ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ.ಎನ್.ಆರ್. ರಾವ್


 ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್


ಭಾರತದ  ಮಹಾನ್ ವಿಜ್ಞಾನಿಗಳಲ್ಲೊಬ್ಬರಾದ  ಭಾರತರತ್ನ  ಪ್ರೊ. ಸಿ. ಎನ್. ರಾವ್  ಅವರು  ಕಳೆದ  ಆರೂವರೆ  ದಶಕಗಳಿಂದ  ತಮ್ಮ  ಜೀವನವನ್ನು  ವಿಜ್ಞಾನಕ್ಕಾಗಿ  ಮುಡಿಪಾಗಿಟ್ಟು ಆ  ಕ್ಷೇತ್ರದಲ್ಲಿ  ಅಹರ್ನಿಶಿ  ದುಡಿಯುತ್ತಿದ್ದಾರೆ.  

ಚಿಕ್ಕಂದಿನಿಂದಲೂ  ರಾವ್  ಅವರು  ಸರ್ ಸಿ. ವಿ.  ರಾಮನ್  ಅವರ  ಅಭಿಮಾನಿ.  "ನನ್ನ ಮೇಲೆ ಬಹುವಾಗಿ ಪ್ರಭಾವ ಬೀರಿದವರು ಮಹಾನ್‌ ವಿಜ್ಞಾನಿ ಸರ್‌. ಸಿ.ವಿ. ರಾಮನ್‌. ನನಗಾಗ 11 ವರ್ಷ. ಬೆಂಗಳೂರಿನಲ್ಲಿ ಕಲಿಯುತ್ತಿದ್ದೆ. ಆಗ ಅವರ ಪ್ರಭಾವಕ್ಕೆ ಒಳಗಾದೆ. ವಿಜ್ಞಾನ ಕಲಿಯಬೇಕು ಎಂಬ ಕನಸು ಮೂಡಿದ್ದು ಅದೇ ಹೊತ್ತಿನಲ್ಲಿ. ಸಿ.ವಿ. ರಾಮನ್‌ ಭಾರತರತ್ನ ಗೌರವಕ್ಕೆ ಪಾತ್ರರಾಗಿದ್ದರು. ಅವರ ಸಾಲಿನಲ್ಲಿ ನಾನು  ಕೂಡಾ  ಭಾರತರತ್ನ  ಗೌರವ ಪಡೆದಿರವುದು  ನನಗೆ ತುಂಬಾ  ಸಂತೋಷ ತಂದಿದೆ. ಆದರೆ, ಅವರೊಂದಿಗೆ ನನ್ನನ್ನು ಹೋಲಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅವರೊಬ್ಬ ಮಹಾನ್‌ ವಿಜ್ಞಾನಿ"  ಎಂದು  ಪ್ರೊ. ರಾವ್  ನಮ್ರರಾಗುತ್ತಾರೆ.   

ರಸಾಯನಶಾಸ್ತ್ರದ ಸಾಲಿಡ್ ಸ್ಟೇಟ್ ಅಂಡ್  ಮೆಟೀರಿಯಲ್ಸ್ ಕೆಮಿಸ್ಟ್ರಿ ಹಾಗೂ  ಸ್ಟ್ರಕ್ಚರಲ್  ಕೆಮಿಸ್ಟ್ರಿ  ವಿಭಾಗಗಳು  ಪ್ರೊ. ಸಿ. ಎನ್. ಆರ್. ರಾವ್  ಅವರ  ಪ್ರಧಾನ  ಸಂಶೋಧನಾ  ಕ್ಷೇತ್ರಗಳು.  ಈ  ಕ್ಷೇತ್ರದಲ್ಲಿ  ಸುಮಾರು 1600  ಸಂಶೋಧನಾ  ಪ್ರಬಂಧಗಳನ್ನೂ, 50 ಬೃಹದ್ಗ್ರಂಥಗಳನ್ನೂ  ರಚಿಸಿರುವ  ಭಗೀರಥ  ಸಾಧನೆ  ಅವರದ್ದಾಗಿದೆ. ವಿಜ್ಞಾನ ಕ್ಷೇತ್ರದ  ಅವರ  ಇತರ  ಆಸಕ್ತಿಗಳೆಂದರೆ  ವಿಜ್ಞಾನ  ಶಿಕ್ಷಣ  ಹಾಗೂ ಶಾಲಾ  ವಿದ್ಯಾರ್ಥಿಗಳೊಂದಿಗೆ  ನೇರ  ಸಂಪರ್ಕ ಕಾರ್ಯಕ್ರಮಗಳು.  

ಹನುಮಂತ ನಾಗೇಶ್‌ ರಾವ್‌ ಮತ್ತು ನಾಗಮ್ಮ ದಂಪತಿಗಳ  ಸುಪುತ್ರರಾದ  ಚಿಂತಾಮಣಿ ಪ್ರೊ. ನಾಗೇಶ ರಾಮಚಂದ್ರರಾವ್‌ ಅವರು, 1934ರ ಜೂನ್‌ 30ರಂದು ಬೆಂಗಳೂರಿನಲ್ಲಿ ಜನಿಸಿದರು. 1951ರಲ್ಲಿ  ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ಪದವಿ ಪಡೆದ ಅವರಿಗೆ ಉತ್ತಮ ಸಂಬಳದ ನೌಕರಿ ಸಿಗುವುದು ಕಷ್ಟವಾಗಿರಲಿಲ್ಲ.  ಆದರೆ ಜ್ಞಾನಾಕಾಂಕ್ಷಿಗಳಾಗಿದ್ದ  ರಾವ್‌ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ವಿಜ್ಞಾನ ಮಂದಿರದಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಿನಲ್ಲಿ)  ಡಿಪ್ಲೋಮಾ ಮಾಡುವ ಉದ್ದೇಶ ಹೊಂದಿದ್ದರು.    ಅದೇ  ಸಂದರ್ಭದಲ್ಲಿ  ಅವರಿಗೆ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿಗೆ ಪ್ರವೇಶ ಲಭಿಸಿದ್ದರಿಂದ ಅವರ ವಿಜ್ಞಾನ ಕಲಿಕೆಯ ಯಾತ್ರೆ ತಡೆಯಿಲ್ಲದೆ ಸಾಗಿತು. 1958ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಪಡೆದ ಅವರು  1959ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ  ಉಪನ್ಯಾಸಕರಾಗಿ ಸೇವೆ ಆರಂಭಿಸಿ ನಂತರ 1963ರಲ್ಲಿ ಕಾನ್ಪುರದ ಐಐಟಿಗೆ ಸೇರಿ 1976ರ ವರೆಗೆ  ಪ್ರಾಧ್ಯಾಪಕರಾಗಿ,  ವಿಭಾಗದ  ಮುಖ್ಯಸ್ತರಾಗಿ, ಡೀನ್ ಆಗಿ  ವಿವಿಧ  ಜವಾಬ್ಧಾರಿಗಳನ್ನು  ಸಮರ್ಥವಾಗಿ  ನಿರ್ವಹಿಸಿದರು.  1977ರ ವರ್ಷದಿಂದ  1984ರ ಅವಧಿಯಲ್ಲಿ  ಅವರು    ಭಾರತೀಯ  ವಿಜ್ಞಾನ ಮಂದಿರದಲ್ಲಿ ಸಾಲಿಡ್ ಸ್ಟೇಟ್  ಅಂಡ್ ಸ್ಟ್ರಕ್ಚರಲ್ ಕೆಮಿಸ್ಟ್ರಿ ಅಂಡ್  ಮೆಟೀರಿಯಲ್  ರಿಸರ್ಚ್ ಪ್ರಯೋಗಾಲಯಗಳ  ಸಂಸ್ಥಾಪಕ  ಅಧ್ಯಕ್ಷರಾಗಿ  ಕಾರ್ಯನಿರ್ವಹಿಸಿದರು.  1984ರಿಂದ 1994ರ ಅವಧಿಯಲ್ಲಿ  ಭಾರತೀಯ  ವಿಜ್ಞಾನ  ಮಂದಿರದ  ನಿರ್ದೇಶಕರಾಗಿದ್ದರು. 1989ರಿಂದ  1999ರ ಅವಧಿಯಲ್ಲಿ  ಜವಾಹರಲಾಲ್  ನೆಹರೂ  ಸೆಂಟರ್  ಫಾರ್  ಅಡ್ವಾನ್ಸ್ಡ್ ರಿಸರ್ಚ್ ಕೇಂದ್ರದ  ಅಧ್ಯಕ್ಷರಾಗಿದ್ದ  ರಾವ್  ಅವರೂ ಈಗಲೂ  ಆ ಕೇಂದ್ರದಲ್ಲಿ  ಪ್ರಾಧ್ಯಾಪಕರಾಗಿಯೂ  ಗೌರವಾಧ್ಯಕ್ಷರಾಗಿಯೂ  ತಮ್ಮ  ಸೇವೆಯನ್ನು  ನಿರಂತರವಾಗಿ  ಮುಂದುವರೆಸಿದ್ದಾರೆ.  ಆಲ್ಬರ್ಟ್  ಐನ್‍ಸ್ಟೀನ್ ಸಂಶೋಧನಾ  ಕೇಂದ್ರದ  ಪ್ರಾಧ್ಯಾಪಕರಾಗಿಯೂ  ಸೇವೆ ಸಲ್ಲಿಸಿರುವ  ರಾವ್  ಅವರನ್ನು  ವಿಶ್ವದ  ಎಲ್ಲ  ವಿಶ್ವವಿದ್ಯಾಲಯಗಳೂ  ತಮ್ಮ  ಸಂದರ್ಶನ  ಪ್ರಾಧ್ಯಾಪಕರಾಗಿ  ಅಥವಾ  ಗೌರವ ಪ್ರಾಧ್ಯಾಪಕರನ್ನಾಗಿ  ಆದರಿಸುತ್ತಾ  ಬಂದಿವೆ.  ವಿಶ್ವದ  67 ಪ್ರತಿಷ್ಠಿತ  ವಿಜ್ಞಾನ  ವಿಶ್ವವಿದ್ಯಾಲಯಗಳು  ಪ್ರೊ. ಸಿ. ಎನ್.  ಆರ್.  ರಾವ್  ಅವರಿಗೆ  ಡಾಕ್ಟೊರೇಟ್ ಗೌರವವನ್ನು  ಸಲ್ಲಿಸಿವೆ,  ವಿಶ್ವದ  30ಕ್ಕೂ  ಹೆಚ್ಚು  ವಿಶ್ವವಿದ್ಯಾಲಯಗಳು  ಫೆಲೋ  ಗೌರವವನ್ನು  ನೀಡಿವೆ ಹಾಗೂ   ಸುಮಾರು  40 ದೇಶೀಯ  ಮತ್ತು  ಅಂತರರಾಷ್ಟ್ರೀಯ  ಮಟ್ಟದ  ವೈಜ್ಞಾನಿಕಾ ಸಾಂಸ್ಥಿಕ  ನಿರ್ವಹಣಾ  ಔನ್ನತ್ಯ  ಸಮಿತಿಗಳಲ್ಲಿ  ಅವರ ನಿರ್ದೇಶನಾ  ಸೇವೆ  ಸಂದಿದೆ    ಎಂದರೆ  ಅವರ  ಸಾಧನೆಯ  ಅಗಾಧತೆಯ  ಸಣ್ಣ  ಅರಿವು  ನಮ್ಮಲ್ಲುಂಟಾದೀತು.  

ಪ್ರೊ.ಸಿ.ಎನ್‌.ಆರ್‌ ರಾವ್‌ ಅವರದು  ‘ವಿಜ್ಞಾನ ಕುಟುಂಬ’. ಅವರ ಪತ್ನಿ ಇಂದುಮತಿ ರಾವ್‌ ಈ ಹಿಂದೆ ನಗರದ ಎಂಇಎಸ್‌ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು. ಪ್ರಸ್ತುತ ಅವರು ಜವಾಹರ್‌ಲಾಲ್‌  ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ವಿಜ್ಞಾನ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ರ ಸಂಜಯ್‌ ರಾವ್‌ ಕೂಡ ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಪುತ್ರಿ ಸುಚಿತ್ರಾ ರಾವ್‌ ಅವರ ಪತಿ ಕೆ.ಎನ್‌. ಗಣೇಶ್‌ ಪುಣೆಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರು.

ವಿಶ್ವದೆಲ್ಲೆಡೆ  ಪ್ರೊ. ಸಿ. ಎನ್. ಆರ್.  ರಾವ್  ಅವರ  ಕೀರ್ತಿ  ಬೆಳಗಿದ್ದು  ವಿಶ್ವಸಂಸ್ಥೆಯ  ಅಂಗವಾದ  ಯುನೆಸ್ಕೋದ  ಹಲವಾರು  ಗೌರವಗಳೂ  ಒಳಗೊಂಡಂತೆ ವಿಶ್ವದ  ಪ್ರತಿಷ್ಠಿತ  ಮಹಾನ್ ಸಂಸ್ಥೆಗಳ  ಹಲವು ನೂರು  ಪ್ರತಿಷ್ಠಿತ  ಗೌರವಗಳು,  ಪದಕಗಳು, ಪಾರಿತೋಷಕಗಳು ಇತ್ಯಾದಿಗಳು  ಅವರನ್ನು  ಹುಡುಕಿಕೊಂಡು ಬಂದಿವೆ.  ಭಾರತದ  ಎಲ್ಲ ರೀತಿಯ  ವಿಜ್ಞಾನ  ಪ್ರತಿಷ್ಠಿತ  ಗೌರವಗಳೂ;  ಪದ್ಮಶ್ರೀ, ಪದ್ಮವಿಭೂಷಣ,  ಹಾಗೂ  ಸರ್ವಶ್ರೇಷ್ಠ  ಸಾಧನೆಗಳ  ಕುರುಹಾದ  ಭಾರತರತ್ನ  ಪ್ರಶಸ್ತಿ ಗೌರವಗಳೂ  ರಾವ್  ಅವರಿಗೆ  ಸಂದಿದ್ದು  ತಮ್ಮ  ಮೌಲ್ಯವನ್ನು  ಹೆಚ್ಚಿಸಿಕೊಂಡಿವೆ.  

“ವಿಜ್ಞಾನವೇ ನನ್ನ ಉಸಿರು. ನನಗೆ  ದೊರೆತಿರುವ  ಎಲ್ಲ  ಗೌರವಗಳೂ  ವಿಜ್ಞಾನ ಕ್ಷೇತ್ರಕ್ಕೆ ಸಿಕ್ಕ ಗೌರವ. ನಾನು ಯಾವತ್ತೂ ಹಣ ಸಂಪಾದನೆ ಮಾಡಬೇಕು ಎಂದು ಬಯಸಿದವನಲ್ಲ. ವಿಜ್ಞಾನಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವನು. ಸಂಶೋಧನಾ ಚಟುವಟಿಕೆ ನಡೆಸುವ ವೇಳೆ ಅನೇಕ ಮಂದಿ ಸಹಕಾರ ನೀಡಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳ ಪಾತ್ರ ಅಪಾರವಾದುದು.  ವಿಜ್ಞಾನ ಕ್ಷೇತ್ರದಲ್ಲಿ ಭಾರತ ಅಗ್ರಪಟ್ಟಕ್ಕೆ ಏರಬೇಕು. ಚೀನಾ, ದಕ್ಷಿಣ ಕೋರಿಯಾದಂತಹ ರಾಷ್ಟ್ರಗಳಿಗಿಂತ ಮಂಚೂಣಿಯಲ್ಲಿ ನಮ್ಮ ದೇಶ ಕಾಣಿಸಿಕೊಳ್ಳಬೇಕು. ಭಾರತದ ಭವಿಷ್ಯ ಯುವಜನರ ಕೈಯಲ್ಲಿದೆ. ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಯುವ ಜನರ ಸಂಖ್ಯೆ ಜಾಸ್ತಿ ಇದೆ. ಯುವಜನರು ಕಠಿಣ ಪರಿಶ್ರಮಿಗಳಾಗಬೇಕು” ಎನ್ನುತ್ತಾರೆ ಪ್ರೊ.ಸಿ.ಎನ್‌. ಆರ್‌.ರಾವ್.

ಈ ಮಹಾನ್ ಸಾಧಕರೂ ನಮ್ಮ ಕನ್ನಡಿಗರೂ ಆದ ಪ್ರೊ. ಸಿ. ಎನ್. ಆರ್. ರಾವ್ ಅಂತಹ  ಮಹನೀಯರ  ಕಾಲದಲ್ಲಿ  ನಾವೂ  ಜೀವಿಸಿದ್ದೇವೆ  ಎಂಬುದೇ  ನಮ್ಮ  ಹೆಮ್ಮೆಯ ವಿಷಯವಾಗಿದೆ.  ಈ ಮಹಾನ್ ಭಾರತ ಜನನಿಯ ತನುಜಾತೆಯಾದ ಕನ್ನಡ ಮಾತೆಯ ಹೆಮ್ಮೆಯ ಪುತ್ರರಿಗೆ ಸಾಷ್ಟಾಂಗ ನಮನಪೂರ್ವಕ  ಜನ್ಮದಿನದ  ಶುಭಹಾರೈಕೆಗಳು.

On the birthday of our great scientist Bharataratna Prof. C.N.R. Rao 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ