ಗೋಕರ್ಣ ಗಂಗಾ ಜಯಂತಿ
ಗೋಕರ್ಣ ಗಂಗಾ ಜಯಂತಿ
ಗೋಕರ್ಣದಲ್ಲಿ ಆಶ್ವಿಜ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಮಹಾಬಲೇಶ್ವರ ದೇವನು ಗಂಗೆಗೆ ಒಲಿದು, ವರಿಸುವ ನಿಶ್ಚಿತಾರ್ಥಕ್ಕೆ ಗಂಗಾವಳಿಯ ಗಂಗಾಮಾತಾ ದೇವಾಲಯಕ್ಕೆ ಬರುತ್ತಾನೆ. ಭತ್ತ ಕೊಯ್ಲಿಗೆ ಮುನ್ನ ನಡೆದ ಹೊಸ್ತಿನಬ್ಬದಲ್ಲಿ ಶಿವ ದೂರದಿಂದಲೇ ಗಂಗೆಯನ್ನು ಕಂಡಿದ್ದನಂತೆ. ಅಂದೇ ತನ್ನ ಪರಿವಾರಗಳಾದ ನಂದಿ, ವೀರಭದ್ರ, ಸಾಕ್ಷಿ, ಪರ್ಣಿಕೆಗಳ ಜೊತೆ ಮಾತನಾಡಿ ಪಾರ್ವತಿಗೆ ಗೊತ್ತಾಗದಂತೆ ಗಂಗಾಷ್ಟಮಿ ಮುನ್ನಾದಿನ ರಾತ್ರಿ ಅಂದರೆ ಸಪ್ತಮಿ ದಿನದಂದೇ ಸಪ್ತಪದಿಯನ್ನು ಗಂಗೆಯ ಜತೆ ತುಳಿಯಲೇ ಬೇಕು ಎಂಬ ನಿರ್ಧಾರಕ್ಕೆ ಬಂದನಂತೆ. ಈ ಮಹದಭಿಲಾಷೆಯೊಂದಿಗೆ ಸಿದ್ಧತೆಯನ್ನು ಮಾಡಿಕೊಳ್ಳಿ ಎಂದು ಪರಿವಾರಕ್ಕೆ ತಿಳಿಸಿದನಂತೆ. ನಿರ್ಧಾರ ಅಚಲವಾದಂತೆ ಸಮುದ್ರ ರಾಜನ ಜೊತೆ ಮಾತುಕಥೆ ನಡೆಸಿ, ಮತ್ಸ್ಯ ಕನ್ಯೆಯಾದ ಗಂಗೆಯನ್ನು ವರಿಸಲು ಆಕೆಯಿರುವ ಕಡಲತೀರದ ಗುಂಟ ಸಾಗಲು ರಸ್ತೆ ಕೇಳಿ, ಒಪ್ಪಿಗೆಯ ಮಾತು ಆಡಿದನಂತೆ ಆ ಪರಶಿವ.
ಅದೇ ರೀತಿ ರಾತ್ರಿ ಪಾರ್ವತಿಯನ್ನು ಮಲಗಿಸಿ ಸಾಗುವ ಶಿವ ಗಂಗಾವಳಿಗೆ ತೆರಳಿದ. ಬೆಳಗಿನಜಾವ ಸೂರ್ಯೋದಯದ ಮುನ್ನ ಗಂಗೆಯನ್ನು ನಿಶ್ಚಿತಾರ್ಥದ ಮಾತುಕಥೆಗೆ ಕರೆದರೆ ಗಂಗೆ ಒಪ್ಪಲಿಲ್ಲ. ಆದಾಗ್ಯೂ ಕೆಲ ಶರತ್ತಿನಂತೆ ಒಪ್ಪಿದಳು ಬರುವ ದೀಪಾವಳಿ ಅಮಾವಾಸ್ಯೆ ಮುಸ್ಸಂಜೆಯ ಗೋಧೂಳಿ ಮುಹೂರ್ತದಲ್ಲಿ ಗೋಕರ್ಣ ಕಡಲ ತೀರದ ಕಪಿಲಾ ನದಿ ತಟದಲ್ಲಿ ನನ್ನ ನಿನ್ನ ಮದುವೆ ಎಂದು ಪರಶಿವ ಗಂಗೆಗೆ ತಿಳಿಸಿದ. ಈ ಕುರಿತು ಮಾತುಕಥೆ ನಂತರ ಗಂಗೆ ಮುಖ ಮುಚ್ಚಿಯೇ ಒಪ್ಪಿಗೆ ನೀಡಿದಳಂತೆ.
ಆ ದಿನವನ್ನು ಗಂಗೆ ಹಬ್ಬವಾಗಿ ಗಂಗಾವಳಿ, ಗಂಗೆಕೊಳ್ಳ, ದುಬ್ಬನಶಶಿ ಸೇರಿ ಕರಾವಳಿಯ ಎಲ್ಲ ಮೀನುಗಾರರೂ ಒಂದಾಗಿ ಸೇರಿ ಆಚರಿಸುತ್ತ ಬಂದಿದ್ದಾರೆ. ಬ್ರಾಹ್ಮಣರು ಮಂತ್ರ ಉಚ್ಛರಿಸುತ್ತಾರೆ. ಅಂಬಿಗ ಸಮಾಜದವರು ಸಂತಸದಿಂದ ಸಂಪ್ರದಾಯ ಆಚರಿಸುತ್ತಾರೆ.
ಮಾಹಿತಿ ಕೃಪೆ: ಗಜಾನನ ನಾಯಕ ಗೋಕರ್ಣ, ವಿಜಯ ಕರ್ನಾಟಕದಲ್ಲಿ (2014 ವರ್ಷದಲ್ಲಿ)
ಕಾಮೆಂಟ್ಗಳು