ಶ್ರೀಧರ ಚಕ್ರವರ್ತಿ
ಶ್ರೀಧರ ಎಸ್. ಚಕ್ರವರ್ತಿ
ಮಹಾನ್ ಗುರು ಅಂದರೆ ಏನು ಎಂಬುದಕ್ಕೆ ಹಲವು ರೂಪಗಳಿವೆ. ಅಂತಹ ರೂಪಗಳಲ್ಲಿ ಎದ್ದು ಕಾಣುವ, ನಿಜರೂಪದಲ್ಲಿ ನಮ್ಮ ಜೊತೆಯೇ ಇದ್ದು, ನಮ್ಮೊಡನೆ ಫೇಸ್ಬುಕ್ನಲ್ಲೂ ಆತ್ಮೀಯರಾಗಿರವವರು ಶ್ರೀಧರ ಎಸ್. ಚಕ್ರವರ್ತಿ ಸಾರ್.
ಶ್ರೀಧರ ಚಕ್ರವರ್ತಿ ಅವರು ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲ್ಲೂಕಿನ ಸೋಸಲೆ ಗ್ರಾಮದಲ್ಲಿ 1946ರ ಅಕ್ಟೋಬರ್ 11ರಂದು ಜನಿಸಿದರು. ಬಿ.ಎಸ್ಸಿ, ಬಿ.ಎಡ್ ಮುಗಿಸಿದರು.
ಶ್ರೀಧರ ಚಕ್ರವರ್ತಿ ಅವರಿಗೆ ತಾಂತ್ರಿಕ ಶಿಕ್ಷಣ ಇಲಾಖೆಯ ಕಿರಿಯರ ತಾಂತ್ರಿಕ ಶಾಲೆಯಲ್ಲಿ ನೌಕರಿ ದೊರಕಿದಾಗ ತಂದೆ ಶ್ರೀನಿವಾಸಾಚಾರ್ಯರು ನಿನ್ನ ಗಳಿಕೆಯ ಶೇಕಡಾ ಹತ್ತನ್ನು ಬಡಮಕ್ಕಳಿಗಾಗಿ ಮೀಸಲಿಡು ಎಂದರು. ಆದರೆ, ಮಗ ಶ್ರೀಧರ ಚಕ್ರವರ್ತಿ ಮಾಡಿದ್ದೇನು?
ಸಂಬಳದ ಶೇಕಡಾ ಹತ್ತು ಭಾಗವನ್ನು ಮಾತ್ರಾ ತಮ್ಮ ಬದುಕಿಗೆ ಇಟ್ಟುಕೊಂಡು, ಸೀಮಿತ ಸರಳ ಬದುಕು ನಡೆಸತೊಡಗಿ, ಉಳಿದ ಶೇಕಡಾ 90ರಷ್ಟನ್ನು ವಿದ್ಯಾರ್ಥಿಗಳಿಗೆ ಮೀಸಲಿಟ್ಟರು. ಮದುವೆ ಆಗಲಿಲ್ಲ. 37 ವರ್ಷ ಕಾಲ ಗಣಿತೆ ಶಿಕ್ಷಕರಾಗಿ ಕೆಲಸ ಮಾಡಿದರು. ಇದರಲ್ಲಿ ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಭದ್ರಾವತಿಗಳಲ್ಲಿ ಕೆಲವು ವರ್ಷಗಳಾದರೆ 21 ವರ್ಷ ಸೇವೆ ಸಲ್ಲಿಸಿದ್ದು ಹುಬ್ಬಳ್ಳಿಯ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ. ಮುಂದೆ ನಿವೃತ್ತಿಯಾಗಿ ತಮಗಾಗಿ ಏನು ಚಿಂತಿಸದೆ ಮೈಸೂರಲ್ಲಿ ಸಹೋದರರ ಕುಟುಂಬದೊಡನೆ ಇದ್ದು ಈಗಲೂ ಬಡವಿದ್ಯಾರ್ಥಿಗಳಿಗಾಗಿ ಹಲವು ಯೋಜನೆಗಳನ್ನಿಟ್ಟು ಕಾರ್ಯಪ್ರವೃತ್ತರಾಗಿದ್ದಾರೆ. ಇವರಿಂದ ಪ್ರೇರಿತರಾದ ಇವರ ಅನೇಕ ವಿದ್ಯಾರ್ಥಿಗಳು ಮುಂದಿನ ಜನಾಂಗಕ್ಕಾಗಿ ತಾವೂ ಕೊಡುಗೆ ನೀಡುವತ್ತ ಹೆಜ್ಜೆಹಾಕಿದ್ದಾರೆ. ಹೀಗಾಗಿ ಇವರನ್ನು 'ಮಹಾಗುರು' ಎಂದು ಕರೆಯ
ಲಾಗುತ್ತಿದೆ. ಈ ದೆಸೆಯಲ್ಲಿ "ಮಹಾಗುರು" ಎಂಬ ಇವರ ಅಭಿಮಾನಿ ಸಂಘಟನೆ ಕೂಡ ಹುಟ್ಟಿಕೊಂಡು ಪರೋಪಕಾರಗಳ ಸೇವಾ ಕೆಲಸ ನಡೆದಿದೆ .
ದುಡ್ಡಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ
ಮುಂದೆ ಓದಲಾಗದೇ ಕೈಚೆಲ್ಲಿ ಕುಳಿತಿದ್ದ ನೂರಾರು ವಿದ್ಯಾರ್ಥಿಗಳನ್ನು ಶ್ರೀಧರ ಚಕ್ರವರ್ತಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಓದಿಸಿ ಬೆಳೆಸಿದ್ದಾರೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗಿ ಪುಸ್ತಕ ಕೊಡಿಸಿ ಓದಿಸಿ ಅವರ ಬಾಳಿಗೆ ಭರವಸೆಯ ಬೆಳಕು ಹರಿಸಿದ್ದಾರೆ. ಆ ವಿದ್ಯಾರ್ಥಿಗಳೇ ಇದೀಗ ದೇಶ ವಿದೇಶಗಳಲ್ಲಿ
ಶ್ರೇಷ್ಠ ಡಾಕ್ಟರ್, ಎಂಜಿನಿಯರ್‌ಗಳು, ಆರ್ಕಿಟಿಕ್ಸ್‌ಗಳು, ಆದರ್ಶ ಶಿಕ್ಷಕರು, ಉಪನ್ಯಾಸಕರು ಹೀಗೆ ದೊಡ್ಡ ಕಾಯಕದಲ್ಲಿದ್ದಾರೆ. ತಮಗಾಗಿ ಬರೀ ಒಂದು ಚಾಪೆ, ಹೊದಿಕೆ, ನಾಲ್ಕು ಜೊತೆ ಬಟ್ಟೆ, ಬೀಗ ಇಲ್ಲದ ಪೆಟ್ಟಿಗೆ, ಒಂದಿಷ್ಟು ಪುಸ್ತಕ ಮಾತ್ರ ಇಟ್ಟುಕೊಂಡರು. ಊರಾಚೆ ಯಾವುದೋ ಮನೆಯಲ್ಲಿನ ಒಂದು ಸರಳ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದು ಬದುಕಿದರು. ಈಗಲೂ ತಮ್ಮ ನಿವೃತ್ತಿ ವೇತನದಲ್ಲೂ ಬಡ ವಿದ್ಯಾರ್ಥಿಗಳನ್ನು ಓದಿಸುತ್ತಿದ್ದಾರೆ.
ಶ್ರೀಧರ ಚಕ್ರವರ್ತಿ ಅವರು ತಮ್ಮ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಆಶಯದಂತೆ ನಿಲ್ಲದ ಪಯಣ, ತುಣುಕು, ಮೆಲುಕು, ತುಂತುರು ಮುಂತಾದ ಕೃತಿ ಮೂಡಿಸಿ ತಮ್ಮ ಬದುಕು ಮತ್ತು ಚಿಂತನೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ಶ್ರೀಧರ ಚಕ್ರವರ್ತಿ ಅವರು ತಮ್ಮನ್ನು ಎಂದೂ ಪ್ರದರ್ಶನಕ್ಕೆ ಮತ್ತು ಮಾಧ್ಯಮ ಸುದ್ಧಿಗೆ ತೆರೆದುಕೊಳ್ಳದವರು. ಆದರೆ ಅವರು ನಿವೃತ್ತರಾದಾಗ ಹರಿದ ವಿದ್ಯಾರ್ಥಿಗಳ ಮತ್ತು ಪೋಷಕರ ಪ್ರೀತಿಯ ಮಹಾಪೂರ ಅವರ ಕೀರ್ತಿ ಎಲ್ಲೆಡೆ ಹಬ್ಬಿಸಿತು. ಅವರು ಬಯಸದಿದ್ದರೂ 2021ರಲ್ಲಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂತು.
2024 ವರ್ಷ ಕಲರ್ಸ್ ಟಿವಿ ವಾಹಿನಿ 'ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್' ಹೆಸರಿನಲ್ಲಿ ವೀರೆಂದ್ರ ಹೆಗಡೆ ಅವರ ಕೈಯಿಂದ ಶ್ರೀಧರ ಚಕ್ರವರ್ತಿ ಅವರಿಗೆ ದೊಡ್ಡ ರೀತಿಯಲ್ಲಿ ಗೌರವ ಪ್ರಶಸ್ತಿ ನೀಡಿ ಗೌರವಿಸಿತು. ಆ ಸಮಯದಲ್ಲಿ ಅಲ್ಲಿ ನೆರೆದಿದ್ದ ಶ್ರೀಧರ ಚಕ್ರವರ್ತಿ ಅವರಿಂದ ಬಾಳು ಬೆಳಗಿಸಿಕೊಂಡ ಅಸಂಖ್ಯಾತ ಶಿಷ್ಯವರ್ಗದ ಪ್ರೀತಿ ಗೌರವ ಕೃತಜ್ಞತೆಗಳು ನಮ್ಮ ಕಣ್ತುಂಬಿಸುವಂತಿದೆ.
ಶ್ರೀಧರ ಚಕ್ರವರ್ತಿ ಅವರಂತಹ ಮಹಾನುಭವರು ನಮ್ಮ ಆತ್ಮೀಯರಾಗಿ, ಬಂಧುವಾಗಿ, ಹಾಗೂ ಪ್ರೇರಣೆಯಂತೆ ನಮ್ಮೊಡನೆ ಇದ್ದಾರೆ ಎಂಬುದೇ ನಮ್ಮ ಸೌಭಾಗ್ಯ.
Happy birth day Sridhar S Chakravarthi🌷🙏🌷
ಕಾಮೆಂಟ್‌ಗಳು