ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಎನ್. ಪ್ರಭಾಕರ್


 ಎಂ. ಎನ್. ಪ್ರಭಾಕರ್


ಎಂ. ಎನ್. ಪ್ರಭಾಕರ್ ಅವರು ದೇವಾಲಯಗಳ  ವಾಸ್ತು, ಪ್ರತಿಮಾಶಾಸ್ತ್ರ ಹಾಗೂ ಚಾರಿತ್ರಿಕ ಅಧ್ಯಯನಗಳನ್ನು ನಿಷ್ಠಾವಂತರಾಗಿ ಕೈಗೊಂಡು, ಅದನ್ನು ಕನ್ನಡದ ಓದುಗರಿಗೆ ದೊರಕಿಸಿಕೊಟ್ಟವರು.

ಮೈಸೂರಿನ ಮೂಲದವರಾದ ಪ್ರಭಾಕರ್ 1949ರ ಮೇ 25ರಂದು ಜನಿಸಿದರು.  ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್'ನಲ್ಲಿ ಉದ್ಯೋಗ ನಿರ್ವಹಿಸಿ ನಿವೃತ್ತರಾಗಿದ್ದಾರೆ.

ಪ್ರಭಾಕರ್ ದೇವಾಲಯಗಳ ಕುರಿತು ಸಂಶೋಧನಾತ್ಮಕ ಆಸಕ್ತಿಯನ್ನು ಮೂಡಿಸಿಕೊಂಡವರು. ಇವರಲ್ಲಿನ ಈ ಸಂಶೋಧಕ ಪ್ರವೃತ್ತಿಯನ್ನು ಪ್ರೋತ್ಸಾಹಿಸಿ ಬೆಳೆಸಿದ ಮಹನೀಯರು ಹಲವರಿದ್ದಾರೆ. ಪ್ರಭಾಕರ್ ಅವರ  ಹೆಚ್ಚಿನ ಬರಹಗಳನ್ನು ಪ್ರಕಟಿಸಿದವರು ಕರ್ನಾಟಕ ಇತಿಹಾಸ ಅಕಾಡೆಮಿಯವರು.  ಅದರ ಗೌರವಾಧ್ಯಕ್ಷರಾಗಿದ್ದ  ಡಾ.ಸೂರ್ಯನಾಥ ಕಾಮತರು, ತಮ್ಮ ಸಂಪಾದಕತ್ವದಲ್ಲಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಸಂಶೋಧನಾಪತ್ರಿಕೆಯಲ್ಲಿ ಪ್ರಭಾಕರ್ ಅವರ ಹಲವಾರು ಲೇಖನಗಳನ್ನು ಮೆಚ್ಚಿ ಪ್ರಕಟಿಸಿದರು. 

ಹಂಪಿ ವಿಶ್ವವಿದ್ಯಾಲಯವು ಪ್ರಭಾಕರ ಅವರ ಬರಹಗಳ ಮೌಲ್ಯವನ್ನು ಗುರುತಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿತು. ಕ್ರಿ.ಶ. 2000 ರಲ್ಲಿ ಪ್ರಕಟಗೊಂಡ ಇವರ 'ದೇವಾಲಯ ವಾಸ್ತು'  ಪುಸ್ತಕ ಒಂದೇ ವರ್ಷದಲ್ಲಿ ಮಾರಾಟವಾಗಿ ಪುನಃ ಬೇಡಿಕೆಯನ್ನು ಸೃಷ್ಟಿಸಿತು. ಹೀಗೆ ಈ ಕೃತಿ ಅನೇಕ ಮರುಮುದ್ರಣಗಳನ್ನು ಕಂಡುದಲ್ಲದೆ ಮುಂದೆ  ವಿಸ್ತೃತ ರೂಪದಲ್ಲೂ ಮೂಡಿ ಜನಪ್ರಿಯಗೊಂಡಿತು. ಕನ್ನಡದಲ್ಲಿ ಅಲ್ಲಿಯವರೆಗೆ ಆ ಕುರಿತು ಸ್ಪಷ್ಟ ನಿರ್ದೇಶಗಳುಳ್ಳ ಕೃತಿಗಳು ಇಲ್ಲದಿದ್ದ ಹಂತದಲ್ಲಿ ಪ್ರಭಾಕರ್ ಅವರು "ವಾಸ್ತುಗ್ರಂಥಗಳ ನೆರವಿನೊಂದಿಗೆ, ಶಾಸನೋಲ್ಲೇಖಗಳನ್ನು ಬಳಸಿ, ಕರ್ನಾಟಕದಲ್ಲಿ ಪ್ರಕಟಗೊಂಡ ಶೈಲಿ ಸಂಪ್ರದಾಯಗಳನ್ನು ಮೇಲ್ಕಂಡ ಕೃತಿಯಲ್ಲಿ ವಿವರಿಸಿದ್ದಾರೆ. ಸೋದಾಹರಣೆಗಳೊಂದಿಗೆ ಚಿತ್ರಿಸಿದ್ದಾರೆ. ದೇವಾಲಯಗಳಲ್ಲಿ ಕಾಣುವ ವಿವರಗಳನ್ನೂ ಹಂತ ಹಂತವಾಗಿ ಸೂಕ್ತ ಪಾರಿಭಾಷಿಕ ಪದಗಳೊಂದಿಗೆ ಗುರುತಿಸಿ, ವಿಶ್ಲೇಷಿಸಿದ್ದಾರೆ" ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಮುಂದೆ ಈ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಂಗ ವಿಭಾಗವೂ ಪ್ರಕಟಿಸಿದೆ.

ಪ್ರಭಾಕರ್ ಅವರು ಕರ್ನಾಟಕ ಇತಿಹಾಸ ಅಕಾಡೆಮಿ ಮತ್ತು ಶೈಕ್ಷಣಿಕ ವಲಯಗಳಲ್ಲಿ ಅನೇಕ ಉಪನ್ಯಾಸಗಳನ್ನೂ ನೀಡಿದ್ದು, ಆ ಮೂಲಕವೂ ‘ಸೋಮನಾಥಪುರ ಕೇಶವ ದೇವಾಲಯ' ಅಂತಹ  ಕೃತಿಗಳು ಪ್ರಕಟಗೊಂಡಿವೆ. ಕರ್ನಾಟಕ ಇತಿಹಾಸ ಅಕಾಡೆಮಿಯ 'ಇತಿಹಾಸ ದರ್ಶನ' ಕೃತಿಯಲ್ಲೂ ಇವರ ಅನೇಕ ಮಹತ್ವದ ಕೊಡುಗೆಗಳಿವೆ.

ಹಿರಿಯರಾದ ಪ್ರಭಾಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Prabhakar Manevarthe Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ