ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಕೇತ್ ಗುರುದತ್ತ


 ಸಂಕೇತ್ ಗುರುದತ್ತ


ನಮ್ಮೆಲ್ಲರ ಆತ್ಮೀಯರಾದ ಸಂಕೇತ್ ಗುರುದತ್ತ ಅದ್ಭುತ ಕಲಾವಿದ, ಕವಿ ಮತ್ತು ಬರಹಾರ. ಎನ್. ಎಸ್. ಗುರುದತ್ತ ಆದ ಇವರು ತಮ್ಮನ್ನು ಕಲೆ ಮತ್ತು ಕಾವ್ಯದಲ್ಲಿ 'ಸಂಕೇತ್ ಗುರುದತ್ತಲ' ಆಗಿ ಗುರುತಿಸಿಕೊಂಡಿದ್ದಾರೆ. 

ಮೇ 5 ಸಂಕೇತ್ ಗುರುದತ್ತ ಅವರ ಜನ್ಮದಿನ.  ವಿಶ್ವ ಕಾರ್ಟೋನಿಗರ ದಿನದಂದೇ ಈ ಬಹುಮುಖಿ ಕಲಾವಿದ ಮತ್ತು ವ್ಯಂಗ್ಯಚಿತ್ರಕಾರ ಜನಿಸಿರುವುದು ವಿಶೇಷ. 
ಇವರು ಚಿಕ್ಕಂದಿನಿಂದಲೇ ಕಲೆಯ ಬಗ್ಗೆ ಒಲವು ಒಲವು ಮೂಡಿಸಿಕೊಂಡವರು.

ಆರ್ಟ್ ಮಾಸ್ಟರ್ ಡಿಪ್ಲೋಮಾ ಪಡೆದ ಗುರುದತ್ತ ಅವರು ಟ್ಯಾಬ್ಲಾಯ್ಡ್ ವಾರಪತ್ರಿಕೆಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತುಮಕೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಕೆಲಸ ಮಾಡುವಾಗ “ಸುದ್ದಿ ಸಂಗಾತಿ”ಯಲ್ಲಿ ತಮ್ಮ ಕಲೆ ಮೂಡಿಸಲಾರಂಭಿಸಿದರು.  ಅವರ ವ್ಯಂಗ್ಯಚಿತ್ರಗಳು ತುಮಕೂರು ವಾರ್ತೆ, ಕನ್ನಡ ಗಂಗೋತ್ರಿ, ನಗೇಮುಗಳು, ನಗೇಮಿತ್ರ ಮತ್ತು ಹಾಸ್ಯಲೋಕ ಮುಂತಾದವುಗಳಲ್ಲಿ ಮಿನುಗುತ್ತಿದ್ದವು.

ಕಂಪ್ಯೂಟರ್ ತಂತ್ರಜ್ಞಾನದತ್ತ ಆಕರ್ಷಿತರಾದ ಗುರುದತ್ತ ಕಿರ್ಲೋಸ್ಕರ್ ಮಲ್ಟಿ ಮೀಡಿಯಾನಲ್ಲಿ ಕಾರ್ಟೂನಿಂಗ್ ಮತ್ತು ಅನಿಮೇಷನ್‌ ಯುಗದ ಅನೇಕ ತಂತ್ರಜ್ಞಾನಗಳನ್ನು ಕಲಿತರು. ಅವರ ಕಾರ್ಟೂನ್‌ಗಳು ಪ್ರಜಾವಾಣಿ, ಸುಧಾ, ಮಯೂರ ಮುಂತಾದವುಗಳಲ್ಲಿಯೂ ಮೂಡಿಬಂದವು. ಕಾರ್ಟೂನಿಂಗ್‌ನ ಮುಖ್ಯವಾಹಿನಿಗೆ ಸೇರುವ ಮೊದಲು ಗುರುದತ್ತ ಅವರು ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಿದರು. ಮುಂದೆ ಅವರ ಸೇವೆ 'ಕನ್ನಡಪ್ರಭ'ದಲ್ಲಿ ನಡೆದು ನಂತರದಲ್ಲಿ ಪ್ರತಿಷ್ಟಿತ ಸಂಸ್ಥೆಗೆ ಸೇವೆ ಸಲ್ಲಿಸುತ್ತಿದ್ದಾರೆ.

ಸಂಕೇತ್ ಗುರುದತ್ತ ವ್ಯಂಗ್ಯಚಿತ್ರಗಳು ಮಾತ್ರವಲ್ಲದೆ ಆಧುನಿಕ ತಂತ್ರಜ್ಞಾನ ಮತ್ತು ಕುಂಚಕಲೆಗಳೆರಡನ್ನೂ ಬಳಸಿ ಎಲ್ಲ ರೀತಿಯ ವಿಶಿಷ್ಟ ಕಲೆಗಾರಿಕೆ ಹೊರಹೊಮ್ಮಿಸುತ್ತ ಬಂದಿದ್ದಾರೆ. ಬರಹಗಾರರಾಗಿ ಕವಿತೆ, ಚಿಂತನೆ, ವ್ಯಕ್ತಿ ಚಿತ್ರಣ, ಸಂದರ್ಶನ, ಅಂಕಣ, ಕಲಾ ವಿಮರ್ಶೆ, ನಾಟಕ ವಿಮರ್ಶೆ, ಸಿನಿಮಾ ವಿಮರ್ಶೆ ಹೀಗೆ ಅವರ ಬಹುಮುಖಿ ಬರಹಗಳೂ ಸಾಗಿವೆ.

ಸಂಕೇತ್ ಗುರುದತ್ತ  ಅವರಿಗೆ ಕಾರ್ಟೂನ್ ಸ್ಪರ್ಧೆಗಳಲ್ಲಿ 4 ಅಂತರರಾಷ್ಟ್ರೀಯ ಪ್ರಶಸ್ತಿಗಳು ಹಾಗೂ 2 ರಾಷ್ಟ್ರೀಯ ಪ್ರಶಸ್ತಿಗಳೂ ಸಂದಿವೆ. 'ಜೋಕ್ ಫಾಲ್ಟ್ಸ್' ಎಂಬ ವ್ಯಂಗ್ಯಚಿತ್ರವೂ ಪ್ರಕಟಗೊಂಡಿದೆ.

ಅವರ ಹೃದಯದ ಕವಿತೆಯ ಆಳದ ಒಂದು ನೋಟ ಇಂತಿದೆ:

ಕವಿತೆ!

ಕತೆಯ ನಡುವೆ ವಿ!
ವಿಭಿನ್ನ ವೀ ಕವಿತೆ!

ಕಾವ್ಯ 'ಕವಿ'ಯಬೇಕು
ಗಾಢವಾಗಿ, ದಟ್ಟವಾಗಿ!

ಕಾರ್ಮೋಡ ಕವಿದಂತೆ
ಮಳೆಯ ಹೊತ್ತ ನಿಂತ
ದಟ್ಟ ಮೋಡದಂತೆ!

'ಧೋ' ಎಂದು ದುಮುಕಿ
ಎಡಬಿಡದೆ ಸುರಿದು
ಒಣಗಿದ ವಸುಧೆಯ
ತಂಪಾಗಿಸುವಂತೆ!

ನೊಂದ ಮನವ ತಣಿಸಿ
ಸಾಂತ್ವನಿಸುವಂತೆ!

ಉಲ್ಲಾಸದ ಹೊಳೆ ಹರಿಸಿ
ಮನಕೆ ಆಹ್ಲಾದವ ನೀಡುವಂತೆ!

ಇರಬೇಕು ಕವಿತೆ!

-ಸಂಕೇತದತ್ತ!


ಸರಳ ಸಜ್ಜನಿಕೆಯ, ನಿರ್ಮತ್ಸರದಿಂದ ಎಲ್ಲ ಕಲಾವಿದರನ್ನೂ ಆದರಿಸಿ ಗೌರವಿಸುವ ಕಲಾವಿದ ಸಂಕೇತ್ ಗುರುದತ್ತ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.


Happy birthday Gurudatta N S Sanketh Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ