ನುಲೆನೂರು ಶಂಕರಪ್ಪ
ನುಲೆನೂರು ಶಂಕರಪ್ಪ
ನುಲೆನೂರು ಶಂಕರಪ್ಪ ಅವರು ಸಂಗೀತ, ಸಾಹಿತ್ಯ, ಅಧ್ಯಾತ್ಮ, ಜ್ಯೋತಿಷ ಹೀಗೆ ನಾಲ್ಕು ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ್ದವರು.
ನುಲೇನೂರು ಶಂಕರಪ್ಪನವರು 1892ರ ಜುಲೈ 30ರಂದು, ನಂದನ ಸಂವತ್ಸರದ ಶ್ರಾವಣ ಶುದ್ಧ ಷಷ್ಟಿಯಂದು ಜನಿಸಿದರು. ತಂದೆ ಕೃಷ್ಣಶರ್ಮರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕರೆ ತಾಲ್ಲೋಕು ರಾಮಗಿರಿ ಹೋಬಳಿಯ ನುಲೇನೂರಿನ ಶ್ಯಾನುಭೋಗರಾಗಿದ್ದರು. ತಾಯಿ ಸುಬ್ಬಮ್ಮನವರು. ಶಂಕರಪ್ಪನವರು ಒಂದೂವರೆ ವರ್ಷದವರಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡು ಕಡು ಕಷ್ಟಗಳನ್ನು ಬಾಲ್ಯದಲ್ಲಿ ಅನುಭವಿಸಿದರು. ತಾಯಿಯ ದೃಢ ಇಚ್ಚಾಶಕ್ತಿಯಿಂದ ಬದುಕು ಸಾಗಿತು. ಭರಮಸಾಗರದ ಬಂಧುಗಳ ಮನೆಯಲ್ಲಿ ಇದ್ದು ವಿದ್ಯಾಭ್ಯಾಸ ಮಾಡಿದರು. ಖಾಸಗಿಯಾಗಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ದಾವಣಗೆರೆ ತಾಲ್ಲೂಕಿನಲ್ಲಿ ಉಪಾಧ್ಯಾಯ ವೃತ್ತಿಯೂ ದೊರಕಿತು. ಚಿಕ್ಕ ವಯಸ್ಸಿನಲ್ಲಿಯೇ ಸೀತಮ್ಮನವರೊಂದಿಗೆ ವಿವಾಹವಾಯಿತು. ಇವರ ಮಕ್ಕಳೂ ಅಪಾರ ಸಾಧನೆ ಮಾಡಿದವರು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಪ್ರಸಿದ್ಧರಾದ ಎನ್. ಎಸ್. ಚಿದಂಬರರಾವ್ ಮತ್ತು ಎನ್. ಎಸ್. ಸೀತಾರಾಮರಾವ್ ಇವರ ಸುಪುತ್ರರು.
ನುಲೇನೂರು ಶಂಕರಪ್ಪನವರಿಗೆ ಭರಮಸಾಗರದಲ್ಲಿಯೇ ಕಾವ್ಯವಾಚನದ ಕಡೆ ಆಸಕ್ತಿ ಬೆಳೆದಿತ್ತು. ಮೊಳಕಾಲ್ಮೂರಿಗೆ ಬಡ್ತಿಯ ಮೇಲೆ ವರ್ಗವಾಗಿ ಬಂದಾಗ ಅದಕ್ಕೆ ಸಾಕಷ್ಟು ಮನ್ನಣೆ ದೊರಕಿತು. ಅವರ ಬರವಣಿಗೆ ಕೂಡ ಈ ಹಂತದಲ್ಲಿಯೇ ಆರಂಭವಾಯಿತು. 1924ರಲ್ಲಿ ಅವರನ್ನು ಅಪ್ಪರ್ ಸೆಕೆಂಡರಿ ಟ್ರೈನಿಂಗ್‍ಗೆ ಸರ್ಕಾರವು ಮೈಸೂರಿನ ಕಲಾಶಾಲೆಗೆ ಕಳುಹಿಸಿತು. ಇಲ್ಲಿ ಅವರ ಪ್ರತಿಭೆ ಬೆಳಕಿಗೆ ಬರಲು ಅವಕಾಶವಾಯಿತು. ಜೈಮಿನಿ ಭಾರತ ವಾಚನಕ್ಕಾಗಿ ಅವರನ್ನು ಸನ್ಮಾನ ಕೂಡ ಮಾಡಲಾಯಿತು. ಮೈಸೂರಿನಲ್ಲಿ ಇದ್ದಾಗಲೇ ಅವರಿಗೆ ಟೈಗರ್ ವರದಾಚಾರ್ ಅವರ ನಿಕಟ ಒಡನಾಟ ಬೆಳೆಯಿತು. ಸಂಗೀತದ ಕುರಿತ ಅವರ ಆಸಕ್ತಿಗೆ ಬೆಂಬಲ ದೊರಕಿತು. ಅವರ ಅಭಿನಯ ಪ್ರತಿಭೆ ಕೂಡ ಬೆಳಕಿಗೆ ಬಂದಿತು. ‘ಧ‍್ರುವ ಚರಿತ್ರೆ' ನಾಟಕದಲ್ಲಿ ಉತ್ತಾನಪಾದನ ಪಾತ್ರವನ್ನು ವಹಿಸಿ ಹೆಸರು ಮಾಡಿದರು.
ನುಲೇನೂರು ಶಂಕರಪ್ಪನವರಿಗೆ ಮೈಸೂರಿನಿಂದ ಬಂದ ನಂತರ ಶಿವಮೊಗ್ಗೆಗೆ ನೇಮಕವಾಯಿತು. ಇಲ್ಲಿ ಅವರಿಗೆ ದೊರಕಿದ ಮಿತ್ರರಲ್ಲಿ ಅನಂತ ಸುಬ್ಬರಾಯರು ಮುಖ್ಯರಾದವರು. ಕನ್ನಡದಲ್ಲಿಯೂ ಟೈಪರೈಟರ್ ರೂಪಿಸುವ ಕುರಿತು ಇಬ್ಬರಿಗೂ ಆಸಕ್ತಿ ಬೆಳೆಯಿತು. ಈ ಕುರಿತು ಪ್ರತಿನಿತ್ಯವೂ ಚರ್ಚೆ ನಡೆಸಿ ನೀಲಿನಕ್ಷೆ ರೂಪಿಸಿದರು. ಮುಂದೆ ಅನಂತ ಸುಬ್ಬರಾಯರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಟೈಪರೈಟರ್ ವಿನ್ಯಾಸಗೊಳಿಸುವಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಆಗಾಗ ಶಂಕರಪ್ಪನವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ಹೊನ್ನಾಳಿಗೆ ಬಂದಾಗ ಶಂಕರಪ್ಪನವರ ಪ್ರತಿಭೆಗೆ ಇನ್ನಷ್ಟು ಅವಕಾಶ ದೊರಕಿತು. ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ, ಕನ್ನಡ ಭಗವದ್ಗೀತೆ ಮೊದಲಾದ ಕಾವ್ಯಗಳ ವಾಚನದ ಮೂಲಕ ಹೆಸರು ಮಾಡಿದರು. ಹೊನ್ನಾಳಿಗೆ ಮಹಾತ್ಮ ಗಾಂಧಿಯವರು ಬಂದಿದ್ದಾಗ ನೆರೆದ ಲಕ್ಷಾಂತರ ಜನರ ಎದುರು ಸ್ವಾಗತ ಭಾಷಣವನ್ನು ಶಂಕರಪ್ಪನವರು ಕನ್ನಡದಲ್ಲಿ ಮಾಡಿದರು. ಇದನ್ನು ದೇಶಪಾಂಡೆ ಗಂಗಾಧರ ರಾಯರು ಗುಜರಾತಿಗೆ ಭಾಷಾಂತರ ಮಾಡಿದಾಗ ಭಾವವನ್ನು ತಿಳಿದ ಮಹಾತ್ಮ ಗಾಂಧಿಯವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆಯಲ್ಲಿಯೇ ನುಲೇನೂರು ಶಂಕರಪ್ಪನವರ ಅಣ್ಣನವರಾದ ರಂಗಪ್ಪನವರು ಶಂಕರಲಿಂಗ ಭಗವಾನರು ಎಂಬ ಹೆಸರಿನಿಂದ ಅವಧೂತ ಪದವನ್ನೇರಿದರು. ಅವರ ಮಾರ್ಗದರ್ಶನದಲ್ಲಿ ಶಂಕರಪ್ಪನವರ ಅಧ್ಯಾತ್ಮಿಕ ಸಾಧನೆ ಇನ್ನೂ ಆಳಕ್ಕೆ ಇಳಿಯಿತು. 1942ರಲ್ಲಿ ಶಂಕರ ಭಗವತ್ಪಾದರ ‘ಪ್ರಶ್ನೋತ್ತರಿ’ಯನ್ನು ಕನ್ನಡದಲ್ಲಿ ಭಾಮಿನಿ ಷಟ್ಪದಿಯಲ್ಲಿ ರೂಪಿಸಿದರು.
ನುಲೇನೂರು ಶಂಕರಪ್ಪನವರು 1946ರಲ್ಲಿ ನಿವೃತ್ತರಾದ ನಂತರ ಚನ್ನಗಿರಿಯಲ್ಲಿ ಹೊಸದಾಗಿ ಆರಂಭವಾಗಿದ್ದ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಶಂಕರಪ್ಪನವರು ಸಂಗೀತದಲ್ಲಿ ಅಪ್ರತಿಮ ಗಾಯಕರು. ಸ್ವತ: ವಾಗ್ಗೇಯ ಕಾರರು. ‘ರಂಗವಿಠಲ ದಾಸ’ ಎನ್ನುವ ಅಂಕಿತದಲ್ಲಿ ನೂರಾ ಎಂಟು ಕೀರ್ತನೆಗಳನ್ನು ರಚಿಸಿದವರು. ಸಾಹಿತ್ಯದಲ್ಲಿ ಛಂದಸ್ಸಿನ ನಾದ ವಿನ್ಯಾಸದ ಕುರಿತು ವಿಶೇಷ ಪ್ರಯೋಗಗಳನ್ನು ಮಾಡಿದರು. ಜ್ಯೋತಿಷದಲ್ಲಿ ಗ್ರಹಗತಿಗಳ ಭಾವ ನಿರ್ಣಯದ ಕುರಿತು ಮಹತ್ವದ ಚಿಂತನೆಗಳನ್ನು ನೀಡಿದರು. ಸಂಗೀತ, ಸಾಹಿತ್ಯ, ಛಂದಸ್ಸು ಮತ್ತು ಜ್ಯೋತಿಷ ಈ ನಾಲ್ಕೂ ಕ್ಷೇತ್ರದಲ್ಲಿನ ಮೂಲ ಗಣಿತವನ್ನು ಹುಡುಕಲು ಸೂರ್ಯ ಸ್ಪುಟ ಮತ್ತು ಚಂದ್ರ ಸ್ಪುಟವನ್ನು ಅವರು ಪಂಚಮ ಭಾವ ಮತ್ತು ಷಡ್ಜ ಭಾವಕ್ಕೆ ಹೊಂದಿಸಿದರು. ಷಟ್ಚಕ್ರದ ಗತಿಯನ್ನು ಸ್ವರ ಮಾಲಿಕೆಗೆ ಹೊಂದಿಸಿದರು. ಛಂದೋ ನಿಯಮದಲ್ಲಿನ ವಿಳಂಭ ಗತಿಯನ್ನು ಸಹಸ್ತ್ರಾರಕ್ಕೆ ಜೋಡಿಸಿದರು. ಅಹಿರಿ ರಾಗವನ್ನು ಅಧಿಕ ಮಾಸ ನಿರ್ಣಯಕ್ಕೆ ಹೊಂದಿಸಿದ ಅವರ ಚಿಂತನಾ ಕ್ರಮ ಗಮನ ಸೆಳೆಯುವಂತಿದೆ. ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೀರ್ತನೆಗಳ ಕುರಿತು ಅವರು ಮಾಡಿರುವ ಟಿಪ್ಪಣಿ ಈ ನಾಲ್ಕೂ ಕ್ಷೇತ್ರದ ಮೇಲೆ ಅವರಿಗಿದ್ದ ಅಸಾಧಾರಣ ಪಾಂಡಿತ್ಯದ ಸೂಚಕವಾಗಿದೆ. ಶಂಕರಪ್ಪನವರು ಸ್ವರಗಳ ಭಾವ ನಿರ್ಣಯ ಕುರಿತು ಇಂದ್ರಪ್ರಸ್ಥ ಮತ ಎಂಬುದರ ಉಲ್ಲೇಖ ಮಾಡುತ್ತಾರೆ. ನಾದ ಚಿಂತಾಮಣಿ, ತರಂಗಿಣಿ, ಶಹಾನ, ಘಂಟಾ ಮೊದಲಾದ ವಿರಳ ರಾಗಗಳ ಭಾವ ದೀಪ್ತಿಯ ಕುರಿತು ವಿವರವಾಗಿ ಚರ್ಚಿಸುತ್ತಾರೆ. ಅದೇ ರೀತಿ ಚಂದ್ರಾಂಶ ನಿರ್ಣಯ ಮತ್ತು ನಕ್ಷತ್ರ ಚಲನೆಗೆ ಇರುವ ಹೊಂದಾಣಿಕೆ ಕುರಿತು ಈಗ ಹಲವು ಅಂಶಗಳು ಬೆಳಕಿಗೆ ಬಂದಿವೆ. ಅವರು ಚರ್ಚಿಸಿದಾಗ ಇವೆಲ್ಲವು ಹೊಸದೇ ಇರಬೇಕು.
ಶಂಕರಪ್ಪನವರ ಕೀರ್ತನೆಗಳು ತಮ್ಮದೇ ಆದ ವಿಶಿಷ್ಟತೆಯನ್ನು ಪಡೆದಿವೆ. ಪೀಲೂ ರಾಗದಲ್ಲಿನ ‘ಸದಾ ಶ್ರೀರಾಮನ’ ಒಂದು ವಿಶಿಷ್ಟವಾದ ಕೃತಿ. ಅವರು ರಚಿಸಿದ ನೂರಾ ಎಂಟು ಕೃತಿಗಳಲ್ಲಿ ‘ದೈವಲೀಲೆಯಂತೂ’ ಮಹತ್ವದ್ದು. ಅದರ ಮೂರನೇ ಚರಣದಲ್ಲಿ ‘ರಾಮ ರಾಮ ಜಯರಾಮ’ ಎನ್ನುವಲ್ಲಿ ಪಂಚಮ ನಿಷಾದಗಳನ್ನೇ ಕೈ ಬಿಟ್ಟಿದ್ದಾರೆ. ಈ ನಾಮ ಅಷ್ಟಕ ಮಾತ್ರ ಕೀರ್ತನೆಯಲ್ಲಿ ಅಭೋಗಿ ರೂಪದಲ್ಲಿ ಮೂಡಿ ಬಂದಿದೆ. ಅವರ ಹಾಡುಗಾರಿಕೆಯಲ್ಲಿ ಗಾಂಧಾರ ಸ್ವರ ಅಸಾಧಾರಣವಾದದ್ದು ನೀಲಾಂಬರಿ ರಾಗದ ಅವರ ಕೃತಿ ‘ಶ್ರೀದೇವಿ ಪೊರೆ ಎನ್ನ’ದಲ್ಲಿ ಗಾಂಧಾರವನ್ನು ಪಂಚಮ ಶ್ರುತಿ ರಿಷಭವಾಗಿಸಿ ವಿಶಿಷ್ಟ ನಾದ ವಿನ್ಯಾಸವನ್ನು ರೂಪಿಸಿದ್ದಾರೆ. ಕಲ್ಯಾಣಿ ರಾಗದ ‘ನೀ ಸಲಹೋ’ ಮತ್ತು ಸಾರಂಗ ರಾಗದ ‘ಶ್ರೀಶಂಕರಲಿಂಗ’ ಕೃತಿಗಳಲ್ಲಿ ಪ್ರತಿ ಮಧ್ಯಮವನ್ನು ಕೈ ಬಿಟ್ಟು ವಿಶಿಷ್ಟ ಅಧ್ಯಾತ್ಮಿಕ ಅನುಭೂತಿ ಮೂಡುವಂತೆ ಮಾಡಿದ್ದಾರೆ.
ಪೂರ್ವಾಶ್ರಮದಲ್ಲಿ ತಮ್ಮ ಅಣ್ಣನವರೂ ಮತ್ತು ಅಧ್ಯಾತ್ಮದಲ್ಲಿ ಗುರುಗಳೂ ಆಗಿದ್ದ ಶಂಕರಲಿಂಗ ಭಗವಾನರೇ ಶಂಕರಪ್ಪನವರ ಅಧ್ಯಾತ್ಮ ಸಾಧನೆಗೆ ಪ್ರೇರಣೆ. ‘ದ್ವೈತ ಪ್ರಾಯೋಗಿಕ: ಅದ್ವೈತ ತಾತ್ವಿಕ’ ಎನ್ನುವ ಕೃತಿ ಎರಡೂ ಪಂಥದಲ್ಲಿನ ಸಮಾನ ಅಂಶಗಳ ಕುರಿತು ಚರ್ಚಿಸಿ ತನ್ನ ಸ್ವರೂಪದಲ್ಲಿಯೇ ವಿಶಿಷ್ಟ ಎನ್ನಿಸಿ ಕೊಂಡಿದೆ. ಕನ್ನಡ ಲಿಪಿ ಸುಧಾರಣೆಯ ಕುರಿತೂ ಅವರ ಚಿಂತಿಸಿದ್ದರು. ‘ಕಳೆದೆನ್ನ ಜಗದ ದೃಷ್ಟಿ/ ಒಳಗಣ್ಣು ತೆರೆದು ಕೊಟ್ಟೆ’ ಎಂದು ಅವರು ತಮ್ಮ ಶಂಕರಲಿಂಗ ಭಗವಾನರನ್ನು ಸ್ಮರಿಸುತ್ತಾರೆ. ‘ಮರೆತಿರೆ ನಿನ್ನನು ನಾನು ಕೊರತೆಯೇಂ ನಿನಗೆ’ ಎಂದು ಗುರುಗಳನ್ನು ಕೇಳುತ್ತಾರೆ. ‘ಸಾಧನವೆನಗಿಲ್ಲ/ ಸಾಧಿಪ ಬೋಧನೆ ಬೇಕಿಲ್ಲ, ಅದುದಾಗಲಿ ಹೋದುದು ಹೋಗಲಿ ಮಾದದಿ ಫಲವೇನು’ ಎಂದು ಅಸ್ತಿತ್ವವಾದವನ್ನು ಪ್ರತಿಪಾದಿಸುತ್ತಾರೆ. ಗುರುವಿನಲ್ಲಿ ಅವರು ಬೇಡುವುದು ವಿಶುದ್ಧ ಭಕ್ತಿಯನ್ನು. ಈ ಹಿನ್ನೆಲೆಯಲ್ಲಿ ಅವರ ಮಾನಸ ಪೂಜೆ ಬಹಳ ವಿಶಿಷ್ಟವಾದ ಕೃತಿ. ಮನೆದೇವರು ರಂಗನಾಥನ ಕುರಿತ ‘ನಿನ್ನ ಚರಣ ನಂಬಿ ಭಜಿಪೆ’ ಮಾರುತಿ ಕುರಿತ ‘ರಾಮಕೃಪಾ ಪ್ರೇಮ ಮೂರುತಿ’ ಬಹಳ ವಿಶಿಷ್ಟವಾಗಿದೆ. ನುಲೇನೂರು ಶ್ರೀಮೂರ್ತಿಗಳ ‘ಶ್ರೀ ದತ್ತರಾಜ ಯೋಗೀಂದ್ರ’ ಚರಿತ್ರೆಯಲ್ಲಿ ಶಂಕರಪ್ಪನವರು ‘ ಕೋವಿದಾಗ್ರಣಿ ಗೀತೆಯಲ್ಲಿ ಒಂದು ಸಾಲನ್ನು ಅಲಂಕಾರಿಕವಾಗಿ ರಚಿಸಿರುವುದು ಹೀಗೆ
ತಾಪರ ಹಿತಪದ/ ಪರಹಿತ ಪದ/ ರಹಿತ ಪದವು/ ಹಿತಪದವು ತಾ/ ತಪದ ಫಲವುಈ ಐದೂ ಪದಗಳಲ್ಲಿ ಪ್ರತಿಪದವೂ ಹಿಂದಿನ ಒಂದು ಅಕ್ಷರವನ್ನು ಬಿಟ್ಟು ಹೇಳಿದರೂ ಅರ್ಥಪೂರ್ಣವಾಗಿದೆ. ಇಂತಹ ಶಬ್ದಾಲಂಕಾರಗಳು ಅವರ ಕೃತಿಯಲ್ಲಿ ವಿಪುಲವಾಗಿವೆ.
ನುಲೇನೂರು ಶಂಕರಪ್ಪನವರು 1954ರ ಮೇ 12ರಂದು ಲೋಕದ ಜಂಜಡಗಳನ್ನು ಹರಿದು ಕೊಂಡು ರಾತ್ರಿ 8.30ಕ್ಕೆ ಎಲ್ಲರೊಡನೆ ಮಾತನಾಡುತ್ತಿದ್ದಂತೆಯೇ ಇಹಲೋಕದ ವ್ಯಾಪಾರವನ್ನು ಮುಗಿಸಿದರು.
ಲೇಖನ ಕೃಪೆ: ಎನ್. ಎಸ್. ಶ್ರೀಧರಮೂರ್ತಿ
ಸಾರ್ 🌷🙏🌷Sreedhara Murthy
On the birth anniversary of great scholar Nulenur Shankarappa
Super
ಪ್ರತ್ಯುತ್ತರಅಳಿಸಿ