ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣಾ ಕೌಲಗಿ


 ಕೃಷ್ಣಾ ಕೌಲಗಿ


ಕೃಷ್ಣಾ ಕೌಲಗಿ ಅವರು ಕನ್ನಡದ ಹೆಸರಾಂತ ಬರೆಹಗಾರ್ತಿ. 

ಕೃಷ್ಣಾ ಕೌಲಗಿ ಅವರು 1946 ಫೆಬ್ರುವರಿ 9 ರಂದು ಧಾರವಾಡದಲ್ಲಿ ಜನಿಸಿದರು. ಶಿಕ್ಷಕರಾಗಿ ಸಹಸ್ರಾರು ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಇವರು ನಿವೃತ್ತಿಯ ನಂತರದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕೃಷ್ಣಾ ಕೌಲಗಿ ಅವರು ಶಿಕ್ಷಕಿ ಹೇಗೋ, ಅದಕ್ಕಿಂತ ಮುಖ್ಯವಾಗಿ ಅಪ್ರತಿಮ ವಿದ್ಯಾರ್ಥಿ.  ತಮ್ಮ  ಹಳೆಯ ವಿದ್ಯಾರ್ಥಿಯಿಂದ ಟೈಪಿಂಗ್‌ ಕಲಿತು ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಚಿಂತನಾ ಬರೆಹಗಳನ್ನು ಓದುಗರಿಗೆ ತಲುಪಿಸುತ್ತಿದ್ದಾರೆ. ‘ನೀರ ಮೇಲೆ ಅಲೆಯ ಉಂಗುರ’ ಅವರ ಅಂಕಣ ಬರೆಹಗಳ ಸಂಕಲನ.  'ತುಂತುರು ಇದು ನೀರ ಹಾಡು' ಇವರ ಲಘು ಬರೆಹಗಳ ಸಂಗ್ರಹ.

8ನೇ ಕ್ಲಾಸಿನಲ್ಲಿ ಬಂದಾಗತಾನೆ ABCD ತಿದ್ದಿದ ಇವರು, ಇಂಗ್ಲಿಷ್ ಸಾಹಿತ್ಯದ ಅಭ್ಯಾಸಕ್ಕೆ ಒಲಿಯುವ ಧೈರ್ಯ ಮಾಡಿದರು. ಆಗ ಕ್ಲಾಸಿನಲ್ಲಿ ಒಟ್ಟು ಹತ್ತು ಗಂಡು ಹುಡುಗರು, ಇವರೊಬ್ಬರೇ ವಿದ್ಯಾರ್ಥಿನಿ. ಆದರೂ ಇವರ ನಿರ್ಧಾರ ಸಡಿಲಾಗಲಿಲ್ಲ. ಮುಂದೆ ಪದವಿ ಓದಿ, ಶಿಕ್ಷಕಿಯಾಗಿ ಮಕ್ಕಳಿಗೆ ಕಲಿಸುತ್ತ ತಾವೂ ಬೆಳೆದರು.

ಕೃಷ್ಣಾ ಕೌಲಗಿ ಅವರು ಆಕಾಶವಾಣಿ ಹಾಗೂ ‘ಸ್ವರಚಿತ ಕವನವಾಚನ’ ಕಾರ್ಯಕ್ರಮಗಳಲ್ಲಿ ಹೆಚ್ಚು ಕಾವ್ಯನೆಲೆ ಕಂಡುಕೊಂಡರು.  ಫೇಸ್ಬುಕ್ ಅಂತಹ ಸೋಷಿಯಲ್ ಮೀಡಿಯಾ ವ್ಯವಸ್ಥೆ ಅವರ ಪ್ರತಿಭಾನ್ವಿತ ಉತ್ಸಾಹಕ್ಕೆ ರೆಕ್ಕೆ ಮೂಡಿಸಿವೆ  ಅವರ ಬರೆಹಗಳು ಪ್ರಸಿದ್ಧ ಮಾಧ್ಯಮಗಳಲ್ಲಿ ರಾರಾಜಿಸಿ ಅನೇಕರಿಗೆ ಪ್ರೇರಕವಾಗಿವೆ. ಇವರ ಅಂಕಣ ಬರೆಹಗಳು ಮತ್ತು ಲಘು  ಬರೆಹಗಳು ಮೇಲೆ ಹೇಳಿದಂತೆ ಸಂಕಲನಗಳಾಗಿ ಜನಮನ್ನಣೆ ಗಳಿಸಿವೆ.  'ವಿಷಯಾಧಾರೆ' ಅಂತಹ ಅಂಕಣವೂ ಮೂಡಿಬರುತ್ತಿದೆ. 

ಅನೇಕ ಜನಪ್ರಿಯ ಕವಿತೆಗಳನ್ನೂ ಮೂಡಿಸಿರುವ ಕೃಷ್ಣಾ ಕೌಲಗಿಯವರ ಒಂದು ಕವಿತೆ ಇಂತಿದೆ

ಕೈ ಹಿಡಿದ ಹೆಂಡತಿ,
ರಕ್ತ ಹಂಚಿಕೊಂಡ ಮಕ್ಕಳು,
ಕೂಡಿಟ್ಟ ಆಸ್ತಿ, ಕಟ್ಟಿದ ಮನೆ,
ಸುತ್ತಲೂ ವಂದಿಮಾಗಧರು…
ಭುಜಕೀರ್ತಿ, ಕಿರೀಟಗಳು
ಸಂಭ್ರಮ, ನಿತ್ಯೋತ್ಸವ
ಸದಾ ನಮ್ಮದೆಂದೆವು…
ಹಾಗಾಗಲೇಯಿಲ್ಲ…

ಔಷಧಿ ಕೊಳ್ಳಬಹುದು
ಆರೋಗ್ಯವನ್ನಲ್ಲ…
ಹಾಸಿಗೆ ಕೊಳ್ಳಬಹುದು
ನಿದ್ರೆಯನ್ನಲ್ಲ, ಎಂಬುದು…
ಪುಕ್ಕಟೆ ‘ಉಸಿರಿ’ಗೂ,
ಸುತ್ತಲ ‘ಹಸಿರಿ’ಗೂ
ಮತ್ತೇರಿಸಿಕೊಂಡ ‘ಹೆಸರಿ’ಗೂ
‘ಸುಂಕ’ ತೆರಬೇಕಾದೀತು
ಎಂದು ಕನಸಿನಲ್ಲಿಯೂ
ಅನಿಸಿರಲೇಯಿಲ್ಲ…

ನಾ ಕಟ್ಟಿದ ‘ಅರಮನೆ’
'ಸೆರೆಮನೆ’ಯಾಗಿ,
ಕೂಡಿಟ್ಟ ಕಾಸೂ
ಕಸುವು ಕಳೆದುಕೊಂಡು
ಎಲ್ಲ ಇದ್ದೂ ತಿರುಬೋಕಿ-ಯಂತೆ
ಇಲ್ಲಿಂದ ಹೊರಡಬೇಕಾಗಬಹುದೆಂದು
ಅರಿವಾಗಲೇಯಿಲ್ಲ..

ಹಿರಿಯರಾದ ಕೃಷ್ಣಾ ಕೌಲಗಿ ಅವರಿಗೆ ಜನ್ಮದಿನದ ಶುಭಹಾರೈಕೆಗಳು.  ನಮಸ್ಕಾರ.

Happy birthday Krishna Koulagi 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ