ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರತಿ ವೆಂಕಟೇಶ್


 ಆರತಿ ವೆಂಕಟೇಶ್


ಡಾ. ಆರತಿ ವೆಂಕಟೇಶ್ ನಾಡಿನ ಪ್ರಸಿದ್ಧ ನವರತ್ನ ರಾಮರಾವ್ ಕುಟಂಬದಿಂದ ಬಂದ ಬರಹಗಾರ್ತಿ. ಅವರು ಸಂಗೀತ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲೂ ಸಕ್ರಿಯರು. 

ಫೆಬ್ರವರಿ 15 ಆರತಿ ವೆಂಕಟೇಶ್ ಅವರ ಜನ್ಮದಿನ.  ಅವರ ತಾತ ಕಳೆದ ಶತಮಾನದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಹಾಗೂ 'ಕೆಲವು ನೆನಪುಗಳು' ಕೃತಿಯಿಂದ ಕನ್ನಡ ನಾಡಿನ ಮನೆ ಮತ್ತು ಮನಗಳಲ್ಲಿ ಅಜರಾಮರರಾದ ನವರತ್ನ ರಾಮರಾವ್ ಅವರು.  ತಂದೆ ನವರತ್ನ ರಾಮ್.  ತಾಯಿ ಪ್ರಸಿದ್ಧ ಬರಹಗಾರ್ತಿ ಮತ್ತು ವೈದ್ಯೆ ಡಾ. ಉಷಾ ನವರತ್ನ ರಾಮ್. 

ಡಾ. ಆರತಿ ವೆಂಕಟೇಶ್ ಅವರು ಬರಹಗಾರ್ತಿಯಾಗಿ ಅನೇಕ ಕಾದಂಬರಿಗಳು ಮತ್ತು ನೀಳ್ಗತೆಗಳನ್ನು ಪ್ರಕಟಿಸಿದ್ದಾರೆ. ಇವರ ಕಾದಂಬರಿಗಳು ನಾಡಿನ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಧಾರಾವಾಹಿಗಳಾಗಿ ಮೂಡಿವೆ. 

ಆರತಿ ಅವರ ಕಾದಂಬರಿಗಳಲ್ಲಿ ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಸುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ, ಕಾರ್ಮುಗಿಲ ತಾರೆ, ಸಮಾನಾಂತರ ರೇಖೆಗಳು, ವಿದಾಯ, ಬೆಡ್ ನಂ.೬, ರಾಶಿ ಮುಂತಾದವು ಸೇರಿವೆ. ಅವರು  ಕಿರುತೆರೆಯ ಪ್ರಸಿದ್ಧ ಧಾರಾವಾಹಿಗಳಾದ ಮುಕ್ರಾ, ಮಳೆಬಿಲ್ಲು  ಸೇರಿದಂತೆ ಅನೇಕ ಧಾರಾವಾಹಿಗಳ ನೂರಾರು ಕಂತುಗಳಿಗೆ ಸಂಭಾಷಣೆ ರಚಿಸಿದ್ದಾರೆ. ಆಕಾಶವಾಣಿಯ 'ವನಿತಾ ವಿಹಾರ' ಕಾರ್ಯಕ್ರಮದಲ್ಲಿ ಇವರ ಕಥೆಗಳು ನಾಟಕರೂಪದಲ್ಲಿ ಪ್ರಸಾರಗೊಂಡಿವೆ. ಸೌಂದರ್ಯ ಸಮಸ್ಯೆಗಳು ಅಂತಹ ವೈದ್ಯಕೀಯ ತಳಹದಿಯ ಕೃತಿಗಳನ್ನೂ ರಚಿಸಿದ್ದಾರೆ.

ಡಾ. ಆರತಿ ವೆಂಕಟೇಶ್ ಸುಶ್ರಾವ್ಯವಾಗಿ ಹಾಡುತ್ತಾರೆ.  ನೃತ್ಯದಲ್ಲೂ ಅವರಿಗೆ ಪರಿಣಿತಿ ಇದೆ. ಸಾಹಿತ್ಯ, ಸಂಸ್ಕೃತಿ, ಸಂಘಟನೆ, ಸಮಾಜ ಹಿತ ಚಿಂತನೆ ಹೀಗೆ ಅವರು ಸದಾ ಸಕ್ರಿಯರು.

ಎಷ್ಟೊಂದು ಸಾಧಿಸಿದ್ದರೂ ನಮ್ಮಂತಹವರನ್ನೂ ಮೆಚ್ಚಿ ಪ್ರೋತ್ಸಾಹಿಸಿ ಸರಳತೆ ಹೊರಸೂಸುವ ಅವರ ಹೃದಯ ವೈಶಾಲ್ಯತೆ ಇನ್ನೂ ಹಿರಿದು. ಆತ್ಮೀಯರಾದ ಡಾ. ಆರತಿ ವೆಂಕಟೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ.

Happy birthday Dr. Arati Venkatesh

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ