ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕನ್ನಡ ಪತ್ರಿಕೆಗಳು


 ಕನ್ನಡ ಪತ್ರಿಕೋದ್ಯಮದ ಆರಂಭಿಕ ಘಟ್ಟ


ಈಗ ಲಭ್ಯವಿರುವ ಮಾಹಿಗಳಿಂದ ಹೇಳುವುದಾದರೂ ಕರ್ನಾಟಕದ ಪತ್ರಿಕೋದ್ಯಮಕ್ಕೆ 179 ವರ್ಷಗಳ ದೀರ್ಘ ಇತಿಹಾಸವಿದೆ.

ಪ್ರಥಮದಲ್ಲಿ ಧರ್ಮಪ್ರಚಾರ, ಸದ್ವಿಚಾರ, ಶಿಕ್ಷಣ, ಕಾವ್ಯಚಿಂತನ ಹೀಗೆ ವಿವಿಧ ವಿಚಾರಗಳಿಂದ ಮೊದಲುಗೊಂಡು ಕ್ರಮೇಣದಲ್ಲಿ ರಾಜಕಾರಣ, ಲೋಕವ್ಯವಹಾರ, ಸೃಜನಶೀಲ ಆಸಕ್ತಿಗಳತ್ತ ಪತ್ರಿಕೋದ್ಯಮ ಹರಿಯುತ್ತ ಸಾಗಿದ್ದನ್ನು ಕಾಣಬಹುದು.  

ಈಗ ಲಭ್ಯವಿರುವ ಆಧಾರಗಳ ಪ್ರಕಾರ ಕನ್ನಡದ ಮೊದಲ ಪತ್ರಿಕೆಯಾಗಿ ಕಾಣಬರುವುದು  'ಮಂಗಳೂರು ಸಮಾಚಾರ'. ಇದು ಪ್ರಕಟವಾದುದು 1843ರ ಜುಲೈ 1ರಂದು. ಮಂಗಳೂರಿನಲ್ಲಿ ಜನಸೇವೆಯಲ್ಲಿ ತೊಡಗಿದ್ದ ಬಾಸೆಲ್ ಮಿಶನ್ನಿನ ಪಾದ್ರಿ ಹರ್ಮನ್ ಮೋಗ್ಲಿಂಗ್ ಈ ಪತ್ರಿಕೆಯ ಸಂಪಾದಕ ಹಾಗೂ ಕನ್ನಡ ಪತ್ರಿಕೋದ್ಯಮದ ಆದ್ಯ ಪ್ರವರ್ತಕ. ಈತ ಭಾರತಕ್ಕೆ ಬಂದುದು 1836ರಲ್ಲಿ. 1844ರ ಹೊತ್ತಿಗೆ ಬಳ್ಳಾರಿಗೆ ವರ್ಗಾವಣೆಗೊಂಡ ಈ ಪತ್ರಿಕೆ ಅಲ್ಲಿ  'ಕನ್ನಡ ಸಮಾಚಾರ' ಎಂದು ಹೆಸರು ಬದಲಿಸಿಕೊಂಡಿತು. ಎರಡು ವರ್ಷಗಳ ಬಳಿಕ ವಾಪಸ್ಸು ಮಂಗಳೂರಿಗೇ ಬಂದು ಕೆಲಕಾಲ ಮುಂದುವರಿಯಿತು.

'ಮಂಗಳೂರು ಸಮಾಚಾರ' ಕಲ್ಲಚ್ಚಿನಲ್ಲಿ ಮುದ್ರಣಗೊಳ್ಳುತ್ತಿತ್ತು. ನಾಲ್ಕು ಪುಟಗಳ ಈ ಪತ್ರಿಕೆಯ ಬೆಲೆ ಕೇವಲ ಒಂದು ದುಡ್ಡು. ಅದರಲ್ಲಿ ಅಂಚೆ ವೆಚ್ಚವೂ ಸೇರಿತ್ತು. ಪತ್ರಿಕೆಯ ಒಡೆತನ ಬಾಸೆಲ್ ಮಿಸಶನ್ನಿಗೆ ಸೇರಿದ್ದೆಂದು ಹೇಳಲಾಗಿದೆ. ಆದರೆ ಎಲ್ಲಿಯೂ ಅದರ ಉಲ್ಲೇಖವಿಲ್ಲ. ಹಾಗೆಯೇ ಕ್ರೈಸ್ತಧರ್ಮ ಪ್ರಸಾರಕ್ಕಾಗಿ ಈ ಪತ್ರಿಕೆಯನ್ನು ಮೋಗ್ಲಿಂಗ್ ಬಳಸಿಕೊಳ್ಳಲಿಲ್ಲ. 

ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪಾಕ್ಷಿಕವಾಗಿದ್ದರೆ 1849ರಲ್ಲಿ ಆರಂಭಗೊಂಡಿದ್ದ 'ಸುಬುದ್ಧಿ ಪ್ರಕಾಶ' ಮೊದಲ ವಾರ ಪತ್ರಿಕೆ. ಅದು ಬೆಳಗಾಂವಿಯಿಂದ ಪ್ರಕಟವಾಗುತ್ತಿತ್ತು. ಕಲ್ಲಚ್ಚಿನಲ್ಲಿ ಮುದ್ರಿಸಲಾಗುತ್ತಿತ್ತು. ಕಾನರೀಸ್ ವರ್ನಾಕ್ಯುಲರ್ ಸೊಸೈಟಿಯ ಆಶ್ರಯದಲ್ಲಿ ವೆಂಕಟರಂಗೋ ಕಟ್ಟಿಯವರು 1861ರ ನವೆಂಬರ್ ತಿಂಗಳಿನಲ್ಲಿ ಹೊರಡಿಸಿದ 'ಕನ್ನಡ ಜ್ಞಾನಬೋಧಕ' ಮೊದಲು ವಾರಪತ್ರಿಕೆಯೂ ಅನಂತರ ಮಾಸಿಕವೂ ಆಗಿತ್ತು. 1862ರಲ್ಲಿ ಬಿ.ಎಚ್.ರೈಸ್ ಬೆಂಗಳೂರಿನಲ್ಲಿ ಆರಂಭಿಸಿ 1868ರ ವರೆಗೆ ನಡೆಸಿದ 'ಅರುಣೋದಯ' ಕನ್ನಡದ ಆದ್ಯ ಮಾಸಪತ್ರಿಕೆಗಳಲ್ಲಿ ಒಂದು.

19ನೆಯ ಶತಮಾನದಲ್ಲಿ ಪ್ರಕಟಗೊಂಡ ಶೈಕ್ಷಣಿಕ ಆಸಕ್ತಿಯ ಪತ್ರಿಕೆಗಳ ಪೈಕಿ ಹೆಸರಿಸಬೇಕಾದುದು 'ಕನ್ನಡ ಶಾಲಾ ಪತ್ರಿಕೆ'. 1865ರಲ್ಲಿ ಬೆಳಗಾಂವಿಯಲ್ಲಿ 'ಮಠಪತ್ರಿಕೆ' ಎಂಬ ಹೆಸರಿನಿಂದ ಈ ಪತ್ರಿಕೆ ಹೊರಟಿತು. 1867ರ ಏಪ್ರಿಲ್ನಲ್ಲಿ ಅದು 'ಶಾಲಾ ಪತ್ರಿಕೆ' ಎಂದು ಪುನರ್ನಾಮಕರಣಗೊಂಡಿತು. ಬೆಳಗಾಂವಿಯಿಂದ ಧಾರವಾಡದ ಟೀಚರ್ಸ್ ಟ್ರೇನಿಂಗ್ ಕಾಲೇಜಿಗೆ ಅದರ ಒಡೆತನ ವರ್ಗಾವಣೆಗೊಂಡಿತು. 1871ರಲ್ಲಿ ಅದನ್ನು 'ಕನ್ನಡ ಶಾಲಾಪತ್ರಿಕೆ' ಎಂದು ಕರೆಯಲಾಯಿತು. ಇದು 'ಜೀವನ ಶಿಕ್ಷಣ' ಎಂಬ ಹೆಸರಿನಿಂದ ಮುಂದುವರಿಯಿತು. ಕನ್ನಡದಲ್ಲಿ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳಲ್ಲೆಲ್ಲ ಇದು ಹಿರಿಯದಾಗಿದೆ. ಶಿಕ್ಷಣಾಧಿಕಾರಿಯಾಗಿದ್ದ ಡೆಪ್ಯುಟಿ ಚನ್ನಬಸಪ್ಪ ಆರಂಭ ಕಾಲದಲ್ಲಿ ಈ ಪತ್ರಿಕೆಯ ಬೆನ್ನೆಲುಬಾಗಿ ಬೆಳೆಸಿದರು.

ರಾಜ್ಯಪತ್ರವಾಗಿ ಪ್ರಕಟಗೊಳ್ಳುತ್ತಿರುವ ಕರ್ನಾಟಕ ಸರ್ಕಾರದ ಗೆಜೆಟ್ 19ನೆಯ ಶತಮಾನದಲ್ಲೇ ಆರಂಭಗೊಂಡು ಇನ್ನೂ ಮುಂದುವರೆದಿರುವ ಮತ್ತೊಂದು ಪತ್ರಿಕೆ. ಈಗ ರಾಜ್ಯ ಪತ್ರ ಸರ್ಕಾರದ ಅಧಿಕೃತ ಸೂಚನಾ ಪತ್ರಗಳನ್ನು ಪ್ರಕಟಿಸುವುದಕ್ಕಷ್ಟೇ ಸೀಮಿತವಾಗಿದೆ. ಈಗಿನ ರಾಜ್ಯಪತ್ರದ ಪುರ್ವರೂಪ ಮೈಸೂರು ಗೆಜೆಟ್, 1866 ಏಪ್ರಿಲ್ 7ರಂದು ಮೊದಲು ಪ್ರಕಟಗೊಂಡಿತು.

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ವೆಂಕಟರಂಗೋಕಟ್ಟಿಯವರ ಪತ್ರಿಕಾ ಸಾಧನೆಯೂ ವಿಶೇಷ ಉಲ್ಲೇಖನೀಯ. ಜನರಲ್ಲಿ, ಮುಖ್ಯವಾಗಿ ಮಕ್ಕಳಲ್ಲಿ ಜ್ಞಾನ ಪ್ರಸಾರ ಮಾಡುವುದು, ಓದುವ ಹವ್ಯಾಸ ಹೆಚ್ಚಿಸುವುದು ಇವರ ಉದ್ದೇಶವಾಗಿತ್ತು. ‘ಶೋಧಕ’ ಎಂಬ ಮಾಸಪತ್ರಿಕೆಯನ್ನು ಇವರು 1875-78ರ ವರೆಗೆ ನಡೆಸಿದರು. ಮೊದಲು ಬೆಳಗಾಂವಿಯಿಂದ ಪತ್ರಿಕೆ ಪ್ರಕಟವಾಗುತ್ತಿತ್ತು. ಅನಂತರ ಧಾರವಾಡದಿಂದ ‘ಲೋಕಶಿಕ್ಷಕ’ ಎಂಬ ಇನ್ನೊಂದು ಪತ್ರಿಕೆಯನ್ನೂ ಪ್ರಾರಂಭಿಸಿದರು (1888).

19ನೆಯ ಶತಮಾನದ ಅಂತಿಮ ಚರಣದಲ್ಲಿ ಮೈಸೂರು ಭಾಗದ ಪತ್ರಿಕೋದ್ಯಮದ ನಾಯಕತ್ವ ವಹಿಸಿದವರು ಎಂ. ವೆಂಕಟಕೃಷ್ಣಯ್ಯ. ಇವರ ಸಾರ್ವಜನಿಕ ಸೇವೆಯ ಹಲವು ಮುಖಗಳಲ್ಲಿ ಪತ್ರಿಕೋದ್ಯಮವೂ ಒಂದಾಗಿತ್ತು. ತಾತಯ್ಯ ಎಂದೇ ಖ್ಯಾತರಾಗಿದ್ದ ಇವರು ಒಂದು ಸಂಸ್ಥೆಯ ರೀತಿ ಬೆಳೆದು ಹಲವು ಪತ್ರಿಕೆಗಳ ಸ್ಥಾಪಕರಾಗಿ, ಮೈಸೂರಿನ ಸಾರ್ವಜನಿಕ ಜೀವನಕ್ಕೆ ಹೇಗೋ ಪತ್ರಿಕೋದ್ಯಮಕ್ಕೂ ಆಧಾರಸ್ತಂಭವಾಗಿದ್ದರು. ‘ಹಿತಬೋಧಿನಿ’ ಮಾಸಪತ್ರಿಕೆಯ ಮೂಲಕ ಇವರು ಪತ್ರಿಕಾರಂಗ ಪ್ರವೇಶಿಸಿದರು. ಹಿತಬೋಧಿನಿ 1883ರಲ್ಲಿ ಆರಂಭಗೊಂಡು 1890ರ ವರೆಗೆ ನಡೆದು ಬಂತು. ಈ ಪತ್ರಿಕೆ ಆ ಕಾಲದಲ್ಲಿ ಅಪಾರ ಜನಮನ್ನೆಣೆ ಗಳಿಸಿತ್ತು ಎನ್ನಲಾಗಿದೆ. ‘ವೃತ್ತಾಂತ ಚಿಂತಾಮಣಿ’ (1885) ಇವರ ಇನ್ನೊಂದು ಜನಪ್ರಿಯ ಪತ್ರಿಕೆ. ತೀಕ್ಷ್ಣ ಸಂಪಾದಕೀಯಗಳಿಂದ ಆಡಳಿತಗಾರರಿಗೆ ಈ ಪತ್ರಿಕೆ ಚುರುಕು ಮುಟ್ಟಿಸುತ್ತಿತ್ತು. ‘ಮೈಸೂರು ಹೆರಾಲ್ಡ್’‌ ಎಂಬ ಪತ್ರಿಕೆಯನ್ನು 1886ರಲ್ಲೂ ವೆಲ್ತ್‌ ಆಫ್ ಮೈಸೂರು ಎಂಬುದನ್ನು 1912ರಲ್ಲೂ ಸಂಪಾದಿಸಿ ಪ್ರಕಟಿಸಿದ ಖ್ಯಾತಿ ತಾತಯ್ಯನವರದು. ಇದಲ್ಲದೆ ಇವರ ಪತ್ರಿಕಾ ಸಾಹಸದ ಸಾಲಿಗೆ ಸೇರಬೇಕಾದ ಇತರ ಪತ್ರಿಕೆಗಳೆಂದರೆ 'ಸಂಪದಭ್ಯುದಯ' (ಕನ್ನಡ ದಿನಪತ್ರಿಕೆ 1912), ನೇಚರ್ ಕ್ಯೂರ್ (ಇಂಗ್ಲಿಷ್ ದಿನಪತ್ರಿಕೆ) ಮತ್ತು ಸಾಧ್ವಿ (1899). ಸಾಧ್ವಿ ಮೊದಲು ವಾರಪತ್ರಿಕೆಯಾಗಿ ಆರಂಭಗೊಂಡು ಅನಂತರ ದಿನಪತ್ರಿಕೆಯಾಗಿ ಬೆಳೆದು ಬಂದು, ವೆಂಕಟಕೃಷ್ಣಯ್ಯನವರ ಶಿಷ್ಯ ಅಗರಂ ರಂಗಯ್ಯನವರ ಸಂಪಾದಕತ್ವದಲ್ಲಿ ಈ ಪತ್ರಿಕೆ ಶತಮಾನದ ಸನಿಹ ಬದುಕಿತು. ಒಂದು ಕಾಲದಲ್ಲಿ ಮೈಸೂರಿನ ಜನಪ್ರಿಯ ಪತ್ರಿಕೆ ಗಳಲ್ಲೊಂದಾಗಿತ್ತು. 

ಕರ್ಕಿ ಸೂರಿ ವೆಂಕಟರಮಣಶಾಸ್ತ್ರಿ ಆ ಕಾಲದಲ್ಲೇ ಮುಂಬಯಿಗೆ ತೆರಳಿ 1885ರಲ್ಲಿ ಹವ್ಯಕ ಕಾರವಾರ ಚಂದ್ರಿಕ ಎಂಬ ಸಾಪ್ತಾಹಿಕವನ್ನು ಆರಂಭಿಸಿದ್ದು ಹಾಗೂ ಅದು ಆಗ ಮುಂಬಯಿ ಪ್ರಾಂತ್ಯಕ್ಕೆ ಸೇರಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲೂ ಜನಪ್ರಿಯವಾಗಿತ್ತು. ಈ ಪತ್ರಿಕೆ ನಾಲ್ಕು ವರ್ಷ ಬಾಳಿತು. 'ಹಿತೋಪದೇಶ' ಎಂಬ ಮಾಸಿಕವನ್ನೂ ಇವರು ಕೆಲಕಾಲ ನಡೆಸಿದರು. ಮಕ್ಕಳಿಗಾಗಿಯೂ ವಿಶೇಷ ಪತ್ರಿಕೆ ನಡೆಸಿದರು.

19ನೆಯ ಶತಮಾನದಲ್ಲಿ ಕನ್ನಡದಲ್ಲಿ ಪ್ರಕಟವಾದುದು ಬಹುಪಾಲು ನಿಯತಕಾಲಿಕೆಗಳೇ ಆದರೂ ಶತಮಾನದ ಕೊನೆಯ ಘಟ್ಟಗಳಲ್ಲಿ ದಿನಪತ್ರಿಕೋದ್ಯಮ ಕಾಲಿರಿಸುವುದನ್ನು ಕಾಣುತ್ತೇವೆ. ಪ್ರಪ್ರಥಮ ಕನ್ನಡ ದಿನಪತ್ರಿಕೆಯೆಂದು ಗುರುತಿಸಲಾಗಿರುವ 'ಸೂರ್ಯೋದಯ ಪ್ರಕಾಶಿಕ' ಪ್ರಕಟಗೊಂಡಿದ್ದು 1888ರಲ್ಲಿ. ಈ ಪತ್ರಿಕೆಯ ಸ್ಥಾಪಕರು ಮೈಸೂರಿನ ಬಿ. ನರಸಿಂಗರಾವ್.

19ನೆಯ ಶತಮಾನದ ಅಂತ್ಯಕ್ಕೆ ಕನ್ನಡ ಪತ್ರಿಕಾ ಲೋಕ ಬಿರುಸಿನಿಂದ ಮುನ್ನಡೆಯು ತ್ತಿದ್ದುದನ್ನು ಕಾಣುತ್ತೇವೆ. ಸುದ್ದಿಯ ವಾಹಕಗಳಾದ ದಿನಪತ್ರಿಕೆಗಳು, ಮನರಂಜನೆ ಮೂಲವಾದ ನಿಯತಕಾಲಿಕೆಗಳು ಪ್ರತ್ಯೇಕ ಕವಲಾಗಿ ಬೆಳೆಯಲಾಂಭಿಸಿದುವು. ಹಾಗೆಯೇ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಹೊರಡಿಸಲಾಗುವ ಪತ್ರಿಕೆಗಳ ಜೊತೆ, ಘೋಷಿಸಿಕೊಂಡ ವಿಶೇಷ ಆಸಕ್ತಿಗಳನ್ನೇ ಪೋಷಿಸುವ ವಿಶೇಷಾಸಕ್ತಿ ನಿಯತಕಾಲಿಕೆಗಳೂ ಚಲಾವಣೆಯಲ್ಲಿವೆ. 1860ರ ದಶಕದಲ್ಲೇ ಮಂಗಳೂರಿ ನಿಂದ ಉಭಯ ಗೊಪಾಲಕೃಷ್ಣ ಎಂಬವರು ಪ್ರಕಟಿಸಿದ ನ್ಯಾಯಸಂಗ್ರಹ ಎಂಬುದು ವಿಶೇಷಾಸಕ್ತಿ ನಿಯತಕಾಲಿಕ ಪ್ರತ್ಯೇಕ ಕವಲೊಡೆದುದಕ್ಕೆ ಸೂಚನೆ. ಇಂದಿನ ಜನಪ್ರಿಯ ನಿಯತಕಾಲಿಕೆಗಳಲ್ಲಿ ಕಂಡುಬರುವ ಕಥೆ, ಕವನ, ಪ್ರಬಂಧ, ಲೇಖನ, ವಿಜ್ಞಾನ, ರಾಜಕೀಯ ಮುಂತಾಗಿ ಎಲ್ಲ ವರ್ಗಗಳ ಆಸಕ್ತಿ ಗಮನ ದಲ್ಲಿರಿಸಿಕೊಂಡು ಓದುವ ಸಾಮಗ್ರಿಗಳನ್ನು ನೀಡುವ ಪತ್ರಿಕೆಗಳು ನೀಡುವ ಪತ್ರಿಕೆಗಳು ಆಗಲೂ ಇದ್ದುವು. ಕಾವ್ಯಕ್ಕೆ, ಸಾಹಿತ್ಯಕ್ಕೆ, ಧರ್ಮಕ್ಕೆ ಮುಂತಾಗಿ ಸೀಮಿತ ಆಸಕ್ತಿಯನ್ನು ಮಾತ್ರ ಪೋಷಿಸುವ ಪತ್ರಿಕೆಗಳೂ ಬಂದುವು. ಕನ್ನಡದ ಮೊದಲ ಸಾಹಿತ್ಯ ಪತ್ರಿಕೆಯೆಂದು ಗುರುತಿಸಬಹುದಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ 'ವಾಗ್ಭೂಷಣ' ಮಾಸಪತ್ರಿಕೆ 1896ರಿಂದ ಪ್ರಕಟಣೆ ಆರಂಭಿಸಿತ್ತು. 

ಕನ್ನಡ ಪತ್ರಿಕೆಗಳ ದೃಷ್ಟಿಯಿಂದ 1843-1900 ರವರೆಗಿನದು ಆರಂಭಿಕ ಘಟ್ಟ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ