ವ್ಯಂಗ್ಯಚಿತ್ರ ದಿನ
ವಿಶ್ವ ವ್ಯಂಗ್ಯ ಚಿತ್ರಕಾರರ ದಿನ
On World Cartoonists Day 🌷🙏🌷
ಇಂದು ವಿಶ್ವ ವ್ಯಂಗ್ಯ ಚಿತ್ರಕಾರರ ದಿನ. ಹಾಸ್ಯದ ಮೂಲಕ ಸಮಾಜದಲ್ಲಿನ ಓರೆಕೋರೆಗಳನ್ನು ಓರೆಕೋರೆಯ ವ್ಯಂಗ್ಯನೋಟದ ಗೆರೆಗಳ ಕಲೆಯ ಮೂಲಕ ಜನಹೃದಯವನ್ನು ಸ್ಪಂದಿಸುವಂತೆ ಮಾಡುವ ಚಿತ್ರಗಳ ಪ್ರಭಾವ ಅಪಾರ.
ಭಾರತೀಯ ಬದುಕಿನಲ್ಲೂ ಆರ್. ಕೆ. ಲಕ್ಷ್ಮಣ್ ಟೈಮ್ಸ್ ಆಫ್ ಇಂಡಿಯಾದಲ್ಲಿನ 'You Said it', ಬಿ. ವಿ. ರಾಮಮೂರ್ತಿ ಅವರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ‘Mr.Citizen', ಕೆ.ಆರ್. ಸ್ವಾಮಿ, ಮರಿಯೋ ಮಿರಾಂಡ ಮುಂತಾದವದ ಬಗೆ ಬಗೆಯ ದೈನಂದಿನ ನೋಟಗಳು ಇತ್ಯಾದಿಗಳಿಂದ ಮೊದಲುಗೊಂಡು, ಇಂದಿನ ಹಲವಾರು ಕಲಾವಿದರ ಪಡೆ ಸೋಷಿಯಲ್ ಮೀಡಿಯಾಗಳಲ್ಲಿ ಮೂಡಿಸುವ ವ್ಯಂಗ್ಯಚಿತ್ರಗಳ ಮಹತ್ವ ಅಷ್ಟಿಷ್ಟಲ್ಲ.
ವ್ಯಂಗ್ಯಚಿತ್ರ ತಪ್ಪು ಮಾಡಿದವನಿಗೆ ನಸು ನಗುತ್ತಾ ತನ್ನ ತಪ್ಪು ಮಿತಿಗಳನ್ನು ನಸುನಗುತ್ತಾ ಕಂಡುಕೊಳ್ಳುವಂತೆ ಮಾಡುವುದಲ್ಲದೆ, ಅದನ್ನು ನೋಡುವ ಲೋಕ ತಪ್ಪುಮಾಡಿದವನನ್ನು ಅಪಹಾಸ್ಯಗೈಯದೆ ಲೋಕದಲ್ಲಿ ಏನು ನಡೆಯುತ್ತಿದೆ ಎಂಬ ಸೂಕ್ಷ್ಮಗಳನ್ನು ಆಪ್ತವಾಗಿ ಅರಿವಿಗೆ ತಂದುಕೊಡುತ್ತವೆ.
ಅಮೆರಿಕಾದ ಖ್ಯಾತ ವ್ಯಂಗ್ಯ ಚಿತ್ರಕಾರ ರಿಚರ್ಡ್ ಎಫ್. ಔಟ್‌ಕಾಲ್ಟ್ ಅವರು 1895ರ ಮೇ 5 ಈ ದಿನದಂದು ಮೂಡಿಸಿದ ವ್ಯಂಗ್ಯ ಚಿತ್ರ 'ಎಲ್ಲೋ ಕಿಡ್' ಒಂದು ಕ್ರಾಂತಿಯನ್ನೇ ಮಾಡಿತು. ಜೋಸೆಫ್ ಪುಲಿಟ್ಜರ್ ಒಡೆತನದ 'ನ್ಯೂಯಾರ್ಕ್ ವರ್ಲ್ಡ್' ಪತ್ರಿಕೆಯಲ್ಲಿ ಈ ಪಾತ್ರ ಜನಪ್ರಿಯವಾಗಿತ್ತು. 'ಹೋಗನ್ಸ್ ಆಲೇ' ಎಂಬ ಹೆಸರಿನಲ್ಲಿ ರಿಚರ್ಡ್ ಎಫ್ ಔಟ್ಕಾಲ್ಟ್ ರಚಿಸುತ್ತಿದ್ದ ಕಾರ್ಟೂನ್ ಸರಣಿಯಲ್ಲಿ ಈ 'ಯಲ್ಲೋ ಕಿಡ್' ಒಂದು ಪಾತ್ರವಾಗಿತ್ತು.
ಬಕ್ಕ ತಲೆ, ಮುಂದೆ ಬಾಗಿದ ಎರಡು ಹಲ್ಲುಗಳು, ಚಪ್ಪಲಿಯಿಲ್ಲದ ಕಾಲುಗಳು, ಮೇಲೊಂದು ದೊಗಲೆ ಅಂಗಿ ಯೆಲ್ಲೋ ಕಿಡ್ನ ವಿಶೇಷತೆಗಳು. ಈ ಹುಡುಗ(ಕಿಡ್) ಹಳದಿ ಅಂಗಿ ತೊಟ್ಟು 1895ರಿಂದ 1898ರವರೆಗೆ ನ್ಯೂಯಾರ್ಕ್ ವರ್ಲ್ಡ್ ಪತ್ರಿಕೆಯ ವ್ಯಂಗ್ಯ ಚಿತ್ರಗಳಲ್ಲಿ ಮಿಂಚುತ್ತಿದ್ದ. ವಾರದ ರಜಾದಿನದಲ್ಲಿ ಪೂರ್ತಿ ಒಂದು ಪುಟದ ಕಾರ್ಟೂನ್ ಪ್ರಕಟವಾಗುತ್ತಿತ್ತು.
1990ರಿಂದ ಮೊದಲುಗೊಂಡಂತೆ ನ್ಯಾಷನಲ್ ಕಾರ್ಟೂನಿಸ್ಟ್ ಸೊಸೈಟಿಯು ಈ ದಿನವನ್ನು ವಿಶ್ವ ವ್ಯಂಗ್ಯ ಚಿತ್ರಕಾರರ ದಿನ ಎಂದು ಆಚರಿಸುತ್ತ ಬಂದಿದೆ.
ಭಾರತೀಯ ವ್ಯಂಗ್ಯಚಿತ್ರಕಾರ ಸಂಸ್ಥೆ (ಐಐಸಿ) 2001ರ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. ಆಗ ಸಂಸ್ಥೆಯ ಅಧ್ಯಕ್ಷರಾಗಿದ್ದವರು ಖ್ಯಾತ ವ್ಯಂಗ್ಯಚಿತ್ರಕಾರ ಬಿ.ವಿ.ರಾಮಮೂರ್ತಿ.
ಇಂದಿನ ದಿನದಲ್ಲೂ ಅನೇಕ ಹಿರಿಯ ಕಿರಿಯ ವ್ಯಂಗ್ಯಚಿತ್ರಕಲಾವಿದರ ಅಭಿವ್ಯಕ್ತಿಗಳು ನಮ್ಮ ಮೊಗವನ್ನು ಅರಳಿಸುತ್ತಿವೆ. ಈ ಎಲ್ಲ ಕಲಾವಿದರಿಗೂ 'ವಿಶ್ವ ವ್ಯಂಗ್ಯ ಚಿತ್ರಕಾರರ ದಿನ'ದ ಹಾರ್ದಿಕ ಶುಭಹಾರೈಕೆಗಳು.
ಚಿತ್ರ: ಕೆಲವು ಹಿರಿಯರು ಮತ್ತು ಕೆಲವು ಗೆಳೆಯರ ಚಿತ್ರಗಳು ಕೇವಲ ಪ್ರಾತಿನಿಧಿಕ ಮಾತ್ರಾ
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ).
ಕಾಮೆಂಟ್‌ಗಳು