ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲೂಯಿ ಪಾಸ್ತರ್


 ಲೂಯಿ ಪಾಸ್ತರ್


ಲೂಯಿ ಪಾಸ್ತರ್ ಫ್ರಾನ್ಸಿನ ಸೂಕ್ಷ್ಮಾಣುಜೀವಿ ವಿಜ್ಞಾನಿ. ಅದ್ಭುತ ಪ್ರಾಯೋಗಿಕ ವ್ಯಾಸಂಗಗಳನ್ನು ಇತಿಹಾಸ ಪ್ರವರ್ತಕ ಫಲಿತಾಂಶಗಳನ್ನು ಪಡೆದು ಸಾರ್ವಜನಿಕ ಆರೋಗ್ಯ ಪಾಲನೆಗೆ ಹಿರಿಯ ಕೊಡುಗೆಗಳನ್ನು ನೀಡಿದ ಮಹಾ ಪ್ರತಿಭಾಶಾಲಿ ಅನ್ವೇಷಕರು. ಮೂಲತಃ ರಸಾಯನವಿಜ್ಞಾನ, ಮಾದಕ ಪಾನೀಯ ಬೀರಿನ ಕಂಪು ಮತ್ತು ರುಚಿ ರಕ್ಷಣೆ, ರೇಷ್ಮೆ ಹುಳುಗಳಿಗೆ ಅಂಟಿ ಮಾರಕವಾಗಿ ಪರಿಣಮಿಸುತ್ತಿದ್ದ ಸೋಂಕು ಮುಂತಾದವನ್ನು ಕುರಿತು ತೀವ್ರ ಸಂಶೋಧನೆ ಹಾಗೂ ಅಧ್ಯಯನ ಮಾಡಿದ ಪಾಸ್ತರ್ ಮುಂದೆ ಪ್ರೌಢ ವೈದ್ಯಕೀಯ ಆವಿಷ್ಕಾರಗಳನ್ನು ಮಾಡಲು ವಿಶೇಷ ಅರ್ಹತೆ ಗಳಿಸಿದರು.

ಲೂಯಿ ಪಾಸ್ತರ್ 1822 ಡಿಸೆಂಬರ್ 27ರಂದು ಫ್ರಾನ್ಸಿನ ಜ್ಯೂರ ಪ್ರದೇಶಕ್ಕೆ ಸೇರಿದ ಡೋಲಿ ಎಂಬಲ್ಲಿ ಜನಿಸಿದರು. ಇವರ ತಂದೆ ಜೀನ್ ಜೋಸೆಫ್ ಪಾಸ್ತರ್, ನೆಪೋಲಿಯನ್ನನ ಸೈನ್ಯದಲ್ಲಿ ಸಾರ್ಜೆಂಟ್-ಮೇಜರ್ ಆಗಿದ್ದರು. ನೆಪೋಲಿಯನ್ನನ ಪತನಾನಂತರ ವಂಶಪರಂಪರೆಯಾಗಿ ನಡೆದು ಬಂದಿದ್ದ ಚರ್ಮ ಹದ ಮಾಡುವ ಉದ್ಯಮಕ್ಕೆ ಇಳಿದರು. ಲೂಯಿಯ ಜನನವಾದ ಸ್ವಲ್ಪ ಕಾಲದಲ್ಲಿ ಸಂಸಾರ ಹತ್ತಿರದ ಆರ್ಬಾಯ್ ಎಂಬಲ್ಲಿಗೆ ಹೋಗಿ ನೆಲೆಸಿತು. ಅಲ್ಲೆ ಲೂಯಿಯ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ ನಡೆಯಿತು. ಈತ ಪ್ರತಿಭಾನ್ವಿತ ವಿದ್ಯಾರ್ಥಿ ಎಂದು ಶಾಲೆಯ ಮುಖ್ಯೋಪಾಧ್ಯಾಯರಿಗೆ ಮನದಟ್ಟಾಗಿದ್ದುದರಿಂದ ಪ್ಯಾರಿಸ್ಸಿನ ಇಕೋಲಿ ನಾರ್ಮೇಲಿಗೆ ಸೇರಿಕೊಳ್ಳಲು ತಯಾರಾಗುವಂತೆ ಶಿಕ್ಷಣ ಪಡೆಯಬೇಕೆಂದೂ ಅದಕ್ಕಾಗಿ ಇವರನ್ನು ಪ್ಯಾರಿಸ್ಸಿಗೆ ಕಳುಹಿಸಬೇಕೆಂದೂ ಆತ ಆಗ್ರಹ ಮಾಡಿದರು. ಅದರಂತೆ ಲೂಯಿಯನ್ನು ದೂರದ ಪ್ಯಾರಿಸ್ಸಿಗೆ ಕಳುಹಿಸಲಾಯಿತು (1838). ಆದರೆ ಮನೆ ಗೀಳು ಹಿಡಿದು ವ್ಯಾಸಂಗ ಮುಂದುವರಿಸಲಾಗದೆ ಅವರು ಶೀಘ್ರದಲ್ಲಿ ಆರ್ಬಾಯಿಗೆ ವಾಪಸಾದರು. ಅನಂತರ ಹತ್ತಿರದ ಪರಿಚಿತ ಬೆಸಾನ್‍ಕಾನಿನ ರಾಯಲ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿ 1840 ಮತ್ತು 1842 ರಲ್ಲಿ ಪದವಿಗಳನ್ನು ಪಡೆದರು. ಇಕೋಲಿ ನಾರ್ಮೆಲೀಗೆ ಸೇರುವ ಉದ್ದೇಶದಿಂದ ಪುನಃ ಪ್ಯಾರಿಸ್ಸಿಗೆ ತೆರಳಿ (1843) ಆಯ್ಕೆಗಾಗಿ ನಡೆದ ಪರೀಕ್ಷೆಯನ್ನು ತೆಗೆದುಕೊಂಡು ಉತ್ತೀರ್ಣರಾದ ವಿದ್ಯಾರ್ಥಿಗಳ ಪೈಕಿ ನಾಲ್ಕನೆಯ ಸ್ಥಾನ ಗಳಿಸಿದರು. ಪ್ಯಾರಿಸ್ಸಿನಲ್ಲಿ ಆಗ ಪ್ರಸಿದ್ಧ ವಿಜ್ಞಾನಿಗಳಾಗಿದ್ದ ಡ್ಯೂಮಾಸ್, ಬಲಾರ್ಡ್ ಮುಂತಾದವರ ಸಂಪರ್ಕ ಹೊಂದಿ ವ್ಯಾಸಂಗ ಮುಂದುವರಿಸಿ ಡಾಕ್ಟರೇಟ್ ಪದವಿ ಪಡೆದರು (1847).

ರೆಸಿಮಿಕ್ ಆಮ್ಲಜನ್ಯ ಲವಣಗಳ ಸ್ಪಟಿಕಗಳು ಎರಡು ಬಗೆಯವಾಗಿರುವುವೆಂದು ಪಾಸ್ತರ್ ಮೊತ್ತಮೊದಲಿಗೆ ಕಂಡುಕೊಂಡು ಸೂಕ್ಷ್ಮದರ್ಶಕದ ಸಹಾಯದಿಂದ ಈ ಎರಡು ಬಗೆಯ ಸ್ಫಟಿಕಗಳನ್ನೂ ಬೇರ್ಪಡಿಸಿದರು. ಇದರಿಂದ ಪಾಸ್ತರ್ ಬಲು ಮೇಲ್ಮಟ್ಟದ ವಿಜ್ಞಾನಿಯೆಂದು ಪ್ರಸಿದ್ಧರಾದರು. (ಮುಂದೆ ಟಾರ್ಟಾರಿಕ್ ಆಮ್ಲದ ನಾಲ್ಕನೆಯ ರೂಪ ಮಿಸೋಟಾರ್ಟಾರಿಕ್ ಆಮ್ಲವನ್ನೂ ಅವರೇ ಆವಿಷ್ಕರಿಸಿದರು.) ಈ ವ್ಯಾಸಂಗಗಳನ್ನು ಆತ ಮುಂದೆ ವರ್ಗವಾಗಿ ಹೋದ ಡಿಜಾನ್ ಹಾಗೂ ಸ್ಯಾಸ್‍ಬರ್ಗಿನಲ್ಲಿಯೂ ಮುಂದುವರಿಸಿ ಮುಕ್ತಾಯ ಮಾಡಿದ್ದು ಅವರ ಸಾಧನೆಯ ಪ್ರತೀಕ.

1854ರಲ್ಲಿ ಲಿಲ್ಲೆ ಎಂಬಲ್ಲಿ ಹೊಸದಾಗಿ ಪ್ರಾರಂಭವಾದ ಕಾಲೇಜಿನ ಮುಖ್ಯಸ್ಥರಾಗಿ ಪಾಸ್ತರ್ ವರ್ಗಮಾಡಲ್ಪಟ್ಟರು. ಅಲ್ಲಿ ಅವರಿಗೆ ಬೀರನ್ನು ಕುರಿತು ಅಧ್ಯಯನ ಕೈಗೊಳ್ಳುವ ಅವಕಾಶ ಒದಗಿತು. ಬೀರ್ ನಿರ್ಮಾಪಕ ಸಂಸ್ಥೆಗಳು ಅಲ್ಲಿ ಹಲವಿದ್ದು ಫ್ರಾನ್ಸ್ ದೇಶದ ಬೀರಿನ ರುಚಿಗೆ ಹಾಗೂ ಪ್ರಸಿದ್ಧಿಗೆ ಕಾರಣವಾಗಿದ್ದುವು. ಆದರೆ ಶೀಶೆಗಳಲ್ಲಿ ಮೊಹರು ಮಾಡಿದಂತೆಯೇ ಅದರ ರುಚಿ ಹಾಗೂ ಕಂಪು ಕೆಟ್ಟು ಹೋಗುತ್ತಿದ್ದು ಗಿರಾಕಿಗಳು ತಪ್ಪಿ ಹೋಗುವ ಸಂಭವ ಬಂದಿತ್ತು. ಬೀರ್ ತಯಾರಿಕೆಯಲ್ಲಿ ಬಳಸುತ್ತಿದ್ದ ಯೀಸ್ಟ್ ಎಂಬ ಹುದುಗುಕಾರಕ ವಸ್ತುವನ್ನು ಪಾಸ್ತರ್ ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ ಅದರಲ್ಲಿ ಸಾಮಾನ್ಯ ಹಾಗೂ ವಿಶೇಷ ರೂಪಗಳು ಇರುವುದನ್ನೂ ವಿಶೇಷ ರೂಪದ ಯೀಸ್ಟಿನಿಂದ ತಯಾರಾದ ಬೀರ್ ಕಾಲಕ್ರಮದಲ್ಲಿ ಕೆಟ್ಟುಹೋಗುವುದನ್ನೂ ಗಮನಿಸಿದರು. 1857ರಲ್ಲಿ ಪಾಸ್ತರ್ ಇಕೋಲಿ ನಾರ್ಮೆಲ್ಲಿನಲ್ಲಿ ಪ್ರಾಧ್ಯಾಪಕರಾಗಿ ವರ್ಗವಾದ ಮೇಲೂ ಈ ಬಗ್ಗೆ ಅನ್ವೇಷಣೆ ಮಾಡುತ್ತಿದ್ದು ಹುದುಗುಕಾರಕ ವಸ್ತು ಹಾಗೂ ಹುಳಿ ಬರಿಸುವ ವಸ್ತು ವಾಸ್ತವವಾಗಿ ಸೂಕ್ಷ್ಮ ಕ್ರಿಮಿಗಳೆಂದೂ ವಾತಾವರಣದಲ್ಲಿ ಅವು ಸಾಮಾನ್ಯವಾಗಿ ಇರುವುವೆಂದೂ ಜನ ವಾಸವಾಗಿರದ ಮತ್ತು ಸ್ವಚ್ಛ ವಾತಾವರಣವುಳ್ಳ ಪರ್ವತಾಗ್ರದ ಮೇಲಿನ ವಾಯುವಿನಲ್ಲಿ ಇರುವುದಿಲ್ಲವೆಂದೂ ಅಲ್ಲಿ ಪದಾರ್ಥ ತಾನಾಗಿಯೇ ಹುದುಗೇಳುವುದಾಗಲೀ ಹುಳಿ ಬಂದು ಕೆಟ್ಟು ಹೋಗುವುದಾಗಲೀ ಬೇಗ ಕಂಡುಬರುವುದಿಲ್ಲವೆಂದೂ ವಿಶದೀಕರಿಸಿದರು. ಅಪೇಕ್ಷಿತ ಪರಿಣಾಮ ಕಂಡುಬಂದ ಬಳಿಕ ವಸ್ತುವನ್ನು 550ಅ-700ಅ ಯಷ್ಟು ಉಷ್ಣತೆಗೆ ಒಡ್ಡಿದರೆ ಈ ಕ್ರಿಮಿಗಳು ಸತ್ತು ಹೋಗಿ ಮುಂದೆ ಯಾವ ರೀತಿಯ ಅನಪೇಕ್ಷಿತ ಪರಿಣಾಮ ಕಂಡುಬರುವುದಿಲ್ಲವೆಂದೂ ಬೀರ್ ತಯಾರಿಸಿ ಶೀಶೆಗೆ ಹಾಕಿ ಮೊಹರು ಮಾಡಿದ ಮೇಲೆ ಅದನ್ನು ಈ ರೀತಿ ಸಂಸ್ಕರಿಸುವುದರಿಂದ ಬೀರಿನ ರುಚಿ ಮತ್ತು ಕಂಪು ಕೆಡುವುದಿಲ್ಲವೆಂದೂ ತೋರಿಸಿ, ಹೆಚ್ಚು ಕಡಿಮೆ ನಾಶವಾಗಿಯೇ ಹೋಗಿದ್ದ ಫ್ರಾನ್ಸಿನ ಬೀರ್ ಕೈಗಾರಿಕೆಯ ಪುನರುತ್ಥಾನಕ್ಕೆ ಕಾರಣರಾದರು. ಇದೇ ವ್ಯಾಸಂಗದಿಂದ ವಿಶದವಾದ ಇನ್ನೊಂದು ಮುಖ್ಯ ವಿಷಯವೆಂದರೆ ಕ್ರಿಮಿಗಳು ತಾವಾಗಿಯೇ ನಿರ್ಜೀವ ವಸ್ತುಗಳಿಂದ ಉದ್ಭವಿಸಲಾರವು ಎಂಬುದು.

1865ರಲ್ಲಿ ಸರ್ಕಾರದ ಮತ್ತು ತಮ್ಮ ಗುರು ಡ್ಯೂಮಾಸ್ ಅವರ ಅಪೇಕ್ಷೆಯಂತೆ ಪಾಸ್ತರ್ ರೇಷ್ಮೆ ಹುಳುಗಳ ವಿಚಾರವಾಗಿ ವ್ಯಾಸಂಗ ಕೈಗೊಂಡರು. ಹಲವು ವರ್ಷಗಳಿಂದ ಫ್ರಾನ್ಸಿನಲ್ಲಿ ರೇಷ್ಮೆ ಹುಳುಗಳಿಗೆ ಏನೋ ರೋಗ ಬಂದು ಅವು ಗೂಡು ಕಟ್ಟುವುದಕ್ಕೆ ಮೊದಲೇ ಸತ್ತುಹೋಗುತ್ತಿದ್ದುದು ರೇಷ್ಮೆ ತಯಾರಕರಿಗೆ ದಿಗ್ಭ್ರಮೆಯಾಗಿತ್ತು. ಕೆಲವೇ ವರ್ಷಗಳ ಹಿಂದೆ ಫ್ರಾನ್ಸಿನ ಬೀರ್ ಕೈಗಾರಿಕೆ ಸ್ಥಗಿತಗೊಂಡಿತೇನೋ ಎಂದು ಹೆದರಿದ್ದಂತೆಯೇ ಈಗ ಫ್ರಾನ್ಸಿನ ರೇಷ್ಮೆ ತಯಾರಿಕೆಗೆ ಕೊನೆಗಾಲ ಬಂತು ಎನ್ನುವಂತಾಗಿತ್ತು. ಪಾಸ್ತರ್ ರೇಷ್ಮೆಹುಳುಗಳನ್ನು ಅರೆದು ಸಾರವನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿ ರೇಷ್ಮೆ ಹುಳುಗಳ ರೋಗ ಹಾಗೂ ಮರಣಕ್ಕೆ ಕಾರಣವಾದ ಕ್ರಿಮಿಗಳು ಇರುವುದನ್ನು ತೋರಿಸಿದರು. ಮೊಟ್ಟೆ ಇಟ್ಟ ಮೇಲೆ ಆ ಚಿಟ್ಟೆಗಳನ್ನು ಅರೆದು ಪರೀಕ್ಷಿಸಿ ಸೋಂಕು ಇದ್ದ ಚಿಟ್ಟೆಗಳ ಮೊಟ್ಟೆಗಳನ್ನು ನಾಶ ಮಾಡುತ್ತ ಸೋಂಕುಳ್ಳ ರೇಷ್ಮೆ ಹುಳುಗಳ ಸಂತತಿಯನ್ನು ನಿರ್ಮೂಲ ಮಾಡುವ ವಿಧಾನವನ್ನು ತೋರಿಸಿಕೊಟ್ಟರು.

ನಿರಂತರವಾಗಿ ಪ್ರಯೋಗ ಮತ್ತು ತೀವ್ರ ಚಿಂತನೆಗಳಲ್ಲಿ ಉದ್ಯುಕ್ತರಾಗಿದ್ದ ಪಾಸ್ತರ್ ಆರೋಗ್ಯ 1868ರಲ್ಲಿ ಹದಗೆಟ್ಟಿತು. ಅವರುಬಪಾಶ್ರ್ವವಾಯುಗ್ರಸ್ತರಾದರು. ಆದರೆ ಶೀಘ್ರದಲ್ಲಿ ತಕ್ಕಷ್ಟು ಚೇತರಿಸಿಕೊಂಡು ಪುನಃ ವ್ಯಾಸಂಗಗಳನ್ನು ಮುಂದುವರಿಸಿದರು. ಅಂದು ಅವರ ಆಸಕ್ತ ಕ್ಷೇತ್ರ ಕುರಿಗಳಿಗೆ ಮಾರಿಯಾಗಿ ಬರುತ್ತಿದ್ದ ನೆರಡಿ ರೋಗದ ಅಧ್ಯಯನ. ನೆರಡಿ ರೋಗ ಕುರಿಗಳಿಗೆ ವ್ಯಾಪಕ ಮಾರಕವಾಗಿದ್ದಂತೆಯೇ ಕೋಳಿಗಳಿಗೆ ಕೋಳಿಕಾಲರಾ ಎಂಬ ವ್ಯಾಧಿ ಮಾರಕವಾಗಿತ್ತು. ಇದರ ಕಾರಕ ಕ್ರಿಮಿಯನ್ನು ಪ್ರತ್ಯೇಕಿಸಿ ಅದನ್ನು ಪ್ರಯೋಗಾಲಯದಲ್ಲಿ ಮತ್ತೆ ಮತ್ತೆ ಕೃಷಿ ಮಾಡಿ ದುರ್ಬಲ ಕ್ರಿಮಿಯಾಗಿ ಮಾರ್ಪಡಿಸುವ ವಿಧಾನವನ್ನು ಪಾಸ್ತರ್ ಆವಿಷ್ಕರಿಸಿದರು. ಈ ದುರ್ಬಲ ಕ್ರಿಮಿಯನ್ನು ಚುಚ್ಚುಮದ್ದಾಗಿ ಕೋಳಿಮರಿಗಳ ದೇಹದ ಒಳಹೋಗಿಸಿದರೆ ಮುಂದೆ ಇವು ಕಾಲರಾ ವ್ಯಾಧಿಯಿಂದ ಮೃತವಾಗುವುದಿಲ್ಲ ಎಂದೂ ತೋರಿಸಿದರು. ಇದೇ ರೀತಿ ನೆರಡಿ ರೋಗಕಾರಕ ಸೂಕ್ಷ್ಮಾಣುವನ್ನು ದುರ್ಬಲೀಕರಿಸಿ ಇದನ್ನು ಆರೋಗ್ಯವಾಗಿದ್ದ ಕುರಿಗಳಿಗೆ ಚುಚ್ಚುಮದ್ದಾಗಿ ಕೊಟ್ಟು ಮುಂದೆ ಇವು ನೆರಡಿ ರೋಗಕ್ಕೆ ತುತ್ತಾಗದಂತೆ ರಕ್ಷಣೆ ಒದಗಿಸಬಹುದೆಂದೂ ತೋರಿಸಿದರು. ವಿಜ್ಞಾನಿಗಳಿಗೂ ಜನಸಾಮಾನ್ಯರಿಗೂ ಈ ವಿಧಾನ ಮನದಟ್ಟಾಗುವಂತೆ ಇವರು 1881ರಲ್ಲಿ ಮೆಲುನ್ ನಗರದಲ್ಲಿ ನಡೆಸಿದ ಪ್ರಯೋಗ ಲೋಕವಿಖ್ಯಾತವಾಯಿತು.

ಕೊನೆಯದಾಗಿ ಮತ್ತು ವೈದ್ಯಕೀಯ ಗಣನೆಯಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಪಾಸ್ತರ್ ಅವರ ವ್ಯಾಸಂಗ ವಿಷಯವಾಗಿ ಇದ್ದುದು ಹುಚ್ಚುನಾಯಿಕಡಿತದಿಂದ ಉಂಟಾಗುವ ರೇಬೀಸ್ ಅಥವಾ ಹೈಡ್ರೊಫೋಬಿಯ ಎಂಬ ಮಾರಕರೋಗ. ರೋಗ ಪ್ರಧಾನವಾಗಿ ನರಮಂಡಲಕ್ಕೆ ಸಂಬಂಧಪಟ್ಟಿರುವುದು ಮನದಟ್ಟಾಗಿ ನರಮಂಡಲದಿಂದ ರೋಗಾಣುಗಳನ್ನು ಪಡೆಯಲು ಪ್ರಯತ್ನಿಸಿದರು. ರೋಗಾಣು ಪತ್ತೆ ಆಗದಿದ್ದರೂ ರೋಗಗ್ರಸ್ತ ನಾಯಿಯ ಮಿದುಳಿನ ಅಥವಾ ಮಿದುಳುಬಳ್ಳಿಯ ಸಾರವನ್ನು ಚುಚ್ಚು ಮದ್ದಾಗಿ ಕೊಟ್ಟು ಆರೋಗ್ಯವಂತ ಪ್ರಾಣಿಗಳಲ್ಲಿ ರೋಗವನ್ನು ಉಂಟುಮಾಡಬಹುದೆಂದು ತೋರಿಸಿದರು. ಒಂದು ದಿನ (6 ಜುಲೈ 1885) ಜೋಸೆಫ್ ಮೀಸ್ಟರ್ ಎಂಬ ಹುಡುಗನಿಗೆ ಹುಚ್ಚುನಾಯಿ ಕಡಿದು ತೀವ್ರ ಗಾಯಗಳಾಗಿದ್ದು, ಆತನ ತಾಯಿ ಪಾಸ್ತರ್ ಹತ್ತಿರ ಬಂದು ಹೇಗಾದರೂ ಮಾಡಿ ಆತನನ್ನು ಬದುಕಿಸಿ ಕೊಡಬೇಕೆಂದು ಕೇಳಿಕೊಂಡರು. ಹುಚ್ಚುನಾಯಿ ಕಡಿತಕ್ಕೆ ಆಗಿನ ಕಾಲದಲ್ಲಿ ರೂಢಿಯಲ್ಲಿದ್ದ ಚಿಕಿತ್ಸಾ ಕ್ರಮವೆಂದರೆ ನಾಯಿ ಕಡಿದ ಅರ್ಧ ಗಂಟೆಯೊಳಗೆ ಕೆಂಪಗೆ ಕಾಯಿಸಿದ ಕಬ್ಬಿಣದಿಂದ ಕಡಿದ ಗಾಯದ ಮೇಲೆಯೇ ಬರೆ ಹಾಕುವುದು. ಇಂಥ ಭೀಕರ ಕ್ರಮಕ್ಕೆ ತಾಯಿಯ ಮನಸ್ಸು ಒಪ್ಪದೆ, ಪಾಸ್ತರನ ವ್ಯಾಸಂಗ ವಿಷಯವನ್ನು ಕೇಳಿ ಅವನಲ್ಲಿಗೆ ಬಂದಿದ್ದರು. ಬಲುದಿನಗಳಿಂದ ನಿರೀಕ್ಷಿಸುತ್ತಿದ್ದ ಅವಕಾಶ ಒದಗಿಬಂದು ಪಾಸ್ತರ್ ಆ ಹುಡುಗನಿಗೆ ತಾವು ಸಿದ್ಧಪಡಿಸಿ ಇಟ್ಟುಕೊಂಡಿದ್ದ ಹದಿನಾಲ್ಕು ದಿವಸಗಳು ಒಣಗಿಸಿದ, ಹದಿಮೂರು ದಿವಸಗಳು ಒಣಗಿಸಿದ, ಮಿದುಳು ಬಳ್ಳಿ ಸಾರಗಳನ್ನು ಪ್ರತಿದಿನ ಚುಚ್ಚುಮದ್ದಾಗಿ ಕೊಡುತ್ತಾ ಬಂದರು. ಹುಡುಗ ಸಾಯದೆ ಬದುಕಿಕೊಂಡದ್ದು ಪಾಸ್ತರ್ ಅವರ  ಆವಿಷ್ಕಾರಕ್ಕೆ ದೊರಕಿದ ಅತ್ಯದ್ಭುತ ವಿಜಯ. ಸ್ವಲ್ಪ ಕಾಲ ಮುಂದೆ ಇದೇ ರೀತಿ ಚಿಕಿತ್ಸೆಯಿಂದ ಪಾಸ್ತರ್ ಜ್ಯೂಪಿಲ್ಲೆ ಎಂಬ ಇನ್ನೊಬ್ಬ ಹುಡುಗನನ್ನು ಹುಚ್ಚುನಾಯಿ ಕಡಿತದ ಪರಿಣಾಮದಿಂದ ರಕ್ಷಿಸಿದರು. ಈ ವ್ಯಕ್ತಿ ಮುಂದೆ ಜೀವನ ಪರ್ಯಂತ ಪಾಸ್ತರ್ ಅವರನ್ನು ನೆರಳಿನಂತೆ ಅನುಸರಿಸುತ್ತಿದ್ದು ಅವರ ಸೇವಾನಿರತನಾಗಿದ್ದ. ಹುಚ್ಚುನಾಯಿ ಕಡಿತದಿಂದ ಉಂಟಾಗುವ ರೋಗದ ವಿರುದ್ಧ ರಕ್ಷಣೆಯ ಈ ಕ್ರಮದಿಂದ ಮಾನವಕೋಟಿಗೆ ಅಪಾರ ಲಾಭವಾಯಿತು. ಪ್ರಪಂಚದಲ್ಲೆಲ್ಲಾ ಈ ಕ್ರಮದ ಉಪಯುಕ್ತತೆ ಮನದಟ್ಟಾಗಿ ಇದನ್ನು ಎಲ್ಲೆಲ್ಲೂ ಅನುಸರಿಸಲು ತಕ್ಕಷ್ಟು ಮಿದುಳುಬಳ್ಳಿ ಸಾರವನ್ನು ತಯಾರಿಸುವ ಅನುಕೂಲತೆ ಲಭಿಸುವಂತೆ ನಿಧಿಯನ್ನು ನಾನಾಕಡೆಗಳಿಂದ ಸಂಗ್ರಹಿಸಲಾಯಿತು. ಇಪ್ಪತ್ತೈದು ಲಕ್ಷ ಫ್ರಾಂಕುಗಳ ಮೌಲ್ಯದ ಈ ನಿಧಿಯಿಂದ ಪ್ಯಾರಿಸ್‍ನಲ್ಲಿ ಭವ್ಯಸೌಧವನ್ನು ಕಟ್ಟಿ ಸಂಸ್ಥೆಯನ್ನು ಸ್ಥಾಪಿಸಿ ಅದಕ್ಕೆ ಪಾಸ್ತರ್ ಇನ್‍ಸ್ಟಿಟ್ಯೂಟ್ ಎಂದು ಹೆಸರಿಡಲಾಯಿತು. 1838 ರಲ್ಲಿ ಪೂರ್ಣಗೊಳಿಸಿದ ಈ ಸಂಸ್ಥೆಗೆ ಪಾಸ್ತರ್ ಅವರನ್ನೇ ಮೊದಲ ನಿರ್ದೇಶಕರಾಗಿ ನೇಮಿಸಿ ಗೌರವಿಸಲಾಯಿತು. ಇಲ್ಲಿ ಪಾಸ್ತರ್ ಪ್ರಯೋಗಗಳನ್ನು ಮುಂದುವರಿಸುತ್ತಾ 1895 ಸೆಪ್ಟಂಬರ್ 28 ರಂದು ನಿಧನರಾದರು.

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ

Great chemist and micro biologist Louis Pasteur







ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ