ಪಿಂಗಳಿ ವೆಂಕಯ್ಯ
ಪಿಂಗಳಿ ವೆಂಕಯ್ಯ
ಪಿಂಗಳಿ ವೆಂಕಯ್ಯ ಭಾರತದ ರಾಷ್ಟ್ರಧ್ವಜವನ್ನು ರೂಪಿಸಿದವರೆಂದು ಖ್ಯಾತರಾದವರು.
ಪಿಂಗಳಿ ವೆಂಕಯ್ಯನವರು ಆಂಧ್ರಪ್ರದೇಶದ ಮಚಲೀಪಟ್ನಂ ಬಳಿಯ ಭಟ್ಲಪೆನುಮರ್ರು ಗ್ರಾಮದಲ್ಲಿ 1876ರ ಆಗಸ್ಟ್ 2ರಂದು ಜನಿಸಿದರು. ತಂದೆ ಹನುಮಂತರಾಯುಡು. ತಾಯಿ ವೆಂಕಟರತ್ನಮ್ಮ.
ಭಾರತದ ಸ್ವಾತಂತ್ರ್ಯ ಪೂರ್ವ ಚಳುವಳಿಗಳಲ್ಲಿ ವಿವಿಧ ರೀತಿಯ ಧ್ವಜಗಳನ್ನು ಬಳಸಲಾಗುತ್ತಿತ್ತು. ಇಂದು ನಾವು ಬಳಸುತ್ತಿರುವ ತ್ರಿವರ್ಣ ರಾಷ್ಟ್ರಧ್ವಜದ ಸಮೀಪದ ಆವೃತ್ತಿಯನ್ನು ಪಿಂಗಳಿ ವೆಂಕಯ್ಯನವರು ರೂಪಿಸಿದರು.
ಮೊದಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿದ್ದ ಈ ಧ್ವಜವನ್ನು 1947ರ ಜುಲೈ 22ರಂದು ಕೆಲವು ಬದಲಾವಣೆಗಳೊಂದಿಗೆ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು.
ಪಿಂಗಳಿ ವೆಂಕಯ್ಯನವರು ತಮ್ಮ 19ರ ಪ್ರಾಯದಲ್ಲಿ ಆಂಗಲೋ-ಬೋರ್ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಅವರು ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು. ಶಿಕ್ಷಣದಲ್ಲಿ ಆಸಕ್ತಿ ಹೊಂದಿದ್ದ ಅವರು ಲಾಹೋರ್‌ನ ಆಂಗ್ಲೋ-ವೇದಿಕ್ ಕಾಲೇಜಿನಲ್ಲಿ ಇತಿಹಾಸ ಮತ್ತು ಉರ್ದು, ಜಪಾನಿ ಭಾಷೆ ಕಲಿತರು. ಬೆಂಗಳೂರು, ಮದ್ರಾಸ್ಗಳಲ್ಲಿ ರೈಲ್ವೆ ಸಿಬ್ಬಂದಿಯಾಗಿ ಮತ್ತು ಬಳ್ಳಾರಿಯಲ್ಲಿ ಸರ್ಕಾರಿ ಸೇವಾ ಅಧಿಕಾರಿಯಾಗಿ ಸೇರಿದರು.
ವೆಂಕಯ್ಯ ಅವರು ಭೂವಿಜ್ಞಾನಿ, ಕೃಷಿ ಹಾಗೂ ಶಿಕ್ಷಣ ತಜ್ಞರಾಗಿದ್ದು, ಮಚಲಿಪಟ್ಟಣಂನಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಪಿಂಗಳಿ ವೆಂಕಯ್ಯನವರು 1906 ರಿಂದ 1911ರ ಅವಧಿಯಲ್ಲಿನ ಹೆಚ್ಚಿನ ಸಮಯದಲ್ಲಿ ಪ್ರಧಾನ ಬೆಳೆಗಳ ಕುರಿತು ಸಂಶೋಧನೆ ನಡೆಸಿದರು. ಅದರಲ್ಲೂ ಕಾಂಬೋಡಿಯಾ ಹತ್ತಿಯ ಬಗ್ಗೆ ಅವರು ವಿಶೇಷ ಅಧ್ಯಯನ ಮಾಡಿದರು. ಇದರೊಂದಿಗೆ ಅವರಿಗೆ ಪ್ಯಾಟ್ಟಿ ವೆಂಕಯ್ಯ (ಕಾಟನ್ ವೆಂಕಯ್ಯ) ಎಂಬ ಹೆಸರೂ ಬಂದಿತ್ತು.
ಕಾಕಿನಾಡದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನವು ಭಾರತೀಯರು ತಮ್ಮದೇ ಆದ ತ್ರಿವರ್ಣ ರಾಷ್ಟ್ರ ಧ್ವಜ ಹೊಂದಬೇಕೆಂದು ಪಿಂಗಳಿ ವೆಂಕಯ್ಯನವರು ಮಂಡಿಸಿದ ಸೂಚನೆಯನ್ನು ಅನುಮೋದಿಸಿತು. ವೆಂಕಯ್ಯನವರು 1916 ರಿಂದ 1921ರ ನಡುವೆ ಸುಮಾರು 30 ರಾಷ್ಟ್ರಗಳ ಧ್ವಜಗಳ ಸಮಗ್ರ ಅಧ್ಯಯನವನ್ನು ನಡೆಸಿ ಧ್ವಜವನ್ನು ರೂಪಿಸಿದರು. ಒಂದು ವರದಿಯ ಪ್ರಕಾರ ಪಿಂಗಳಿ ಅವರು ರೂಪಿಸಿದ ಕೆಂಪು ಮತ್ತು ಹಸುರು ಧ್ವಜದಲ್ಲಿ ಚರಕ ಇರಬೇಕೆಂದು ಲಾಲಾ ಹನ್ಸರಾಜ್ ಮತ್ತು ಜಲಂಧರ್ ಅವರು ಸಲಹೆ ನೀಡಿದರೆ, ಮಹಾತ್ಮರು ಬಿಳಿಯ ಪಟ್ಟಿ ಇರಬೇಕೆಂದು ಸಲಹೆ ಇತ್ತರು. ಈ ಸಲಹೆಗಳನ್ನು ರೂಪುಗೊಳಿಸಿದ ನಂತರದಲ್ಲಿ ಪಿಂಗಳಿ ವೆಂಕಯ್ಯನವರು ರೂಪಿಸಿದ ಧ್ವಜವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸು ಅಂಗೀಕರಿಸಿತು.
ಪಿಂಗಳಿ ವೆಂಕಯ್ಯನವರು ಬಡತನದಲ್ಲಿ ಜೀವಿಸಿ 1963ರ ಜುಲೈ 4ರಂದು ನಿಧನರಾದರು. ಅವರ ಕೆಲಸವನ್ನು ಬಳಸಿದ ಜನ ಸ್ವಾತಂತ್ರ್ಯಾ ನಂತರ ಅವರನ್ನು ಕಡೆಗಾಣಿಸಿದ್ದರು. ಅವರ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆ ಆಯಿತು. 2009 -2011 ಅವಧಿಯಲ್ಲಿ ಅವರ ಹೆಸರು ಭಾರತರತ್ನ ಪ್ರಶಸ್ತಿಯ ಚರ್ಚೆಯಲ್ಲಿ ಮೂಡಿತ್ತಂತೆ. ಭಾರತದಲ್ಲಿ ಯಾರಾದರೂ ಪ್ರಸಿದ್ಧರಾಗಬೇಕಾದರೆ ಗೂಗಲ್ ಡೂಡಲ್ ಮೂಡಬೇಕು. ಅಲ್ಲಿಯವರೆಗೆ ನಮಗೆ ಅವರ ಹೆಸರೇ ತಿಳಿದಿರುವುದಿಲ್ಲ!
On the birth anniversary of freedom fighter Pingali Venkaiah. Indian National flag is based upon his design.
ಕಾಮೆಂಟ್‌ಗಳು