ಹೀಗೇಕೆ
ಇದನ್ನು ಇಂಗ್ಲಿಷಿನಲ್ಲಿ ಓದಿದಾಗ ಇಷ್ಟ ಆಯ್ತು. ಕನ್ನಡದಲ್ಲಿ ಚಿಂತಿಸಬೇಕು ಅನ್ನಿಸ್ತು.
ಒಬ್ಬ ಮಹಿಳೆ, ವೃದ್ಧ ಬೀದಿ ವ್ಯಾಪಾರಿಯೊಬ್ಬನ ಬಳಿ ಬಂದು ಕೇಳಿದಳು: "ಮೊಟ್ಟೆ ಹೇಗಪ್ಪಾ ಕೊಡ್ತೀಯಾ?" ಮುದುಕ "50 ಸೆಂಟ್ ಮೇಡಂ" ಎಂದು ಉತ್ತರಿಸಿದ. ಮಹಿಳೆ ಹೇಳಿದಳು "ನೋಡಪ್ಪಾ 2 ಡಾಲರ್‍ಗೆ 6 ಮೊಟ್ಟೆ ಕೊಡೋ ಹಾಗಿದ್ರೆ ತೊಗೋತೀನಿ, ಇಲ್ಲ ಅಂದ್ರೆ ಹೊರಡ್ತೀನಿ."
ವೃದ್ಧ ಹೇಳಿದ "ಮೇಡಂ, ನೀವು ಏನು ಕೊಡ್ತೀರೊ ಕೊಡಿ, ತೊಗೊಳಿ. ನನಗೆ ಬದುಕಕ್ಕೆ ವ್ಯಾಪಾರ ಆಗಬೇಕು. ಇವತ್ತು ಇದುವರೆಗೂ ಒಂದೂ ವ್ಯಾಪಾರ ಆಗಿಲ್ಲ.". ಆಕೆ ಮೊಟ್ಟೆಗಳನ್ನು ಚೌಕಾಶಿ ಬೆಲೆಗೆ ಖರೀದಿಸಿದ ಹೆಮ್ಮೆಯಲ್ಲಿ ಹೊರಟಳು.
ಆಕೆ ತನ್ನ ಫ್ಯಾನ್ಸಿ ಕಾರಿನಲ್ಲಿ, ತನ್ನ ಸ್ನೇಹಿತನೊಂದಿಗೆ ಫ್ಯಾನ್ಸಿ ರೆಸ್ಟೋರೆಂಟ್‌ಗೆ ಹೋದಳು. ಬೇಕಾದುದನ್ನು ಆರ್ಡರ್ ಮಾಡಿ, ಸ್ವಲ್ಪ ತಿಂದು, ಬಹಳಷ್ಟು ಹಾಗೇ ಬಿಟ್ಟರು. ಬಿಲ್ 180 ಡಾಲರ್ ಆಗಿತ್ತು. ಮಹಿಳೆ 200 ಡಾಲರ್ ರೆಸ್ಟೋರೆಂಟ್ ಮಾಲಿಕರ ಮುಂದಿಟ್ಟು, ಚೇಂಜ್ ನಿಮಗೆ ಟಿಪ್ಸ್, ಎಂಬರ್ಥದ ಉದಾರ ನಗೆಯ "ಥ್ಯಾಂಕ್ಸ್" ಹೇಳಿ ಹೊರಟರು.
ಫ್ಯಾನ್ಸಿ ರೆಸ್ಟೊರೆಂಟ್ನ ಮಾಲೀಕರಿಗಂತೂ ಇದು ತುಂಬಾ ಸಾಮಾನ್ಯವಾದ ಸಹಜ ಘಟನೆ ಆಗಿತ್ತು. ಆದರೆ ಮೊಟ್ಟೆ ಮಾರಾಟಗಾರನಿಗೆ?
ನಿರ್ಗತಿಕರಿಂದ ಕೊಂಡುಕೊಳ್ಳುವಾಗಲೇ, ನಮಗೆ ಶಕ್ತಿಯಿದೆ ಎಂದು ನಾವು ಏಕೆ ತೋರಿಸಬೇಕು? ಅಂತೆಯೇ, ನಮ್ಮ ಉದಾರತೆಯ ಅಗತ್ಯವಿಲ್ಲದವರಿಗೆ ಏಕೆ ಉದಾರಿಗಳಾಗಿರಬೇಕು?
ಒಬ್ಬ ಮಹನೀಯರು, ಬಡವರಿಂದ ವಸ್ತುಗಳನ್ನು ಬೇಕಾಗಿಲ್ಲದಿದ್ದರೂ ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದರು. ಕೆಲವೊಮ್ಮೆ ಅವರಿಗೆ ಹೆಚ್ಚು ಹಣವನ್ನೂ ನೀಡುತ್ತಿದ್ದರು. ಆಶ್ಚರ್ಯ ಚಕಿತರಾಗಿದ್ದ ಅವರ ಮಕ್ಕಳು, ಒಂದು ದಿನ "ಅಪ್ಪಾ, ಯಾಕೆ ಹೀಗೆ ಮಾಡ್ತಿಯಾ?" ಅಂತ ಕೇಳಿದರು. ತಂದೆ ಉತ್ತರಿಸಿದರು: "ಇದು ಗೌರವಯುತವಾಗಿ ನಾವು ನೀಡಬಹುದಾದ ಸತ್ಪಾತ್ರ ದಾನ."
ಟೊಮೋಟೊ ಬೆಲೆ ಜಾಸ್ತಿ ಆಯ್ತು, ಈರುಳ್ಳಿ ಬೆಲೆ ಜಾಸ್ತಿ ಆಯ್ತು, ಹಬ್ಬದ ಸಮಯದಲ್ಲಿ ಹೂವಿನ ಬೆಲೆ ದುಬಾರಿ ಅಂತ ಪೇಪರಲ್ಲಿ ಸುದ್ದಿ ಬರುತ್ತೆ, ನಾವೂ ಗಾಸಿಫ್ ಮಾಡಿ, ಪ್ರಪಂಚ ನಮ್ಮ ತಲೆ ಮೇಲೇನೇ ಬಿದ್ದಿದೆ ಅನ್ನೋ ಹಾಗೆ ಚರ್ಚೆ ಮಾಡ್ತೀವಿ ಅಲ್ವಾ!!!
ಕಾಮೆಂಟ್‌ಗಳು