ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ. ಮೋಹನದಾಸ ಪೈ


 

ಟಿ. ಮೋಹನದಾಸ ಪೈ


ಟಿ. ಮೋಹನದಾಸ ಪೈ  ಪ್ರಖ್ಯಾತ ಪೈ ಕುಟುಂಬ ಸದಸ್ಯರಾಗಿ  ಹಾಗೂ ಹೆಸರಾಂತ 'ಉದಯವಾಣಿ' ಪತ್ರಿಕೆ ಸಂಸ್ಥಾಪಕರಾಗಿ  ಹೆಸರಾದವರು. 

ಮೋಹನದಾಸ ಪೈ  ಅವರು ಆಧುನಿಕ ಮಣಿಪಾಲದ ಶಿಲ್ಪಿ ತಮ್ಮ ತಂದೆಯವರ ಹೆಸರಿನಲ್ಲಿರುವ ಡಾ. ಟಿ.ಎಂ.ಎ. ಪೈ ಪ್ರತಿಷ್ಠಾನ, ಡಾ. ಟಿ.ಎಂಎ. ಪೈಯವರು ಸ್ಥಾಪಿಸಿದ ಮೊದಲ ಕಾಲೇಜು ಶಿಕ್ಷಣ ಸಂಸ್ಥೆೆ ಎಂಜಿಎಂ ಕಾಲೇಜಿನ ಟ್ರಸ್ಟ್‌, ಸಿಂಡಿಕೇಟ್ ಬ್ಯಾಂಕ್ ನ ಪೂರ್ವ ರೂಪ ಐಸಿಡಿಎಸ್ ಲಿಮಿಟೆಡ್, ಉದಯವಾಣಿ ಪತ್ರಿಕೆ ಮತ್ತು  ನಿಯತಕಾಲಿಕಗಳನ್ನು ನಡೆಸುತ್ತಿರುವ ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿಮಿಟೆಡ್ ಮೊದಲಾದ ಸಂಸ್ಥೆಗಳ ಅಧ್ಯಕ್ಷರಾಗಿ ಹಲವು ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದವರು.

ಮೋಹನದಾಸ ಪೈ  1933ರ ಜೂನ್ 20ರಂದು ಜನಿಸಿದರು.  ಇವರು  ಡಾ. ಟಿ. ಎಂ. ಎ.  ಪೈಯವರ ಹಿರಿಯ ಪುತ್ರ. ಇವರಿಗೆ ಮೂರು ವರ್ಷ ಆಗಿರುವಾಗ ತಂದೆಯವರು ಉಡುಪಿಯಿಂದ ಮಣಿಪಾಲಕ್ಕೆ ಸ್ಥಳಾಂತರವಾದ ಕಾರಣ ಇವರೂ ಮಣಿಪಾಲದಲ್ಲಿ ಬೆಳೆದರು. ತಂದೆಯವರು ಆರಂಭಿಸಿದ ಮಣಿಪಾಲ ಅಕಾಡೆಮಿ ಶಾಲೆ, ಉಡುಪಿಯ ಮಾಡರ್ನ್  ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಹಾಗೂ ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು ತಂದೆಯವರು ನೂತನವಾಗಿ ಆರಂಭಿಸಿದ ಎಂಜಿಎಂ ಕಾಲೇಜಿನಲ್ಲಿ (1949-51) ಇಂಟರ್‌ ಮೀಡಿಯೆಟ್ ಶಿಕ್ಷಣ ಪಡೆದರು. ಕೊಲ್ಹಾಪುರದಲ್ಲಿ ಕಾನೂನು ಶಿಕ್ಷಣ ಪಡೆದ (1951-53) ಮೋಹನದಾಸ್ ಪೈಯವರು ಪುಣೆ ವಿಶ್ವವಿದ್ಯಾಲಯದಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದರು.

ಮೋಹನದಾಸ ಪೈ ಮಣಿಪಾಲದಲ್ಲಿ ಹೆಂಚಿನ ಕಾರ್ಖಾನೆ ನಡೆಸುತ್ತಿದ್ದ ಕೆನರಾ ಲ್ಯಾಂಡ್ ಇನ್‌ವೆಸ್‌ಟ್‌‌ಮೆಂಟ್‌ಸ್‌‌ನ ಜನರಲ್ ಮೆನೇಜರ್ ಆಗಿ ವೃತ್ತಿ ಆರಂಭಿಸಿದರು.  ಜೊತೆಗೆ ಮಣಿಪಾಲ್ ಪವರ್ ಪ್ರೆೆಸ್‌ನ ಆಡಳಿತ ಪಾಲುದಾರರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಂಡರು.  ಪೈಯವರು ಆಡಳಿತ ಮತ್ತು ಹಣಕಾಸು ಯೋಜನೆಯ ಜವಾಬ್ದಾರಿಯನ್ನು ನೋಡಿಕೊಂಡಿದ್ದರೆ ಟಿ. ಸತೀಶ್ ಪೈಯವರು ಉತ್ಪಾದನೆಯ ಜವಾಬ್ದಾರಿಯನ್ನು ನೋಡಿಕೊಂಡಿರುತ್ತಿದ್ದರು. ಹೊಸ ರೀತಿ ಆಟೋಮೆಟಿಕ್ ಟೈಪ್‌ಸೆಟ್ಟಿಂಗ್ ಮೆಶಿನ್ ಮತ್ತು ಮುದ್ರಣ ಯಂತ್ರವನ್ನು ಗುಣಮಟ್ಟದ ಮುದ್ರಣಕ್ಕಾಗಿ ಹೊರದೇಶದಿಂದ ತರಿಸಲಾಯಿತು. 1961ರಲ್ಲಿ ಪುಸ್ತಕದ ಗುಣಮಟ್ಟದ ಮುದ್ರಣಕ್ಕಾಗಿ ಪ್ರೆೆಸ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದರ ಬಳಿಕ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಮಣಿಪಾಲ್ ಪ್ರೆಸ್‌ಗೆ ಬಂದವು. 

ಅತ್ಯಾಧುನಿಕ ಆಫ್‌ಸೆಟ್ ಮೆಶಿನ್, ಫೋಟೋ ಕಂಪೋಸಿಂಗ್‌ನೊಂದಿಗೆ ಮುದ್ರಣ ಕ್ಷೇತ್ರದಲ್ಲಿ ದಾಪುಗಾಲು ಇರಿಸಿರುವುದರಲ್ಲಿ ಮೋಹನದಾಸ್ ಪೈಯವರ ಅಪಾರ ಕೊಡುಗೆ ಇದೆ.

1970ರಲ್ಲಿ ಪೈಯವರ ಮುಂದಾಳತ್ವದಲ್ಲಿ ‘ಉದಯವಾಣಿ’ ದಿನ ಪತ್ರಿಕೆ ಆರಂಭವಾಗಿ ಅಲ್ಪಾವಧಿಯಲ್ಲಿಯೇ ಜನಪ್ರಿಯಗೊಂಡಿತು. ಮೋಹನದಾಸ್ ಪೈಯವರು ಆಡಳಿತ ನಿರ್ದೇಶಕರಾಗಿ, ಸತೀಶ್ ಪೈಯವರು ಜಂಟಿ ಆಡಳಿತ ನಿರ್ದೇಶಕರಾಗಿರುವ ಮಣಿಪಾಲ್ ಪ್ರಿಂಟರ್‌ಸ್‌ ಆ್ಯಂಡ್ ಪಬ್ಲಿಷರ್‌ಸ್‌ ಲಿಮಿಟೆಡ್ನಿಂದ ಉದಯವಾಣಿ ಆರಂಭಗೊಂಡಿತು. ಮೋಹನದಾಸ್ ಪೈ ಅವರು ರಾಜಧಾನಿ, ಬೃಹತ್‌ ನಗರಗಳಲ್ಲಷ್ಟೇ ಪತ್ರಿಕಾ ಪ್ರಕಟಣೆ  ಸಾಧ್ಯ ಎಂದು ಸಾಮಾನ್ಯವಾಗಿ ಎಲ್ಲರೂ ನಂಬಿದ್ದನ್ನು ಹುಸಿ ಮಾಡಿ ಅರವತ್ತರ ದಶಕದ ಉತ್ತರಾರ್ಧದಲ್ಲಿ ಯೋಜನೆಯ ನೀಲ ನಕ್ಷೆಯನ್ನು ನಿಖರವಾಗಿ ಕಾರ್ಯಗತಗೊಳಿಸಲು ಸೋದರಬಂಧು ಪಿ. ಸತೀಶ್‌ ಯು. ಪೈ ಅವರ ಜತೆಗೆ ರಂಗಕ್ಕಿಳಿದರು. ಬನ್ನಂಜೆ ರಾಮಾಚಾರ್ಯ, ಬನ್ನಂಜೆ ಗೋವಿಂದಾಚಾರ್ಯರ ಅನುಭವ ಸಿದ್ಧಂಶಗಳ ಸಹಕಾರ ಪತ್ರಿಕೋದ್ಯೋಗದಲ್ಲಿ ನೆಲೆ ಕಂಡುಕೊಳ್ಳಲು ಉತ್ಸುಕರಾಗಿದ್ದ ಯುವಕರ ದಂಡನ್ನು ಕಟ್ಟಿಕೊಂಡು 1970ರ ಜನವರಿ 1ರಿಂದ ಟಿ. ಸತೀಶ್‌ ಪೈ ಅವರ ಸಂಪಾದಕತ್ವದಲ್ಲಿ ಉದಯವಾಣಿ ಅಧಿಕೃತ ಪ್ರಕಟಣೆ ಆರಂಭಗೊಂಡಿದ್ದಷ್ಟೇ ಅಲ್ಲ, ಆರೇ ತಿಂಗಳುಗಳಲ್ಲಿ  ಓದುಗರ ಅಪಾರ ಪ್ರೀತಿಗೆ ಪಾತ್ರವಾಯಿತು.

1983ರಲ್ಲಿ ಆರಂಭಗೊಂಡ ‘ತರಂಗ’ ವಾರಪತ್ರಿಕೆಯೂ ಮೋಹನದಾಸ್ ಪೈಯವರ ಕನಸಿನ ಕೂಸು. ಮುಖಪುಟ ಮತ್ತು ಒಳಪುಟಗಳನ್ನು ಕಲರ್‌ನಲ್ಲಿ ಮುದ್ರಿಸಲು ಬೇಕಾದ ಅಲ್ಟ್ರಾಮೋಡರ್ನ್ ವೆಬ್ ಆಫ್‌ಸೆಟ್ ಯಂತ್ರವನ್ನು ಸ್ಥಾಪಿಸಲಾಯಿತು. ತರಂಗಕ್ಕೆ ಅಗತ್ಯವಾದ ಸ್ವಯಂಚಾಲಿತ ಬೈಂಡಿಂಗ್ ಯಂತ್ರವನ್ನೂ ಅಳವಡಿಸಲಾಯಿತು. ಈ ಗುಣಮಟ್ಟಕ್ಕಾಾಗಿ 2 ಲಕ್ಷ ಪ್ರಸರಣ ಸಂಖ್ಯೆ ದಾಟಿತು. ಟಿ. ಸತೀಶ್‌ ಯು. ಪೈ ಅವರ ಸಂಪಾದಕತ್ವದಲ್ಲಿ 1970ರಲ್ಲಿ ಅಧಿಕೃತ ಪತ್ರಿಕೆ, ತುಷಾರ, ತರಂಗ, ರೂಪತಾರಾ ಅವರ ಪರಿಕಲ್ಪನೆಯ ಕುಂಡದಲ್ಲಿ ಅಂಕುರವಾಗಿ ಅರಳಿದ ಕುಸುಮಗಳು. ಸಂತೋಷ ಕುಮಾರ್ ಗುಲ್ವಾಡಿ ಅಂತಹ ಮಹಾನ್ ಪ್ರತಿಭೆ ತರಂಗಕ್ಕೆ ನೀಡಿದ ಕಾಯಕಲ್ಪ ಅಮರವೆನಿಸಿದೆ. 

ಮೋಹನದಾಸ್ ಪೈ ಯುನೈಟೆಡ್ ಕಿಂಗ್‌ಡಮ್, ಯೂರೋಪ್, ಅಮೆರಿಕ, ಜಪಾನ್ ಮೊದಲಾದ ದೇಶಗಳಲ್ಲಿ ಸಂಚರಿಸಿದ ಪೈಯವರು, ದ್ರುಪ (ಜರ್ಮನಿ), ಐಪೆಕ್‌ಸ್‌ (ಯುಕೆ), ಪ್ರಿಂಟ್ (ಶಿಕಾಗೋ, ಅಮೆರಿಕ) ಮೊದಲಾದ ಮುದ್ರಣ ವಸ್ತುಪ್ರದರ್ಶನಗಳಲ್ಲಿ ಪಾಲ್ಗೊಂಡು ಅಲ್ಲಿನ ಅನುಭವಗಳನ್ನು, ಹೊಸ ಹೊಸ ತಂತ್ರಜ್ಞಾನಗಳನ್ನು ಮಣಿಪಾಲದಲ್ಲಿ ಅಳವಡಿಸಲು ಪ್ರಯತ್ನಿಸಿ ಅಪಾರ ಯಶಸ್ಸು ಕಂಡರು. ವಿದೇಶಗಳ ಪತ್ರಿಕೆಗಳ ವಿನ್ಯಾಸ, ಸುದ್ದಿ ವಿಶ್ಲೇಷಣೆಗಳನ್ನು ಗಮನಿಸಿ ಉದಯವಾಣಿಯಲ್ಲಿ ಜಾರಿಗೆ ತರಲು ಶ್ರಮಿಸಿದರು.

ಕರ್ನಾಟಕ ಪತ್ರಿಕಾ ಅಕಾಡೆಮಿಯು ಪತ್ರಿಕಾರಂಗದ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಗಾಗಿ ಮಣಿಪಾಲ್ ಪ್ರಿಂಟರ್‌ಸ್‌ ಆ್ಯಂಡ್ ಪಬ್ಲಿಷರ್‌ಸ್‌ ಲಿಮಿಟೆಡ್ಗೆ ನೀಡಿದ ಪ್ರಶಸ್ತಿಯನ್ನು ಮೋಹನದಾಸ್ ಪೈಯವರು ಸ್ವೀಕರಿಸಿದ್ದರು. ಪೈಯವರು ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ (ಐಎನ್‌ಎಸ್) ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿ ಎರಡು ಅವಧಿ ಸೇವೆ ಸಲ್ಲಿಸಿದ್ದರು. ಐಸಿಡಿಎಸ್‌ನ ಜಂಟಿ ಆಡಳಿತ ನಿರ್ದೇಶಕರಾಗಿ 1989ರಲ್ಲಿ ನೇಮಕಗೊಂಡ ಪೈಯವರು 1995ರಲ್ಲಿ ಆಡಳಿತ ನಿರ್ದೇಶಕರಾದರು. ಬಳಿಕ ‌ಚೇರ್ಮ್ಯಾನ್ ಮತ್ತು ಆಜೀವ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. 

ಡಾ. ಟಿ.ಎಂ.ಎ. ಪೈ ಫೌಂಡೇಶನ್, ಮಣಿಪಾಲ್ ಮೀಡಿಯಾ ನೆಟ್ವರ್ಕ್, ಐಎಸ್‌ಡಿಎಸ್ (ಸಿಂಡಿಕೇಟ್ ಬ್ಯಾಂಕ್‌ನ ಹಿಂದಿನ ಅವತಾರ), ಎಂಜಿಎಂ ಕಾಲೇಜು ಟ್ರಸ್ ಇತ್ಯಾದಿಯನ್ನು ಟಿ ಮೋಹನ್ ದಾಸ್ ಸ್ಥಾಪಿಸಿ ನಿರ್ವಹಿಸಿದ್ದರು. ಉದಯವಾಣಿ ದಿನಪತ್ರಿಕೆ, ತರಂಗ ಮಾಸಪತ್ರಿಕೆ ಇವೆಲ್ಲವೂ ಮಣಿಪಾಲ್ ಮೀಡಿಯಾ ನೆಟ್ವರ್ಕ್ ಸಂಸ್ಥೆಯಿಂದ ಮುದ್ರಿತವಾಗುತ್ತಿವೆ. ಪತ್ರಿಕೆ ಹೀಗೆ ರೂಪುಗೊಳ್ಳಬೇಕು, ವಾರ್ತಾ ಮಾಹಿತಿದಾಹಿ ಓದುಗರ ಜ್ಞಾನ ವೃದ್ಧಿ, ಭಾಷಾ ವೃದ್ಧಿಗೆ ಪೂರಕವಾಗಿ ಪತ್ರಿಕೆ ಇರಬೇಕು, ಪತ್ರಿಕೆ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸುವ, ಪ್ರಾದೇಶಿಕ ಅಭಿವೃದ್ಧಿಯತ್ತ ಸಂಬಂಧಿಸಿದ ಗಮನ ಸೆಳೆಯುವುದಕ್ಕೆ ಆದ್ಯತೆ ನೀಡಬೇಕು ಎನ್ನುವುದು ಪೈಯವರ ಮನೀಷೆಯಾಗಿತ್ತು.

ಒಂದು ಪತ್ರಿಕೆ ತನ್ನ ಓದುಗರ ಜ್ಞಾನ ದಾಹವನ್ನು ತಣಿಸುವುದರ ಜತೆಜತೆಗೆ ಅವರ ಪ್ರದೇಶದ ಅಭಿವೃದ್ಧಿಗೆ ಬೇಕಾದ ಅಗತ್ಯಗಳ ಕುರಿತು ಸಂಬಂಧಿಸಿದ ಸರಕಾರದ ಗಮನ ಸೆಳೆಯುವ ಕಾರ್ಯದಲ್ಲೂ ಸಫ‌ಲವಾಯಿತು. ಜನಹಿತದ, ರಾಷ್ಟ್ರ ಹಿತದ ವಿಷಯಗಳನ್ನು ಟಾಂಟಾಂ ಮಾಡದೆಯೆ ಯಾರಿಗೆ ಮುಟ್ಟ ಬೇಕೋ ಅವರಿಗೆ ತಣ್ಣಗೆ ಚುರುಕು ಮುಟ್ಟಿಸಬೇಕು ಎನ್ನುವುದು ಅವರ ಮನೀಷೆಯಾಗಿತ್ತು. ಅವರದನ್ನು ಸಾಧಿಸಿದರು ಕೂಡ ತುರ್ತು ಪರಿಸ್ಥಿತಿ ವೇಳೆ ಸಂಪಾದಕೀಯ ಸ್ಥಳವನ್ನು ಖಾಲಿ ಬಿಟ್ಟು ಪತ್ರಿಕೆ ಮುದ್ರಿಸಿದ್ದು ಒಂದು ಉದಾಹರಣೆ ಮಾತ್ರ. ನೆರೆ ಪ್ರಕೋಪದಂತಹ ಸಂಕಷ್ಟ ಸಮಯದಲ್ಲಿ ನಿಧಿ ಸಂಚಯಿಸಿ ಆಳುವ ಸರಕಾರದ ಪರಿಹಾರ ನಿಧಿಗೆ ಓದುಗರ ಪರವಾಗಿ ಅರ್ಪಿಸಿದ್ದು ಪತ್ರಿಕೆಯ ಮಾನವೀಯ ನಡೆಗಳಲ್ಲೊಂದು.

ಮಹತ್ಸಾಧಕರಾದ ಟಿ. ಮೋಹನದಾಸ ಪೈ 2022ರ ಜುಲೈ 31ರಂದು ನಿಧನರಾದರು.   ಸಾವು ಹಿರಿಯ ವಯಸ್ಸಿನಲ್ಲಿ ಜೀವಕ್ಕೆ ಅನಿವಾರ್ಯವಾಗಿ ಬೇಕಾದ ಬಿಡುಗಡೆ.  ಜೀವಿಸಿರುವಷ್ಟು  ಕಾಲದಲ್ಲಿ ಉಪಯುಕ್ತವಾಗಿ ಶ್ರಮಿಸುವುದು ಬದುಕಿಗಿರುವ ಶ್ರೇಷ್ಠ ಸಾಧ್ಯತೆ. ಅಂತಹ ಸಾಧ್ಯತೆಗಳನ್ನು ನಿರೂಪಿಸಿ ತೋರಿದರವರಲ್ಲಿ ಮೋಹನದಾಸ ಪೈ ಒಬ್ಬರು. 

On the birth anniversary of T. Mohandas Pai 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ