ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್.ಆರ್.ರಾಮಸ್ವಾಮಿ


 ಎಸ್‌.ಆರ್‌.ರಾಮಸ್ವಾಮಿ 


ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು.

ಸೊಂಡಿಕೊಪ್ಪ ರಾಮಚಂದ್ರಶಾಸ್ತ್ರಿ ರಾಮಸ್ವಾಮಿ ಅವರು 1937ರ ಅಕ್ಟೋಬರ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಸ್. ರಾಮಚಂದ್ರ ಶಾಸ್ತ್ರಿ.  ತಾಯಿ ಸರಸ್ವತಮ್ಮ. ವಿದ್ವತ್ ಪ್ರಭಾವಳಿಗೆ ಹೆಸರಾದ ಮೇರು ವಂಶಾವಳಿಯ ಕುಟುಂಬ ಇವರದು.  ಇವರು, ಶ್ರೇಷ್ಠ ಭಾರತೀಯ ಇತಿಹಾಸ ತಜ್ಞರಾಗಿ ಖ್ಯಾತರಾದ  ಎಸ್. ಶ್ರೀಕಂಠಶಾಸ್ತ್ರಿ ಹಾಗೂ ಅಸ್ಥಾನ ವಿದ್ವಾನ್ ಮೋಟಗನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿ ಅವರ ಸೋದರಳಿಯಂದಿರು. "ಭಾಗವತ"ವನ್ನು ಮೂಲ ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರಿಸಿದ ಮೊದಲ ಮಹಾನುಭಾವರಾದ  ಅಸ್ಥಾನ ವಿದ್ವಾನ್ ಮೋಟಗನಹಳ್ಳಿ ರಾಮಶೇಷ ಶಾಸ್ತ್ರಿ ಅವರ ಸೋದರ ಮೊಮ್ಮಗ. ಎಸ್. ಆರ್. ರಾಮಸ್ವಾಮಿಯವರು ಖ್ಯಾತ ಪತ್ರಕರ್ತ ಮತ್ತು "ಪ್ರಜಾಮತ"ದ ಫೀಚರ್ ಎಡಿಟರ್ ಆಗಿದ್ದ ಎಸ್. ಆರ್. ಕೃಷ್ಣಮೂರ್ತಿ ಅವರ ಕಿರಿಯ ಸಹೋದರ. 

ರಾಮಸ್ವಾಮಿಯವರು ಬೆಂಗಳೂರಿನ ಬೆಂಗಳೂರು ಪ್ರೌಢಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ತಮ್ಮ ಮಧ್ಯಂತರ ಕೋರ್ಸ್ ಅಧ್ಯಯನವನ್ನು 1953-54ರಲ್ಲಿ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ನಡೆಸಿದರು.

ರಾಮಸ್ವಾಮಿರವರು 1950ರಲ್ಲಿ ಬೆಂಗಳೂರಿನ ವಿಲಿಯಂ ಕ್ವಾನ್ ಜಡ್ಜ್ (W. Q. Judge) ಪ್ರೆಸ್‍ನ ಸಹಾಯಕ ಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಂಕ್ಷಿಪ್ತ ವಿರಾಮದ ನಂತರ 1972-1979 ಅವಧಿಯಲ್ಲಿ ಕನ್ನಡ ಸಾಪ್ತಾಹಿಕ "ಸುಧಾ" ಪತ್ರಿಕೆಯ ಮುಖ್ಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. 1980ರಿಂದ ಬೆಂಗಳೂರಿನ "ರಾಷ್ಟ್ರೋತ್ಥಾನ ಸಾಹಿತ್ಯ" ಮತ್ತು ಕನ್ನಡ ಮಾಸಿಕ "ಉತ್ಥಾನ"ದ ಪ್ರಧಾನ ಗೌರವ ಸಂಪಾದಕರಾದರು.

ಎಸ್. ಆರ್. ರಾಮಸ್ವಾಮಿಯವರು ಸಕ್ರಿಯವಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ವಿಷಯಗಳ ಬಗ್ಗೆ ದೇಶಾದ್ಯಂತ ವಿಚಾರಗೋಷ್ಠಿಗಳು ಮತ್ತು ಸಮಾವೇಶಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.  ತಮ್ಮ ವಿಚಾರಲಹರಿಯನ್ನು ಕನ್ನಡ ದಿನಪತ್ರಿಕೆಗಳಾದ ಪ್ರಜಾವಾಣಿ,  ಕನ್ನಡ ಪ್ರಭ ಮುಂತಾದ  ದೈನಿಕಗಳಲ್ಲಿ ಮಾಡಿದ್ದಾರೆ. 

ಎಸ್. ಆರ್. ರಾಮಸ್ವಾಮಿರವರು ಸಂಸ್ಕೃತ, ಹಿಂದಿ, ಜರ್ಮನ್, ಫ್ರೆಂಚ್, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪಾರಂಗತರು.  ಅವರು ವಿವಿಧ ಭಾಷೆಗಳಲ್ಲಿಂದ ಕನ್ನಡಕ್ಕೆ ಅನುವಾದವನ್ನು ಮಾಡಿದ್ದಾರೆ. ಅಲ್ಲದೆ ಸಾವಿರಾರು ಲೇಖನಗಳು ಮತ್ತು 50ಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಮೂಡಿಸಿದ್ದಾರೆ. ಫ್ರೆಂಚ್ ಕವಿ, ಪ್ರಬಂಧಕಾರ ಮತ್ತು ತತ್ವಜ್ಞಾನಿಯಾದ ಆಮ್ಬ್ರೋಯಿಸೆ ಪಾಲ್ ಟೌಸಿಯಂಟ್ ಜೂಲ್ಸ್ ವಾಲೆರಿ ಅಂತಹವರ ಸಾಹಿತ್ಯದ ಬಗ್ಗೆ ಕೂಡಾ ವಿಮರ್ಶೆ ಮಾಡಿದ್ದಾರೆ. ಕಲಾ ವಿಮರ್ಶಕರಾಗಿ ಪ್ರಸಿದ್ಧ ರಷ್ಯನ್ ಚಿತ್ರ ಕಲಾವಿದ ಸ್ವೆಟೋಸ್ಲಾವ್ ರೋರಿಕ್ ಅವರ ಕುರಿತು ಭವ್ಯ ಚಿತ್ರಗಳನ್ನೊಳಗೊಂಡ "ಆರ್ಟ್ ಕ್ಯಾಟಲಾಗ್" ಪುಸ್ತಕವನ್ನು ಮೂಡಿಸಿದ್ದಾರೆ.

ಎಸ್. ಆರ್. ರಾಮಸ್ವಾಮಿರವರು ಆರು  ದಶಕಗಳಿಗೂ ಹೆಚ್ಚು ಕಾಲದಿಂದ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಕೆಲಸಮಾಡಿದ್ದಾರೆ.  ಅವರು ಭಾರತದಲ್ಲಿ "ಸ್ವದೇಶಿ ಚಳುವಳಿ"ಯ ಪ್ರಮುಖ ಪ್ರತಿಪಾದಕರಾಗಿದ್ದರು. ರಾಮಸ್ವಾಮಿರವರು ಗ್ರಾಮೀಣಾಭಿವೃದ್ಧಿಯ ದೆಸೆಯಲ್ಲಿ ಶುದ್ಧ ಸ್ವಚ್ಛ ಸ್ವಯಮಾಡಳಿತದ ಮಾರ್ಗದರ್ಶಿ ರೂಪುರೇಷೆಗಳ ಬಗ್ಗೆ ಅಪಾರ ಕೆಲಸ ಮಾಡಿದ್ದರು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಪರಿಸರದ ಹೋರಾಟಗಳನ್ನು ಮಾಡಿ ಭಾರತದ ಸರ್ವೋಚ್ಚ ನ್ಯಾಯಾಲಯದವರೆಗೂ  ಕಾನೂನು ಸಮರಗಳಲ್ಲಿ ದಿಟ್ಟತನದಿಂದ ಹೋರಾಡಿದರು. ರಾಮಸ್ವಾಮಿರವರು ಕರ್ನಾಟಕ  ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿಯೂ  ಕುಶಲತೆಯನ್ನು ಹೊಂದಿದ್ದರು. ಭರತನಾಟ್ಯಂ ಕುರಿತು ಸಹಾ ಅಪಾರ ಅಧ್ಯಯನ ಕೈಗೊಂಡರು.

ಎಸ್. ಆರ್. ರಾಮಸ್ವಾಮಿ ಅವರು  ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಅಪಾರ ಕಾರ್ಯ ಮಾಡಿದ್ದಾರೆ.  ಸತತವಾಗಿ ವಿವಿಧ ಸಮ್ಮೇಳನಗಳು ಮತ್ತು ವಿಚಾರಗೋಷ್ಠಿಗಳು ಸಂಬಂಧಿಸಿದಂತೆ ವಿದೇಶ ಪ್ರಯಾಣದ ಆಹ್ವಾನ ಬಂದಾಗಲೆಲ್ಲ ನಯವಾಗಿ ನಿರಾಕರಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಶರತ್ ಚಂದ್ರ, ಟುವರ್ಡ್ಸ್ ಅಂಡರ್ಸ್ಟಾಂಡಿಗ್ ಹಿಂದೂ ಸೊಸೈಟಿ, ಗಾಂಧಿಯನ್ ಕಾನ್ಸೆಪ್ಟ್ ಆಫ್ ಎಕೊಲೊಜಿ,  ನೇತಾಜಿ ಸುಭಾಷ್ ಚಂದ್ರ ಬೋಸ್, ದಿ ರಿಜೈಮ್ ಆಪ್ ಸರ್ ಮಿರ್ಜಾ ಇಸ್ಮಾಯಿಲ್, ಲೈಪ್ ಆಂಡ್ ವರ್ಕ್ಸ್ ಆಫ್ ವಿ. ಸೀತಾರಾಮಯ್ಯ, ಸ್ವದೇಶಿ ಮೂವ್ಮೆಂಟ್ ಆಫ್ 1905: ಹಿಸ್ಟಾರಿಕ್ ಟರ್ನಿಂಗ್ ಪಾಯಿಂಟ್, ಸಾಗಾ ಆಫ್ ಪೇಟ್ರಿಯಾಟಿಸಮ್: ಮಾರ್ಟಿರ್ಸ್ ಇನ್ ದಿ ಫ್ರೀಡಂ ಮೂವ್ಮೆಂಟ್, ಕಾಂಟ್ರಿಬ್ಯೂಷನ್ ಆಫ್ ರಾಳ್ಲಪಳ್ಳಿ ಅನಂತ ಕೃಷ್ಣ ಶರ್ಮ, ಲೈಫ್ ಆಂಡ್ ವರ್ಕ್ ಆಫ್ ಡಿ. ವಿ. ಗುಂಡಪ್ಪ, ಕಾಂಟ್ರಿಬ್ಯೂಷನ್ ಆಫ್ ಸಾಂಸ್ಕ್ರಿಟಿಸ್ಟ್ ಪ್ರೊಫೆಸರ್ ಎಸ್. ಕೆ. ರಾಮಚಂದ್ರ ರಾವ್ ಬೆಳಗೆರೆ ಕೃಷ್ಣ ಶಾಸ್ತ್ರಿ ಮುಂತಾದ ವಿಷಯಗಳ ಬಗ್ಗೆ ಸುಮಾರು ನೂರಾರು ವಿದ್ವತ್ಪೂರ್ಣ  ಪ್ರಬಂಧಗಳನ್ನು  ವಿಚಾರಗೋಷ್ಠಿಗಳಲ್ಲಿ  ಸಮರ್ಪಿಸಿದ್ದಾರೆ.

ಎಸ್. ಆರ್. ರಾಮಸ್ವಾಮಿ ಅವರು ಮಹಾನ್ ವ್ಯಕ್ತಿಗಳಾದ ಡಿ.ವಿ. ಗುಂಡಪ್ಪ, ವಿ. ಸೀತಾರಾಮಯ್ಯ, ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮ, ಎ. ಆರ್. ಕೃಷ್ಣಶಾಸ್ತ್ರಿ, ಪಿ. ಕೋದಂಡ ರಾವ್ ಮತ್ತು ಯಾದವ ರಾವ್ ಜೋಶಿ ಮುಂತಾದವರ ಆಶ್ರಯದಡಿಯಲ್ಲಿ ಬೆಳೆದು ಬಂದರು. ರಾಮಸ್ವಾಮಿ ಅವರ ಬಗ್ಗೆ ಪ್ರೀತಿ ಮತ್ತು ಕೃತಜ್ಞತೆಯಿಂದ ಡಿ. ವಿ. ಜಿ. ಅವರು ತಮ್ಮ ಪುಸ್ತಕವಾದ "ಜ್ಞಾಪಕ ಚಿತ್ರಶಾಲೆ" ಯಲ್ಲಿ ಬರೆದಿದ್ದಾರೆ.  ಎಸ್. ಆರ್. ರಾಮಸ್ವಾಮಿರವರು ಡಿ.ವಿ.ಜಿ. ಅವರ ಅನೇಕ ಕೃತಿಗಳ ಸಂಕಲನ, ಸಂಪಾದನೆ ಮತ್ತು ಪುರಾವೆ ಓದುವಿಕೆಯನ್ನು ಮಾಡಿದ್ದರು. ಅವುಗಳಲ್ಲಿ "ಜೀವನಧರ್ಮಯೋಗ ಅಥವಾ  ಭಗವದ್ಗೀತಾ  ತಾತ್ಪರ್ಯ" ಪ್ರಮುಖವಾದುದು.

ಎಸ್. ಆರ್. ರಾಮಸ್ವಾಮಿ ಅವರ ವ್ಯಾಪಕ ಬರವಣಿಗೆಗಳಲ್ಲಿ ಮಹಾಭಾರತದ ಬೆಳವಣಿಗೆ, ಸ್ವೆಟೋಸ್ಲಾವ್ ರೋರಿಕ್, ಡಿ. ವಿ. ಜಿ., ಉದಯ ಶಂಕರ್, ಶ್ರೀಪದ್ ದಾಮೋದರ್ ಸತ್ವಾಲೇಕರ್, ಶತಮಾನದ ತಿರುವಿನಲ್ಲಿ ಭಾರತ, ಸಮಾಜ ಚಿಕಿತ್ಸಕ ಅಂಬೇಡ್ಕರ್ (ಚಂದ್ರಶೇಖರ್ ಭಂಡಾರಿ ಜೊತೆ), ಭಾರತದಲ್ಲಿ ಸಮಾಜಕಾರ್ಯ, ಸ್ವದೇಶಿ ಜಾಗೃತಿ,  ಆರ್ಥಿಕತೆಯ ಎರಡು ಧ್ರುವ, ಸ್ವದೇಶಿ: ಒಂದು ಸಂವಾದ, ಕೊಲ್ಮಿಂಚು,  ಸ್ವಾತಂತ್ರೋದ್ಯಾಯದ ಮೈಲಿಗಲ್ಲು, ದೀವಟಿಗೆಗಳು, ಮತಾಂತರ: ಒಂದು ಸಂವಾದ (ಚಂದ್ರಶೇಖರ್ ಭಂಡಾರಿ ಜೊತೆ), ಕಾರ್ಗಿಲ್ ಕಂಪನ,  ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸರ್ದಾರ್ ವಲ್ಲಭಾಯ್ ಪಟೇಲ್, ಮಾಗಡಿ ಲಕ್ಷ್ಮಿನರಸಿಂಹಶಾಸ್ತ್ರಿ, ಕೌಟಿಲ್ಯನ ಅರ್ಥಶಾಸ್ತ್ರ ,  ಕೆಲವು ಇತಿಹಾಸ ಪರ್ವಗಳು,  ದೀಪ್ತಿಮಂತರು, ಧ್ರುವಜಲ, ಭಾರತ ಭಾಸ್ಕರ ರವೀಂದ್ರನಾಥ ಠಾಗೋರ್, ನವೋತ್ಥಾನದ ಪಥದರ್ಶಕ ಸ್ವಾಮಿ ವಿವೇಕಾನಂದ, ಕಾವಲಿಗೆ, ದಿ ಲೈಫ್ ಆಫ್ ಸೋಲಿಗ ಟ್ರೈಬಲ್ಸ್,  ಕೆಲವು ಇತಿಹಾಸ-ಪರ್ವಗಳು, ನಾಗರಿಕತೆಗಳ ಸಂಘರ್ಷ ಮುಂತಾದವು ಸೇರಿವೆ. 

ರಾಮಸ್ವಾಮಿ ಅವರ ಶತಮಾನದ ತಿರುವಿನಲ್ಲಿ ಭಾರತ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 
ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಿಥಿಕ್ ಸೊಸೈಟಿ ಗೌರವ, ಡಿ.ವಿ.ಜಿ ಬಳಗದ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. 

ಕರ್ನಾಟಕದ ಮತ್ತು ಭಾರತದ ಶ್ರೇಷ್ಠ ಪರಂಪರೆಗಳ ಕೊಂಡಿಯಾಗಿ ನಮ್ಮೊಡನೆ ಇರುವ ಡಾ. ಎಸ್‌.ಆರ್‌.ರಾಮಸ್ವಾಮಿ ಅವರನ್ನು ಅವರ ಜನ್ಮದಿನದಂದು ಗೌರವದಿಂದ ನಮಿಸೋಣ.

On the birthday of great scholar and living legend Dr. S. R. Ramaswamy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ