ಸುಶೀಲಾದೇವಿ
ಸುಶೀಲಾದೇವಿ
ಜಿ.ಎಸ್. ಸುಶೀಲಾದೇವಿ ಆರ್.ರಾವ್ ಕನ್ನಡದ ಹಿರಿಯ ಹೆಸರಾಂತ ಬರಹಗಾರ್ತಿ.
ಸುಶೀಲಾದೇವಿ ಅವರು 1952 ರ ಜುಲೈ 4ರಂದು ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಗುಂಜಿಗನೂರು ಎಂಬಲ್ಲಿ ಜನಿಸಿದರು. ತಂದೆ ಗುಂಜಿಗನೂರು ಶ್ಯಾನುಭೋಗ ಜಿ. ಶ್ರೀನಿವಾಸಯ್ಯನವರು. ತಾಯಿ ಜಾನಕಮ್ಮ. ಈ ದಂಪತಿಗಳಿಗೆ ನಾಲ್ಕು ಜನ ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳು.
ಅಪಾರ ಸಾಹಿತ್ಯಾಸಕ್ತಿ ಇದ್ದ ಶ್ರೀನಿವಾಸಯ್ಯನವರು ಹೆಸರಾಂತ ವಾಗ್ಮಿಯಾಗಿದ್ದರು. ರಾಮಾಯಣ, ಮಹಾಭಾರತ, ಪರಮಹಂಸರ ಕತೆಗಳು, ತೆನಾಲಿ ರಾಮಕೃಷ್ಣನ ಕತೆಗಳು, ಪಂಚತಂತ್ರದ ಕತೆಗಳು ಇವನ್ನು ಸಂದರ್ಭೋಚಿತವಾಗಿ ಬಳಸಿ ಉಪನ್ಯಾಸ ನೀಡುತ್ತಿದ್ದರು. ಮನೆಯಲ್ಲಿ ಆಗಾಗ ಗಮಕ ವಾಚನ ಏರ್ಪಡಿಸುತ್ತಿದ್ದರು. ಉತ್ಸಾಹಿಯಾಗಿದ್ದ ಮಗಳು ಸುಶೀಲಾದೇವಿಗೆ ಮನೆಯಲ್ಲಿದ್ದ ಅಮೂಲ್ಯವಾದ ಹಳಗನ್ನಡ, ಹೊಸಗನ್ನಡದ ಗ್ರಂಥಗಳನ್ನು ನೀಡಿ ಅರ್ಥವಾಗದಿದ್ದರೆ ಪಾಠ ಹೇಳಿ ಸಾಹಿತ್ಯಕವಾಗಿ ಬೆಳೆಸಿದರು. ತಾಯಿ ಜಾನಕಮ್ಮನವರೂ ಸಾಹಿತ್ಯ ಪ್ರೇಮಿಯಾಗಿದ್ದರು. ಇವರು ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕಥೆಗಾರ ಎನ್. ಎಸ್. ಚಿದಂಬರರಾವ್ ಅವರ ಪ್ರೋತ್ಸಾಹವೂ ಜೊತೆಗಿತ್ತು.
ಸುಶೀಲಾದೇವಿ 12ನೆಯ ವಯಸ್ಸಿಗೆ ಬಾಲ ಬರಹಗಳನ್ನು ಬರೆಯಲಾರಂಭಿಸಿದರು. ಸುಧಾ ವಾರಪತ್ರಿಕೆಯಲ್ಲಿ ಇವರ 40 ಬಾಲ ಬರಹಗಳು ಪ್ರಕಟವಾದವು. 16ನೇ ವಯಸ್ಸಿನಿಂದ ಕತೆಗಳನ್ನು ಬರೆಯಲಾರಂಭಿಸಿದರು. ರಾಘವೇಂದ್ರ ರಾವ್ ಅವರೊಂದಿಗೆ ಹದಿನೆಂಟನೇ ವಯಸ್ಸಿಗೆ ವಿವಾಹವಾಯಿತು. ಮಗ ಆನಂದ್ ಮತ್ತು ಮಗಳು ಲತಾ. ಬದುಕಿನ ಏರುಪೇರುಗಳಲ್ಲಿನ ಸಂಸಾರ ನಿರ್ವಹಣೆ ಮತ್ತು ಸಾಮಾಜಿಕ ಬದುಕಿನೆಡೆಗಿನ ಸುಸ್ಪಷ್ಟ ನೋಟಗಳ ಜೊತೆಗಿನ ಮಾಗಿದ ಅನುಭವಗಳಲ್ಲಿ ಇವರ ಬರವಣಿಗೆಗಳಲ್ಲೂ ಆಳ ವಿಸ್ತಾರಗಳೂ ಮೂಡತೊಡಗಿದವು.
ಸುಶೀಲಾದೇವಿ ಅವರ ಬರಹಗಳಲ್ಲಿ ಸ್ವಾಭಿಮಾನಿ, ಮನ ಮಂದಿರ, ಬೆಂಕಿಯ ಒಡಲಲ್ಲಿ, ಸಂಬಂಧದ ಸಂಕೋಲೆಗಳು, ಸೇಡು, ನಿನ್ನ ದಾರಿಯಲ್ಲೀಗ ನನ್ನ ಹೆಜ್ಜೆ ಮುಂತಾದ ಕಾದಂಬರಿಗಳಿವೆ. ಷೋಕೇಸಿನ ಗೊಂಬೆ, ಬದುಕ ಮನ್ನಿಸು ಪ್ರಭುವೆ, ಅಪರಿಮಿತ ಮುಂತಾದ ಕಥಾಸಂಕಲನಗಳಿವೆ. 'ಕಿಟ್ಟು ಪುಟ್ಟಿಯರ ಸಾಹಸಗಳು’ ಇವರ ಮಕ್ಕಳ ಕಾದಂಬರಿ. 'ಮುಗ್ಧಮನ’, ‘ತುಂಗ-ಉತ್ತುಂಗ’, ‘ತಿರುಗುಬಾಣ’ಗಳಂತಹ ಶ್ರವ್ಯನಾಟಕಗಳು ರಾಷ್ಟ್ರೀಯ ರೇಡಿಯೋ ನಾಟಕಗಳಾಗಿ ನಾಡಿನಾದ್ಯಂತ ಬಿತ್ತರಗೊಂಡಿವೆ. ಇವರ ಬರಹಗಳು ಕಿರುತೆರೆಯ ಕದವನ್ನೂ ತಟ್ಟಿವೆ. ಇವರ 'ಕೇಳಿದ್ರಾ ಸಮಾಚಾರ’ ಸರಣಿ ಮಲ್ಲಿಗೆ ಪತ್ರಿಕೆಯಲ್ಲಿ ಜನಪ್ರಿಯವಾಗಿತ್ತು. ಹಾಸ್ಯಲೇಖನ, ಪ್ರಬಂಧ, ನಾಟಕ, ಕವಿತೆ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಇವರು ಬರೆಯುತ್ತ ಬಂದಿದ್ದಾರೆ.
ಸುಶೀಲಾದೇವಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಟಿ.ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿ, ಕಂಪ್ಲಿ ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಸ್ಮಾರಕ ಪ್ರಶಸ್ತಿ, ದಾವಣಗೆರೆ ಜಿಲ್ಲಾ 'ವನಿತಾ ಸಾಹಿತ್ಯಶ್ರೀ' ಪ್ರಶಸ್ತಿ, ಎರಡು ಬಾರಿ ಹೊಸತು ಪತ್ರಿಕೆಯಿಂದ ಶ್ರೇಷ್ಠ ಬರಹಕ್ಕೆ ಸಲ್ಲುವ ವಾರ್ಷಿಕ ಬಹುಮಾನ, ದಾವಣಗೆರೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ೧೧ ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಸಾಧಕರಾದ ಸುಶೀಲಾದೇವಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Susheela Devi
ಕಾಮೆಂಟ್‌ಗಳು