ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನರಸಿಂಹಮೂರ್ತಿ


 ಎಚ್. ಕೆ. ನರಸಿಂಹಮೂರ್ತಿ


ವಿದ್ವಾನ್ ಎಚ್. ಕೆ. ನರಸಿಂಹಮೂರ್ತಿ ಅವರು ಹೆಸರಾಂತ ಪಿಟೀಲು ವಾದನ ಕಲಾವಿದರು. 

ನರಸಿಂಹಮೂರ್ತಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ 1946ರ ಮೇ 4ರಂದು ಜನಿಸಿದರು. ತಂದೆ ಎಚ್.ಎಸ್. ಕೃಷ್ಣಮೂರ್ತಿ ಸ್ವಾತಂತ್ರ‍್ಯ ಹೋರಾಟಗಾರರು. ತಾಯಿ ಜಯಲಕ್ಷ್ಮಿ. ರಂಗಕರ್ಮಿ ಲಕ್ಷ್ಮೀ ಚಂದ್ರಶೇಖರ್ ಇವರ ಸೋದರಿ.

ನರಸಿಂಹಮೂರ್ತಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ ಪಡೆದರು. ಸಂಗೀತದಲ್ಲಿ ಒಲವು ಮೂಡಿ ಮೊದಲಿಗೆ ಕೇಶವಯ್ಯನವರಿಂದ ಗಾಯನ ಕಲಿತರು.  ಮುಂದೆ ಎಚ್.ಟಿ. ಪುಟ್ಟಸ್ವಾಮಯ್ಯ, ಎಚ್.ವಿ. ಕೃಷ್ಣನ್, ಎಂ.ಸಿ. ಪುಟ್ಟಸ್ವಾಮಯ್ಯ, ಟಿ.ಪುಟ್ಟಸ್ವಾಮಯ್ಯ, ಎ.ಕೆ.ಮುತ್ತಣ್ಣ ಮುಂತಾದವರ ಬಳಿ ಗಾಯನ ಹಾಗೂ ಪಿಟೀಲು ವಾದನ ಸಾಧನೆ ಮಾಡಿದರು. ಕರ್ನಾಟಕ ಸರಕಾರದ ಟೆಕ್ನಿಕಲ್ ಬೋರ್ಡ್‌‌ನಿಂದ ಸೀನಿಯರ್‌ ಮ್ಯೂಸಿಕ್, ಮದರಾಸಿನ ಸೆಂಟ್ರಲ್ ಕಾಲೇಜ್ ಆಫ್ ಮ್ಯೂಸಿಕ್ ಇಂದ ಪ್ರಥಮ ದರ್ಜೆಯಲ್ಲಿ ಸಂಗೀತ ವಿದ್ವಾನ್ ಪದವಿ ಗಳಿಸಿದರು. ಮೈಸೂರಿನ ಮ್ಯೂಸಿಕ್ ಕಾಲೇಜಿನಿಂದ‍ ಎಂ.ಎ ಸಂಗೀತ ಪದವಿಯನ್ನೂ ಪಡೆದರು. ಎಂ.ಎಸ್. ಅನಂತರಾಮನ್, ಎಂ.ಎಸ್.ಗೋಪಾಲಕೃಷ್ಣನ್ ಅವರ ಬಳಿ ಪ್ರೌಢ ಶಿಕ್ಷಣ ಪಡೆದರು. ಕೇಂದ್ರ ಸರಕಾರದ ವಿದ್ಯಾರ್ಥಿ ವೇತನ ಪಡೆದು ಕರೂರ್‌ ಸುಂದರಂ ಅಯ್ಯರ್‌ ಅವರಲ್ಲಿ ಉನ್ನತ ಶಿಕ್ಷಣ ಗಳಿಸಿದರು. 

ಎಚ್. ಕೆ. ನರಸಿಂಹಮೂರ್ತಿ ಅವರು 1976ರಿಂದ ನಿಲಯದ ಕಲಾವಿದರಾಗಿ ಮೈಸೂರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದರು. ಆಕಾಶವಾಣಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಬಾಂಬೆ ಸಹೋದರಿಯರು, ರುದ್ರಪಟ್ಣಂ ಸಹೋದರರು, ಸುಕನ್ಯಾ ಪ್ರಭಾಕರ್‌ ಮುಂತಾದವರಿಗೆ ಸಹವಾದನ ನೀಡಿದರು. ಏಕವ್ಯಕ್ತಿಯಾಗಿಯೂ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮಹಾರಾಜಪುರಂ ವಿಶ್ವನಾಥ್‌ ಅಯ್ಯರ್‌, ಚೆಂಬೈ ವೈದ್ಯನಾಥ ಭಾಗವತರ್‌, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್‌, ಆಲತ್ತೂರು ಶ್ರೀನಿವಾಸ ಅಯ್ಯರ್‌, ಬಿ. ರಾಜಮ್ ಅಯ್ಯಂಗಾರ್‌, ಡಾ. ಎಸ್. ರಾಮನಾಥನ್, ಶ್ರೀಮತಿ ಡಿ.ಕೆ. ಪಟ್ಟಮ್ಮಾಳ್, ಕದ್ರಿಗೋಪಾಲನಾಥ್, ಬಿ.ದೇವೇಂದ್ರಪ್ಪ ಮುಂತಾದವರುಗಳ ಸಂಗೀತಕ್ಕೆ ಪಿಟೀಲು ವಾದನ ಸಹಕಾರ ನೀಡಿದರು. ದೇಶಾದ್ಯಂತ ಕಾರ್ಯಕ್ರಮಗಳಲ್ಲಿ ಭಾಗಿಯಾದರು. 

ಎಚ್. ಕೆ. ನರಸಿಂಹಮೂರ್ತಿ ವಿದ್ಯಾರ್ಥಿ ದೆಸೆಯಲ್ಲೇ ಹಲವಾರು ಸಂಗೀತ ಸ್ಪರ್ಧೆಗಳಲ್ಲಿ, ವಾರ್ಷಿಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿದ್ದರು. ಮದರಾಸಿನ ಮ್ಯೂಸಿಕ್ ಅಕಾಡಮಿಯಿಂದ ಬೆಸ್ಟ್ ಜ್ಯೂನಿಯರ್‌ ವಯಲನಿಸ್ಟ್ ಪ್ರಶಸ್ತಿ, ಧನುರ್ವೈಣಿಕ ರತ್ನ, ಗಾನಕಲಾಭಾಸ್ಕರ, ಶ್ರೇಷ್ಠಾಚಾರ್ಯ, ಆಸ್ಥಾನ ವಿದ್ವಾನ್, ಸಂಗೀತ ಕಲಾತಪಸ್ವಿ, ಸಂಗೀತ ಕಲಾಭೂಷಣ, ಪ್ರಣವ ಶ್ರೀ ಪ್ರಶಸ್ತಿ, ಅನನ್ಯ ಪುರಸ್ಕಾರ, ಆಚಾರ್ಯರತ್ನ, ನಾದಬ್ರಹ್ಮ, ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಗೌರವ, ವಿಶೇಶ ಆಚಾರ್ಯ ಪ್ರಶಸ್ತಿ, ಪಪ್ಪಾ ವೆಂಕಟರಾಮಯ್ಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳನ್ನು ಗಳಿಸಿದರು. ವಿಶ್ವದಾದ್ಯಂತ ಸಂಗೀತ ಕಾರ್ಯಕ್ರಮಗಳನ್ನು ನೀಡಿದರು. ವಾಷಿಂಗ್‌ಟನ್ ಬಳಿ ಮೆರಿಲ್ಯಾಂಡ್‌ನಲ್ಲಿ ಸಂಗೀತ ಉಪಾಧ್ಯಾಯರಾಗಿ ಪಿಟೀಲು ಶಿಕ್ಷಣ ನೀಡಿದರು. 

ಎಚ್. ಕೆ. ನರಸಿಂಹಮೂರ್ತಿ ಅವರು ಮೈಸೂರಿನ ಶ್ರೀ ತ್ಯಾಗರಾಜ ಸಂಗೀತ ಸಭಾದ ಸಂಸ್ಥಾಪಕರಾಗಿ ಹಲವು ದಶಕಗಳಿಂದ ಭಕ್ತಿ ಶ್ರದ್ಧೆಗಳಿಂದ ಕೈಂಕರ್ಯ ನೀಡುತ್ತಿದ್ದಾರೆ. ಅವರ ಪತ್ನಿ ವಿ. ರಾಜಲಕ್ಷ್ಮಿ ಮತ್ತು ಎಚ್. ಎನ್. ಭಾಸ್ಕರ ಸಹಾ ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. 

On the birthday of great violinist Vidwan H. K. Narasimhamurthy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ