ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಶ್ಮಿ ತೆಂಡೂಲ್ಕರ್


 ರಶ್ಮಿ ತೆಂಡೂಲ್ಕರ್


ತೆಂಡೂಲ್ಕರ್ ಕನ್ನಡದವರು! ನಾ ಹೇಳಿದ್ದು ಉತ್ಸಾಹಿ ಬರಹಗಾರ್ತಿ ರಶ್ಮಿ ತೆಂಡೂಲ್ಕರ್ ಅವರ ಬಗ್ಗೆ.  ಕ್ರಿಕೆಟ್ ಮತ್ತು ಸಚಿನ್ ತೆಂಡೂಲ್ಕರ್ ಅಭಿಮಾನಿಯಾಗಿರುವ ರಶ್ಮಿ, ತೆಂಡೂಲ್ಕರ್ ಅವರ ಹೆಸರನ್ನು ತಮ್ಮ ಜೊತೆಗೂಡಿಸಿಕೊಂಡಿದ್ದಾರೆ.  ಸಚಿನ್ ತೆಂಡೂಲ್ಕರ್ ಹೇಗೆ ನಿರಾಯಾಸವಾಗಿ ಬ್ಯಾಟಿಂಗ್ ಮಾಡುತ್ತಿದ್ದರೋ ಹಾಗೆ,  ರಶ್ಮಿ ತೆಂಡೂಲ್ಕರ್ ಅವರದು ನಿರಾಯಾಸವಾದ ಮತ್ತು ಓದುಗರಿಗೆ ಆಪ್ತತೆ ಹುಟ್ಟಿಸುವ ಬರಹ.

ಮೇ 5 ರಶ್ಮಿ ಅವರ ಹುಟ್ಟುಹಬ್ಬ.  ಮೂಲತಃ ಅವರು ಕಾಸರಗೋಡಿನವರು. 

ರಶ್ಮಿ ಅವರ ಕಥೆ, ಕವಿತೆ, ಪ್ರಬಂಧ ಚಿಂತನೆಗಳು ಎಲ್ಲ ಪತ್ರಿಕೆಗಳು ಮತ್ತು ಅಂತರಜಾಲ ಮಾಧ್ಯಮಗಳಲ್ಲಿ  ನಿರಂತರವಾಗಿ ಹರಿದಿವೆ. ತಮ್ಮ  "ಅನುರಾಗ" ಬ್ಲಾಗಿನ ಸ್ವಯಂ ಪರಿಚಯದಲ್ಲಿ ಅವರ ಈ ಮಾತುಗಳಿವೆ: "ಮನಸ್ಸನ್ನು ಹಗುರವಾಗಿರಿಸಿ, ಕನಸು, ಭಾವನೆಗಳ ಕುರಿತು ಬರೆಯುವುದೆಂದರೆ ನನಗೆ ಬಲು ಪ್ರೀತಿ. ಗಡಿನಾಡಾದ ಕಾಸರಗೋಡು ನನ್ನ ಊರು. ಪ್ರಸ್ತುತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ. ಪ್ರಕೃತಿಯೊಂದಿಗೆ ನನ್ನ ಭಾವನೆಗಳನ್ನು ಹಂಚುವುದು, ಸ್ವಪ್ನ ಲೋಕದಲ್ಲಿ ವಿಹರಿಸುತ್ತಾ ಮನದ ಕೋಣೆಯಲ್ಲಿ ಮೂಡಿಬಂದ ಭಾವನೆಗಳನ್ನು ಅಕ್ಷರ ರೂಪಕ್ಕೆ ತರಲು ಸದಾ ಪ್ರಯತ್ನಿಸುತ್ತಿರುತ್ತೇನೆ."  ಹೀಗೆ ರಶ್ಮಿ ಅವರ ಅಭಿವ್ಯಕ್ತಿಗಳಲ್ಲಿ ಸುಸ್ಪಷ್ಟತೆಯಿದೆ.  ಅವರ 'ನೆನಪಿನ ಮಳೆಯಲ್ಲಿ' ಎಂಬ ಕವನ ಸಂಕಲನ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧಕಿಯರ ಕುರಿತಾದ 'ಅವಳೊಳಗಿನ ಇನ್ನೊಬ್ಬಳು' ಕೃತಿಗಳು ಪ್ರಕಟಗೊಂಡಿವೆ. ಅವರು ಕಾರ್ಯಕ್ರಮ ನಿರೂಪಣೆಗೂ ಹೆಸರಾಗಿದ್ದಾರೆ. 

ವಿಶೇಷವಾಗಿ ರಶ್ಮಿ ಸುದ್ಧಿ ಮಾಧ್ಯಮಲೋಕದಲ್ಲಿ  ಒಂದೂವರೆ ದಶಕಕ್ಕೂ ಮಿಗಿಲಾದ ಬರವಣಿಗೆ ಮತ್ತು ಸಂಪಾದನೆ ಕ್ಷೇತ್ರದಲ್ಲಿನ ಅನುಭವಿಯಾಗಿದ್ದಾರೆ. ಇವುಗಳಲ್ಲಿ ಪ್ರಜಾವಾಣಿ, ಕನ್ನಡಪ್ರಭ, ವೆಬ್ ದುನಿಯಾ ಕನ್ನಡ ಪೋರ್ಟಲ್, ಎಮ್ ಎಸ್  ಎನ್  ಕನ್ನಡ ಮುಂತಾದವುಗಳಲ್ಲಿ ನಿರ್ವಹಿಸಿದ ಜವಾಬ್ದಾರಿಗಳು ಮತ್ತು ಪ್ರಸಕ್ತದಲ್ಲಿನ  ಟಿವಿ9 ಡಿಜಿಟಲ್ ಕನ್ನಡದ ಚೀಫ್ ಸಬ್ ಎಡಿಟರ್ ಜವಾಬ್ದಾರಿಗಳು  ಸೇರಿವೆ. 

ಅವರದ್ದೊಂದು ಕವನ ಈಗ ಓದಿದೆ. ಎಷ್ಟು ಜೀವಂತ ಚಿತ್ರವಿದ್ದ ಹಾಗಿದೆ ಅನಿಸಿತು:

ನಿದ್ದೆ ಬರದ ದಿನಗಳಲ್ಲಿ ನಡುರಾತ್ರಿ 
ಎದ್ದು ನಡೆಯಬೇಕೆಂಬ ಬಯಕೆ
ಜತೆಗೆ ನೀನಿರಬೇಕಿತ್ತು
ರಾತ್ರಿ ನೀರವತೆಯಲ್ಲಿ ನಿನ್ನ ಬೆರಳು ಹಿಡಿದು
ಆ ಹೂದೋಟದ ಪಕ್ಕದ ಕಲ್ಲುಬೆಂಚಿನಲ್ಲಿ
ಕೂತು ನನ್ನ ಬಾಲ್ಯದ ಕತೆ ಹೇಳಬೇಕು

ಓಡುವಾಗ ಬಿದ್ದು ರಕ್ತ ಬಂದಿದ್ದು
ನಾಟಕದಲ್ಲಿ ರಾಮನಿಗೆ ಸೀತೆಯಾಗಿದ್ದು
ದುಂಬಿಯ ಬಾಲಕ್ಕೆ ನೂಲು ಕಟ್ಟಿ ಬಿಟ್ಟು
ಚಿಟ್ಟೆಗಳ ಹಿಡಿದು ಬೆರಳಿಗೆ ಬಣ್ಣ ಮೆತ್ತಿದ್ದು

ನಿನಗೆ ನೆನಪಿದೆಯೇನೋ
ಬೇಜಾರಾದಾಗೆಲ್ಲ ಅದೇ ಬಾಲ್ಯ,
ಅದೇ ಅಂಗಳ, ಅದೇ ಹೂದೋಟ
ಮತ್ತೆ ಅದೇ ನೀನು ನೆನಪಾಗುತ್ತೀ

ನಿನ್ನೆದೆಗೆ ಒರಗಿ ಕೂತು 
ಮಾತನಾಡುತ್ತಲೇ ಇದ್ದರೆ ನೀನು
ಬರೀ ಮೌನಿ
ನಿನ್ನ ಎದೆಬಡಿತದ ಸದ್ದಿನಲ್ಲೇ 
ಉತ್ತರವಿದೆಯೇನೋ

ನನಗೆ ತುಂಬಾ ಮಾತನಾಡುವುದಿತ್ತು
ಹೇಳು,
ನಿನ್ನಲ್ಲಿ ಸಮಯವಿದೆಯೇ?

ಬೇಡ ಬಿಡು
ನೀ ಈ ಕ್ಷಣ ಜತೆಗಿದ್ದರೆ ಸಾಕು
ನಿನ್ನ ಹೆಜ್ಜೆ, ನಿನ್ನ ಮೌನ 
ನಿನ್ನ ಈ ಸ್ಪರ್ಶ 
ನಿನ್ನದಾಗಿರುವ ಎಲ್ಲವನ್ನೂ ನಾನು
ನಿನ್ನಷ್ಟೇ ಪ್ರೀತಿಸುತ್ತೇನೆ

ಯಾಕೆಂದರೆ ನೀನು
ನನ್ನವನು!

ಹಾಂ, ನೋಡಬೇಡ
ಜಗತ್ತಿನ ಮುಂದೆ ಈ ಪ್ರೀತಿಯನ್ನು
ಗಟ್ಟಿಯಾಗಿ ಕಿರುಚಿ ಹೇಳುವ ಆಸೆ ಇಲ್ಲ ಬಿಡು
 
ಏಕಾಂತದಲ್ಲಿ ನನ್ನ ಕೈಹಿಡಿದು
ಹೀಗೆ ಸುಮ್ಮನೆ ಕೂರುವಾಗ
ಅದೆಷ್ಟು ಮಾತುಗಳನ್ನು ನೀನು 
ಮೌನವಾಗಿ ದಾಟಿಸುತ್ತೀ

ಪ್ರೀತಿಗೆ ಕಣ್ಣಿಲ್ಲ
ಇಲ್ಲಿ ಬಾಯಿಯೂ ಇಲ್ಲ ಎಂದು
ನಾನು ಜೋರಾಗಿ ನಕ್ಕಾಗ 
ನೆನಪಿದೆಯಾ

ಬರಸೆಳೆದು ಬಿಗಿದಪ್ಪಿದ ಹೊತ್ತು 
ನೀನು ಎಲ್ಲವನ್ನೂ ಹೇಳಿಬಿಟ್ಟೆ

ಆ ಬಿಸಿ ಉಸಿರಲ್ಲೇ ಅದೆಷ್ಟು ಒಲವು
ಕಣ್ಮುಚ್ಚಿ ನಿನ್ನ ಎದೆಬಡಿತ ಆಲಿಸಿದೆ
ಅಲ್ಲಿದ್ದದ್ದು ನನ್ನದೇ ಹೆಸರು

ಅದು ನನಗೆ ಮಾತ್ರ ಕೇಳಿಸುತ್ತೆ
ಎಂಬ ನಂಬಿಕೆ

ಕನ್ನಡದ ಉತ್ಸಾಹಿ ಮನದ ಬರೆಹಗಾರ್ತಿ ಸದಾ ಆತ್ಮೀಯ ಸುಂದರ ಮಂದಹಾಸದಿಂದ ಕಂಗೊಳಿಸುವ ರಶ್ಮಿ ತೆಂಡೂಲ್ಕರ್ ಅವರಿಗೆ ಹುಟ್ಟು ಹಬ್ಬದ ಶುಭಹಾರೈಕೆಗಳು.  


Happy birthday Rashmi Tendulkar

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ