ವಡವಾಟಿ
ನರಸಿಂಹಲು ವಡವಾಟಿ
ಪಂಡಿತ್ ನರಸಿಂಹಲು ವಡವಾಟಿ ಅಂತಾರಾಷ್ಟ್ರೀಯ ಖ್ಯಾತಿಯ ಕ್ಲಾರಿನೆಟ್ ವಾದಕರು. ಜೈಪುರ್ ಹಾಗೂ ಗ್ವಾಲಿಯರ್ ಘರಾನೆಗೆ ಸೇರಿದ ಇವರು, ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿ, ಪಂ.ಮಲ್ಲಿಕಾರ್ಜುನ ಮನ್ಸೂರ್ ಇವರ ಪರಂಪರೆಗೆ ಸೇರಿದವರು.
ನರಸಿಂಹಲು ವಡವಾಟಿಯವರು 1942ರ ಜನವರಿ 21ರಂದು ರಾಯಚೂರು ಜಿಲ್ಲೆಯ ವಡವಾಟಿ ಎಂಬಲ್ಲಿ ಜನಿಸಿದರು. ತಂದೆ ಬುಡ್ಡಪ್ಪ ತಬಲ ವಾದಕರು. ತಾಯಿ ರಂಗಮ್ಮ ಭಕ್ತಿಗೀತೆಗಳ ಹಾಡುಗಾರ್ತಿ. ಅಜ್ಜ ಹೊಬಳಪ್ಪ ಶಹನಾಯ್ ವಾದಕರು. ಹೀಗೆ ಇವರಿಗೆ ಸಂಗೀತ ತಲೆಮಾರುಗಳಿಂದ ಬಂದ ಬಳುವಳಿ. ಇವರ ಮಕ್ಕಳೂ ಸಹಾ ಸಂಗೀತಲೋಕದಲ್ಲಿ ಸಾಧನೆ ಮಾಡುತ್ತ ಸಾಗಿದ್ದಾರೆ.
ನರಸಿಂಹಲು ವಡವಾಟಿಯವರು ಪಂಡಿತ್ ಸಿದ್ಧರಾಮ ಜಂಬಲದಿನ್ನಿಯವರಲ್ಲಿ ಹಿಂದೂಸ್ತಾನಿ ಸಂಗೀತ ಸಾಧನೆ ಮಾಡಿದರು. ಕ್ಲಾರಿನೆಟ್ ವಾದನ ಅವರು ಸ್ವಯಂ ತಪಸ್ಸಿನ ಹಲವು ವರ್ಷಗಳ ಸಾಧನೆಯಿಂದ ರೂಡಿಸಿಕೊಂಡ ಕಲೆ. ತಾವು ಗುರುಗಳಿಂದ ಕಲಿತ ಸಂಗೀತವನ್ನು ಕ್ಲಾರಿನೆಟ್‌ಗೆ ಅಳವಡಿಸುತ್ತಾ ಸಾಗಿದರು. ಕ್ಲಾರಿನೆಟ್‌ನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಕ್ಲಿಷ್ಟರಾಗಗಳನ್ನು ನುಡಿಸಬಲ್ಲ ಸಮರ್ಥರಾದರು.
ನರಸಿಂಹಲು ವಡವಾಟಿ ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ಕಾರ್ಯಕ್ರಮಗಳನ್ನು ನಡೆಸಿದರು. ವಿಶ್ವದ ಅನೇಕ ಕಡೆಗಳಲ್ಲಿ ಇವರ ಕಾರ್ಯಕ್ರಮಗಳು ನಡೆಯುತ್ತಿವೆ. ಆಕಾಶವಾಣಿ ಮತ್ತು ದೂರದರ್ಶನ ವಾಹಿನಿಗಳಲ್ಲಿ ಇವರ ಹಲವಾರು ಕಾರ್ಯಕ್ರಮಗಳು ಪ್ರಸಾರವಾಗಿವೆ. ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್, ವಿದ್ವಾನ್ ಎ.ಕೆ.ಸಿ. ನಟರಾಜನ್, ಡಾ. ಕಾರೈಕುಡಿ ಸುಬ್ರಹ್ಮಣ್ಯಮ್ (ವೀಣೆ), ಪಂ.ರೋಣು ಮೊಜುಮ್ದಾರ್ ಅವರ ಬಾನ್ಸುರಿ, ಹಾಗೂ ಅಮೆರಿಕದ ಪ್ರಸಿದ್ಧ ಸಂಗೀತಗಾರ ವಿಲಿಯಂ ಪೊವೆಲ್ ಸೇರಿದಂತೆ ವಿಶ್ವಪ್ರಸಿದ್ಧರೊಡನೆ ಜುಗಲ್‌ಬಂದಿ ಕಾರ್ಯಕ್ರಮ ನೀಡಿದ್ದಾರೆ. ನರಸಿಂಹಲು ವಡವಾಟಿ ಅವರ ಅನೇಕ ಸಂಗೀತದ ಆಲ್ಬಮ್ಗಳೂ ಪ್ರಖ್ಯಾತವಾಗಿವೆ.
ನರಸಿಂಹಲು ವಡವಾಟಿ ಅವರು ರಾಯಚೂರು ನಗರದಲ್ಲಿ ಸ್ವರಸಂಗೀತ ವಿದ್ಯಾಲಯ ಸ್ಥಾಪನೆ ಮಾಡಿ ನೂರಾರು ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತ ಗಾಯನ, ಹಾರ್ಮೋನಿಯಂ, ತಬಲ, ಕೊಳಲು, ಸಿತಾರ್, ಕ್ಲಾರಿನೆಟ್ ತರಬೇತಿ ವ್ಯವಸ್ಥೆ ಮಾಡಿದ್ದಾರೆ. ಅವರು ಬೆಂಗಳೂರಿನ ಕೆನ್ ಕಲಾಶಾಲೆಯಲ್ಲಿ ಸ್ವರಸಂಗಮ ಸಂಗೀತ ವಿದ್ಯಾಲಯ ತೆರೆದವರು. ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ವಿಶ್ವದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಗೌರವಾನ್ವಿತರಾಗಿದ್ದಾರೆ.
ನರಸಿಂಹಲು ವಡವಾಟಿ ಅವರಿಗೆ ಸುರ ಸಿಂಗರ್ ಸಮ್‌ಸನ್ ಮುಂಬೈ ಅವರ ಸುರಮಣಿ, ಕರ್ನಾಟಕ ಸಂಗೀತ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್, ಅಮೇರಿಕದ ಲಾಸೋನಿಲಿಸ್ ವಿಶ್ವ ವಿದ್ಯಾಲಯವು 2011 ಅಗಸ್ಟ್ ತಿಂಗಳಲ್ಲಿ ನಡೆಸಿದ ಅಂತಾರಾಷ್ಷ್ರೀಯ ಕ್ಲಾರಿಯೋನೇಟ್ ಸಮ್ಮೇಳನದ ಅಧ್ಯಕ್ಷತೆ, ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದ “ಔಟ್ ಸ್ಟಾಂಡಿಂಗ್ ಆರ್ಟಿಸ್ಟ್ ಆಫ್ ಟ್ವೆಂಟಿಯತ್ ಸೆಂಚುರಿ” ಗೌರವ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ನರಸಿಂಹಲು ವಡವಾಟಿಯವರು ಕರ್ನಾಟಕ ಸರ್ಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
Great clarinet musician Pandit Narasimhalu Vadavati
ಕಾಮೆಂಟ್‌ಗಳು