ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾಮರೂಪಿ


 'ಕಾಮರೂಪಿ' ಎಂ. ಎಸ್. ಪ್ರಭಾಕರ  


ಅಂತರರಾಷ್ಟ್ರೀಯ ಮಟ್ಟದ ಪತ್ರಕರ್ತರಾಗಿ ಮತ್ತು  'ಕಾಮರೂಪಿ' ಹೆಸರಿನಿಂದ ಕನ್ನಡ ಸಾಹಿತ್ಯದಲ್ಲಿ ಹೆಸರಾಗಿದ್ದ ಎಂ. ಎಸ್. ಪ್ರಭಾಕರ 2022ರ ಡಿಸೆಂಬರ್ 29ರಂದು ನಿಧನರಾಗಿದರು. 

ಮೋಟನಹಳ್ಳಿ ಸೂರಪ್ಪ ಪ್ರಭಾಕರ (ಎಂ.ಎಸ್. ಪ್ರಭಾಕರ) 1936ರ ವರ್ಷದಲ್ಲಿ ಜನಿಸಿದರು. ಅಸ್ಸಾಂ ರಾಜ್ಯದ ಕಾಮರೂಪದಲ್ಲಿ ವೃತ್ತಿಜೀವನದಲ್ಲಿ ನೆಲೆಸಿದ್ದ ಅವರು ಬರವಣಿಗೆಗಾಗಿ 'ಕಾಮರೂಪಿ' ಎಂಬ ಹೆಸರು ಬಳಸಿದರು. ಸೆಂಟ್ರಲ್ ಕಾಲೇಜಿನಿಂದ ಆಂಗ್ಲ ಸಾಹಿತ್ಯದಲ್ಲಿ ಪದವಿ ಪಡೆದಿದ್ದ ಅವರು ಜಾರ್ಜ್ ಆರ್ವೆಲ್ ಸಾಹಿತ್ಯದ ಕುರಿತಾದ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಗಳಿಸಿದರು. 

ಪ್ರಭಾಕರ ಅವರು ಕೆಲವು ವರ್ಷ ಧಾರವಾಡ ವಿಶ್ವವಿದ್ಯಾಲಯದಲ್ಲಿ, ನಂತರ ಗೌಹಾತಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್  ಅಧ್ಯಾಪಕರಾಗಿ ಮತ್ತು ರೀಡರ್ ಆಗಿ ಕೆಲಸ ಮಾಡಿದರು.  1975ರಿಂದ 1983ರವರೆಗೆ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ನಂತರ ‘ದಿ ಹಿಂದೂ’ ಪತ್ರಿಕಾ ಸಮೂಹದಲ್ಲಿ ಈಶಾನ್ಯ ಭಾರತ ಹಾಗೂ ದಕ್ಷಿಣ ಆಫ್ರಿಕದ ವಿಶೇಷ ಬಾತ್ಮೀದಾರರಾಗಿ ಸೇವೆ ಸಲ್ಲಿಸಿ 2002ರಲ್ಲಿ ನಿವೃತ್ತರಾದರು. ಮುಂದೆ ಕೋಲಾರದಲ್ಲಿ ನೆಲೆಸಿದ್ದರು.  'ಕಾಮರೂಪಿ' ಎಂಬ ಅವರ ಬ್ಲಾಗ್ ಸಹಾ ಹೆಸರುವಾಸಿ.

'ಒಂದು ತೊಲ ಪುನುಗು ಮತ್ತು ಇತರ ಕತೆಗಳು'; 'ಕುದುರೆ ಮೊಟ್ಟೆ', 'ಅಂಜಿಕಿನ್ಯಾತಕಯ್ಯೊ' ಕಿರು ಕಾದಂಬರಿಗಳು; ಕಾಮರೂಪಿ ಸಮಗ್ರ - ಕಾಮರೂಪಿಯವರ ಕಥೆ, ಕಾದಂಬರಿ, ಕವನ, ಬರಹ, ಬ್ಲಾಗ್ ಬರಹಗಳನ್ನೊಳಗೊಂಡ ಕೃತಿ ಇವರ ಪ್ರಕಟಿತ ಕೃತಿಗಳು. 

ಪ್ರಭಾಕರ ಅವರಿಗೆ ಕರ್ನಾಟಕ ರಾಜ್ಯೋತ್ಸವ ಗೌರವ ಸಂದಿತ್ತು. 

ಪ್ರಬುದ್ಧ ಬರಹಗಳಿಗೆ ಹೆಸರಾಗಿದ್ದ 'ಕಾಮರೂಪಿ' ಪ್ರಭಾಕರ ಆತ್ಮಕ್ಕೆ ನಮನ.

Respects to departed soul great journalist and writer M.S.Prabhakar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ