ಜಯತೀರ್ಥ ರಾಜಪುರೋಹಿತ
ಜಯತೀರ್ಥ ರಾಜಪುರೋಹಿತ
ಜಯತೀರ್ಥ ರಾಜಪುರೋಹಿತ ಅವರು ಸಾಹಿತಿಗಳಾಗಿ ಮತ್ತು ಐಎಎಸ್ ಸ್ಥಾನದವರೆಗೆ ಏರಿದ ಅಧಿಕಾರಿಗಳಾಗಿ ಮಹತ್ವದ ಸಾಧನೆ ಮಾಡಿದವರು.
ಕನಕಗಿರಿ ರಾಯಚೂರು ಜಿಲ್ಲೆಯ ಒಂದು ಊರು. ಹಿಂದೆ ಅದೊಂದು ಪಾಳೆಯಪಟ್ಟು. ಅದನ್ನಾಳುತ್ತಿದ್ದ ನಾಯಕರು ವಿಜಯನಗರದ ಅರಸರಿಗೆ ಅಧೀನರಾಗಿದ್ದವರು. ಅವರಿಗೆ ಪುರೋಹಿತರಾಗಿದ್ದವರು ಜಯತೀರ್ಥ ರಾಜ ಪುರೋಹಿತರ ಪೂರ್ವಿಕರು. ಹೀಗಾಗಿ ಜಯತೀರ್ಥರಿಗೆ ಪುರೋಹಿತ ಎಂಬ ಹೆಸರು ಅಂಟಿಕೊಂಡು ಬಂತು.
ಜಯತೀರ್ಥ ರಾಜಪುರೋಹಿತರ ತಂದೆ ಶೇಷಾಚಾರ್ಯರು ಮಳಖೇಡದಲ್ಲಿ ಜಯತೀರ್ಥರ ವೃಂದಾವನದ ಬಳಿ ಕೆಲವು ದಿನ ಪಾರಾಯಣ ಮಾಡಿದ್ದರಂತೆ. 1925ರ ಜುಲೈ 1ರಂದು ಜನಿಸಿದ ಮಗನಿಗೆ ಜಯತೀರ್ಥ ಎಂದೇ ನಾಮಕರಣ ಮಾಡಿದರು.
ಹೆಸರು, ಕುಲ ಬಲು ದೊಡ್ಡವು - ಆಗಿನ ಕಾಲದ ಲೆಕ್ಕದಲ್ಲಿ ರಾಜಪೌರೋಹಿತ್ಯಕ್ಕಾಗಿ ಇಷ್ಟಷ್ಟು ಭೂಮಿ ಕಾಣಿ ಆ ವಂಶದ ಹಿರಿಯರಿಗೆ ದೊರೆತಿದ್ದುವಾದರೂ ಯಾವುದೂ ಅಷ್ಟಾಗಿ ಉಳಿದಿರಲಿಲ್ಲ. ಹೆಸರಿಗೆ ರಾಜಯೋಗ ಅದರೆ ಬಡತನದ ಜೀವನ. ತಂದೆ ಮಹಾ ಸಂಪ್ರದಾಯಪ್ರಿಯರು. ವಂಶಕ್ಕೆ ರಾಜಪೌರೋಹಿತ್ಯ ಎಂದೋ ತಪ್ಪಿ ಹೋಗಿದ್ದರೂ ಇವರದ್ದು ಜನರ ಪೌರೋಹಿತ್ಯದ ವೃತ್ತಿ. ಸಂಪಾದನೆ ಅಷ್ಟಕಷ್ಟೇ. ಲೌಕಿಕ ವಿದ್ಯೆ ವರ್ಜ್ಯ. ಮಗನೂ ತನ್ನ ವಂಶದ ಹಿರೀಕರಂತೆ ಸಂಸ್ಕೃತ ಓದಿ ಬಾಳು ಸಾರ್ಥಕಪಡಿಸಿಕೊಳ್ಳಬೇಕೆಂಬ ತೀರ್ಮಾನ ಮಾಡಿದ್ದರು. ಕಟ್ಟುನಿಟ್ಟಿನ ಬದುಕು.
ಮಗನಿಗೋ ಇಂಗ್ಲಿಷ್ ಕಲಿಯಬೇಕೆಂಬ ಆಸೆ. ಆದರೆ ತಂದೆ ಬಿಡಬೇಕಲ್ಲ? ಸಂಸ್ಕೃತ ಚೆನ್ನಾಗಿ ಕಲಿತಿದ್ದಾಯಿತು. ಜಯತೀರ್ಥರಿಗೆ ಹತ್ತು ವರ್ಷ ಆಗಿದ್ದಾಗ ಬೇಸರದಿಂದ ಮನೆ ಬಿಟ್ಟು ಓಡಿ ಹೋದರು. ಕೊನೆಗೆ ತಂದೆ ಮಗನನ್ನು ಪತ್ತೆ ಹಚ್ಚಿ ಮನೆಗೆ ಕರೆತಂದರು. ಮಗ ಮನೆ ಬಿಟ್ಟು ಓಡಿ ಹೋದದ್ದು ಮದುವೆಗಾಗಿ ಎಂದು ಭಾವಿಸಿ ಮಗನಿಗೆ ಮದುವೆ ಮಾಡಿಯೇ ಬಿಟ್ಟರು. ಆಗ ಮಗನಿಗೆ ಹದಿನೆಂಟು ವರ್ಷ ವಧುವಿಗೆ ಹದಿನಾಲ್ಕು. ಜಯತೀರ್ಥರು ಏಳನೆಯ ಕ್ಲಾಸ್ ಫೇಲು. ಹುಡುಗಿ ಸೀತಾ ಪಾಸು. ಆಗ ಜಯತೀರ್ಥರಿಗೆ ಅದೃಷ್ಟ ಖುಲಾಯಿಸಿತೆನ್ನಬೇಕು.
ಹೈದರಬಾದಿನ ಮಾವನ ಮನೆಯಲ್ಲಿ ಓದು ಮುಂದುವರಿಸಿದರು. ಏಳನೆಯ ತರಗತಿ ಸೇರಿದರು. ಖಾಸಗಿಯಾಗಿ ಓದಿ ಮೆಟ್ರಿಕ್ ಪಾಸು ಮಾಡಿದರು. ಆ ಸಮಯದಲ್ಲಿ ಹೈದರಾಬಾದಿನಲ್ಲಿ ಎ. ಆರ್. ಕೃಷ್ಣಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಮಾಸ್ತಿ, ಶ್ರೀರಂಗ, ಬಿ. ಎಂ. ಶ್ರೀ, ಗೋಕಾಕ್, ಬೆಟಗೇರಿ, ಸಾಲಿ - ಹೀಗೆ ಹಲವು ಸಾಹಿತ್ಯ ದಿಗ್ಗಜಗಳ ಸಂದರ್ಶನ, ಭಾಷಣಗಳ ಸುರಿಮಳೆಯಾಗಿ ಇವರ ಅಂತರಂಗವನ್ನು ಪ್ರೇರಿಸಿತು. ಆದರೆ ಯಾಕೋ ಮೆಟ್ರಿಕ್ಕಿಗೇ ಓದು ಸಾಕೆನಿಸಿ ಕೆಲಸಕ್ಕಾಗಿ ಪ್ರಯತ್ನ ಮಾಡಿ, ಒಂದೆರಡು ತಿಂಗಳು ಸಂಬಳವಿಲ್ಲದೆ ದುಡಿದರು. ಅನಂತರ ಮೂವತ್ತು ರೂಪಾಯಿ ಸಂಬಳ ಬರತೊಡಗಿತು. ಮತ್ತೆ ಓದಬೇಕೆಂಬ ಇರಾದೆ ಹುಟ್ಟಿ ಇಂಟರ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಹೆಂಡತಿ ಮಗುವನ್ನು ಊರಿನಲ್ಲಿ ಬಿಟ್ಟು, ಹೈದರಾಬಾದಿನಲ್ಲಿ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಬಿ. ಎ. ವಿದ್ಯಾರ್ಥಿಯಾದರು. ಪ್ರೊ. ಡಿ. ಕೆ. ಭೀಮಸೇನ ರಾವ್ ಮತ್ತು ಗುರು ಗೋಕಾಕರು ಅಲ್ಲಿಗೆ ಇಂಗ್ಲೀಷ್ ಅಧ್ಯಾಪಕರಾಗಿ ಬಂದರು. ಅವರ ನೇತೃತ್ವದಲ್ಲಿ "ಜಿಜ್ಞಾಸು ಕೂಟ" ದ ಸಂಘಟನೆಯಾಗಿ ಬರವಣಿಗೆಗೆ ಪ್ರೇರಣೆಯಾಯಿತು. ನಾಟಕ ಪ್ರದರ್ಶನಗಳಲ್ಲೂ ಪಾಲ್ಗೊಂಡರು.
ರಾಜಕೀಯ ಬಿರುಗಾಳಿ ಎದ್ದಿತು. ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ನಿಜಾಮ ಕೊಟ್ಟಿರಲಿಲ್ಲ. ಪಟೇಲರ ನೇತೃತ್ವದಲ್ಲಿ ಪೋಲೀಸ್ ಕಾರ್ಯಾಚರಣೆ ನಡೆಯಿತು. ಪ್ರಕ್ಷುಬ್ಧ ದಿನಗಳು ಅವು. ಜಯತೀರ್ಥ ರಾಜಪುರೋಹಿತರಿಗೆ ಕೊನೆಗೆ ಬಿ. ಎ. ಪಾಸಾಯಿತು. ಕನ್ನಡ - ಸಂಸ್ಕೃತಗಳಲ್ಲಿ ಅತ್ಯಧಿಕ ಅಂಕ ಬಂತು. ಮತ್ತೆ ಕೆಲಸದ ಬೇಟೆ ಆರಂಭಿಸಿದರು. ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಗೆದ್ದು ತಹಸೀಲ್ದಾರ್ ಆಗಿ ನೇಮಕವಾಗಿ ಜಹೀರಾಬಾದಿನಲ್ಲಿ ಕೆಲಸ ಆರಂಭ ಮಾಡಿದರು. ಆ ಮೇಲೆ ಬೀದರಿಗೆ ವರ್ಗವಾಯ್ತು. ಈ ನಡುವೆ ಕ್ಷಯ ರೋಗ ಬಂದು, ಗೆಳೆಯರ ನೆರವಿನಿಂದ ಗಂಡಾಂತರದಿಂದ ಪಾರಾದರು. ಉದ್ಯೋಗದ ನಡುವೆ ಸಣ್ಣದಾಗಿ ಆರಂಭವಾಗಿದ್ದ ಸಾಹಿತ್ಯಾಧ್ಯಯನ - ಲೇಖನ ಕಾರ್ಯ ಮುಂದುವರಿಯಿತು.
ಕಾದಂಬರಿ, ಸಣ್ಣಕಥೆ, ನಾಟಕ, ಜೀವನ ಚರಿತ್ರೆ, ನ್ಯಾಯಕ್ಷೇತ್ರದಲ್ಲಿ ಕನ್ನಡದಲ್ಲಿ ತೀರ್ಪು, ಹಲವಾರು ಕೃತಿಗಳ ಸಂಪಾದನೆ, ಬಿಡಿಲೇಖನಗಳು ಹೀಗೆ ಜಯತೀರ್ಥ ರಾಜಪುರೋಹಿತರು ಬರೆದರು. 1962ರಲ್ಲಿ ಅವರು ಬರೆದ "ಪಾರವ್ವನ ಪಂಚಾಯತಿ" ಕಥೆಗೆ ಬಹುಮಾನ ಬಂತು. "ಹಾಲು - ಜೇನು" ಮೊದಲ ಕಾದಂಬರಿ. ಇದೊಂದು ಪ್ರಾದೇಶಿಕ ವಸ್ತುವನ್ನಾಧರಿಸಿದ ಕೃತಿ. ಸ್ವಾತಂತ್ರ್ಯಾನಂತರ ಹೈದರಾಬಾದ್ ಸಂಸ್ಥಾನ ಪಡೆದ ಸ್ಥಿತ್ಯಂತರವೂ, ಅದಕ್ಕೆ ಹಿಂದೆ ಇದ್ದ ನಿಜಾಮ್ ಆಡಳಿತದ ವಾತಾವರಣವೂ ಇದಕ್ಕೆ ಹಿನ್ನಲೆ. ಹಳ್ಳಿಯ ಬಾಳಿನ, ಎರಡು ಧರ್ಮ - ಪಂಗಡಗಳ ಮಧುರ ಸಂಬಂಧದ ಎಳೆಯತ್ತು. "ಸುಳಿಗಾಳಿ" ಕೂಡ ಪ್ರಾದೇಶಿಕ ಕಾದಂಬರಿ. ಇದು ಕೂಡ ಹೈದರಾಬಾದ್ ಕರ್ನಾಟಕದ ನಿಜಾಮಶಾಹಿ ಆಡಳಿತದ ಅವನತಿಯ ಕಾಲದ ಜೀವನದ ಸೂಕ್ಷ್ಮ ಎಳೆಗಳ ಕಲಾತ್ಮಕ ಹೆಣಿಕೆ. ದ್ವಿರಾಷ್ಟ್ರಭಾರ, ಅಶಾಂತಿ, ಕ್ಷೋಭೆ, ಮೌಲ್ಯಗಳ ಪತನ, ಹಿಂದೂ - ಮುಸ್ಲಿಂ ವೈಷಮ್ಯ, ಧಾರ್ಮಿಕ ದಬ್ಬಾಳಿಕೆ ನವಾಬಶಾಹಿಯ ವಿಲಾಸ ಜೀವನ - ಇವೆಲ್ಲವೂ ಕಥಾವಸ್ತುವಿಗೆ ಹಿನ್ನೆಲೆಯಾಗಿ ಒದಗಿಬಂದಿದೆ.
ಜಯತೀರ್ಥ ರಾಜಪುರೋಹಿತರ ಮೂರನೆಯ ಕಾದಂಬರಿ "ಜೊಹರಾ". ಇದು ಎರಡು ಮುಗ್ಧ ಜೀವಿಗಳ ಅಥವಾ ಕುಟುಂಬಗಳ ಕಥೆ. 'ಕಡಲ ತೋಳ' ಅಮೆರಿಕನ್ ಸಾಮ್ಯವಾದಿ ಲೇಖಕ ಜಾಕ್ ಲಂಡನ್‌ನ "ದಿ ಸೀವುಲ್ಫ್" ಎಂಬ ಇಂಗ್ಲಿಷ್ ಕಾದಂಬರಿಯ ಭಾಷಾಂತರ. ನಾಸ್ತಿಕ ವಾದದ ಅತ್ಯಂತ ಶಕ್ತಪೂರ್ಣ ಅಭಿವ್ಯಕ್ತಿ.
ಜಯತೀರ್ಥ ರಾಜಪುರೋಹಿತರ ಸಣ್ಣ ಕಥೆಗಳ ಸಂಕಲಗಳು ನಾಲ್ಕು. "ಪಾರವ್ವನ ಪಂಚಾಯಿತಿ", "ರೋಹಿಣಿ","ಮೌಲ್ಯಗಳು" ಮತ್ತು "ಶಿಥಿಲ ಕಲೆ".
"ತುಂಗೆಯಂಗಳದಲ್ಲಿ","ಕುಮಾರವ್ಯಾಸ","ಜಯಬಂಗ್ಲಾ" ಎಂಬ ನಾಟಕಗಳನ್ನು ಜೀವನ ಚರಿತ್ರೆಗಳನ್ನು ಸಂಪಾದಿತ ಕೃತಿಗಳನ್ನು ಹೊರತಂದ ಜಯತೀರ್ಥ ರಾಜಪುರೋಹಿತರು ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೆ ತರುವಲ್ಲಿ ಮಾಡಿರುವ ಕೆಲಸ ಸಹಾ ಮಹತ್ವದ್ದು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಕಟಣೆಯಾದ "ಆಡಳಿತ ಕನ್ನಡ ಕೈಪಿಡಿ" ಇವರ ಶ್ರಮದ ಫಲ. ನ್ಯಾಯಾಧಿಕಾರಿಯಾಗಿ ಕನ್ನಡದಲ್ಲಿ ಇವರು ನೀಡಿದ ತೀರ್ಪುಗಳೂ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಯಾಗಿ ಸರ್ಕಾರದ ಕನ್ನಡ ಅಭಿವೃದ್ಧಿ ಇಲಾಖೆಯ ಮುಖ್ಯಸ್ಥರಾಗಿ ಇವರು ಮಾಡಿದ ಕೆಲಸಗಳು ಇವರ ಶ್ರದ್ಧೆ ನಿಷ್ಠೆಗಳ ದ್ಯೋತಕ. ಅಂತಿಮವಾಗಿ ಐ. ಎ. ಎಸ್. ಶ್ರೇಣಿಗೆ ಏರಿದ್ದು ಇವರ ದಕ್ಷತೆ ಪ್ರಾಮಾಣಿಕತೆಗಳಿಗೆ ಸಾಕ್ಷಿ. ಸಾಹಿತ್ಯ ಕೊನೆಯವರೆಗೂ ಇವರ ಸಂಗಾತಿಯಾಗಿತ್ತು.
ಜಯತೀರ್ಥ ರಾಜಪುರೋಹಿತರು 1986ರ ಏಪ್ರಿಲ್ 24ರಂದು ಈ ಲೋಕವನ್ನಗಲಿದರು.
On the birth anniversary of great writer and administrator Jayatheertha Rajapurohit
ಕಾಮೆಂಟ್‌ಗಳು