋದ ಚಿಂತನೆಗಳು ಅವರ ಅಭಿಮಾನೀ ಬಳಗದಲ್ಲಿ ನಿರಂತರವಾಗಿ ಉಳಿಯುವಂತದ್ದಾಗಿದೆ.
On the birth anniversary of great writer and journalist B.V. Vaikuntaraju
ಕಾಮೆಂಟ್ಗಳು