ಎಸ್. ಕೆ. ಶೇಷಚಂದ್ರಿಕ
ಎಸ್. ಕೆ. ಶೇಷಚಂದ್ರಿಕ
ಶೇಷಚಂದ್ರಿಕ ಎಂಬ ಹೆಸರನ್ನು ನಾವು ಆಕಾಶವಾಣಿಯಲ್ಲಿ ಮತ್ತು ಪತ್ರಿಕೆಗಳಲ್ಲಿ ಕೇಳಿ ಬೆಳೆದವರು. ಚುನಾವಣಾ ವಿಶ್ಲೇಷಣೆಗಳಲ್ಲಂತೂ ಅಂದಿನ ಪತ್ರಿಕೆ-ಆಕಾಶವಾಣಿ ಯುಗದಿಂದ, ಇಂದಿನ ಆಧುನಿಕ ಮಾಹಿತಿ ಕೇಂದ್ರಿತ ಯುಗದವರೆಗೆ ಶೇಷಚಂದ್ರಿಕ ಅವರ ಮಾತಿನತ್ತ ಇಡೀ ನಾಡೇ ಎದುರು ನೋಡುತ್ತಿರುತ್ತದೆ. ವಿಜ್ಞಾನದ ಅಭಿವೃದ್ಧಿ ವಿಷಯಗಳನ್ನೂ ಸೇರಿದಂತೆ ಭಾರತೀಯ ಬದುಕಿನ ಎಲ್ಲ ನೆಲೆಗಳ ಕುರಿತು ಇವರು ಆಕಾಶವಾಣಿಯಲ್ಲಿ ತೆರೆದಿಟ್ಟ ಜ್ಞಾನಲೋಕ ಅಸಾಮಾನ್ಯವಾದದ್ದು. ಇವರು ಶೇಷಣ್ಣ ಎಂದೇ ಎಲ್ಲರಿಗೂ ಆಪ್ತರು.
ಶೇಷಚಂದ್ರಿಕ ಅವರು 1938ರ ಜೂನ್ 10 ರಂದು ಜನಿಸಿದರು. ಪತ್ರಿಕೋದ್ಯಮ, ಅದರಲ್ಲೂ ವರದಿಗಾರಿಕೆ ಶೇಷಣ್ಣನವರು ಆಯ್ಕೆಮಾಡಿಕೊಂಡ ವೃತ್ತಿ. ಶೇಷಣ್ಣನವರು ಈ ವೃತ್ತಿಯಲ್ಲಿ ತಿ. ತಾ. ಶರ್ಮ, ನಾಡಿಗ್ ಕೃಷ್ಣಮೂರ್ತಿ, ಖಾದ್ರಿ ಶಾಮಣ್ಣ ಮತ್ತು ಸುರೇಂದ್ರದಾನಿ ಅಂತಹ ಮಹನೀಯರ ಶಿಷ್ಯತ್ವ ಪಡೆದ ಭಾಗ್ಯವಂತರು.
ಮೊದಲು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಕಲಿಕಾ ಅಭ್ಯರ್ಥಿಯಾಗಿ ಪತ್ರಿಕಾ ರಂಗಕ್ಕೆ ಬಂದ ಶೇಷಚಂದ್ರಿಕ ಅವರು ಜನವಾಣಿ, ಪ್ರಜಾಮತ, ಸಂಯುಕ್ತ ಕರ್ನಾಟಕಗಳಲ್ಲಿ ಬೆಳಗಿದರು. 1963ರಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆಯ ಇಂಡಿಯ ಇನಫರ್ಮೇಶನ್ ಸರ್ವೀಸ್ಗೆ ಆಯ್ಕೆಗೊಂಡ ಶೇಷಣ್ಣನವರು ಹಲವು ಮಾಧ್ಯಮ ಕೇಂದ್ರಗಳು, ಪ್ರೆಸ್ ಇನ್ಪರ್ಮೇಷನ್ ಬ್ಯೂರೋ, ಸೆನ್ಸಾರ್ ಘಟಕ, ಸುದ್ಧಿ ವಿಶ್ಲೇಷಣಾ ವಿಭಾಗ ಮುಂತಾದ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದರು. ಅವರು ಫೀಲ್ಡ್ ಪಬ್ಲಿಸಿಟಿ ಅಧಿಕಾರಿಗಳಾಗಿ, ಧಾರವಾಡ, ಬೆಂಗಳೂರು, ಶಿವಮೊಗ್ಗ ವಿಭಾಗದ ಡಿಎಫ್‍ಪಿ ಆಗಿ ಕಾರ್ಯನಿರ್ವಹಿಸಿದರು. ಮುಂದೆ ಬಡ್ತಿಯೊಂದಿಗೆ ಬೆಂಗಳೂರಿಗೆ ವರ್ಗಗೊಂಡ ಶೇಷಣ್ಣನವರು ಬೆಂಗಳೂರು ಮತ್ತು ದೆಹಲಿ ಸುದ್ಧಿ ವಿಭಾಗದ ಆಕಾಶವಾಣಿ ಕೇಂದ್ರದ ಸೀನಿಯರ್ ಕರೆಸ್ಪಾಂಡೆಂಟ್ ಮತ್ತು ಸಂಪಾದಕರಾಗಿ 17 ವರ್ಷ ಸೇವೆಸಲ್ಲಿಸಿದರು. ಅವರು ಬೆಂಗಳೂರು ದೂರದರ್ಶನ ಕೇಂದ್ರದ ಸುದ್ಧಿ ಸಂಪಾದಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. 1992-93 ಅವಧಿಯಲ್ಲಿ ಅವರು ಮುಖ್ಯ ಮಂತ್ರಿಗಳ ಪತ್ರಿಕಾ ಸಂಪರ್ಕ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. 1996-2002 ಅವಧಿಯಲ್ಲಿ ಅವರು ಟ್ರಿಬ್ಯೂನ್, ದೈನಿಕ್ ಭಾಸ್ಕರ್ ಪತ್ರಿಕೆಗಳಲ್ಲಿ ವಿಶೇಷ ಸುದ್ಧಿ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿದರು. ಭಾರತದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ವರದಿಗಾರಿಕೆಯಲ್ಲಿ ಪ್ರಾವೀಣ್ಯತೆ ಪಡೆದ ನಂತರ ಶೇಷಣ್ಣನವರಿಗೆ ಬಹುವಾಗಿ ಹಿಡಿಸಿದ ವಿಷಯ ಚುನಾವಣಾ ವರದಿ. 2024ರ ಲೋಕಸಭಾ ಚುನಾವಣೆಗಳು ಹಲವು ರಾಜ್ಯಗಳ ಚುನಾವಣೆಗಳೂ ಸೇರಿ ಕಳೆದ 50ಕ್ಕೂ ಹೆಚ್ಚು ವರುಷಗಳ ಅವಧಿಯಲ್ಲಿ ನಡೆದ ಎಲ್ಲ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಇವರು ಅಭ್ಯಸಿಸಿ ಮಾಧ್ಯಮಗಳಲ್ಲಿ ಸಮರ್ಥವಾಗಿ ವಿಶ್ಲೇಷಿಸುತ್ತ ಬಂದಿದ್ದಾರೆ.
ಚುನಾವಣೆಗಳ ಸಂದರ್ಭದಲ್ಲಿ ಜನಾಭಿಪ್ರಾಯ ಸಮೀಕ್ಷೆಯ ಸಲುವಾಗಿ ಶೇಷಚಂದ್ರಿಕ ಅವರು ದೇಶದ 20 ರಾಜ್ಯಗಳಲ್ಲಿ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳನ್ನು ಪ್ರತ್ಯಕ್ಷವಾಗಿ ಕಂಡು ವರದಿ ಮಾಡಿದ್ದಾರೆ. ಬಹುಶಃ ಇಷ್ಟೊಂದು ರಾಜ್ಯಗಳಲ್ಲಿ, ಇಷ್ಟೊಂದು ಸುದೀರ್ಘ ಅವಧಿಯವರೆಗೆ ಸಂಚರಿಸಿ, ಆಯಾ ಸ್ಥಳಗಳಿಂದ ನೇರ ವರದಿಮಾಡಿದ ವರದಿಗಾರ ಇವರನ್ನು ಹೊರತು ಮತ್ಯಾರೂ ಇಲ್ಲ. ಇದೊಂದು ರಾಷ್ಟ್ರೀಯ ದಾಖಲೆ ಎಂದು ಖಂಡಿತವಾಗಿ ಹೇಳಬಹುದು. ವರದಿಗಾರರ ಗುಂಪನ್ನು ಕಟ್ಟಿ ಚುನಾವಣಾ ಸಂದರ್ಭದಲ್ಲಿ ಗ್ರಾಮ, ನಗರ, ಕಾಡು, ಗುಡ್ಡಗಳನ್ನು ಸುತ್ತುವುದು ಇವರ ದಿನಚರಿಯಾಗುತ್ತಿತ್ತು. ಇಂದಿನ ಯುಗದ ಚುನಾವಣೆಗಳಲ್ಲೂ ದೇಶದಾದ್ಯಂತ ತಂಡದೊಂದಿಗೆ ಸಂಚರಿಸಿ ಅವರು ಮಾಡುತ್ತಿರುವ ಕಾರ್ಯ ಅಪರಿಮಿತವಾದದ್ದು.
ಶೇಷಚಂದ್ರಿಕ ಅವರು ವಿ ಎನ್ ಸುಬ್ಬರಾವ್, ಸಚ್ಚಿದಾನಂದ ಮೂರ್ತಿ ಅಂತಹ ರಾಷ್ಟ್ರೀಯ ಮಟ್ಟದ ಪತ್ರಿಕಾ ಸಮೂಹದ ಖ್ಯಾತರೊಂದಿಗೆ ಕಾರ್ಯನಿರ್ವಹಿಸಿದವರು. ಅವರಿಗೆ ಎಲ್.ವಿ. ಶಾರದಾ ಪ್ರಸಾದರಂತಹವರ ಆಪ್ತರ ಒಡನಾಟ ನಿರಂತರವಾಗಿ ಜೊತೆಗಿತ್ತು. ಶೇಷಚಂದ್ರಿಕ ಅವರಿಗೆ ಸಾಹಿತ್ಯ, ಸಂಗೀತ ಮತ್ತು ಇತರ ಸಂಸ್ಕೃತಿ ವಲಯಗಳಲ್ಲೂ ಅಪಾರ ಆಸಕ್ತಿಯಿತ್ತು. ಎಲ್ಲದರಲ್ಲೂ ಅವರಿಗೆ ಕಲಿಯುವ ಹುಮ್ಮಸ್ಸು. ಇದಕ್ಕೆ ಒಂದು ಉದಾಹರಣೆ ಎಂದರೆ ಅವರು ನಿರ್ವಹಿಸಿದ ಭಾರತೀಯ ಅಂತರಿಕ್ಷ ವಿಜ್ಞಾನದ ಪ್ರಾಯೋಗಿಕ ಸಾಧನೆಗಳ ವರದಿ.
ಮೊದಲ ಏರ್ ಶೋ( ಈಗ Aero India ಎಂದು ಪ್ರಸಿದ್ಧ ವಾದ ಶೋ) ಕುರಿತು ರಾಷ್ಟ್ರ ಮತ್ತು ರಾಜ್ಯಮಟ್ಟದ ಶ್ರೋತೃಗಳಿಗೆ ಸುದ್ದಿ ಕೊಟ್ಟ ಪ್ರಥಮರು ನಮ್ಮ ಶೇಷಣ್ಣ.
ಶೇಷಣ್ಣನವರು ಕಲಾ ವಿಭಾಗದ ಪದವಿ ಪಡೆದವರಾಗಿದ್ದು, ಆಕಾಶವಾಣಿಯ ಬಾತ್ಮೀದಾರರಾಗಿ ಭಾರತೀಯ ವಿಜ್ಞಾನದ ಸಾಧನೆಗಳನ್ನು ಪರಿಚಯಿಸಬೇಕಾದ ಸಂದರ್ಭದಲ್ಲಿ ಸುಮಾರು 1982ರ ವೇಳೆಗೆ ಅವರಿಗೆ ಪ್ರೊ. ಸತೀಶ್ ಧವನ್ ಮತ್ತು ಪ್ರೊ. ಯು. ಆರ್. ರಾವ್ ಅವರು ಇಸ್ರೋ ಸಂಸ್ಥೆಯ ಅಪೂರ್ವ ಸಾಧನೆಗಳನ್ನು ಪರಿಚಯ ಮಾಡಿಸಿದರು. ಮುಂದೆ ಶೇಷಣ್ಣ ಇನಸಾಟ್-1ಎ, ಇನಸಾಟ್-1ಬಿ, ಐಆರ್‍ಎಸ್, ಎಎಸ್‍ಎಲ್‍ವಿ / ಡಿಎಸ್‍ಎಲ್‍ವಿ/ಕ್ರಯೋಜೆನಿಕ್ ತಂತ್ರಜ್ಞಾನದ 14 ಅಮೂಲ್ಯ ಸಾಧನೆಗಳು ಮುಂತಾದವುಗಳನ್ನು ಅರ್ಥ ಮಾಡಿಕೊಂಡು ಜನರಿಗೆ ನಮ್ಮ ವಿಜ್ಞಾನ ಸಾಧನೆಗಳನ್ನು ತಿಳಿಸಿಕೊಟ್ಟರು. 1995ರಲ್ಲಿ ಶೇಷಚಂದ್ರಿಕ ಅವರಿಗೆ ಆಕಾಶವಾಣಿಯ "ದೇಶದ ಅತ್ಯುತ್ತಮ ವಿಜ್ಞಾನ ವರದಿಗಾರ" ಎಂದು ಪರಿಗಣಿಸಿ ಎಲ್. ಕೆ. ಶರ್ಮ ಪುರಸ್ಕಾರ ನೀಡಿ ನಾಡು ಗೌರವಿಸಿತು.
ಶೇಷಚಂದ್ರಿಕರು 18 ಪುಸ್ತಕಗಳನ್ನು ಬರೆದಿದ್ದಾರೆ. ಕಂಡದ್ದೇನು ಆದದ್ದೇನು (2004 ಚುನಾವಣೆ ಸಂಬಂಧಿತ), ಕಳಗಂ ದ್ರಾವಿಡರ ಕದನ (ತಮಿಳುನಾಡು ಚುನಾವಣೆ 2016), ಹೇಗೆ ಕಂಡಿತು ಗುಜರಾತ್ ಚುನಾವಣೆ 2012, ಲಾಲೂ ಜೀರೋ ನಿತೀಶ್ ಹೀರೋ ಆದ ಕಥೆ, ಮೋದಿ ನಿತೀಶ ಸಮರ ತಂತ್ರ (2015 ಬಿಹಾರ ಚುನಾವಣೆ), ನೋಟು ಅಮಾನ್ಯೀಕರಣದ ನಂತರದ ಮೊದಲ ಸಾರ್ವತ್ರಿಕ ಚುನಾವಣೆ (2017 ವರ್ಷದ ಉತ್ತರ ಪ್ರದೇಶದ ಚುನಾವಣೆ), ಮೋದಿ ಗೆದ್ದಿದ್ದು ಎಲ್ಲಿ ಸೋತಿದ್ದು ಎಲ್ಲಿ (2019 ಲೋಕಸಭೆ ಚುನಾವಣೆ) ಮುಂತಾದ ಕೃತಿಗಳು ಕನ್ನಡದಲ್ಲಿ ಮಾತ್ರವಲ್ಲದೆ ಇತರ ಭಾಷೆಗಳಲ್ಲಿ ಮೂಡಿರುವುದು ಅದರ ಹಿಂದಿರುವ ಶೇಷಚಂದ್ರಿಕ ಅವರ ಕಾರ್ಯದಕ್ಷತೆ ಮತ್ತು ಅನುಭವ ವ್ಯಾಪ್ತಿಗಳ ಕುರಿತಾಗಿ ಬಹಳಷ್ಟು ಹೇಳುವಂತದ್ದಾಗಿದೆ. ಇತ್ತೀಚೆಗೆ ದೇಶದಾದ್ಯಂತ ನಡೆದ 2024ರ ಲೋಕಸಭೆ ಮತ್ತು ವಿವಿಧ ರಾಜ್ಯಗಳ ಚುನಾವಣಾ ಸಮೀಕ್ಷೆಗಳನ್ನೂ, ವರದಿಗಳನ್ನೂ ಅವರು ಮಾಧ್ಯಮಗಳ ಮೂಲಕ ಸಮರ್ಥವಾಗಿ ಮೂಡಿಸುತ್ತ ಬಂದಿದ್ದಾರೆ. ಇಡೀ ದೇಶದ ನಾಡಿಮಿಡಿತವನ್ನು ಹೀಗೆ ಕಂಡು ಕಾಣಿಸುವುದು ಎಷ್ಟು ದೊಡ್ಡದು ಎಂಬುದು ಸಾಮಾನ್ಯ ಊಹೆಗೆ ನಿಲುಕುವಂತದ್ದಲ್ಲ. ಇದಲ್ಲದೆ ಜೆ. ಎಚ್. ಪಟೇಲ್ ಕುರಿತಾದ ಕೃತಿ ಮತ್ತು ಪೇಜಾವರದ ಯತಿಗಳ ಕುರಿತಾದ 'ಯತಿ ಆಶ್ರಮದ ಎಪ್ಪತ್ತು ಸಾರ್ಥಕ ವರ್ಷಗಳು' ಮುಂತಾದವು ಕೂಡ ಶೇಷಚಂದ್ರಿಕರ ವಿಭಿನ್ನ ನೆಲೆಗಳ ಕೃತಿಗಳಾಗಿ ಕಂಗೊಳಿಸುವಂತದ್ದಾಗಿದೆ.
ಶೇಷಚಂದ್ರಿಕ ಅವರಿಗೆ ಮೇಲೆ ಹೇಳಿದ ರಾಷ್ಟ್ರೀಯ ಗೌರವಗಳಲ್ಲದೆ ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿ, ಗುಲ್ಬರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ, ಡಾ. ಪಾಟೀಲ್ ಪುಟ್ಟಪ್ಪ ಪ್ರಶಸ್ತಿ, ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅರಸಿ ಬಂದಿವೆ.
ಶೇಷಚಂದ್ರಿಕರು ಎಲ್ಲವನ್ನೂ, ತಮ್ಮ ಸುಂದರ ಬರವಣಿಗೆಯ ಅಕ್ಷರಗಳಲ್ಲಿ ಮೂಡಿಸುವುದನ್ನು ನೋಡುವುದೇ ಚಂದ. ಜೀವನದಲ್ಲಿ ಶಿಸ್ತು ಎಂಬುದು ತರುವ ಸೌಂದರ್ಯವಿದು. ತಮ್ಮ ಬದುಕಿನಲ್ಲಿ, ಸಾಂಸ್ಕೃತಿಕ ಹಿರಿಮೆಯ ನಡವಳಿಕೆಯಲ್ಲಿ ನಮ್ಮೆಲ್ಲರೊಡನೆ ಅಕ್ಕರೆಯಿಂದ ಬೆರೆಯುವ ಇವರ ಸರಳತೆ ಅಪ್ಯಾಯಮಾನವೆನಿಸುವಂತದ್ದು.
ಹಿರಿಯರಾದ ಶೇಷಚಂದ್ರಿಕ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birth day great name in Journalism and AIR, our Sesha Chandrika Sir
ಕಾಮೆಂಟ್‌ಗಳು