ವೆಂಕಟರಮಣಯ್ಯ
ಟಿ. ವಿ. ವೆಂಕಟರಮಣಯ್ಯ
ಟಿ. ವಿ. ವೆಂಕಟರಮಣಯ್ಯ ಗ್ರಂಥಪಾಲಕರಾಗಿ, ಬೋಧಕರಿಗೆ, ಬರಹಗಾರರಾಗಿ ಹೆಸರಾದವರು.
ವೆಂಕಟರಮಣಯ್ಯನವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತೊಣ್ಣೂರಿನಲ್ಲಿ 1933ರ ಅಕ್ಟೋಬರ್ 8ರಂದು ಜನಿಸಿದರು. ಅವರ ಪ್ರಾರಂಭಿಕ ಶಿಕ್ಷಣ ತೊಣ್ಣೂರು, ಹಿರೇಸಾವೆ, ಕೃಷ್ಣರಾಜ ನಗರಗಳಲ್ಲಿ ನಡೆಯಿತು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಓದಿ, ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ ಪಡದರು. ಕಾಶಿ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಗ್ರಂಥಾಲಯ ವಿಜ್ಞಾನ ಡಿಪ್ಲೊಮ ಗಳಿಸಿದರಲ್ಲದೆ, ಇನ್ಸ್‌ಡಾಕ್ ದೆಹಲಿಯಿಂದ ವೈಜ್ಞಾನಿಕ ಪ್ರಲೇಖನ ತರಬೇತಿ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್ ಎಂ.ಲಿಬ್ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು.
ವೆಂಕಟರಮಣಯ್ಯನವರು ಮೈಸೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ವೃತ್ತಿ ಪ್ರಾರಂಭ ಮಾಡಿದರು. ಓರಿಯೆಂಟೇಷನ್ ಅಂಡ್ ಸ್ಟಡಿ ಸೆಂಟರ್‌ನಲ್ಲಿ ಗ್ರಂಥಪಾಲಕರಾಗಿ, ಕಲ್ಕತ್ತಾದ ರಾಷ್ಟ್ರೀಯ ಗ್ರಂಥ ಸೂಚಿ, ಕೇಂದ್ರ ಪರಾಮರ್ಶನ ಗ್ರಂಥಾಲಯದಲ್ಲಿ ಉಪಸಂಪಾದಕರಾಗಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ, ಉಪಗ್ರಂಥಪಾಲಕರಾಗಿ, ಕೆಲಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 1986ರಲ್ಲಿ ಸ್ವಇಚ್ಛೆಯಿಂದ ನಿವೃತ್ತರಾದರು.
ವೆಂಕಟರಮಣಯ್ಯನವರು ಕೇವಲ ಗ್ರಂಥಪಾಲಕರಾಗಿ ಪುಸ್ತಕ ರಾಶಿಯೊಳಗೆ ಹುದುಗಿಹೋಗದೆ ತಾವೂ ಓದುತ್ತಾ, ಓದುಗರೊಡನೆ ಸೌಹಾರ್ದದಿಂದ ಗ್ರಂಥಗಳನ್ನೊದಗಿಸಿ ಸ್ಪಂದಿಸುತ್ತ ರಚಿಸಿದ ಕೃತಿಗಳು ಹಲವಾರು. ಜಾನಪದ, ಗ್ರಂಥಸೂಚಿ/ಲೇಖನ ಸೂಚಿ, ಪ್ರಸಂಗ, ಸೂಕ್ತಿ ಸಂಗ್ರಹ, ಧಾರ್ಮಿಕ ಮತ್ತು ಅನೇಕ ಸಾಂಸ್ಕೃತಿಕ ಮಹತ್ವದ ಕೃತಿಗಳ ರಚನೆ ಮಾಡಿದರು. ಕನ್ನಡ ಗಾದೆಗಳ ಕೋಶ, ಗಾದೆಗಳು, ಆಧುನಿಕ ಗಾದೆಗಳು, ಕನ್ನಡ ಪಡೆನುಡಿಕೋಶ, ಕನ್ನಡ ಭಾಷಾ-ಸಾಹಿತ್ಯ ಲೇಖನ ಸೂಚಿ, ಪತ್ರಿಕೋದ್ಯಮ, ರಾಷ್ಟ್ರೀಯ ಗ್ರಂಥಸೂಚಿ, ಹಾಸ್ಯರಸಾಯನ, ಜೋಕಿನ ಜಡಿಮಳೆ, ನಗೆಬಾಂಬು, ನಕ್ಕು ನಗಿಸಿ, ಆಸ್ಪತ್ರೆ, ಕಚೇರಿ-ಹೊಟೇಲ್ ಜೋಕುಗಳು, ನುಡಿರತ್ನಕೋಶ, ಹಲವರ ಕಣ್ಣಲ್ಲಿ ಹಣ, ವಿವಿಧರ ಕಣ್ಣಲ್ಲಿ ವಿವಾಹ ಹೀಗೆ ನೂರೈವತ್ತಕ್ಕೂ ಹೆಚ್ಚು ಕೃತಿ ರಚಿಸಿದರು. ಇಂಗ್ಲಿಷ್‌ನಲ್ಲಿ LITERARY PSEUDONYMS AND OTHER ESSAYS, HISTORY OF PRINTING AND PUBLISHING IN INDIA ಮಂತಾದ ಕೃತಿ ರಚಿಸಿದರು.
ಟಿ. ವಿ. ವೆಂಕಟರಮಣಯ್ಯನವರಿಗೆ ಕರ್ನಾಟಕ ಜಾನಪದ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಜ್ಞಾನವಿಜ್ಞಾನ ಪ್ರಶಸ್ತಿ, ಸೂಕ್ತಿ ರತ್ನಾಕರ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
On the birthday of Librarian, Teacher and writer T. V. Venkataramanaiah
ಕಾಮೆಂಟ್‌ಗಳು