ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಶೋಕ್ ಸಿಂಘಾಲ್


 ಅಶೋಕ್ ಸಿಂಘಾಲ್


ಅಶೋಕ್ ಸಿಂಘಾಲ್ ಹಿಂದೂ ಸಮಾಜದ ಸಂಘಟನೆ ಮತ್ತು ಸೇವೆಗೆ ಅಪಾರ ಶ್ರಮಿಸಿದವರು. 

ಅಶೋಕ್ ಸಿಂಘಾಲ್ 1926ರ ಸೆಪ್ಟೆಂಬರ್ 27ರಂದು ಅತ್ರೌಲಿ ಎಂಬಲ್ಲಿ ಜನಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಲೋಹಶಾಸ್ತ್ರದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದ ಅಶೋಕ್ ಸಿಂಘಾಲ್ ಹಿಂದುತ್ವದ ಸೇನಾನಿಯಾಗಿ ರೂಪಾಂತರಗೊಂಡರು. ರಾಮಜನ್ಮಭೂಮಿ ಆಂದೋಲನವನ್ನು ಉತ್ತುಂಗಕ್ಕೆ ಮುಟ್ಟಿಸಿದರು. ಇದರ ರಾಜಕೀಯ ಆಯಾಮಕ್ಕಿಂತ ಶ್ರದ್ಧೆ, ನಂಬಿಕೆ ಮತ್ತು ಆಧ್ಯಾತ್ಮಿಕ ಸಂಗತಿಗಳು ಅವರಿಗೆ ಮುಖ್ಯವಾಗಿದ್ದವು. ಹೀಗಾಗಿ ಅವರು ಈ ಚಳವಳಿಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಜನ ಬೆಂಬಲವನ್ನು ದೇಶ ವಿದೇಶಗಳಲ್ಲೂ ಒಟ್ಟುಗೂಡಿಸಲು ಸಾಹಸ ಮಾಡಿದರು. ಇವರ ನಾಯಕತ್ವದಲ್ಲಿ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ  ವ್ಯಾಪ್ತಿ ಗಳಿಸಿತು. ಬ್ರಿಟನ್, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಜಪಾನ್ ಸೇರಿದಂತೆ ಸುಮಾರು 40 ದೇಶಗಳಲ್ಲಿ ವಿಎಚ್‌ಪಿ ಶಾಖೆಗಳನ್ನು ಆರಂಭಿಸಿತು.

ವಿದ್ಯಾರ್ಥಿ ದಿಸೆಯಲ್ಲೇ ಆರ್‌ಎಸ್‌ಎಸ್ ಜತೆ ಗುರುತಿಸಿಕೊಂಡಿದ್ದ ಅಶೋಕ್ ಸಿಂಘಾಲ್ ಪದವಿ ಮುಗಿದ ಕೂಡಲೇ ಪೂರ್ಣಾವಧಿ ಪ್ರಚಾರಕ್ ಆದರು. ಅವರ ಮುಖ್ಯ ಕಾರ್ಯಕ್ಷೇತ್ರ ಉತ್ತರಪ್ರದೇಶವಾಗಿತ್ತು. ದಿಲ್ಲಿ ಮತ್ತು ಹರಿಯಾಣಕ್ಕೆ ಸಹಾ ಅವರು 'ಪ್ರಾಂತ್ಯ ಪ್ರಚಾರಕ್' ಆಗಿ ಸೇವೆ ಸಲ್ಲಿಸಿದ್ದರು. 

ತುರ್ತುಪರಿಸ್ಥಿತಿ ವಿರುದ್ಧ ಉತ್ತರಪ್ರದೇಶದಲ್ಲಿ ಅಶೋಕ್ ಸಿಂಘಾಲ್  ದೊಡ್ಡ ಹೋರಾಟವನ್ನು ಸಂಘಟಿಸಿದ್ದರು. ಗೋವುಗಳ ರಕ್ಷಣೆಯನ್ನೂ ಕೂಡ ಒಂದು ಆದ್ಯತೆಯ ಸಂಗತಿ ಎಂದು ತಿಳಿದಿದ್ದರು. 1984ರಲ್ಲಿ ಹೊಸದಿಲ್ಲಿಯಲ್ಲಿ ‘ಧರ್ಮ ಸಂಸದ್’ ಆಯೋಜಿಸಿದ್ದರು. ಇದರಲ್ಲಿ ನೂರಾರು ಸಾಧು ಸಂತರು ಪಾಲ್ಗೊಂಡಿದ್ದರು. 

1980ರಲ್ಲಿ ಅಶೋಕ್ ಸಿಂಘಾಲ್ ವಿಎಚ್‌ಪಿಗೆ ನಿಯೋಜಿತರಾದರು. 1984ರಲ್ಲಿ ಅವರು ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದರು. ಆನಂತರ ಕಾರ್ಯಾಧ್ಯಕ್ಷರಾಗಿ ಪದನ್ನೋತ್ತಿ ಪಡೆದರು. 2011ರ ವರೆಗೂ ಇದೇ ಹುದ್ದೆಯಲ್ಲಿದ್ದರು. 

ಅಶೋಕ್ ಸಿಂಘಾಲ್ ಮತಾಂತರಗೊಂಡಿದ್ದವರನ್ನು ಹಿಂದೂ ಧರ್ಮಕ್ಕೆ ಕರೆತರುವ ಘರ್ ವಾಪಸಿ ಕಾರ್ಯಕ್ರಮದ ಮುಂಚೂಣಿಯಲ್ಲಿದ್ದರು. 1981ರಲ್ಲಿ ಮೀನಾಕ್ಷಿಪುರಂನಲ್ಲಿ ಜನ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ಸಂದರ್ಭದಲ್ಲಿ ಅಶೋಕ್ ಸಿಂಘಾಲ್  ನೇತೃತ್ವದಲ್ಲಿ ವಿಎಚ್‌ಪಿ ದಲಿತರಿಗಾಗಿ 200 ದೇವಾಲಯಗಳನ್ನು ನಿರ್ಮಿಸಿ, ಅವರಿಗೆ ಮುಕ್ತ ಪ್ರವೇಶ ಒದಗಿಸಿಕೊಟ್ಟಿತು. ಆನಂತರ ಆ ಪ್ರದೇಶದಲ್ಲಿ ಯಾವುದೇ ಮತಾಂತರ ನಡೆಯಲಿಲ್ಲ ಎಂದು ವಿಎಚ್‌ಪಿ ಹೇಳಿತ್ತು. 1984ರ ಸುಮಾರಿನಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ ಸಂತ ಸಮ್ಮೇಳನವನ್ನು ಸಂಘಟಿಸಿದ್ದರು. ಜೀವಿತದ ಕೊನೆಗಾಲದಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವುದಕ್ಕೆ ಮುಂಚೆಯೂ 30 ದಿನಗಳ ಕಾಲ ವಿದೇಶಿ ಪರ್ಯಟನೆ ಮಾಡಿ ವಿದೇಶಗಳಲ್ಲಿರುವ ವಿಎಚ್‌ಪಿ ಶಾಖೆಗಳ ಕಾರ್ಯಗಳ ಪರಿಶೀಲನೆ ನಡೆಸಿದ್ದರು.

ತಮ್ಮ ಜೀವನವನ್ನು ಹಿಂದುತ್ವದ ರಕ್ಷಣೆಗಾಗಿ ಮುಡಿಪಾಗಿಟ್ಟಿದ್ದ ಅಶೋಕ್ ಸಿಂಘಾಲ್, ಅವಿವಾಹಿತರಾಗಿಯೇ ಉಳಿದರು. ಪಂಡಿತ್ ಓಂಕಾರ್‌ನಾಥ್ ಠಾಕೂರ್ ಅವರ ಶಿಷ್ಯರಾಗಿ ಹಿಂದೂಸ್ಥಾನಿ ಸಂಗೀತ ಗಾಯನದಲ್ಲೂ ಸಿಂಘಾಲ್ ಪರಿಣಿತರಾಗಿದ್ದರು. 

ಅಶೋಕ್ ಸಿಂಘಾಲ್ 2015ರ ನವೆಂಬರ್ 17ರಂದು ಈ ಲೋಕವನ್ನಗಲಿದರು.


On the birth anniversary of Ashok Singhal

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ