ಶಂಕರ ಅಜ್ಜಂಪುರ
ಶಂಕರ ಅಜ್ಜಂಪುರ
ಇಂದು ನಮ್ಮ ಸಾಂಸ್ಕೃತಿಕಲೋಕದ ಹಿರಿಯರೂ, ಉತ್ತಮ ಅಭಿರುಚಿಯ ಬ್ಲಾಗಿಗರೂ, ಬರಹಗಾರರೂ ಮತ್ತು ಶಿಲ್ಪಕಲೆಗಳ ಕುರಿತಾಗಿನ ಚಿಂತಕರೂ ಆದ ಶಂಕರ ಅಜ್ಜಂಪುರ ಅವರ ಜನ್ಮದಿನ. ಜೂನ್ 30 ಅವರ ಜನ್ಮದಿನ.
ಸಾಂಸ್ಕೃತಿಕವಾಗಿ ಭವ್ಯ ಇತಿಹಾಸವುಳ್ಳ 'ಅಜ್ಜಂಪುರ' ಶಂಕರರ ಊರು. ಹಾಗಾಗಿ ಅವರು ಶಂಕರ ಅಜ್ಜಂಪುರ. ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯ ಮತ್ತು ತಾಯಿ ಸುಬ್ಬುಲಕ್ಷ್ಮಿ. ಅಜ್ಜಂಪುರದಲ್ಲಿ ಹೈಸ್ಕೂಲುವರೆಗಿನ ಅಭ್ಯಾಸವನ್ನು ಮುಗಿಸಿದ ಶಂಕರ ಅವರು, ಹೊಟ್ಟೆಪಾಡಿನ ಉದ್ಯೋಗ ಮಾಡುತ್ತಲೇ, 1975 ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವೀಧರರೂ ಆದರು.
ಶಂಕರ ಅಜ್ಜಂಪುರ ಅವರು ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ನಿಗಮ(ಎಲ್ ಅರ್ ಡಿ ಇ)ದಲ್ಲಿನ ಮುದ್ರಣ ವಿಭಾಗದ ತಂತ್ರಜ್ಞಾನ ಅಧಿಕಾರಿಗಳಾಗಿ 2013ರ ವರೆಗೆ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಅವರಿಗೆ ಸುಲಲಿತ ಸ್ವಾಮ್ಯವಿದೆ. ಮುದ್ರಣ ತಂತ್ರಜ್ಞಾನದಲ್ಲಿ ಕಾಲಗತಿಯಲ್ಲಿ ಉಂಟಾದ ಬದಲಾವಣೆಗಳ ಕುರಿತು ತಮ್ಮ ಕಾರ್ಯಕ್ಷೇತ್ರದಲ್ಲಿರುವವರಿಗೆ ಮಾರ್ಗದರ್ಶನ ಮಾಡುವಲ್ಲಿ ಅವರು ದೇಶದ ವಿವಿದೆಡೆಗಳಲ್ಲಿ ಅನೇಕ ಮಾರ್ಗದರ್ಶಿ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು.
ಶಂಕರ ಅಜ್ಜಂಪುರ ಅವರು ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ, ಪರಿಸರ ಮತ್ತು ವಿಶಿಷ್ಟ ಪ್ರಾಣಿ-ಪಕ್ಷಿಗಳನ್ನು ಕುರಿತಂತೆ ಕಸ್ತೂರಿ, ಕನ್ನಡ ಪ್ರಭ, ಮಯೂರ, ಕರ್ಮವೀರ ಮುಂತಾಗಿ ನಾಡಿನ ವಿವಿಧ ನಿಯತಕಾಲಿಕೆಗಳಲ್ಲಿ ಹಲವು ನೂರು ಬರಹಗಳನ್ನು ಬರೆದಿದ್ದಾರೆ. ಸೀತಾರಾಮ ಗೋಯೆಲ್ ಅವರ ‘Hindu society under seize’ ಕೃತಿಯನ್ನು ಕನ್ನಡದಲ್ಲಿ 'ದಿಗ್ಬಂಧನದಲ್ಲಿ ಹಿಂದೂ ಸಮಾಜ' ಎಂಬ ಅನುವಾದವಾಗಿ ಪ್ರಕಟಿಸಿದ್ದಾರೆ.
ಬ್ಲಾಗಿಗರಾಗಿ ಶಂಕರ ಅಜ್ಜಂಪುರ ಅವರ ಬ್ಲಾಗುಗಳು, 'ಅಂತರಜಾಲದಲ್ಲಿ ಅಜ್ಜಂಪುರ' ಬ್ಲಾಗಿನಲ್ಲಿ ಅಜ್ಜಂಪುರದ ಕುರಿತಾದ 50 ವ್ಯಾಪಕ ಬರಹಗಳು, 'ಅಘೋರ ಯಾತ್ರೆ'ಯಲ್ಲಿ 'ವಿಮಲಾನಂದರ ಅಘೋರ ಯಾತ್ರೆ' ಎಂಬ ಧಾರಾವಾಹಿ ಬರಹ, 'ಸಮಕ್ಷಮ'ದಲ್ಲಿ ಸುಧಾ ವಾರಪತ್ರಿಕೆಯಲ್ಲಿ ಮೂಡಿಬಂದ ಸಚಿತ್ರ ಲೇಖನಗಳ ಸಂಗ್ರಹ, 'ಕಾಲಭೈರವ'ದಲ್ಲಿ ಕಾಲಭೈರವನ ಕುರಿತಾದ ವ್ಯಾಪಕ ಸಂಶೋಧನಾತ್ಮಕ ಬರಹಗಳು ಹೀಗೆ ತಮ್ಮದೇ ಆದ ವ್ಯಾಪಕವಾದ ವೈಶಿಷ್ಟ್ಯತೆಗಳನ್ನು ಬಿಂಬಿಸುತ್ತಿವೆ.
ಶಂಕರ ಅಜ್ಜಂಪುರ ಅವರು ಫೇಸ್ಬುಕ್ಕಿನಲ್ಲಿ ದೇಶೀಯ ಶಿಲ್ಪಕಲೆಯ ಸ್ವಾರಸ್ಯಗಳನ್ನು ತಿಳಿಸುವ 'ಭಾರತೀಯ ವಾಸ್ತುಶಿಲ್ಪ ಅವಲೋಕನ', ಹೊಯ್ಸಳರ ದೇವಾಲಯಗಳನ್ನು ಕುರಿತಂತೆ 'ಹೊಯ್ಸಳ ವಾಸ್ತುಶಿಲ್ಪ ಅವಲೋಕನ', ಹೆಸರೇ ಸೂಚಿಸುವಂತೆ 'ವಿದೇಶಗಳಲ್ಲಿರುವ ಭಾರತೀಯ ಶಿಲ್ಪಗಳು' ಹಾಗೂ ವೇದ ವಿಷಯದಲ್ಲಿ ಪ್ರಶ್ನೋತ್ತರ ಮಾಲಿಕೆಯ ರೂಪದಲ್ಲಿ 'ವೇದ ಪರಿಚಯ', ಸಂದರ್ಶನ ಮಾಲಿಕೆಯ ರೂಪದಲ್ಲಿ
'ಇವರು ನಮ್ಮ ಇತಿಹಾಸ ತಜ್ಞರು' ಮುಂತಾದ ಬರಹಗಳನ್ನು ಅಂಕಣ ರೂಪದಲ್ಲಿ ಸುದೀರ್ಘವಾಗಿ ಬರೆದು ಜ್ಞಾನಪ್ರಸರಣದಲ್ಲಿ ನಿರತರಾಗಿದ್ದಾರೆ.
ಪೂಜ್ಯ ಶಂಕರ ಅಜ್ಜಂಪುರ ಅವರಿಗೆ ನಮನಪೂರ್ವಕ ಹುಟ್ಟುಹಬ್ಬದ ಶುಭಹಾರೈಕೆಗಳು.
Happy birthday Shankar Ajjampura Sir 🌷🙏🌷
ಕಾಮೆಂಟ್‌ಗಳು