ಶರತ್ ಲೋಹಿತಾಶ್ವ
ಶರತ್ ಲೋಹಿತಾಶ್ವ
ಶರತ್ ಲೋಹಿತಾಶ್ವ ಕನ್ನಡ ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರಗಳ ಜನಪ್ರಿಯ ಕಲಾವಿದರು.
ಮೇ 5, ಶರತ್‌ಚಂದ್ರ ಲೋಹಿತಾಶ್ವ ಅವರ ಜನ್ಮದಿನ. ಅವರು ಜನಿಸಿದ್ದು ತುಮಕೂರು ಜಿಲ್ಲೆಯಲ್ಲಿ. ಅವರ ತಂದೆ ಸಾಹಿತ್ಯ, ಪ್ರಾಧ್ಯಾಪನ, ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿ ಪ್ರಸಿದ್ಧರಾದ ಡಾ. ಲೋಹಿತಾಶ್ವ ಅವರು.
ಶರತ್ ಬಾಲ್ಯದಲ್ಲಿ ಕ್ರಿಕೆಟ್ ಮತ್ತು ರಂಗಭೂಮಿಯತ್ತ ಅಪಾರ ಒಲವನ್ನು ಹೊಂದಿದ್ದರು. ಶಾಲೆಯಲ್ಲಿದ್ದಾಗ ಭಗತ್ ಸಿಂಗ್ ಪಾತ್ರ ಮಾಡಿದ್ದರು. ಹೀಗೆ ಅವರಿಗೆ ಕನ್ನಡದ ಪ್ರಸಿದ್ಧ ನಾಟಕಗಳನ್ನು ಓದುವ ಆಸಕ್ತಿ ಬೆಳೆಯಿತು. ಹಾಡುವ ಹವ್ಯಾಸ ಕೂಡಾ ಜೊತೆಗೂಡಿತು. ತಂದೆ ಲೋಹಿತಾಶ್ವ ಅವರು ತಮ್ಮ ನಾಟಕಗಳ ತಾಲೀಮಿಗೆ ಹೋಗುವಾಗ ಇವರೂ ಜೊತೆಗೂಡುತ್ತಿದ್ದರು. ಓದಿನ ದಿನಗಳಲ್ಲೇ ಅನೇಕ ರಂಗ ಮತ್ತು ರೇಡಿಯೋ ನಾಟಕಗಳಲ್ಲಿ ಭಾಗವಹಿಸಿದರು. ಶರತ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಓದಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಲ್ಲಿ ಕೆಲಕಾಲ ಉಪನ್ಯಾಸಕರಾಗಿಯೂ ಕೆಲಸ ಮಾಡಿದರು.
ಶರತ್ ನಟನೆಯನ್ನೇ ವೃತ್ತಿಯಾಗಿ ಸ್ವೀಕರಿಸಲು ನಿರ್ಧರಿಸಿದರು. ಯುವ ನಟರಂಗದ ಮೂಲಕ
ಮಿಡ್ ಸಮ್ಮರ್ ನೈಟ್ಸ್ ಡ್ರೀಮ್; 'ದೃಷ್ಟಿ' ಯುವ ಕಲಾವಿದರ ತಂಡದ ಮೂಲಕ ವಾಸಾಂಸಿ ಜೀರ್ಣಾನಿ, ಅಂಜುಮಲ್ಲಿಗೆ; ಬಿ. ಜಯಶ್ರೀ ಅವರ ನಿರ್ದೇಶನದಲ್ಲಿ ಸ್ಪಂದನ ತಂಡದಲ್ಲಿ ಆಗ್ನಿಪಥ, ಸಿರಿಸಂಪಿಗೆ; ನಟರಂಗ ತಂಡಕ್ಕಾಗಿ ಸತ್ಯು ನಿರ್ದೇಶನದ ಮೋಟೆರಾಮನ ಸತ್ಯಾಗ್ರಹ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದರು.
ಶರತ್ ಅವರು ಎಂ. ಎಸ್. ಸತ್ಯು ಅವರ ವಾಣಿಜ್ಯೇತರ ಚಲನಚಿತ್ರದಲ್ಲಿ ಕಿರು ಪಾತ್ರವನ್ನು ನಿರ್ವಹಿಸುವ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಹುಲಿಯಾ (1996) ದೊಂದಿಗೆ ಅವರ ವಾಣಿಜ್ಯ ಚಲನಚಿತ್ರದ ಚೊಚ್ಚಲ ಪ್ರವೇಶವಾಯಿತು. ಅದೇ ತರಹದ ಪಾತ್ರಗಳು ಅವರಿಗೆ ಬೋರು ಹೊಡೆಸಿತ್ತು. ಅದೇ ಸಂದರ್ಭದಲ್ಲಿ ಅವರಿಗೆ ಅಪಘಾತವಾಗಿ ಎರಡರಿಂದ ಮೂರು ವರ್ಷಗಳ ಕಾಲ ಕೆಲಸದಿಂದ ಹೊರಗುಳಿಯಬೇಕಾಯಿತು. ಮುಂದೆ 'ಗೋಧೂಳಿ' ಚಿತ್ರ ಅವರಿಗೆ ಹೊಸ ನೆಲೆ ತಂದುಕೊಟ್ಟಿತು. ಆ ಚಿತ್ರದಲ್ಲಿನ ಚೆಲುವನಾಯಕನ ಪಾತ್ರಕ್ಕಾಗಿ ಅವರು ಅಪಾರ ಮೆಚ್ಚುಗೆ ಗಳಿಸಿದರಲ್ಲದೆ ಆರ್ಯಭಟ ಪ್ರಶಸ್ತಿಯನ್ನು ಸಹ ತಂದುಕೊಟ್ಟಿತು.
ಈ ಮಧ್ಯೆ ಶರತ್ ಕಿರುತೆರೆಯಲ್ಲಿ ಸತ್ಯು ಅವರ ಕಯರ್ ಮತ್ತು ಪೋಲಿ ಕಿಟ್ಟಿಯಲ್ಲಿ ಕಾಣಿಸಿಕೊಂಡರು. ಕಿಚ್ಚು ಮತ್ತು ಚಿದಂಬರ ರಹಸ್ಯದಲ್ಲಿನ ಪಾತ್ರ ಅವರ ಕನ್ನಡ ಕಿರುತೆರೆಯಲ್ಲಿನ ಜನಪ್ರಿಯತೆಗೆ ಕಾರಣವಾದವು. 2007ರಲ್ಲಿ 'ಆ ದಿನಗಳು' ಚಿತ್ರದಲ್ಲಿ ಕೊತ್ವಾಲ್ ರಾಮಚಂದ್ರನ ಪಾತ್ರವನ್ನು ವಹಿಸಿದ್ದರು. ಈ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟನಿಗಾಗಿರುವ ಸೌತ್ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಮತ್ತು ಮೆಚ್ಚುಗೆಗಳನ್ನು ಪಡೆದರು. ಸಂಜು ವೆಡ್ಸ್ ಗೀತಾ, ಭೀಮ ತೀರದಲ್ಲಿ, ಸಾರಥಿ, ಕಡ್ಡಿಪುಡಿ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳ ಮೂಲಕ ಅವರ ಚಲನ ಚಿತ್ರಯಾನ ಸಾಗಿದೆ. ಇತರ ಭಾಷಾ ಚಿತ್ರಗಳಲ್ಲೂ ಅವರಿಗೆ ಬೇಡಿಕೆಯಿದೆ. 'ಮತ್ತೆ ಸತ್ಯಾಗ್ರಹ' ಚಿತ್ರದಲ್ಚ್ಸ್ಲಪೋಷಕ ಪಾತ್ರ ಅಭಿನಯಕ್ಕಾಗಿ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಸಂದಿದೆ. ಇದಲ್ಲದೆ ಸಿನಿಲೋಕದ ಇನ್ನೂ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.
ಪ್ರತಿಭಾವಂತ ಕಲಾವಿದ ಶರತ್ ಲೋಹಿತಾಶ್ವ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of our popular actor Sharath Lohitaswa
ಕಾಮೆಂಟ್‌ಗಳು