ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾ. ಮಂ. ಕೃಷ್ಣರಾಯ


 ಶಾ. ಮಂ. ಕೃಷ್ಣರಾಯ


ಶಾ. ಮಂ. ಕೃಷ್ಣರಾಯರು ಗೋವೆಯ ನೆಲದಲ್ಲಿ ಕನ್ನಡದ ಅಸ್ಥಿತ್ವವನ್ನು ಉಳಿಸಿ ಬೆಳೆಸುವಲ್ಲಿ ಅಪಾರ ಕೆಲಸ ಮಾಡಿದವರು. ಸಾಗಿತ್ಯ ಮತ್ತು ಸಾಹಿತ್ಯ ಪರಿಚಾರಿಕೆಯಲ್ಲೂ ಅವರು ಅಗಾಧ ಕೆಲಸ ಮಾಡಿದ್ದಾರೆ.

ಕೃಷ್ಣರಾಯರು 1942ರ ಜೂನ್ 1ರಂದು 
ಬೆಳಗಾವಿಯಲ್ಲಿ ಜನಿಸಿದರು. ತಂದೆ ಮಂಜುನಾಥ ಶ್ಯಾನಭಾಗ. ತಾಯಿ ಗಂಗಾದೇವಿ. ಪ್ರಾರಂಭಿಕ ಶಿಕ್ಷಣದಿಂದ ಹೈಸ್ಕೂಲುವರೆಗಿನ ವಿದ್ಯಾಭ್ಯಾಸ ಸಿದ್ಧಾಪುರದಲ್ಲಿ ನಡೆಯಿತು. ಉದ್ಯೋಗದ ನಿಮಿತ್ತ ತಂದೆಯವರು ಗೋವಾಗೆ ವಾಸ್ತವ್ಯವನ್ನು ಬದಲಿಸಿದ್ದರಿಂದ ಇವರ ಕಾಲೇಜು ಶಿಕ್ಷಣ ಗೋವಾದಲ್ಲಿ ನಡೆಯಿತು. 

ಕೃಷ್ಣರಾಯರು ವಿದ್ಯಾಭ್ಯಾಸಕ್ಕೆ ಅಡೆತಡೆಯುಂಟಾಗಿ ಬೋಧಕವೃತ್ತಿ ಆಯ್ಕೆ ಮಾಡಿಕೊಂಡರು. ಇದಕ್ಕೆ ಮುಂಚೆಯೂ ಸಿದ್ಧಾಪುರ ತಾಲ್ಲೂಕಿನಲ್ಲಿ ಅಳವಳ್ಳಿ ಶಾಲೆಯಲ್ಲಿ ಕೆಲಕಾಲ ಸೇವೆ ಸಲ್ಲಿಸಿದ್ದರು. ಬಾಹ್ಯವಿದ್ಯಾರ್ಥಿಯಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ನಂತರ ಬಿ.ಎಡ್. ಪದವಿಗಳನ್ನು ಗಳಿಸಿದರು. ಗೋವಾದ ಗೌರ್ನಮೆಂಟ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿ ಜ್ಯೂನಿಯರ್ ಕಾಲೇಜು ಮಟ್ಟದ ತರಗತಿಗಳಿಗೂ ಬೋಧಿಸಿ, 42 ವರ್ಷಗಳ ಸೇವೆಯ ನಂತರ ನಿವೃತ್ತಿ ಪಡೆದರು. 

ಕೃಷ್ಣರಾಯರು ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಒಂದು ದೀಕ್ಷೆ ಎಂಬಂತೆ ಸ್ವೀಕರಿಸಿ, ಅಲ್ಲಿದ್ದ ಕೇವಲ 813 ಕನ್ನಡಿಗರಿಗೆ (1961 ಜನಗಣತಿ ಪ್ರಕಾರ) ಕನ್ನಡ ಕಲಿಸಲು ಪಣತೊಟ್ಟರು. ಬಹುತೇಕ ಇದ್ದ ಕನ್ನಡಿಗರು ಕೆಳದರ್ಜೆಯ ನೌಕರರೇ. ಮನೆಯೊಳಗೆ ಅಲ್ಪಸ್ವಲ್ಪ ಕನ್ನಡ ಧ್ವನಿ ಕೇಳಬಹುದಿತ್ತೇ ವಿನಃ ರಸ್ತೆಗಿಳಿದರೆ ಕೊಂಕಣಿ ಚಾಲ್ತಿಯಲ್ಲಿತ್ತು. ತೋಟ, ತಳವಾರರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೊರಟರೆ ಇವರು ಆ ಮಕ್ಕಳನ್ನು ಒಂದೆಡೆ ಕೂಡಿಹಾಕಿ ಕನ್ನಡಭಾಷೆ ಕಲಿಸಿದರು. ಹೀಗೆ ಕನ್ನಡದ ಕಂಪು ಮನೆಯಿಂದ ಹೊರಗೂ ಬಂದು ರಸ್ತೆಯಂಚಿನಲ್ಲಿ ಇಬ್ಬರು ನಿಂತು ಮಾತನಾಡಿದರೆ ಕನ್ನಡದ ಸ್ವರ ಕೆಳತೊಡಗಿತು. ಮಡಗಾಂವ್ ಸ್ಥಳವನ್ನೇ ತಮ್ಮ ಕಾರ್ಯಕ್ಷೇತ್ರವೆಂದು ಆಯ್ಕೆ ಮಾಡಿಕೊಂಡು ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ನಡೆಸಲು 1963ರಲ್ಲಿ ಗೋವಾ ಕನ್ನಡ ಸಂಘ ಪ್ರಾರಂಭಿಸಿದರು. ಹೊಟ್ಟೆಪಾಡಿನ ಉದ್ಯೋಗದ ನಡುವೆಯೂ ಛಲಬಿಡದೆ ಕೈಯಿಂದಲೇ ಹಣತೆತ್ತು ಕನ್ನಡ ಕಾರ್ಯಕ್ರಮಗಳನ್ನು ನಡೆಸಿ ಕನ್ನಡವನ್ನು ಪಸರಿಸುವ ಕೈಂಕರ್ಯವನ್ನು ಕೈಗೊಂಡರು. ಸಾಹಿತಿಗಳು, ಸಂಗೀತಗಾರರನ್ನು ಕರೆಸಿ ಕನ್ನಡದ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಇವರ ಸಾಹಿತ್ಯ ಕಾರ್ಯಕ್ರಮಕ್ಕೆ ಪಂಡಿತ ಶಿವಮೂರ್ತಿ ಶಾಸ್ತ್ರಿ, ರಾ.ಯ. ಧಾರವಾಡಕರ್, ಪಾಟೀಲ ಪುಟ್ಟಪ್ಪ, ಅ.ನ.ಕೃ ಮು,ತಾದ ದಿಗ್ಗಜರುಗಳನ್ನೇ ಕರೆಸಿದಂತೆ ಮಲ್ಲಿಕಾರ್ಜುನ ಮನಸೂರ್, ಬಸವರಾಜ ಮನಸೂರ್, ಏಣಗಿ ಬಾಳಪ್ಪ, ಮಾಸ್ಟರ್ ಹಿರಣ್ಣಯ್ಯ ಮುಂತಾದ ಕಲಾವಿದರು, ಸಿನಿಮಾ ನಟರಾದ ರಾಂಗೋಪಾಲ್, ಶ್ರೀನಿವಾಸಮೂರ್ತಿ ಮುಂತಾದವರೆಲ್ಲರೂ ಕರೆಸಿ ಕಾರ್ಯಕ್ರಮ ಮಾಡಿದರು. 

ಶಾ. ಮಂ. ಕೃಷ್ಣರಾಯರು ಕನ್ನಡ ಪ್ರಚಾರಕ್ಕಾಗಿ ಹಂತಹಂತವಾಗಿ ಕಾಯರ್ಕ್ರಮಗಳನ್ನು ರೂಪಿಸಿದ್ದರ ಜೊತೆಗೆ ಕನ್ನಡ ಓದುವುದರ ಬಗ್ಗೆಯೂ ಆಸ್ಥೆ ಬೆಳೆಯುವಂತೆ ಮಾಡಲು ಪುಸ್ತಕಗಳ ಪ್ರಕಟಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ನಾಟಕಾಭಿನಯಕ್ಕೂ ಒತ್ತು ಕೊಟ್ಟು ತಾವೇ ರಚಿಸಿದ ನಾಟಕಗಳಾದ ರಾಜಧರ್ಮ (ಪೌರಾಣಿಕ), ಬಂಡಲ್ ಬಹದ್ದೂರ್, ಮುದ್ದಾಳರು, ಮಾಮೂಲು (ಸಾಮಾಜಿಕ ನಾಟಕಗಳು) ಮುಂತಾದ ನಾಟಕಗಳನ್ನು ಪ್ರಕಟಸಿ ರಂಗದ ಮೇಲೆ ಪ್ರದರ್ಶಿಸಿದರು. 

ಕೃಷ್ಣರಾಯರು ಗೋವೆಯ ದೇವಾಲಯಗಳ ಬಗ್ಗೆ ಕರ್ನಾಟಕದಲ್ಲಿದ್ದವರಿಗೆ ತಿಳಿಸಲು ಬರೆದ ಪುಸ್ತಕ ‘ದೇವಭೂಮಿ ಗೋಮಂತಕ’. ಗೋವಾ ಸೌಂದರ್ಯವನ್ನು ವಿವರಿಸುವ ಕೃತಿ ‘ಸೌಂದರ್ಯನಿಧಿ ಗೋವಾ’. ಇದಲ್ಲದೆ ‘ಗೋವಾ ಕದಂಬ ಕುಲ’, ವರಕವಿ ತಿಪ್ಪಯ್ಯ ಮಾಸ್ತರರು, ಬಸವರಾಜ ಮನ್ಸೂರ್, ಹಾವನೂರು ಸಂಸ್ಥಾನ, ಬಳ್ಳಾರಿ ಬೀಚಿ, ಅ.ನ.ಕೃಷ್ಣರಾಯ, ಮನ್ಸೂರರ ಮನೆತನದ ವ್ಯಕ್ತಿ ಚಿತ್ರಣ ನೀಡುವ ‘ಚಿಗುರು ನೆನಪು’ ಎಸ್.ಎನ್. ಕೇಶವನ್ ಅವ‌ರ ಜೀವನ ಚಿತ್ರಣದ ‘ಬೆಳಕಿನ ಬದುಕು’, ನಟಶೇಖರ ಬಸವರಾಜ ಮನ್ಸೂರ್, ಪಾಪು (ಪಾಟೀಲ ಪುಟ್ಟಪ್ಪ), ಕುಂಚ ಬ್ರಹ್ಮ ಮಡಿವಾಳಪ್ಪ ಮಿಣಜಿಗಿ, ಮಹಾತ್ಮ ಜ್ಯೋತಿರಾವ್ ಪುಲೆ, ದಾಮೋದರ ಮಾವಜೊ ವಾಚಿಕೆ ಮುಂತಾದ ಅನೇಕ ಕೃತಿಗಳನ್ನು  ಪ್ರಕಟಿಸಿದರು. ಅ.ನ.ಕೃ. ಅವರ ಮೇಲಿನ ಪ್ರೀತಿಗಾಗಿ, ಅವರೊಡಗೂಡಿದ ಒಡನಾಟಕ್ಕಾಗಿ, ಅವರ ತತ್ತ್ವಾದರ್ಶಗಳಿಗಾಗಿ, ಅವರ ಸಾಹಿತ್ಯ ಪ್ರೀತಿಗಾಗಿ, ಅವರ ಕನ್ನಡ ನಾಡು-ನುಡಿಯ ಮೇಲಿನ ನಿಷ್ಠೆಗಾಗಿ ಅ.ನ.ಕೃ.ರವರ ಹೆಸರನ್ನು ಚಿರಸ್ಥಾಯಿಗೊಳಿಸಲು ಕೈಗೊಂಡ ಕಾರ್ಯಕ್ರಮವೆಂದರೆ ನಾಡಿನ ಹಿರಿ-ಕಿರಿಯ ಲೇಖಕರಿಂದ ಲೇಖನಗಳನ್ನು ಬರೆಸಿ ಪ್ರಕಟಿಸಿದ ಅಭಿನಂದನ ಗ್ರಂಥ ‘ರಸಚೇತನ’ (1970). 

ಅಂದು ಪುಸ್ತಕಗಳ ಮಾರಾಟವೂ ಒಂದು ಸಮಸ್ಯೆಯೇ.  ಕೃಷ್ಣರಾಯರು ಸಂಪಾದಕರಾಗಿ ಪುಸ್ತಕ ಪ್ರಕಟಸಿ ಆದದ್ದು ನಷ್ಟವೇ. ಆದರೂ ಧೃತಿಗೆಡದೆ 1972 ಮತ್ತು 1973ರಲ್ಲಿ ಅ.ನ.ಕೃರವರ ‘ಬರಹಗಾರನ ಬದುಕು’ ಮತ್ತು ಚಿರಚೇತನ (ಮುನ್ನುಡಿಗಳ ಸಂಗ್ರಹ) ಕೃತಿಗಳನ್ನು ಪ್ರಕಟಿಸಿದರು. 1977ರಲ್ಲಿ ಬೀಚಿಯವರ ಬಗ್ಗೆ ಹೊರತಂದ ಅಭಿನಂದನ ಗ್ರಂಥ ತಿಂಮದರ್ಶನ. ಇದು ಹಾಸ್ಯಸಾಹಿತ್ಯದ ಮೈಲಿಗಲ್ಲು ಎನಿಸಿದ ಕೃತಿಯಾಗಿ 2008ರಲ್ಲಿ ವಿಸ್ತೃತ ಆವೃತ್ತಿಯಾಗಿಯೂ ಪ್ರಕಟವಾಯಿತು. ಇದಲ್ಲದೆ ಡಾ.ವಿ.ಎಸ್. ಸೋಂದೆಯವರ ‘ಜನಸೇವಕ’, ಡಾ.ಬಿ.ಎಸ್. ಸ್ವಾಮಿಯವರ ‘ಮಧುವ್ರತ’ ಮುಂತಾದ ಗೌರವಗ್ರಂಥಗಳನ್ನೂ ಸಂಪಾದಿಸಿದರು. 

ಕೃಷ್ಣರಾಯರು ಹಲವಾರು ಗ್ರಂಥಗಳನ್ನು ಕೊಂಕಣಿಯಿಂದ ಕನ್ನಡಕ್ಕೆ ಅನುವಾದಿಸಿ ಕೊಂಕಣಿ ಕನ್ನಡಿಗರ ಸ್ನೇಹಸೇತುವೂ ಆದರು. ಅವುಗಳಲ್ಲಿ ‘ರಶ್ಮಿ’ (ಕೊಂಕಣಿ ಕವಿತೆಗಳು), ‘ಮಗುವಿನ ಭಾಗಜಗತ್ತು’ (ಕೊಂಕಣಿ ಕಥಾಸಂಗ್ರಹ) ಮುಂತಾದವುಗಳನ್ನು ಕೊಂಕಣಿಯಿಂದಲ್ಲದೆ ‘ಯುಗ ಪ್ರವರ್ತಕ ಜೀವೊತ್ತಮತೀರ್ಥರು’ ಕೃತಿಯನ್ನು ಮರಾಠಿಯಿಂದ ಅನುವಾದಿಸಿದರು. ಇದಲ್ಲದೆ ಸಮರಸ, ಕದಂಬ, ಅಭಿನಂದನ, ಕದಿರು, ಸಿಂಗಾರ, ಸ್ಮರಣೆ, ಚಂದನ, ಮಾಂಡವಿ, ರಶ್ಮಿ ಮುಂತಾದ ಸ್ಮರಣ ಸಂಚಿಕೆಗಳು ಮತ್ತು ನ್ಯಾಷನಲ್ ಬುಕ್‌ಟ್ರಸ್ಟ್‌ಗಾಗಿ ರಾಧೆಯಲ್ಲ, ರುಕ್ಮಿಣಿಯೂ ಅಲ್ಲ (ಹಿಂದಿಯಿಂದ – ಅಮೃತಾಪ್ರೀತಮ್) , ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ಕಾರ್ಮೆಲಿನ್ (ಕೊಂಕಣಿ-ಕಾದಂಬರಿ – ಲೇ. ದಾಮೋದರ ಮಾವಜೊ) ಮುಂತಾದವುಗಳನ್ನು ಪ್ರಕಟಿಸಿದರು. ಬೆಂಗಳೂರಿಗೆ ಬಂದು ನೆಲೆಸಿದಾಗ ನೂತನ ವಾರಪತ್ರಿಕೆಯ ಸಂಪಾದಕರ ಜವಾಬ್ದಾರಿಯನ್ನು ಕೆಲಕಾಲ ನಿರ್ವಹಿಸಿದರು. 

ಶಾ. ಮಂ. ಕೃಷ್ಣರಾಯರು ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದರು. ದೆಹಲಿಯ ಕೆ.ಕೆ. ಬಿರ್ಲಾ ಫೌಂಡೇಶನ್ ಪ್ರತಿನಿಧಿಯಾಗಿ, ಕೇಂದ್ರ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಯಾಗಿ, ಕೊಂಕಣಿ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿ ದುಡಿದರು.

ಶಾಮಂರವರಿಗೆ ದೆಹಲಿಯ ಕರ್ನಾಟಕ ಸಂಘದಿಂದ ‘ದೆಹಲಿ ಕನ್ನಡಿಗ’, ಕರ್ನಾಟಕ ಸಂಘ ಸಿದ್ಧಾಪುರ, ಬೆಳಗಾವಿ ಕಲಾವೃಂದ, ಗೋವಾ ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಶಿರಸಿಯ ಅರ್ಬನ್ ಬ್ಯಾಂಕ್, ಕುಮಟಾದ ಡಾ.ಎ.ವಿ. ಬಳಿಗಾ ಕಲೆ ಮತ್ತು ವಿಜ್ಞಾನ ಕಾಲೇಜು ಮುಂತಾದವುಗಳಿಂದ ಸನ್ಮಾನ ಸಂದವು. ಅವರಿಗೆ ಅ. ನ. ಕೃ ಪ್ರಶಸ್ತಿಯೂ ಸೇರಿ ಅನೇಕ ಗೌರವಗಳು ಸಂದಿವೆ. ಶಾ.ಮಂ.ರವರಿಗೆ ಸ್ನೇಹಿತರು ಅರ್ಪಿಸಿರುವ ಗೌರವ ಗ್ರಂಥ ‘ಪದಪಥಿಕ’.

On the birthday of S. M. Krishna Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ