ರವೀಂದ್ರ ಕಲಾಕ್ಷೇತ್ರ
61 ತುಂಬಿದ ರವೀಂದ್ರ ಕಲಾಕ್ಷೇತ್ರ
ನಮ್ಮ ಬೆಂಗಳೂರಿನ ಹೆಮ್ಮೆ ರವೀಂದ್ರ ಕಲಾಕ್ಷೇತ್ರಕ್ಕೆ ಇಂದು 61ನೇ ವರ್ಷದ ಹುಟ್ಟುಹಬ್ಬ.
ಕವಿ ರವೀಂದ್ರನಾಥ ಠಾಗೂರರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ಜನ್ಮತಳೆದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಕನ್ನಡ ನಾಡಿನ ಪ್ರಧಾನ ಸಾಂಸ್ಕೃತಿಕ ನೆಲೆ ಎನಿಸಿದೆ. ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಜಾನಪದ, ಸಿನಿಮಾ, ಯಕ್ಷಗಾನ, ಚಿತ್ರಕಲೆ, ಶಿಲ್ಪಕಲೆ ಮುಂತಾದ ಕಲಾ ಸಾಂಸ್ಕೃತಿಕ ಕ್ಷೇತ್ರಗಳಿಗಷ್ಟೇ ಅಲ್ಲದೆ ನಾಡಿನ ಹಲವು ಹೋರಾಟ, ಚಳವಳಿ ಮುಂತಾದ ಎಲ್ಲವುಗಳಿಗೂ ಇದು ನೆಲೆ ಆಗಿದೆ.
1961ರಲ್ಲಿ ರವೀಂದ್ರನಾಥ ಠಾಗೂರರ ಜನ್ಮಶತಾಬ್ದಿಗಾಗಿ ದೇಶದಾದ್ಯಂತ ರಂಗಮಂದಿರ ನಿರ್ಮಿಸಬೇಕೆಂಬ ಚಿಂತನೆ ಮೂಡಿದ್ದು ಕನ್ನಡತಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಸಾಂಸ್ಕೃತಿಕ ಹಿರಿಮೆ ಹೊಂದಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಂದ. ಹೀಗೆ ಕೋಲ್ಕತ್ತ, ಮುಂಬೈ, ಹೈದರಾಬಾದ್, ಭೋಪಾಲ್ ಮತ್ತು ಬೆಂಗಳೂರು ಹೀಗೆ ದೇಶದ ಐದು ಕಡೆ ರವೀಂದ್ರರ ನೆನಪಿನಲ್ಲಿ ರಂಗಮಂದಿರಗಳು ರೂಪುಗೊಂಡವು.
ಕಲ್ಲಿನಿಂದಲೇ ನಿರ್ಮಾಣಗೊಂಡ ರವೀಂದ್ರ ಕಲಾಕ್ಷೇತ್ರ ಕಟ್ಟಡದ ವಾಸ್ತುಶಿಲ್ಪಿ ಆಗಿದ್ದವರು ಅಮೆರಿಕದ ಚಾರ್ಲ್ಸ್ ವಿಲ್ಸನ್. ಆಗಿನ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಬಿ. ಆರ್. ಮಾಣಿಕ್ಯಂ ನಿರ್ಮಾಣ ನಿರ್ವಹಣೆಯ ಹೊಣೆ ಹೊತ್ತಿದ್ದರು. 1963ರ ಮಾರ್ಚ್ 12ರಂದು ಅಂದಿನ ಕೇಂದ್ರ ಸಚಿವ ಪ್ರೊ. ಹುಮಾಯೂನ್ ಕಬೀರ್ ಅವರಿಂದ ಕಲಾಕ್ಷೇತ್ರ ಉದ್ಘಾಟನೆಗೊಂಡಿತು. ಮೈಸೂರು ಮಹಾರಾಜರೂ ಹಾಗೂ ರಾಜ್ಯಪಾಲರೂ ಆಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅಧ್ಯಕ್ಷತೆ ವಹಿಸಿದ್ದರು.
ರವೀಂದ್ರ ಕಲಾಕ್ಷೇತ್ರವು ಪ್ರದರ್ಶನಕ್ಕೆ ತೆರೆದುಕೊಂಡಿದ್ದು ಆ ವರ್ಷದ ಆಗಸ್ಟ್‌ನಲ್ಲಿ.
1970–80ರ ದಶಕ ರವೀಂದ್ರ ಕಲಾಕ್ಷೇತ್ರದ ಪಾಲಿಗೆ ಸುವರ್ಣಯುಗ. ಆಧುನಿಕ ಕನ್ನಡ ರಂಗಭೂಮಿಯ ಬಹುತೇಕ ದಿಗ್ಗಜರ ವೃತ್ತಿ ಬದುಕು ಅರಳಿದ್ದು ಇಲ್ಲಿಂದಲೇ. ಆ ಮೂಲಕ ಅದು ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯೂ ಅಮೂಲ್ಯವಾದದ್ದು. ಸಾರ್ಕ್ ಸಮ್ಮೇಳನ, ರಷ್ಯಾ, ಐಸಿಸಿಆರ್ ಸೇರಿ ಅನೇಕ ಉತ್ಸವಗಳು ಇಲ್ಲಿ ಯಶಸ್ವಿಯಾಗಿ ನಡೆದವು. ಕಾಲಕ್ಕೆ ತಕ್ಕಂತೆ ಕಲಾಕ್ಷೇತ್ರದಲ್ಲಿನ ಸೌಲಭ್ಯಗಳು ತಾಂತ್ರಿಕವಾಗಿ ಔನ್ನತ್ಯ ಪಡೆದುಕೊಂಡಿವೆ. ಕೆಲವೊಮ್ಮೆ ವ್ಯವಸ್ಥೆಗಳು ಇನ್ನೂ ಚೆನ್ನಾಗಿರಬೇಕಿತ್ತು ಎಂಬ ಮಾತು ಕೇಳಿ ಬಂದಿವೆ. ಮತ್ತೊಂದು ರೀತಿಯಲ್ಲಿ ನವೀಕರಣ ಎಂದು ಅನಿಯಮಿತ ರೀತಿಯಲ್ಲಿ ಕದ ಮುಚ್ಚಿದರೆ, ಇರುವುದೊಂದು ಪ್ರಧಾನ ವೇದಿಕೆ, ನಮ್ಮ ಗತಿ ಏನು ಎಂಬ ಕಲಾವಿದರ ಕೂಗು ಧ್ವನಿಸುವುದೂ ಇದೆ. ಇದು ರಂಗಭೂಮಿಗೆಂದೇ ಮೀಸಲಾಗಿರಬೇಕಿತ್ತು ಎಂಬ ಅಭಿಪ್ರಾಯಗಳು ಸಾಕಷ್ಟು ಕೇಳಿ ಬಂದಿವೆ.
ಕಲಾಕ್ಷೇತ್ರ ನಿರ್ಮಾಣದ ಮುಕ್ತಾಯ ಹಂತದಲ್ಲಿ ಹಣದ ಕೊರತೆ ಎದುರಾಗಿತ್ತು. ಆಗ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪ ಅವರು ಒಂದೂವರೆ ಲಕ್ಷ ರೂಪಾಯಿ ಅನುದಾನ ನೀಡಿದ್ದರಂತೆ. ವಿಶೇಷವೆಂದರೆ, ಕಲಾಕ್ಷೇತ್ರದ ನಿರ್ಮಾಣಕ್ಕೆ ಸಾರ್ವಜನಿಕರೂ ದೇಣಿಗೆ ನೀಡಿದ್ದರು. ಸರ್ಕಾರಿ ಉದ್ಯಮಗಳೂ ಸೇರಿದಂತೆ ಅನೇಕ ರಂಗಕರ್ಮಿಗಳೂ ಕಲಾವಿದರೂ ದೇಣಿಗೆ ನೀಡಿದ್ದರಂತೆ. ರಂಗಭೂಮಿ ಬಗ್ಗೆ ಪ್ರೀತಿ ಹೊಂದಿದ್ದ ನೆರೆ ರಾಜ್ಯದ ಶಿವಾಜಿ ಗಣೇಶನ್ ಅವರು ತಮ್ಮ ತಂಡ ಕಟ್ಟಿಕೊಂಡು ‘ವೀರಪಾಂಡ್ಯ ಕಟ್ಟಬೊಮ್ಮನ್’ ನಾಟಕವನ್ನು ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಪ್ರದರ್ಶನ ನೀಡಿ 22 ಸಾವಿರ ರೂಪಾಯಿ ಸಂಗ್ರಹಿಸಿದ್ದರು. ಈ ಹಣವನ್ನು ರವೀಂದ್ರ ಕಲಾಕ್ಷೇತ್ರ ನಿರ್ಮಾಣಕ್ಕೆ ದೇಣಿಗೆಯನ್ನಾಗಿ ನೀಡಿದ್ದರಂತೆ.
ಅನೇಕ ವಿಧದಲ್ಲಿ ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನ ಮಧ್ಯಬಿಂದು ಎಂದೆನಿಸುತ್ತದೆ. ಬೆಂಗಳೂರಿಗರಿಗೆ ಯಾವುದು ಏನು ಗೊತ್ತಿಲ್ಲ ಎಂದರೂ ರವೀಂದ್ರ ಕಲಾಕ್ಷೇತ್ರ ಗೊತ್ತಿರುತ್ತದೆ. ರಂಗಾಸಕ್ತರು, ಸಂಗೀತ, ಸುಗಮ ಸಂಗೀತ, ನೃತ್ಯ, ಸಾಹಿತ್ಯಾಸಕ್ತರು, ಕನ್ನಡ ಸಂಸ್ಕೃತಿ, ಕನ್ನಡ, ಯಾವುದೇ ಕಲಾ ಪ್ರದರ್ಶನ, ಸಂಘಟನೆ, ಪ್ರದರ್ಶನ, ಸಮಾಗಮ ಇವೆಲ್ಲಕ್ಕೂ ರವೀಂದ್ರ ಕಲಾಕ್ಷೇತ್ರ ಒಂದು ಸಂಯೋಗ ಭಾವ ಎಂದರೆ ತಪ್ಪಾಗಲಾರದು.
60 ವರ್ಷ ಎಂಬುದು ಸಂವತ್ಸರಗಳ ಒಂದು ಪೂರ್ಣವೃತ್ತ. ರವೀಂದ್ರ ಕಲಾಕ್ಷೇತ್ರ ಪೂರೈಸಿರುವ ಈ ಸಂವತ್ಸರ ವೃತ್ತದಲ್ಲಿನ ಆಗುಹೋಗುಗಳು ಸಾಂಸ್ಕೃತಿಕ ನೆಲೆಯಲ್ಲಿನ ಚರಿತ್ರಾರ್ಹ ಪುಟಗಳು ಎಂಬುದರಲ್ಲಿ ಎರಡು ಮಾತಿಲ್ಲ. ನಾವಂತೂ ನಮ್ಮ ಕಾಲದ ಶ್ರೇಷ್ಠ ವ್ಯಕ್ತಿಗಳನ್ನು, ಕಲಾವಿದರನ್ನು, ಕಲಾಪ್ರದರ್ಶನಗಳನ್ನು ಕಂಡ ಧನ್ಯತೆ ಅನುಭವಿಸಿದ್ದು ಈ ಆವರಣದಲ್ಲಿ. ನಮಗೆ ಇದೊಂದು ವಿಸ್ಮಯ ಭೂಮಿಕೆ.
On 60th birth anniversary day of our Ravindra Kalakshetra, Bengaluru
ಕಾಮೆಂಟ್‌ಗಳು