ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾತ್ಯಾಯಿನಿ ಕುಂಜಿಬೆಟ್ಟು


 ಕಾತ್ಯಾಯಿನಿ ಕುಂಜಿಬೆಟ್ಟು


ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ವೈವಿಧ್ಯಪೂರ್ಣ ಬರಹಗಾರ್ತಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರವಾಚಕಿಯಾಗಿ, ಹೀಗೆ ಬಹುಮುಖಿ ಪ್ರತಿಭಾವಂತೆ.

ನವೆಂಬರ್ 17, ಕಾತ್ಯಾಯಿನಿ ಅವರ ಜನ್ಮದಿನ.  ಇವರು ಉಡುಪಿ ಜಿಲ್ಲೆಯ ಕರಂದಾಡಿಯಲ್ಲಿ ಜನಿಸಿದರು. ತಂದೆ ಚಂದ್ರಶೇಖರ ರಾವ್, ತಾಯಿ ಗಿರಿಜಾ ದೇವಿ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಾತ್ಯಾಯಿನಿ ಅವರು ಮುಂಬೈನ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ  ಹಿಂದೂಸ್ಥಾನಿ  ಸಂಗೀತದಲ್ಲಿ ವಿಶಾರದ ಪದವಿ ಗಳಿಸಿದ್ದಾರೆ. ಪಳಕಳ ಸೀತಾರಾಮ ಭಟ್ಟರ ಸಮಗ್ರ ಕೃತಿಗಳ ಕುರಿತು ಮಂಡಿಸಿರುವ ಇವರ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಗೌರವ ಸಂದಿದೆ.  ಕಾತ್ಯಾಯಿನಿ ಅವರು ಉಡುಪಿಯ ಎಮ್. ಜಿ. ಎಮ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಪಾರ ಸಾಹಿತ್ಯಾಸಕ್ತಿ ಉಳ್ಳ ಕಾತ್ಯಾಯಿನಿ ಕುಂಜಿಬೆಟ್ಟು ಅವರು ಕವಿತೆ, ಕತೆ, ಕಾದಂಬರಿ, ವಿಮರ್ಶೆ ಮತ್ತು ನಾಟಕಗಳನ್ನು ಪ್ರಕಟಿಸಿ ಓದುಗರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿರುವುದರ ಜೊತೆಗೆ ಅನೇಕ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ. 

ಕಾತ್ಯಾಯಿನಿ ಅವರ ಐದು ನಾಟಕಗಳು ಅನೇಕ ಪ್ರದರ್ಶನಗಳನ್ನು ಕಂಡಿವೆ. ಇವರು ತುಳುವಿಗೆ ಅನುವಾದಿಸಿರುವ ಗಿರೀಶ್ ಕಾರ್ನಾಡರ 'ನಾಗಮಂಡಲ', ಚಂದ್ರಶೇಖರ ಕಂಬಾರರ 'ಮಹಾಮಾಯಿ' ನಾಟಕಗಳೂ ರಂಗದಲ್ಲಿ ಪ್ರದರ್ಶನಗೊಂಡು ಜನಮನ್ನಣೆಯನ್ನು ಗಳಿಸಿವೆ. 

ಕಾತ್ಯಾಯಿನಿ ಅವರ ‘ಅಕ್ಕ ಕೇಳವ್ವ’ ಕೃತಿಯು ಉದಯವಾಣಿ ದಿನಪತ್ರಿಕೆಯಲ್ಲಿ ಮೂಡಿಬರುತ್ತಿದ್ದ ಅಂಕಣ ಬರಹಗಳ ಸಂಕಲನವಾಗಿದೆ. ಇದಲ್ಲದೆ ಕಾತ್ಯಾಯಿನಿ ಅವರು ಕಾಯಕಾವ್ಯ, ಮೊಗ್ಗಿನ ಮಾತು, ತೊಗಲು ಗೊಂಬೆ, ಕಬರ್ಗತ್ತಲೆ, ನೀನು, ಒಳದನಿಯ ಪಲುಕುಗಳು, ಪಗಡೆ ಹಾಸು, ತೀರದ ಹೆಜ್ಜೆ, ಅವನು ಹೆಣ್ಣಾಗಬೇಕು,  ಗುಳಿಯಪ್ಪ ಮತ್ತು ಕೋರೆಹಲ್ಲು, ಏಕತಾರಿ ಸಂಚಾರಿ, ಮಕ್ಕಳ ಮೂರು ನಾಟಕಗಳು,  ಮಕ್ಕಳ 6 ನಾಟಕಗಳು, ಕೊಕ್ಕೊ ಕೋಕೋ,  ಜೋಡಿಕಾಯಿ, ಸಮಗ್ರ ಸಾಧಕ ರಾಮದಾಸ್, ಪಂಜೆ ಮಂಗೇಶರಾಯರ ವಾಚಿಕೆ, ಪಳಕಳ ಸೀತಾರಾಮ ಭಟ್ಟ, ಶಿವರಾಮ ಕಾರಂತರ ಸಾಮಾಜಿಕ ಪ್ರಜ್ಞೆ, ಕನಕದಾಸೆರ್ನ ರಾಮಧ್ಯಾನ ಚರಿತೆ, ಮೊಗೇರಿ ಗೋಪಾಲಕೃಷ್ಣ ಅಡಿಗ ವಾಚಿಕೆ, ತಂಬೂರಿ ಮುಂತಾದ ವೈವಿಧ್ಯಪೂರ್ಣ ಕೃತಿಗಳನ್ನು ಪ್ರಕಟಿಸಿದ್ದಾರೆ.

ಕಾತ್ಯಾಯಿನಿ ಕುಂಜಿಬೆಟ್ಟು ಅವರ ತುಳು ಕಾದಂಬರಿ 'ಕಬರ್ಗತ್ತಲೆ'ಗೆ ತುಳುಕೂಟ ಉಡುಪಿಯ 'ಪಣಿಯಾಡಿ ಪ್ರಶಸ್ತಿ’; ಕನ್ನಡ ಕಾದಂಬರಿ 'ತೊಗಲುಗೊಂಬೆ'ಗೆ ಕನ್ನಡ ಸಾಹಿತ್ಯ ಪರಿಷತ್ತಿನ 'ಮಲ್ಲಿಕಾ' ಪ್ರಶಸ್ತಿ ಹಾಗೂ ಮೂಡಬಿದರೆಯ ವರ್ಧಮಾನ ಪ್ರತಿಷ್ಠಾನದ 'ಯುವ ವರ್ಧಮಾನ ಪ್ರಶಸ್ತಿ'; 'ಒಳದನಿಯ ಪಲುಕುಗಳು' ವಿಮರ್ಶಾಕೃತಿಗೆ ಕ.ಸಾ.ಪ. ಲೀಲಾವತಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ, ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ದ.ರಾ.ಬೇಂದ್ರೆ ಗ್ರಂಥ ಬಹುಮಾನ ಹಾಗೂ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ 'ಬಸವರಾಜ ಕಟ್ಟಿಮನಿ ಪ್ರಶಸ್ತಿ', 'ಮೂರು ನಾಟಕಗಳು' ಕೃತಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ 'ಅರಳು' ಪ್ರಶಸ್ತಿ; 'ನಿದ್ರಾನಗರಿ' ಮಕ್ಕಳ ನಾಟಕಕ್ಕೆ ಉಡುಪಿ ರಥಬೀದಿ ಗೆಳೆಯರು 'ಕೆದ್ಲಾಯ ಸ್ಮಾರಕ ಪ್ರಶಸ್ತಿ';  ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ 'ಗುಳಿಯಪ್ಪ' ಮಕ್ಕಳ ನಾಟಕಕ್ಕೆ ಪ್ರಥಮ ಬಹುಮಾನ; 'ಪಗಡೆಹಾಸು' ನಾಟಕಕ್ಕೆ ಕರ್ನಾಟಕ ನಾಟಕ ಅಕಾಡಮಿ ಬಹುಮಾನ, ಅತ್ತಿಮಬ್ಬೆ ಪ್ರಶಸ್ತಿ, 'ಅವನು ಹೆಣ್ಣಾಗಬೇಕು' ಕೃತಿಗೆ ಡಾ. ದಿನಕರ ದೇಸಾಯಿ ಪ್ರಶಸ್ತಿ, ಅಕ್ಕ ಕೇಳವ್ವಾ ಕೃತಿಗೆ ರಮಣಶ್ರೀ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಕಾತ್ಯಾಯಿನಿ ಕುಂಜಿಬೆಟ್ಟು ಅವರು ಕೇಂದ್ರ ಸಾಹಿತ್ಯ ಅಕಾಡಮಿಯ  ದಕ್ಷಿಣ ಈಶಾನ್ಯ ಭಾರತೀಯ ಬಹುಭಾಷಾ ಕವಿಗೋಷ್ಠಿಯಲ್ಲಿ ‘ಭಾರತೀಯ ಕಾವ್ಯೋತ್ಸವ’ದಲ್ಲಿ ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಇದಲ್ಲದೆ ಅನೇಕ ಪ್ರತಿಷ್ಠಿತ ವೇದಿಕೆಗಳ ಕವಿಗೋಷ್ಠಿಯಲ್ಲಿ ಅಧ್ಯಕ್ಷರಾಗಿ, ಅತಿಥಿಗಳಾಗಿ, ಉಪನ್ಯಾಸಕರಾಗಿ ಪಾಲ್ಗೊಂಡಿದ್ದಾರೆ. 

ಅಂತರ್ಜಾಲ ವ್ಯವಸ್ಥೆಯ ದೃಶ್ಯ ಮಾಧ್ಯಮ ಮತ್ತು ಶ್ರವ್ಯಮಾಧ್ಯಮಗಳಲ್ಲಿ ಸಹಾ ಅವರು ತಮ್ಮ ಸುಶ್ರಾವ್ಯ ಧ್ವನಿಯಲ್ಲಿ ಕಾವ್ಯವಾಚನ, ಕಥಾವಾಚನ ಮತ್ತು ವಿಚಾರ ಪ್ರಸ್ತುತಿಯನ್ನು  ಅಚ್ಚುಕಟ್ಟಾಗಿ ನಡೆಸಿಕೊಡುತ್ತಾ ಬಂದಿದ್ದಾರೆ. ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ, ಧಾರವಾಹಿಗಳಿಗೆ ಸಂಭಾಷಣೆ  ಮತ್ತು ಗೀತರಚನೆಯನ್ನು ಸಹಾ ಮಾಡಿದ್ದಾರೆ.

ಹೀಗೆ ಬಹುಮುಖಿ ಪ್ರತಿಭಾವಂತರಾಗಿದ್ದೂ ಸರಳ ಸಜ್ಜನಿಕೆಗಳಿಂದ ನಮಗೆಲ್ಲ ಆತ್ಮೀಯರಾಗಿರುವ ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday to our multifaceted talent Dr. Kathyayini Kunjibettu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ